S Angara Profile: ಮಾತು ಬೆಳ್ಳಿ, ಮೌನ ಬಂಗಾರ, ಎಸ್.ಅಂಗಾರ ಪರಿಚಯ
ಹಾಲೀ ಬೊಮ್ಮಾಯಿ ಸರಕಾರದಲ್ಲಿ ಸಚಿವರಾಗಿರುವ ಎಸ್.ಅಂಗಾರ ಅವರು ಕರಾವಳಿ ಭಾಗದ ಪ್ರಮುಖ ಮುಖಂಡರಲ್ಲೊಬ್ಬರು. ಮಿತಭಾಷಿಯಾಗಿರುವ ಅಂಗಾರ ಅವರ ವ್ಯಕ್ತಿಚಿತ್ರದ ಒಂದು ಕಿರು ನೋಟವನ್ನು ಲೇಖನದಲ್ಲಿ ತಿಳಿಸಲಾಗಿದೆ.
ಸಚಿವ ಸ್ಥಾನ ಬೇಕೆಂದು ಲಾಬಿ ಮಾಡಿದವರಲ್ಲ, ಬಿಜೆಪಿ ಕಚೇರಿಗೆ ಸುತ್ತಿದವರಲ್ಲ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಾಗಿಲು ತಟ್ಟಿದವರಲ್ಲ, ಹೈಕಮಾಂಡ್ ಭೇಟಿಯಾಗಿ ಒತ್ತಡ ಹೇರಲು ದೆಹಲಿ ವಿಮಾನ ಹತ್ತಿದವರಲ್ಲ..ಪಕ್ಷ ನಿಷ್ಠೆ ಯಾವಾಗ ಸಚಿವರನ್ನಾಗಿ ಮಾಡುತ್ತೋ ಅದಕ್ಕಾಗಿ ಕಾದು ಕುಳಿತ ಅತೀ ಅಪರೂಪದ ರಾಜಕಾರಣಿ ಎಸ್.ಅಂಗಾರ. ಇವರನ್ನು ನೋಡಿಯಾದರೂ ನಮ್ಮ ಪಕ್ಷದವರೇ ಕಲಿಯಲಿ ಎನ್ನುವುದು ಬಿಜೆಪಿ ವಲಯದಲ್ಲೇ ಕೇಳಿ ಬರುವ ಮಾತು.
ಕರ್ನಾಟಕದಲ್ಲಿ ಎಂತಹಾ ಆಡಳಿತ ವಿರೋಧಿ ಅಲೆಯಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಿಜೆಪಿಗೆ ಒಂದು ಖಾಯಂ ಸ್ಥಾನ ಎನ್ನಬಹುದಾದ ಕ್ಷೇತ್ರ ಎಸ್.ಅಂಗಾರ ಅವರು ಪ್ರತಿನಿಧಿಸುವ ಸುಳ್ಯ. ಇವರ ಗೆಲುವಿನ ಅಂತರದಲ್ಲಿ ಹೆಚ್ಚು ಕಮ್ಮಿಯಾಗಬಹುದೇ ವಿನಃ ಪಕ್ಷಕ್ಕೆ ಒಂದು ಸೀಟಂತೂ ಗ್ಯಾರಂಟಿ, ಇದಕ್ಕೆ ಕಾರಣ ಮಿತಭಾಷಿ ಮತ್ತು ಅವರ ಸೌಜನ್ಯತೆ. ಹಾಗಾಗಿ, ಬಿಜೆಪಿ ವರಿಷ್ಠರು ಇಲ್ಲಿ ಯಾವ ಹೊಸ ಪ್ರಯೋಗವನ್ನು ಮಾಡುವ ರಿಸ್ಕ್ ಅನ್ನು ತೆಗೆದುಕೊಳ್ಳಲು ಹೋಗುತ್ತಿಲ್ಲ. ಈ ಬಾರಿಯ ಚುನಾವಣೆಯಲ್ಲೂ ಅಂಗಾರ ಅವರಿಗೆ ಟಿಕೆಟ್ ಕನ್ಫರ್ಮ್ ಎಂದೇ ಹೇಳಲಾಗುತ್ತಿದೆ.

ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದ ದಾಸನಕಜೆ ಮನೆಯಲ್ಲಿ ಜುಲೈ 1, 1964ರಲ್ಲಿ ಜನಿಸಿದ ಅಂಗಾರ ಅವರ ಆರಂಭಿಕ ಶಿಕ್ಷಣ ಚೊಕ್ಕಾಡಿ ಪ್ರೌಢ ಶಾಲೆಯಲ್ಲಿ ಆಯಿತು. 2018ರಲ್ಲಿ ಸಲ್ಲಿಸಿದ ಅಫಿಡವಿಟ್ ಪ್ರಕಾರ ಎಂಟನೇ ತರಗತಿ ಓದಿರುವ ಅಂಗಾರ ಅವರು 1.09ಕೋಟಿ ಆಸ್ತಿಯನ್ನು ಮತ್ತು 12.40ಸಾಲವನ್ನು ಹೊಂದಿದ್ದಾರೆ. ಸುಳ್ಯ ತಾಲೂಕಿನಲ್ಲಿ 5.73 ಎಕರೆ ಕೃಷಿಭೂಮಿಯನ್ನು ಹೊಂದಿದ್ದಾರೆ ಮತ್ತು ಅಮರಮುಡ್ನೂರು ಗ್ರಾಮ ಪಂಚಾಯತಿಯಲ್ಲಿ ನಿವಾಸವನ್ನು ಹೊಂದಿದ್ದಾರೆ.
