40% ಕಮಿಷನ್ : ಸಾಕ್ಷಿ ಬೇಕೋ, ನಿಮ್ಮನಿಮ್ಮ ಆತ್ಮಸಾಕ್ಷಿ ಸಾಕೋ?
ರಾಜ್ಯ ಗುತ್ತಿಗೆದಾರರ ಸಂಘ ಎರಡನೇ ಬಾರಿಗೆ ನಲವತ್ತು ಪರ್ಸೆಂಟ್ ಕಮಿಷನ್ ವಿಚಾರದಲ್ಲಿ ನ್ಯಾಯ ಕೊಡಿಸಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಮೊರೆ ಹೋದ ನಂತರ ಈ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.
ಪ್ರಧಾನಿ ಮೋದಿಯವರ ಒಂದು ದಿನದ ರಾಜ್ಯ ಭೇಟಿಗೆ ಹತ್ತು ದಿನಗಳು ಇರುವಾಗ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ವಿರೋಧ ಪಕ್ಷದ ನಾಯಕರಿಗೆ ಮನವಿ ಸಲ್ಲಿಸಿದ್ದಾರೆ. ಆ ಮೂಲಕ ಮೊಟ್ಟೆ, ಮಾಂಸದ ನಂತರ ಮತ್ತೊಂದು ವಿಚಾರಕ್ಕೆ ರಾಜಕೀಯ ಪಕ್ಷಗಳ ವಾಗ್ಯುದ್ದ ತಾರಕಕ್ಕೇರಿದೆ.
ಮುಂದಿನ ಸದನದ ಕಲಾಪದಲ್ಲಿ ಈ ವಿಚಾರವನ್ನು ಪ್ರಸ್ತಾವಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯ ಸರಕಾರದ ಸಚಿವರು ಸಾಕ್ಷಿ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ಎಂದು ಸವಾಲು ಎಸೆದಿದ್ದಾರೆ.
ಇನ್ನು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಎಲ್ಲಾ ಸರಕಾರದ ಅವಧಿಯಲ್ಲೂ ಕಮಿಷನ್ ದಂಧೆ ಇತ್ತು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಸಾಕ್ಷಿ ಕೊಡಿ ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದಾಗ ಗುತ್ತಿಗೆದಾರರ ಸಂಘ
ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದಾಗ ಗುತ್ತಿಗೆದಾರರ ಸಂಘ ಮನವಿಯನ್ನು ಮಾತ್ರ ಸಲ್ಲಿಸಿತ್ತು, ಆದರೆ ಇದಕ್ಕೆ ಪೂರಕವಾದ ಸಾಕ್ಷಿಯನ್ನು ನೀಡಿರಲಿಲ್ಲ. ಇದೇ ವಿಚಾರವನ್ನು ಇಟ್ಟುಕೊಂಡು ಬಿಜೆಪಿ, ಕೆಂಪಣ್ಣ ಅವರು ಕಾಂಗ್ರೆಸ್ ಏಜೆಂಟ್ ಎಂದು ದೂರಲಾರಂಭಿಸಿದೆ. ಸಂಬಂಧ ಪಟ್ಟ ದಾಖಲೆ/ಸಾಕ್ಷಿಯನ್ನು ನೀಡಲಿ ಎಂದು ಕೆಂಪಣ್ಣಗೆ ಸವಾಲು ಹಾಕಿದೆ. ಆದರೆ, ಕಮಿಷನ್ ನೀಡುವ ವಿಚಾರದಲ್ಲಿ ಯಾವ ಸಾಕ್ಷಿ ಇಟ್ಟು ಕೊಳ್ಳಲು ಸಾಧ್ಯ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

