
ಅಕ್ಷಯ ತದಿಗೆ: ಗೂಗಲ್ ಪೇ ಮೂಲಕ ಚಿನ್ನ ಖರೀದಿ, ಮಾರಾಟ ಹೇಗೆ?
ಅಕ್ಷಯ ತೃತೀಯ ಅಥವಾ ಅಕ್ಷಯ ತದಿಗೆ ಎಂದೂ ಕರೆಯಲ್ಪಡುವ ಹಿಂದೂ ಧಾರ್ಮಿಕ ಹಬ್ಬವನ್ನು ಈ ವರ್ಷ ಮೇ 3ರಂದು ಆಚರಣೆ ಮಾಡಲಾಗುತ್ತದೆ. ಈ ಹಬ್ಬವನ್ನು ಪ್ರಮುಖವಾಗಿ ಹಿಂದೂಗಳು ಸಂಪತ್ತಿನ ಪ್ರತೀಕವಾಗಿ ಆಚರಣೆ ಮಾಡುತ್ತಾರೆ. ಅಕ್ಷಯ ತೃತೀಯವನ್ನು ಹಿಂದೂಗಳಿಗೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ ಮತ್ತು ಚಿನ್ನವನ್ನು ಖರೀದಿಸುವ ಮೂಲಕ ಆಚರಿಸಲಾಗುತ್ತದೆ.
ಈ ದಿನ ಚಿನ್ನ, ಬೆಳ್ಳಿಯನ್ನು ಖರೀದಿ ಮಾಡುವುದರಿಂದ ಮನೆಯಲ್ಲಿ ಸಂಪತ್ತು, ಸಮೃದ್ಧಿ ಹೆಚ್ಚಲಿದೆ ಎಂಬ ನಂಬಿಕೆ ಇದೆ. ಭವಿಷ್ಯದಲ್ಲಿ ಹೆಚ್ಚಿನ ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ. ಅಕ್ಷಯ ಎಂದರೆ ಎಂದಿಗೂ ಕೊಳೆಯದ್ದು ಎಂದರ್ಥ. ಎಂದಿಗೂ ರೋಗ ಬಾರದ್ದು, ಹಾಳಾಗದ್ದು, ಖಾಲಿಯಾಗದ್ದು ಎಂಬರ್ಥಗಳೂ ಇವೆ. ಜ್ಯೋತಿಷ್ಯ ಶಾಸ್ತ್ರಜ್ಞರ ಪ್ರಕಾರ, ತೃತೀಯ ತಿಥಿ ಎಂದಿಗೂ ಕ್ಷೀಣಿಸುವುದಿಲ್ಲ ಎಂದಾಗಿದೆ.
ಒಂದೇ ದಿನ ರಂಜಾನ್, ಅಕ್ಷಯ ತೃತೀಯ: ಯುಪಿಯಲ್ಲಿ ಹೊಸ ಗೈಡ್ಲೈನ್
ವಿಶ್ವದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ಬಳಿಕ ಹಲವಾರು ಆಚರಣೆಗಳಲ್ಲಿ ಬದಲಾವಣೆ ಉಂಟಾಗಿದೆ. ಎಲ್ಲವೂ ಡಿಜಿಟಲ್ ಯುಗಕ್ಕೆ ಮಾರ್ಪಡಾಗಿದೆ. ಈ ಕೊರೊನಾ ವೈರಸ್ ಸಂದರ್ಭದಲ್ಲಿ ನೀವು ಚಿನ್ನವನ್ನು ಖರೀದಿ, ಮಾರಾಟ ಮಾಡಲು ಆಭರಣದ ಅಂಗಡಿಗಳಿಗೆ ಭೇಟಿ ನೀಡಬೇಕಾಗಿಲ್ಲ. ಈಗ ಚಿನ್ನದ ಖರೀದಿ, ಮಾರಾಟವನ್ನು ಕೂಡಾ ಆನ್‌ಲೈನ್ ಮೂಲಕ ಮಾಡಲಾಗುತ್ತಿದೆ. ಈ ಅಕ್ಷಯ ತೃತೀಯ ಸಂದರ್ಭದಲ್ಲಿ ನಾವು ಆನ್‌ಲೈನ್ ಮೂಲಕ ಚಿನ್ನವನ್ನು ಖರೀದಿ ಮಾಡುವುದು ಹಾಗೂ ಮಾರಾಟ ಮಾಡುವುದು ಹೇಗೆ ಎಂದು ತಿಳಿಯೋಣ ಮುಂದೆ ಓದಿ...

