2017 ಹಿನ್ನೋಟ: 7 ವಿಧಾನಸಭೆ ಚುನಾವಣೆಗಳಲ್ಲಿ 6ರಲ್ಲಿ ಗೆದ್ದ ಬಿಜೆಪಿ

Subscribe to Oneindia Kannada

ಬೆಂಗಳೂರು, ಡಿಸೆಂಬರ್ 25: ರಾಜಕೀಯವಾಗಿ ಬಹುಚರ್ಚಿತ ವರ್ಷಗಳಲ್ಲಿ 2017ರ ಕೂಡಾ ಒಂದು. ಈ ವರ್ಷ ಒಟ್ಟು 7 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಿತು. ಇದರಲ್ಲಿ ಆರರಲ್ಲಿ ಅಧಿಕಾರಕ್ಕೇರಿ ಬಿಜೆಪಿ ಪ್ರಾಬಲ್ಯ ಮೆರೆಯಿತು.

ಪಂಜಾಬ್, ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ್, ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಗೆ ಈ ವರ್ಷ ಚುನಾವಣೆ ನಡೆಯಿತು. ಇದರಲ್ಲಿ ಪಂಜಾಬ್ ನಲ್ಲಿ ಎನ್.ಡಿ.ಎ ಕೈಯಿಂದ ಕಾಂಗ್ರೆಸ್ ಅಧಿಕಾರ ಕಸಿದುಕೊಂಡರೆ, ಉಳಿದೆಲ್ಲ ಕಡೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಿತು.

ವರ್ಷದ ವಿಶೇಷ : 2017ರ ಪ್ರಮುಖ ರಾಜಕೀಯ ಬೆಳವಣಿಗೆಗಳು

ಅಪನಗದೀಕರಣ, ಜಿಎಸ್ಟಿ ಜಾರಿಯಂಥ ಪ್ರಮುಖ ವಿಷಯಗಳು ರಾಜಕೀಯದ ಪಡಸಾಲೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದವು. ಜತೆ ಸರ್ಜಿಕಲ್ ಸ್ಟ್ರೈಕ್ ಕೂಡ ಚುನಾವಣೆಯ ಚರ್ಚೆಯ ವಸ್ತುವಾಗಿದ್ದು ಈ ಬಾರಿಯ ವಿಶೇಷ.

ಯುಪಿಯಲ್ಲಿ ಕೇಸರಿ ಝಂಡಾ

ಯುಪಿಯಲ್ಲಿ ಕೇಸರಿ ಝಂಡಾ

ದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಈ ವರ್ಷದ ಮೊದಲಾರ್ಧದಲ್ಲಿ ಚುನಾವಣೆ ನಡೆಯಿತು. ಫಲಿತಾಂಶ ಮಾರ್ಚ್ 11ರಂದು ಹೊರಬಿತ್ತು. ಹಲವು ವರ್ಷಗಳ ನಂತರ ಪ್ರಭಾವಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರಿತು. ಗೋರಖಪುರ ಸಂಸದರಾಗಿದ್ದ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

403 ಸೀಟುಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿ 312 ಸ್ಥಾನಗಳನ್ನು ಗೆದ್ದುಕೊಂಡಿತು. ಒಟ್ಟಾರೆ ಎನ್.ಡಿ.ಎ 325 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು 54 (7+47) ಸ್ಥಾನಗಳಲ್ಲಿ ಜಯಭೇರಿ ಬಾರಿಸಿದರೆ ಬಿಎಸ್ಪಿ ಕೇವಲ 19 ಸ್ಥಾನಗಳನ್ನು ಗೆದ್ದು ಸೋಲೊಪ್ಪಿಕೊಂಡಿತು. 5 ಕ್ಷೇತ್ರಗಳನ್ನು ಇತರರು ಗೆದ್ದುಕೊಂಡರು.

