ಕೊಡಗು ಬಿಟ್ಟು ಬೇರೆಲ್ಲೂ ನಡೆಯದ ಅಪರೂಪದ ಬೇಡು ಹಬ್ಬ: ಏನಿದರ ವಿಶೇಷತೆ?

ಕೊಡಗು, ಮೇ 30: ಕೊಡಗಿನಲ್ಲಿ ಬೇಸಿಗೆಯ ದಿನಗಳಲ್ಲಿ ಬೇಡು ಹಬ್ಬ ನಡೆಯುವುದು ವಿಶೇಷವಾಗಿದೆ. ಅದರಲ್ಲೂ ದಕ್ಷಿಣ ಕೊಡಗಿನ ಹಲವೆಡೆ ಭದ್ರಕಾಳಿ ದೇವರ ದೇಗುಲವಿರುವ ಗ್ರಾಮಗಳಲ್ಲಿ ಬೇಡು ಹಬ್ಬ ನಡೆಯುತ್ತದೆಯಾದರೂ ಹಬ್ಬದ ಆಚರಣೆಯಲ್ಲಿ ವಿಭಿನ್ನತೆಯಿದ್ದು, ಮೇಲ್ನೋಟಕ್ಕೆ ವೇಷ ಹಾಕಿಕೊಂಡು ಕುಣಿಯುವುದು ಕಂಡು ಬಂದರೂ ಇದರ ಹಿಂದೆ ತನ್ನದೇ ಆದ ವಿಧಿವಿಧಾನಗಳು, ಸಂಪ್ರದಾಯಗಳು ಇರುವುದು ವಿಶೇಷವಾಗಿದೆ.

ಬೇಸಿಗೆಯ ದಿನಗಳಲ್ಲಿ ನಡೆಯುವ ಬೇಡು ಹಬ್ಬ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತವೆ. ಈ ಹಬ್ಬದ ಆಚರಣೆ ಕೊಡಗು ಹೊರತುಪಡಿಸಿ ಬೇರೆಲ್ಲೂ ಕಾಣುವುದು ಅಪರೂಪವೇ. ಅದರಲ್ಲೂ ಈ ಹಬ್ಬ ಗ್ರಾಮದ ಭದ್ರಕಾಳಿ ದೇವರನ್ನು ಆರಾಧಿಸುವ ಊರುಗಳಲ್ಲಿ ಮಾತ್ರ ನಡೆಯುತ್ತದೆ. ಹಬ್ಬದ ಆರಂಭ ಮತ್ತು ಅಂತ್ಯವೂ ಇಂತಹ ಊರಲ್ಲೇ ನಡೆಯ ಬೇಕೆಂಬ ಸಂಪ್ರದಾಯವಿದ್ದು ಆದರಂತೆಯೇ ಪ್ರತಿ ವರ್ಷವೂ ನಡೆಯುತ್ತದೆ.

Bedu Habba: Special Festival Celebrated In Kodagu

ಮೊದಲಿಗೆ ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರಿನ ಭದ್ರಕಾಳಿ ದೇಗುಲದಲ್ಲಿ ಹಬ್ಬ ಆರಂಭವಾಗುತ್ತದೆ. ಆ ನಂತರ ದೇವರಪುರದ ಭದ್ರಕಾಳಿ ದೇಗುಲದಲ್ಲಿ ಕೊನೆಗೊಳ್ಳುತ್ತದೆ. ಆರಂಭದ ಚೆಂಬೆಬೆಳ್ಳೂರಿನಲ್ಲಿ ನಡೆಯುವ ಬೋಡುಹಬ್ಬ ವೈಶಿಷ್ಟ್ಯತೆಯಿಂದ ಕೂಡಿದೆ. ಇಲ್ಲಿ ಹಬ್ಬದ ಸಂಪ್ರದಾಯದಂತೆ ಹರಕೆ ಹೊತ್ತವರು ವಿವಿಧ ವೇಷ ಭೂಷಣ ಧರಿಸಿ ರಂಜಿಸುತ್ತಾರೆ. ಜೊತೆಗೆ ಕೆಸರು ಮೈಗೆ ಹಚ್ಚಿಕೊಂಡು, ಹುಲ್ಲನ್ನು ಮೈಗೆ ಕಟ್ಟಿಕೊಂಡು ಕುಣಿಯುತ್ತಾ ತಮ್ಮ ಹರಕೆ ತೀರಿಸುವುದು ಗಮನಾರ್ಹವಾಗಿದೆ.