ಡಿಜಿಟಲ್ ಚಿನ್ನ ಎಂದರೇನು?
ನಾವು ಆನ್‌ಲೈನ್ ಮೂಲಕ ಚಿನ್ನವನ್ನು ಖರೀದಿ ಮಾಡುವುದು, ಮಾರಾಟ ಮಾಡುವುದು ಹೇಗೆ ಎಂದು ತಿಳಿಯುವುದಕ್ಕೂ ಮುನ್ನ, ಈ ಡಿಜಿಟಲ್ ಚಿನ್ನ ಎಂದರೆ ಏನು ಎಂದು ತಿಳಿಯೋಣ. ಡಿಜಿಟಲ್ ಚಿನ್ನವು ಹೂಡಿಕೆ ಸಾಧನವಾಗಿದ್ದು, ಖರೀದಿದಾರರಿಗೆ 24 ಕ್ಯಾರಟ್, 999.9 ಶುದ್ಧ ಚಿನ್ನವನ್ನು ಖರೀದಿಸಲು ಅವಕಾಶ ನೀಡುತ್ತದೆ. ನಂತರ ಚಿನ್ನ ಈ ಚಿನ್ನವನ್ನು ಖರೀದಿದಾರರ ಸುರಕ್ಷಿತ ವಾಲ್ಟ್‌ನಲ್ಲಿ ಠೇವಣಿ ಮಾಡಲಾಗುತ್ತದೆ. ಚಿನ್ನವನ್ನು 24 ಕ್ಯಾರಟ್‌ಗಳು, 999.9 ಶುದ್ಧ ಚಿನ್ನದ ನಾಣ್ಯಗಳು ಮತ್ತು ಚಿನ್ನದ ಬಾರ್‌ಗಳಾಗಿ ಮಾರಾಟ ಮಾಡಬಹುದು.

ಡಿಜಿಟಲ್ ಚಿನ್ನವನ್ನು ಎಲ್ಲಿ ಖರೀದಿಸಬಹುದು?
ನಾವು ಡಿಜಿಟಲ್ ಚಿನ್ನವನ್ನು ಗೂಗಲ್ ಪೇ ಮಾತ್ರವಲ್ಲದೇ ಬೇರೆ ಹಲವಾರು ಡಿಜಿಟಲ್ ಪಾವತಿ ವೇದಿಕೆಯಲ್ಲಿ ಖರೀದಿ, ಮಾರಾಟ ಮಾಡಬಹುದು. ಪೇಟಿಎಂ ಮನಿ, ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್, ಮೋತಿಲಾಲ್ ಓಸ್ವಾಲ್ ಮುಂತಾದ ಬ್ರೋಕರೇಜ್ ವ್ಯವಹಾರಗಳ ಜೊತೆಗೆ ಗೂಗಲ್ ಪೇ ಹಾಗೂ ಫೋನ್‌ಪೇನಲ್ಲಿ ಡಿಜಿಟಲ್ ಚಿನ್ನವನ್ನು ಖರೀದಿ ಮಾಡಬಹುದು.

ಗೂಗಲ್ ಪೇ ಮೂಲಕ ಚಿನ್ನ ಖರೀದಿ ಹೇಗೆ?
ನಾವು ಗೂಗಲ್ ಪೇ ಮೂಲಕ ಡಿಜಿಟಲ್ ಚಿನ್ನವನ್ನು ಖರೀದಿ ಮಾಡಬಹುದಾಗಿದೆ. ಇದಕ್ಕಾಗಿ ನಾವು ಐದು ಹಂತಗಳನ್ನು ಪಾಲನೆ ಮಾಡಬೇಕಾಗುತ್ತದೆ. ಈ ಹಂತಗಳನ್ನು ಈ ಕೆಳಗೆ ವಿವರಿಸಲಾಗಿದೆ.