Satish Jarkiholi Profile: ಅಹಿಂದ ನಾಯಕ, ಸಿದ್ದರಾಮಯ್ಯ ಆಪ್ತ ಸತೀಶ್ ಜಾರಕಿಹೊಳಿ ವ್ಯಕ್ತಿ ಪರಿಚಯ
ಪ್ರಸಕ್ತ ಉಡುಪಿ ಜಿಲ್ಲೆಯ ಉಸ್ತುವಾರಿಯೂ ಆಗಿರುವ ಅಂಗಾರ ಅವರು 1994,1999, 2004, 2008, 2013 ಮತ್ತು 2018ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 1989ರಲ್ಲಿ ಇವರು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದರೂ ಸೋಲುಂಡಿದ್ದರು. ಯಡಿಯೂರಪ್ಪನವರ ಸರಕಾರದಲ್ಲೂ ಮೀನುಗಾರಿಕಾ ಸಚಿವರಾಗಿ ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಯಾಗಿಯೂ ಅಂಗಾರ ಕಾರ್ಯ ನಿರ್ವಹಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾ ಕಾರ್ಯಕರ್ತ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾ ಕಾರ್ಯಕರ್ತರಾಗಿರುವ ಅಂಗಾರ, ಸುಳ್ಯ ಮೀಸಲು ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಸತತವಾಗಿ ಚುನಾವಣೆಯನ್ನು ಗೆದ್ದು ಬರುತ್ತಿರುವ ಇವರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಒತ್ತಾಯ ಕಾರ್ಯಕರ್ತರಿಂದ ಮತ್ತು ಕರಾವಳಿ ಬಿಜೆಪಿ ನಾಯಕರಿಂದ ಬರುತ್ತಿದ್ದರೂ, ಎಂದೂ ಲಾಬಿ ನಡೆಸಿದವರಲ್ಲ.

ಸೌಮ್ಯ ಸ್ವಭಾವದಿಂದಲೇ ಜನಪ್ರಿಯತೆ
ತಮ್ಮ ಸೌಮ್ಯ ಸ್ವಭಾವದಿಂದಲೇ ಜನಪ್ರಿಯತೆಯನ್ನು ಪಡೆದಿರುವ ಅಂಗಾರ ಅವರು ಸಚಿವರಾದ ಮೇಲೂ ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಲಿಲ್ಲ ಎನ್ನುವುದು ಸ್ಥಳೀಯರ ಗೌರವದ ಮಾತು. ಬೊಮ್ಮಾಯಿ ಸರಕಾರದ ಇಬ್ಬರು ಸಿಂಪಲ್ ಮಿನಿಸ್ಟರ್ ಗಳಲ್ಲಿ ಒಬ್ಬರು ಕೋಟಾ ಶ್ರೀನಿವಾಸ ಪೂಜಾರಿ ಇನ್ನೊಬ್ಬರು ಎಸ್.ಅಂಗಾರ. ಸಂಘದ ಮತ್ತು ಪಕ್ಷದ ಚೌಕಟ್ಟನ್ನು ಎಂದೂ ಮೀರಿದವರಲ್ಲ ಎನ್ನುವ ಅಭಿಪ್ರಾಯ ಅಂಗಾರ ಮೇಲೆ ಪಕ್ಷದ ಮುಖಂಡರಿಗಿದೆ.
ಮಿತಭಾಷಿಯಾಗಿರುವ ಎಸ್.ಅಂಗಾರ ಅಪ್ಪಟ ಕೃಷಿಕ
ಮಿತಭಾಷಿಯಾಗಿರುವ ಎಸ್.ಅಂಗಾರ ಅಪ್ಪಟ ಕೃಷಿಕರಾಗಿದ್ದು, ಶಾಸಕರಾದ ಸಂದರ್ಭದಲ್ಲಿ ಬಿಡುವಿನ ವೇಳೆ ಮನೆಯ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡವರು. ತೋಟದಲ್ಲಿ ಅಡಿಕೆ ಹೆಕ್ಕುವುದು, ಹುಲ್ಲು ಕೊಯ್ಯುವುದನ್ನು ಅಭ್ಯಾಸವನ್ನಾಗಿಸಿಕೊಂಡಿದ್ದಾರೆ. ಅಡಿಕೆ ಸಿಪ್ಪೆ ತಾವೇ ತೆಗೆಯುವ ಮೂಲಕ ಸಚಿವ/ಶಾಸಕನಾದರೂ ತಾನು ಕೃಷಿಕನೇ ಅನ್ನೋದನ್ನು ಅಂಗಾರ ನಿರೂಪಿಸುತ್ತಿರುತ್ತಾರೆ.