ದೇವನೆಲೆಯ ಸುತ್ತಲೂ ಭಕ್ತರ ಪ್ರದಕ್ಷಿಣೆ

ಹುಲಿವೇಷ ಮತ್ತು ಬೋಡು ವೇಷ ಹಾಕಿದವರು ಹಬ್ಬದ ದಿನ ಹಬ್ಬ ನಡೆಯುವ ದೇವಾಲಯದ ದೇವನೆಲೆಯಲ್ಲಿ ಸೇರಿ ಕೊಡಗಿನ ಸಾಂಪ್ರದಾಯಿಕ ಚಂಡೆ(ಕೊಟ್ಟ್) ಮತ್ತು ವಾಲಗಕ್ಕೆ ಹೆಜ್ಜೆ ಹಾಕುತ್ತಾ ದೇವನೆಲೆಯ ಸುತ್ತಲೂ ಪ್ರದಕ್ಷಿಣೆ ಹಾಕುತ್ತಾರೆ. ಇದರಲ್ಲಿ ಎಲ್ಲ ವಯಸ್ಸಿನವರೂ ಪಾಲ್ಗೊಳ್ಳುತ್ತಾರೆ.

ಇದಾದ ಬಳಿಕ ದಕ್ಷಿಣ ಕೊಡಗಿನ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟಿನಲ್ಲಿ ನಡೆಯುವ ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೇಡು ಹಬ್ಬ ಇನ್ನೊಂದಷ್ಟು ವಿಶೇಷತೆ ಹೊಂದಿದೆ. ಇಲ್ಲಿ ಅವಲಕ್ಕಿ ಪ್ರಸಾದ ಮತ್ತು ಕೆಸರು ಎರಚಾಟ ಪ್ರಮುಖ ಆಚರಣೆಯಾಗಿದೆ. ಹಬ್ಬದ ದಿನ ಚಮ್ಮಟೀರ ಕುಟುಂಬದ ಮನೆಯಿಂದ ಮೂಲ ನಿವಾಸಿಗಳಲ್ಲಿ ಒಬ್ಬರಾದ ಪಣಿಕ ಜನಾಂಗದಿಂದ 'ಪೊಲವಂದೆರೆ' ಹೊರಡುವ ಮೂಲಕ ಎರಡು ದಿನಗಳ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ.

Bedu Habba: Special Festival Celebrated In Kodagu

ವಿವಿಧ ವೇಷದಲ್ಲಿ ದೇವರ ಆಟ

ಇಬ್ಬರು ಪೂಜಾರಿಗಳು ಹಬ್ಬದ ದಿನದಂದು ಬೆಳಿಗ್ಗೆಯಿಂದಲೇ ನೀರು ಕೂಡ ಸೇವಿಸದೆ ಉಪವಾಸ ಮತ್ತು ಕಟ್ಟುನಿಟ್ಟಿನ ವೃತ ಮಾಡುತ್ತಾರೆ. ಬಳಿಕ ಪೊಲವಪ್ಪಂಡ ಕೋಟ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿ ನೆರೆದ ಭಕ್ತರಿಗೆ ಅವಲಕ್ಕಿಗೆ ಬಾಳೆ ಹಣ್ಣು ಸೇರಿಸಿ ಅವುಲ್ ಎಂಬ ಪ್ರಸಾದವನ್ನು ನೀಡುತ್ತಾರೆ. ವಿಶೇಷ ಪೂಜೆ ಬಳಿಕ ಇಲ್ಲಿ ಸಾವಿರಾರು ತೆಂಗಿನ ಕಾಯಿಯನ್ನು ಈಡು ಕಾಯಿ ರೂಪದಲ್ಲಿ ಭಕ್ತರು ಒಡೆದು ಹರಕೆ ತಿರಿಸಿಕೊಳ್ಳುತ್ತಾರೆ.