ಹಂತ 1: ನಿಮ್ಮ ಪಿನ್ ನಮೂದಿಸಿ ಗೂಗಲ್ ಪೇ ಅಥವಾ ಜಿಪೇ ಆಪ್ ತೆರೆಯಿರಿ
ಹಂತ 2: ಹುಡುಕಾಟ ವಿಭಾಗದಲ್ಲಿ (ಸರ್ಚ್) 'ಗೋಲ್ಡ್ ಲಾಕರ್' ಎಂದು ಬರೆಯಿರಿ
ಹಂತ 3: ಗೋಲ್ಡ್ ಲಾಕರ್ ಅನ್ನು ಕ್ಲಿಕ್ ಮಾಡಿ, Buy Gold ಮೇಲೆ ಕ್ಲಿಕ್ ಮಾಡಿ (ಇಲ್ಲಿ ನಿಮಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿ ಬೆಲೆಯನ್ನು ತೆರಿಗೆ ಸಮೇತ ತೋರಿಸಲಾಗುತ್ತದೆ)
ಹಂತ 4: ನೀವು ಎಷ್ಟು ರೂಪಾಯಿಯ ಚಿನ್ನವನ್ನು ಖರೀದಿ ಮಾಡಲು ಬಯಸುತ್ತೀರಿ ಎಂದು ನಮೂದಿಸಿ
ಹಂತ 5: ನಿಮ್ಮ ಆದ್ಯತೆಯ ಪಾವತಿ ವಿಧಾನವನ್ನು ಆಯ್ಕೆಮಾಡಿ ಮತ್ತು ಪಾವತಿಯನ್ನು ಪೂರ್ಣಗೊಳಿಸಿ
ಗಮನಿಸಿ: ಬಳಕೆದಾರರು ಖರೀದಿಸಬೇಕಾದ ಕನಿಷ್ಠ ಚಿನ್ನದ ಮೊತ್ತವು 1 ಗ್ರಾಂ ಆಗಿದೆ.

ಗೂಗಲ್ ಪೇ ಮೂಲಕ ಮೂಲಕ ಚಿನ್ನವನ್ನು ಮಾರಾಟ ಮಾಡುವುದು ಹೇಗೆ?
ನೀವು ಗೂಗಲ್ ಪೇನಲ್ಲಿ ಚಿನ್ನವನ್ನು ಖರೀದಿ ಮಾಡುವುದು ಮಾತ್ರವಲ್ಲದೇ ಚಿನ್ನವನ್ನು ಮಾರಾಟ ಕೂಡಾ ಮಾಡಬಹುದಾಗಿದೆ. ಅದಕ್ಕಾಗಿ ನೀವು ಐದು ಹಂತಗಳನ್ನು ಪಾಲನೆ ಮಾಡಬೇಕಾಗುತ್ತದೆ.
ಹಂತ 1: ನಿಮ್ಮ ಪಿನ್ ನಮೂದಿಸಿ ಗೂಗಲ್ ಪೇ ಆಪ್ ತೆರೆಯಿರಿ
ಹಂತ 2: ಹುಡುಕಾಟ ವಿಭಾಗದಲ್ಲಿ (ಸರ್ಚ್) 'ಗೋಲ್ಡ್ ಲಾಕರ್' ಎಂದು ಬರೆಯಿರಿ
ಹಂತ 3: ಮಾರಾಟ ಆಯ್ಕೆಯನ್ನು ಆರಿಸಿ
ಹಂತ 4: ನೀವು ಮಾರಾಟ ಮಾಡಲು ಬಯಸುವ ಚಿನ್ನದ ತೂಕವನ್ನು ಮಿಲಿಗ್ರಾಂಗಳಲ್ಲಿ ನಮೂದಿಸಿ
ಹಂತ 5: ಒಮ್ಮೆ ಮಾರಾಟವನ್ನು ಅನುಮೋದಿಸಿದ ನಂತರ, ಹಣವು ನಿಮ್ಮ ಖಾತೆಗೆ ಬರಲಿದೆ