ಶಾಸಕರ ಭವನದಲ್ಲೇ ಉಳಿದುಕೊಳ್ಳುವ ಅಂಗಾರ
ಬೆಂಗಳೂರಿಗೆ ಬಂದಾಗ ಬಹುತೇಕ ಶಾಸಕರ ಭವನದಲ್ಲೇ ಉಳಿದುಕೊಳ್ಳುವ ಅಂಗಾರ, ಸ್ವತಃ ಅಡಿಗೆ ಮಾಡಿ, ಸ್ವತಃ ಬಟ್ಟೆ ಒಗೆಯುತ್ತಾರೆ. ಅವರ ಆಪ್ತವಲಯದವರ ಪ್ರಕಾರ ಅವರ ದಿನಚರಿ ಇಂದಿಗೂ ಅದೇ ರೀತಿಯಿದ್ದು, ತಾವೇ ಬಟ್ಟೆಗೆ ಇಸ್ತ್ರಿ ಹಾಕಿ ಸಚಿವಾಲಯಕ್ಕೆ ಹಾಜರಾಗುವ ಮೂಲಕ, ಶಾಸಕರಿಗೆಲ್ಲಾ ತಮ್ಮ ಸರಳತೆಯಿಂದ ಮಾದರಿಯಾಗಿದ್ದಾರೆ.
ಉಪ್ಪು ನೀರನ್ನು ಸಿಹಿ ನೀರಾಗಿ ಮಾರ್ಪಾಡುವ ಯೋಜನೆ
ಆಸ್ಟ್ರೇಲಿಯಾದ ತಂತ್ರಜ್ಞಾನವನ್ನು ಬಳಸಿಕೊಂಡು ದಿನವೊಂದಕ್ಕೆ ಎರಡು ಸಾವಿರ ಲೀಟರ್ ಉಪ್ಪು ನೀರನ್ನು ಸಿಹಿ ನೀರಾಗಿ ಮಾರ್ಪಾಡುವ ಯೋಜನೆಯನ್ನು ಮಂಗಳೂರು ಬಂದರಿನಲ್ಲಿ ಅಂಗಾರ ಜಾರಿಗೆ ತಂದಿದ್ದಾರೆ. ಆರೋಗ್ಯಕ್ಕೆ ಯಾವುದೇ ಹಾನಿ ಮಾಡದ ಈ ಫಿಲ್ಟರ್ ನೀರನ್ನು, ಸಮುದ್ರದಲ್ಲಿ ಸ್ವತಃ ಅಂಗಾರ ಅವರೇ ಕುಡಿಯುವ ಮೂಲಕ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಿದ್ದರು. ಈ ತಂತ್ರಜ್ಞಾನ ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಬಹು ಉಪಯೋಗಕಾರಿಯಾಗಿದೆ.
ಮುಂಬರುವ ಚುನಾವಣೆಗೂ ಅಂಗಾರ ಬಿಜೆಪಿ ಟಿಕೆಟ್ ಆಕಾಂಕ್ಷಿ
ಮುಂಬರುವ ಚುನಾವಣೆಗೂ ಎಸ್.ಅಂಗಾರ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರ ಜೊತೆಗೆ, ಚನಿಯ ಕಲ್ತಡ್ಕ ಅವರ ಹೆಸರೂ ಕೇಳಿ ಬರುತ್ತಿದೆ. ಇನ್ನು, ಕಾಂಗ್ರೆಸ್ ನಿಂದ ಡಾ.ರಘು, ಎಚ್.ಎಂ.ನಂದಕುಮಾರ್ ಶಾಸಕ ಕಣದ ಆಕಾಂಕ್ಷಿಗಳಾಗಿದ್ದಾರೆ. 2008, 2013ರ ಚುನಾವಣೆಗೆ ಹೋಲಿಸಿದರೆ, 2018ರ ಚುನಾವಣೆಯನ್ನು ಅಂಗಾರ ಭಾರೀ ಅಂತರದಿಂದ ಗೆಲುವನ್ನು ಸಾಧಿಸಿದ್ದರು. ಕ್ಷೇತ್ರದ ಅಭಿವೃದ್ದಿಯ ವಿಚಾರದಲ್ಲಿ ಇವರ ಬಗ್ಗೆ ಸ್ಥಳೀಯರಿಗೆ ತಕ್ಕಮಟ್ಟಿನ ಅಸಮಾಧಾನವಿದೆ. ಆದರೂ, ಪಕ್ಷ ಮತ್ತು ಸಂಘಟನೆ ಬಲವಾಗಿರುವುದರಿಂದ ಬಿಜೆಪಿಗೆ ಗೆಲುವು ಕಷ್ಟವಾಗದು ಎನ್ನುವುದು ಸದ್ಯದ ಕ್ಷೇತ್ರದ ಚಿತ್ರಣ.











Click it and Unblock the Notifications