ಸಿಖ್ಖರ ನಾಡಿನಲ್ಲಿ ಮಾನ ಉಳಿಸಿಕೊಂಡ ಕಾಂಗ್ರೆಸ್

ಸಿಖ್ಖರ ನಾಡಿನಲ್ಲಿ ಮಾನ ಉಳಿಸಿಕೊಂಡ ಕಾಂಗ್ರೆಸ್

ಈ ವರ್ಷ ನಡೆದ 7 ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡ ಏಕೈಕ ರಾಜ್ಯ ಅಂದರೆ ಅದು ಪಂಜಾಬ್. ಮಾರ್ಚ್ 11ರಂದು ಪಂಜಾಬ್ ಫಲಿತಾಂಶ ಹೊರ ಬಿದ್ದಾಗ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿತ್ತು. ಅದ್ಭುತ ಸಂಘಟಕ ಕ್ಯಾ. ಅಮರಿಂದರ್ ಸಿಂಗ್ ಮತ್ತೆ ಮುಖ್ಯಮಂತ್ರಿ ಗದ್ದುಗೆ ಏರಿದರು. ಆಡಳಿತರೂಢ ಬಿಜೆಪಿ ಅಕಾಲಿದಳ ಇಲ್ಲಿ ಮಕಾಡೆ ಮಲಗಿತು. ಕನಿಷ್ಠ ವಿರೋಧ ಪಕ್ಷದ ಸದಥಾನವೂ ಈ ಮೈತ್ರಿಕೂಟಕ್ಕೆ ದಕ್ಕಲಿಲ್ಲ.

ಬದಲಿಗೆ ಈ ಬಾರಿ ಹೊಸ ಅತಿಥಿ ಎಂಬಂತೆ ಎಎಪಿ ಇಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿ ಬಂದು ಆಸೀನವಾಯಿತು. ಪಂಜಾಬ್ ನಲ್ಲಿ ಎಎಪಿ ಗೆಲುವಿನ ಕನಸು ಕಂಡಿತ್ತು. ಆದರೆ ವಿರೋಧ ಪಕ್ಷದ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಪಂಜಾಬ್ ನಲ್ಲಿ ಕಾಂಗ್ರೆಸ್ 117ರಲ್ಲಿ 77 ಸ್ಥಾನಗಳನ್ನು ಗೆದ್ದುಕೊಂಡಿತು. ಎಎಪಿ 20 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದರೆ 2 ಕ್ಷೇತ್ರಗಳಲ್ಲಿ ಎಎಪಿ ಮಿತ್ರ ಪಕ್ಷ ಲೋಕ್ ಇನ್ಸಾಫ್ ಜಯ ಸಾಧಿಸಿತು. ಬಿಜೆಪಿ 3 ಮತ್ತು ಅಕಾಲಿದಳ 15 ಸ್ಥಾನಗಳನ್ನು ಗೆದ್ದು ಮೈತ್ರಿಕೂಟ ಕೇವಲ 18ಸ್ಥಾನಗಳಿಗಷ್ಟೇ ಸೀಮಿತವಾಯಿತು.

ಕೈಯಾರೆ ಅಧಿಕಾರ ಕಳೆದುಕೊಂಡ ಕಾಂಗ್ರೆಸ್

ಕೈಯಾರೆ ಅಧಿಕಾರ ಕಳೆದುಕೊಂಡ ಕಾಂಗ್ರೆಸ್

ಗೋವಾದಲ್ಲಿ ಮಾರ್ಚ್ 11 ರಂದು ಫಲಿತಾಂಶ ಹೊರಬಿದ್ದಾಗ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಬಿಜೆಪಿಯ ಮಿಂಚಿನ ಕಾರ್ಯಾಚರಣೆಯಿಂದ ಇಲ್ಲಿ ಅಚ್ಚರಿಯ ರೀತಿಯಲ್ಲಿ ಅಧಿಕಾರ ಹಿಡಿಯಿತು. ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಗೋವಾಗೆ ಬಂದು ಮುಖ್ಯಮಂತ್ರಿಯಾದರು.

40ರಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆದ್ದು ಬಹುಮತಕ್ಕೆ 4 ಸ್ಥಾನಗಳ ಕೊರತೆ ಅನುಭವಿಸುತ್ತಿತ್ತು. ಆದರೆ ಕೆವಲ 13 ಸ್ಥಾನಗಳನ್ನು ಗೆದ್ದ ಬಿಜೆಪಿ ಎಂಜಿಪಿಯ 3, ಜಿಎಫ್'ಪಿಯ 3 ಮತ್ತು ಇಬ್ಬರು ಸ್ವತಂತ್ರ ಅಭ್ಯರ್ಥಿಗಳ ಬೆಂಬಲ ಗಿಟ್ಟಿಸಿ ಸರಳ ಬಹುಮತದ ಸರಕಾರ ರಚಿಸಿತು. ಇಲ್ಲಿ ಎನ್.ಸಿ.ಪಿ ಒಂದು ಸ್ಥಾನದಲ್ಲಿ ಗೆದ್ದರೂ ಕಾಂಗ್ರೆಸ್ ನೆರವಿಗೆ ಬರಲು ಸಾಧ್ಯವಾಗಲಿಲ್ಲ.

ದೇವಭೂಮಿಯಲ್ಲಿ ಬಿಜೆಪಿಗೆ ಅಮೋಘ ಗೆಲುವು

ದೇವಭೂಮಿಯಲ್ಲಿ ಬಿಜೆಪಿಗೆ ಅಮೋಘ ಗೆಲುವು

ಉತ್ತರಾಖಂಡ್ ಬಿಜೆಪಿ ಪಾಲಿಗೆ ಮಾರ್ಚ್ 11 ಅವಿಸ್ಮರಣೀಯ ದಿನ. ದೇವಭೂಮಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೇರಿತು. ಅಧಿಕಾರದಲ್ಲಿದ್ದ ಕಾಂಗ್ರೆಸ್ ಇಲ್ಲಿ ಹೀನಾಯ ಸೋಲೊಕಂಡಿತು. ಬಿಜೆಪಿಯ ತ್ರಿವೇಂದ್ರ ಸಿಂಗ್ ರಾವತ್ ಇಲ್ಲಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರು.

ಉತ್ತರಾಖಂಡ್ ನಲ್ಲಿ ಬಿಜೆಪಿ 70ರಲ್ಲಿ 57 ಸ್ಥಾನಗಳನ್ನು ಗೆದ್ದುಕೊಂಡರೆ ಕಾಂಗ್ರೆಸ್ ಕೇವಲ 11 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇನ್ನೆರಡು ಸ್ಥಾನಗಳಲ್ಲಿ ಇತರರು ಗೆಲುವು ಸಾಧಿಸಿದ್ದರು.

ಈಶಾನ್ಯ ರಾಜ್ಯದಲ್ಲಿ ಸೋತರೂ ಅಧಿಕಾರಕ್ಕೇರಿದ ಬಿಜೆಪಿ

ಈಶಾನ್ಯ ರಾಜ್ಯದಲ್ಲಿ ಸೋತರೂ ಅಧಿಕಾರಕ್ಕೇರಿದ ಬಿಜೆಪಿ

ಈಶಾನ್ಯ ರಾಜ್ಯ ಮಣಿಪುರದಲ್ಲಿ ಮಾರ್ಚ್ 11ರಂದು ಫಲಿತಾಂಶ ಹೊರಬಿದ್ದಾಗ ಬಿಜೆಪಿ ಸೋತಿತ್ತು. ಆದರೆ ಮ್ಯಾಜಿಕ್ ಮಾಡಿ ಅಧಿಕಾರಕ್ಕೇರುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಹೀಗೆ ಈಶಾನ್ಯ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಮಣಿಪುರದಲ್ಲಿ ಎನ್. ಬೈರೇನ್ ಸಿಂಗ್ ಪ್ರಮಾಣವಚನ ಸ್ವೀಕರಿಸಿದರು.

60 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 28ನ್ನು ಗೆದ್ದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಇನ್ನೇನು ಸರಳ ಬಹುಮತಕ್ಕೆ ಬೇಕಾಗಿದ್ದುದು 3 ಸ್ಥಾನಗಳು ಮಾತ್ರ. ಆದರೆ ಕೇವಲ 21 ಸ್ಥಾನಗಳಲ್ಲಿ ಗೆದ್ದು ಬಿಜೆಪಿ ನಾಗಾ ಪೀಪಲ್ಸ್ ಫ್ರಂಟ್, ನ್ಯಾಷನಲ್ ಪೀಪಲ್ಸ್ ಪಾರ್ಟಿಯ ತಲಾ ನಾಲ್ಕು ಹಾಗೂ ತೃಣಮೂಲ ಕಾಂಗ್ರೆಸ್ ಮತ್ತು ಪಕ್ಷೇತರ ಒಬ್ಬರು ಶಾಸಕರನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಅಧಿಕಾರಕ್ಕೇರಿತ್ತು.

