Satish Jarkiholi Profile: ಅಹಿಂದ ನಾಯಕ, ಸಿದ್ದರಾಮಯ್ಯ ಆಪ್ತ ಸತೀಶ್ ಜಾರಕಿಹೊಳಿ ವ್ಯಕ್ತಿ ಪರಿಚಯ
ಸತೀಶ್ ಜಾರಕಿಹೊಳಿ ವಿವರ : ಬಿಜೆಪಿ ನಾಯಕ ಸತೀಶ್ ಜಾರಕಿಹೊಳಿ ಅವರ ವಯಸ್ಸು, ಜೀವನ ಚರಿತ್ರೆ, ಕುಟುಂಬ, ರಾಜಕೀಯ ವೃತ್ತಿ, ಶಿಕ್ಷಣ, ಆಸ್ತಿ, ಜಾತಿ, ನಿವ್ವಳ ಮೌಲ್ಯ ಮತ್ತು ಇತ್ತೀಚಿನ ಸುದ್ದಿಗಳನ್ನು ಪಡೆಯಿರಿ.
ಬೆಂಗಳೂರು, ಮಾರ್ಚ್ 01: ಕರ್ನಾಟಕದ ಪ್ರಮುಖ ರಾಜಕೀಯ ನಾಯಕರಲ್ಲಿ ಸತೀಶ್ ಜಾರಕಿಹೊಳಿಯೂ ಒಬ್ಬರು. ಅಹಿಂದ ಸಂಘಟನೆ ಮೂಲಕ ಪ್ರಭಾವಿಯಾದ ಜಾರಕಿಹೊಳಿ ಮಾಜಿ ಸಿಎಂ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಪ್ರಸ್ತುತ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರು. ಅವರ ವ್ಯಕ್ತಿಗತ ಪರಿಚಯ ಇಲ್ಲಿದೆ ತಿಳಿಯಿರಿ.

ಗೋಕಾಕದಲ್ಲಿ ಸತೀಶ್ ಜಾರಕಿಹೊಳಿ ಜನನ
ಸತೀಶ್ ಜಾರಕಿಹೊಳಿ ಅವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ. ಅವರ ತಂದೆ ಲಕ್ಷ್ಮಣ ರಾವ್ ಜಾರಕಿಹೊಳಿ ಕಬ್ಬು ಬೆಳೆಗಾರರು ಹಾಗೂ ಉದ್ಯಮಿ. ವಾಲ್ಮೀಕಿ ( ನಾಯಕ ) ಸಮುದಾಯದಲ್ಲಿ ಜನಿಸಿದ ಸತೀಶ್ ಅವರಿಗೆ ನಾಲ್ಕು ಜನ ಸಹೋದರರಿದ್ದಾರೆ. ಅದರಲ್ಲಿ ಮೂವರು ಸಕ್ರೀಯ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ. ಹಿರಿಯ ಸಹೋದರ ರಮೇಶ್ ಜಾರಕಿಹೊಳಿ ( ಬಿಜೆಪಿ ಶಾಸಕ ), ಕಿರಿಯ ಸಹೋದರ ಬಾಲಚಂದ್ರ ಜಾರಕಿಹೊಳಿ ( ಬಿಜೆಪಿ ಶಾಸಕ ) ಹಾಗೂ ಕೊನೆಯ ಸಹೋದರ ಲಖನ್ ಜಾರಕಿಹೊಳಿ ( ಎಂಎಲ್‌ಸಿ ) ಆಗಿದ್ದಾರೆ. ಅವರಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ಅವರೂ ಸಹ ರಾಜಕಾರಣ ಹಾಗೂ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಸಕ್ಕರೆ ಉದ್ಯಮದಲ್ಲಿ ಸತೀಶ್
2000 ರಲ್ಲಿ ಖಂಡಸಾರಿ ಸಕ್ಕರೆ ಉತ್ಪಾದನಾ ಘಟಕವನ್ನು ಆರಂಭಿಸಿದ ಸತೀಶ್, ಅತ್ಯಂತ ಕಡಿಮೆ ಅವಧಿಯಲ್ಲಿ ಯಶಸ್ಸು ಕಂಡರು. 2016ರಲ್ಲಿ ಬೆಳಗಾವಿ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಹೊಸ ಕಂಪನಿಯನ್ನು ಸ್ಥಾಪಿಸಿದರು. ಮೂರನೇ ಸಕ್ಕರೆ ಕಾರ್ಖಾನೆಯನ್ನು ಯರಗಟ್ಟಿ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಅಡಿಯಲ್ಲಿ ನಿರ್ಮಿಸುವ ಕಾರ್ಯವು ಚಾಲ್ತಿಯಲ್ಲಿದೆ. ಇದು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಎಲ್ಲ ಕಾರ್ಖಾನೆಗಳು ಸತೀಶ್ ಶುಗರ್ಸ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