ಮೂಕಳೇರ ಬಲ್ಯಮನೆಯಲ್ಲಿ ಸಾಮೂಹಿಕ ಭೋಜನ ಮಾಡಿ ನಂತರ ಚಮ್ಮಟೀರ ಬಲ್ಯಮನೆಗೆ ತೆರಳಿ ಅಲ್ಲಿ ವಿವಿಧ ವೇಷದಲ್ಲಿ ದೇವರ ಕಳಿ ಹಾಕಿ ಮನೆ ಮನೆಗೆ ತೆರಳಲಾಗುತ್ತದೆ. ಚಮ್ಮಟೀರ, ಮಚ್ಚಿಯಂಡ ಹಾಗೂ ಮೂಕಳೇರ ಬಲ್ಯ(ಹಿರಿ)ಮನೆಯಲ್ಲಿ ಈ ಕಳಿ(ಆಟ) ರಾತ್ರಿಯಿಡಿ ನಡೆಯುತ್ತದೆ. ನಂತರ ಅಲ್ಲಿನ ಅಂಬಲ(ಮೈದಾ)ದಲ್ಲಿ ಮುಂಜಾನೆ ಮನೆಕಳಿ ಮುಕ್ತಾಯವಾಗುತ್ತದೆ.

ಕೆಸರು ಎರಚಾಡುವುದೇ ಸಂಭ್ರಮ

ಮಾರನೆಯ ದಿನದ ಮಧ್ಯಾಹ್ನದ ಮೇಲೆ ಚಮ್ಮಟೀರ ಹಾಗೂ ಮೂಕಳೇರ ಮನೆಯಿಂದ ಒಂದೊಂದು ಕುದುರೆ ಹಾಗೂ ಮೊಗವನ್ನು ಶೃಂಗರಿಸಿ ಅದನ್ನು ಹೊತ್ತು ಊರಿನ ಪ್ರಮುಖ ದೇವಾಲಯವಾದ ಭದ್ರಕಾಳಿ ದೇವಸ್ಥಾನದ ಹತ್ತಿರದ ದೇವರ ಕೆರೆಯ ಸಮೀಪದ ಅಂಬಲದಲ್ಲಿ ಸೇರಿ ಎರಡು ಕಡೆಯಿಂದ ತಲಾ ಒಂದೊಂದು ಕುದುರೆ (ಕೃತಕವಾಗಿ ತಯಾರಿಸಿದ್ದು) ಹಾಗೂ ಮೊಗ ಮುಖಾಮುಖಿ ಆಗುತ್ತಿದ್ದಂತೆ ಪರಸ್ಪರ ಊರಿನವರು ಆಲಂಗಿಸಿಕೊಂಡು ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆಹಾಕುತ್ತಾರೆ.

Bedu Habba: Special Festival Celebrated In Kodagu

ಇದೇ ವೇಳೆ ದೇವರ ಕೆರೆಯಿಂದ ಕೆಸರನ್ನು ತಂದು ಹಿರಿಯರು ಕಿರಿಯರು ಮಕ್ಕಳು ಎಂಬ ಭೇದವಿಲ್ಲದೆ ಪರಸ್ಪರ ಕೆಸರು ಎರಚಾಡಿ ಅಲಂಗಿಸಿಕೊಳ್ಳುತ್ತಾರೆ. ಇಲ್ಲಿ ಹೆಂಗಸರಿಗೆ ಹಾಗೂ ಪರ ಊರಿನವರಿಗೆ ಹಾಗೂ ನೆಂಟರಿಗೆ ಕೆಸರು ಎರಚುವುದಿಲ್ಲ. ಆದರೆ ಪರ ಊರಿನವರಿಗೆ ಹಾಗೂ ನೆಂಟರಿಗೆ ಮುಕ್ತವಾಗಿ ಇಲ್ಲಿ ಕುಣಿಯಲು ಅವಕಾಶವಿದೆ. ಅಂತಹವರಿಗೆ ಒಂದೊಂದು ಬೆತ್ತದ ಕೋಲು ನೀಡಲಾಗುತ್ತದೆ. ಆ ಕೋಲು ಹಿಡಿದವರಿಗೆ ಕೆಸರು ಎರಚುವಂತಿಲ್ಲ. ಬಳಿಕ ಭದ್ರಕಾಳಿ ದೇವಸ್ಥಾನದಲ್ಲಿ ಎಲ್ಲರೂ ಸೇರಿ ಮೂರು ಸುತ್ತು ಬಂದು ಹರಕೆ, ಕಾಣಿಕೆ ಹಾಕುವ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.