ಹಿಮಾಚಲ ಕಳೆದುಕೊಂಡ ಕಾಂಗ್ರೆಸ್

ಹಿಮಾಚಲ ಕಳೆದುಕೊಂಡ ಕಾಂಗ್ರೆಸ್

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿತ್ತು. ಆದರೆ ಡಿಸೆಂಬರ್ 18ರಂದು ಫಲಿತಾಂಶ ಹೊರಬಿದ್ದಾಗ ಇಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಇದೇ ಡಿಸೆಂಬರ್ 27ರಂದು ಬಿಜೆಪಿಯ ಜೈರಾಮ್ ಠಾಕೂರ್ ಇಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ 68ರಲ್ಲಿ ಬಿಜೆಪಿ 44 ಕ್ಷೇತ್ರ ಹಾಗೂ ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಮೂರು ಕ್ಷೇತ್ರಗಳಲ್ಲಿ ಇತರರು ಜಯಶಾಲಿಯಾಗಿದ್ದರು.

ಅಂತೂ ಇಂತೂ ಅಧಿಕಾರ ಉಳಿಸಿಕೊಂಡ ಬಿಜೆಪಿ

ಅಂತೂ ಇಂತೂ ಅಧಿಕಾರ ಉಳಿಸಿಕೊಂಡ ಬಿಜೆಪಿ

ವರ್ಷಾಂತ್ಯದಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆ ಈ ಬಾರಿ ಭಾರೀ ಗಮನಸೆಳೆದಿತ್ತು. 22 ವರ್ಷಗಳ ನಂತರ ಗುಜರಾತ್ ನಲ್ಲಿ ಕಾಂಗ್ರೆಸ್ ಬಿಜೆಪಿಗೆ ಪೈಪೋಟಿ ನೀಡಿದ್ದರಿಂದ ಯಾರು ಗೆಲ್ಲಬಹುದು ಎಂಬ ಲೆಕ್ಕಚಾರ ತಾರಕಕ್ಕೇರಿತ್ತು. ಕೊನೆಗೆ ಡಿಸೆಂಬರ್ 1ರಂದು ಫಲಿತಾಂಶ ಬಂದಾಗ ಬಿಜೆಪಿ ಸತತ 6ನೇ ಬಾರಿಗೆ ಗುಜರಾತ್ ನಲ್ಲಿ ಗೆಲುವು ಸಾಧಿಸಿತ್ತು. ವಿಜಯ್ ರೂಪಾನಿ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾದರು.

182 ಸದಸ್ಯ ಬಲದ ಗುಜರಾತ್ ನಲ್ಲಿ ಬಿಜೆಪಿ 99, ಕಾಂಗ್ರೆಸ್ 77+3, ಹಾಗೂ ಇತರರು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದರು. ಕಾಂಗ್ರೆಸ್ ಬೆಂಬಲದೊಂದಿಗೆ ಸ್ವತಂತ್ರವಾಗಿ ಸ್ಪರ್ಧಿಸಿ ಜಿಗ್ನೇಶ್ ಮೆವಾನಿ, ಕಾಂಗ್ರೆಸ್ ನಿಂದ ಅಲ್ಪೇಶ್ ಠಾಕೂರ್ ವಿಧಾನಸಭೆ ಪ್ರವೇಶಿಸಿದರೆ ಯುವ ನಾಯಕ ಹಾರ್ದಿಕ್ ಪಟೇಲ್ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Assembly elections of 2017: Total 7 assembly elections were held in this year. Out of seven BJP bagged 6 and congress won only one state which is Punjab. BJP comes to power in Gujarat, Uttar Pradesh, Himachla Pradesh, Manipur, Uttarakhand and Goa.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