ಲಂಚ ಪಡೆದಾಗ ಅದಕ್ಕೆ ದಾಖಲೆ ಸಮೇತ ಹಣ ಪಡೆದುಕೊಳ್ಳುತ್ತಾರಾ?
ಅಧಿಕಾರಿಗಳು ಅಥವಾ ಜನ ಪ್ರತಿನಿಧಿಗಳು ಕಮಿಷನ್/ಲಂಚ ಪಡೆದಾಗ ಅದಕ್ಕೆ ದಾಖಲೆ ಸಮೇತ ಹಣ ಪಡೆದುಕೊಳ್ಳುತ್ತಾರಾ? ಹಿಂದೊಮ್ಮೆ ಲಂಚದ ಹಣವನ್ನು ಚೆಕ್ ಮೂಲಕ ಯಡಿಯೂರಪ್ಪ ಪಡೆದಿದ್ದರು ಎನ್ನುವ ಆಪಾದನೆ ಬಿಟ್ಟರೆ, ಬ್ಯಾಂಕ್ ಟ್ರಾನ್ಸಫರ್, ಚೆಕ್/ಡಿಡಿ ಮೂಲಕ ಲಂಚ ಪಡೆದ ಉದಾಹರಣೆಗಳು ವಿರಳಾತೀತ ವಿರಳ. ಹಾಗಾಗಿ, ಕಮಿಷನ್ ಪಡೆದಿದ್ದಕ್ಕೆ ದಾಖಲೆ ಕೊಡಿ ಎಂದು ಆರೋಪ ಎದುರಿಸುತ್ತಿರುವವರು ಸವಾಲು ಹಾಕಿದರೆ, ಅದಕ್ಕೆ ಪ್ರತಿಕ್ರಿಯಿಸುವುದು ಕಷ್ಟ.

ಯಾವ ಸಾಕ್ಷಿ ಕೊಡಲು ಸಾಧ್ಯ ಎಂದ ಎಚ್.ಡಿ.ಕುಮಾರಸ್ವಾಮಿ
"ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಪ್ರಧಾನಿ ಮೋದಿಗೆ ಸೇರಿದಂತೆ ಯಾರಿಗೂ ಇಲ್ಲ. ಗುತ್ತಿಗೆದಾರರು ವಿಪರೀತ ಕಮಿಷನ್ ನೀಡಬೇಕಾದ ಪರಿಸ್ಥಿತಿ ಇದ್ದಲ್ಲಿ ಕಾಮಗಾರಿಯನ್ನೇ ನಿಲ್ಲಿಸಲಿ. ಕಮಿಷನ್ ಎನ್ನುವುದು ಎಲ್ಲಾ ಕಾಲದಲ್ಲಿಯೂ ಇದೆ, ಆದರೆ ಬಿಜೆಪಿ ಅದನ್ನು ಸಾರ್ವಕಾಲಿಕ ದಾಖಲೆ ಮಾಡಿದೆ. ಕಮಿಷನ್ ಪಡೆದಿದ್ದಕ್ಕೆ ಸಾಕ್ಷಿ ಕೊಡಿ ಎಂದು ಸಿಎಂ ಆದಿಯಾಗಿ ಸಚಿವರು ಹೇಳುತ್ತಿದ್ದಾರೆ. ಇದಕ್ಕೆ ಯಾವ ಸಾಕ್ಷಿ ಕೊಡಲು ಸಾಧ್ಯ"ಎಂದು ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ತೋಟಗಾರಿಕಾ ಸಚಿವ ಮುನಿರತ್ನ ಅವರ ಹೆಸರನ್ನು ಪ್ರಸ್ತಾವಿಸಿದ್ದಾರೆ
ಕೆಂಪಣ್ಣನವರು ಕಮಿಷನ್ ಪಡೆದ ಸಚಿವರುಗಳ ಪೈಕಿ ತೋಟಗಾರಿಕಾ ಸಚಿವ ಮುನಿರತ್ನ ಅವರ ಹೆಸರನ್ನು ಪ್ರಸ್ತಾವಿಸಿದ್ದಾರೆ. ಇವರ ವಿರುದ್ದ ಐವತ್ತು ಕೋಟಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮುನಿರತ್ನ ಗುಡುಗಿದ್ದಾರೆ. ಕಮಿಷನ್/ಲಂಚ ಕೊಡುವಾಗ ಯಾವುದೇ ದಾಖಲೆಯನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಕಟು ಸತ್ಯ. ಹಾಗಾಗಿ, ಸಾಕ್ಷಿ ಕೇಳುವ ಬದಲು ಕಮಿಷನ್ ಪಡೆದವರು ತಮ್ಮ ಆತ್ಮಸಾಕ್ಷಿಯನ್ನೇ ಸಾಕ್ಷಿಯಾಗಿ ಇಟ್ಟುಕೊಂಡರೆ ಸೂಕ್ತವಲ್ಲವೇ?












Click it and Unblock the Notifications