1998ರಲ್ಲಿ ಸಕ್ರೀಯ ರಾಜಕಾರಣಕ್ಕೆ ಬಂದ ಸತೀಶ್
ಸಕ್ಕರೆ ಉದ್ಯಮದಲ್ಲಿ ಯಶಸ್ಸು ಕಂಡ ಸತೀಶ್ ಜಾರಕಿಹೊಳಿ ಅವರು 1998 ರಿಂದ 2004ರ ತನಕ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದರು. 2004 ರಿಂದ 2008ರ ವರೆಗೆ ಮತ್ತೆ ವಿಧಾನ ಪರಿಷತ್ ಸದಸ್ಯರಾಗಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಧರಂಸಿಂಗ್ ಸಂಪುಟದಲ್ಲಿ ಜವಳಿ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದರು.

2008ರಲ್ಲಿ ಯಮನಕನಮರಡಿ ಶಾಸಕರಾಗಿ ಆಯ್ಕೆ
ಸತೀಶ್ ಜಾರಕಿಹೊಳಿ ಅವರು 2008ರಲ್ಲಿ ಜನತಾದಳದಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಅವರು ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಅಹಿಂದ ವರ್ಗಗಳನ್ನು ಸಂಘಟಿಸುವುದಲ್ಲಿ ಅವರ ಪಾತ್ರವೂ ದೊಡ್ಡದಿದೆ. 2013ರಲ್ಲಿ 2ನೇ ಬಾರಿಗೆ ಯಮನಕನಮರಡಿ ಕ್ಷೇತ್ರದಿಂದಲೇ ಶಾಸಕರಾಗಿ ಆಯ್ಕೆಯಾದರು. 2018ರಲ್ಲಿಯೂ ಯಮನಕನಮರಡಿಯಿಂದಲೇ ಶಾಸಕರಾಗಿ ಆಯ್ಕೆಯಾದರು.

ಸಚಿವರಾಗಿ ಸತೀಶ್ ಸೇವೆ
2013ರಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ, ಸಣ್ಣ ಕೈಗಾರಿಕಾ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು. 22 ಡಿಸೆಂಬರ್ 2018 ರಿಂದ 23 ಜುಲೈ 2019 ರ ವರೆಗೆ ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಅರಣ್ಯ ಮತ್ತು ಪರಿಸರ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು.

ಮೌಢ್ಯವಿರೋಧಿ ಸತೀಶ್
ಸತೀಶ್ ಜಾರಕಿಹೊಳಿ ಅವರು ಮೌಢ್ಯ ವಿರೋಧಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಮಾನವ ಬಂಧುತ್ವ ವೇದಿಕೆಯನ್ನು ಸ್ಥಾಪಿಸಿ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸಾಂವಿಧಾನಿಕ ಮೌಲ್ಯಗಳಾದ ಸ್ವಾತಂತ್ರ್ಯ, ಮಾನವೀಯ ಮೌಲ್ಯ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ತತ್ವಗಳ ಆಧಾರದಲ್ಲಿ ಮಾನವ ಬಂಧುತ್ವ ವೇದಿಕೆ ಕೆಲಸ ಮಾಡುತ್ತದೆ. ಜಾತಿ, ವರ್ಣ, ಲಿಂಗ ಮತ್ತು ವರ್ಗಗಳ ಭೇದವಿಲ್ಲದ ಸಮುದಾಯದ ಸಂಘಟನೆಯನ್ನು ಕಟ್ಟುವುದು, ಜನರನ್ನು ಜಾಗೃತಗೊಳಿಸುವುದು ಇದರ ಕೆಲಸವಾಗಿದೆ.












Click it and Unblock the Notifications