ದೇವರಪುರದಲ್ಲಿ ಬೇಡು ಹಬ್ಬಕ್ಕೆ ವಿದಾಯ

ಇಲ್ಲಿ ಹಬ್ಬ ಮುಗಿದ ನಂತರ ಕೊನೆಯದಾಗಿ ದೇವರಪುರದಲ್ಲಿ ಬೇಡು ಹಬ್ಬ ನಡೆಯುತ್ತದೆ. ದೇವರಪುರ ಹೆಬ್ಬಾಲೆಯ ಸಣ್ಣುವಂಡ ಕುಟುಂಬದ ಮುಖ್ಯಸ್ಥರ ಮುಂದಾಳತ್ವದಲ್ಲಿ ದೇವಾಲಯ ಸಮೀಪದ ಅಂಬಲದಿಂದ ಭದ್ರಕಾಳಿ ಉತ್ಸವ ಮೂರ್ತಿಯನ್ನು ಮರದ ಕುದುರೆಯ ಮೂಲಕ ಅಯ್ಯಪ್ಪ ದೇವಾಲಯಕ್ಕೆ ತಂದು ಪೂಜಾ ಕೈಂಕರ್ಯವನ್ನು ನೆರವೇರಿಸಲಾಗುತ್ತದೆ. ನಂತರ ಹರಕೆಹೊತ್ತ ಮಂದಿ ಈ ಕೀಲು ಕುದುರೆ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಈ ಸಂದರ್ಭ ಅಯ್ಯಪ್ಪ ದೇಗುಲದಲ್ಲಿ ಪಟ್ಟಣಿ, ಭಂಡಾರ ಹಾಕುವುದು, ಕಳಿಕಟ್ಟು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.

ಇಲ್ಲಿ ನಡೆಯುವ ಕೀಲು ಕುದುರೆಯ ವಿಶೇಷತೆ ಏನೆಂದರೆ ಪೌರಾಣಿಕ ಯುಗದಲ್ಲಿ ಅರ್ಜುನ ಮತ್ತು ಶಿವ ಕೇರಳದಿಂದ ಪುಲಪಳ್ಳಿ ಎಂಬಲ್ಲಿಗೆ ಹೋದಾಗ ಇಬ್ಬರು ನಪುಂಸಕರು ಸೀರೆಯುಟ್ಟು ಮೋಹಿನಿಯಾಗಿ ನರ್ತಿಸಿ ವಂಚಿಸಿದರಂತೆ. ಈ ಸಂದರ್ಭದಲ್ಲಿ ಕೋಪಗೊಂಡ ಶಿವ ನೀವು ಕುದುರೆಯಾಗಿ ಎಂದು ಶಾಪ ಹಾಕಿದನಂತೆ. ಆದುದರಿಂದ ಈ ಹಬ್ಬದಲ್ಲಿ ಕೀಲು ಕುದುರೆ ನೃತ್ಯ ಇಂದಿಗೂ ನಡೆದುಕೊಂಡು ಬರುತ್ತಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಕೊಡಗಿನಲ್ಲಿ ಬೇಸಿಗೆಯಲ್ಲಿ ನಡೆಯುವ ಬೇಡು ಹಬ್ಬಕ್ಕೆ ತೆರೆಬಿದ್ದಿದೆ. ಇನ್ನೇನಿದ್ದರೂ ಮುಂದಿನ ವರ್ಷದ ತನಕ ಕಾಯಲೇ ಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+