ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೇ ಪಾಕ ವೈವಿಧ್ಯದ 'ಸಸ್ಯಾಹಾರಿ ಅಡುಗೆ ಅರಮನೆ'ಯಲ್ಲಿ 2.5 ಲಕ್ಷ ಮಂದಿ

By Yashaswini
|
Google Oneindia Kannada News

ಮೈಸೂರು, ಜೂನ್ 19 : ಮಾಯಾಬಜಾರ್ ಎಂಬ ಹಳೇ ಸಿನಿಮಾದ ಆ ಹಾಡು ಅದೆಷ್ಟು ಸಲ ನೋಡಿದಾಗಲೂ ನಾಲಗೆ ತನ್ನ ನಿಯಂತ್ರಣ ಕಳೆದುಕೊಂಡು ಬಯಕೆ ತೋಟದ ಬೇಲಿ ಹಾರಲು ಹವಣಿಸುತ್ತದೆ. ರುಚಿಕಟ್ಟಾದ- ಪೊಗದಸ್ತಾದ ಅಡುಗೆ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ?!

ಅದರಲ್ಲೂ ರುಚಿ, ಶುಚಿ‌ ಅಡುಗೆಗಳು ಯಾರದೇ ನಾಲಗೆಯ ಚಪಲವನ್ನು ಹೆಚ್ಚಿಸುತ್ತದೆ. ಆದರೆ ಕಾಲ ಬದಲಾಗಿದೆ. ಒಂದು ಕಾಲದಲ್ಲಿ ತಾವು ಮಾಡಿದ ಅತ್ಯುತ್ತಮ ಅಡುಗೆಯನ್ನು ಇನ್ನೊಬ್ಬರಿಗೆ ಕೊಟ್ಟು, ಹೇಗಿದೆ ರುಚಿ ಎಂದು ಕೇಳುವ ಪರಿಪಾಠವಿತ್ತು. ಈಗ ಹೋಟೆಲಿನ ವಿಳಾಸ ಹೇಳಿಬಿಡ್ತಾರೆ: ಎಲ್ಲಿ ಯಾವ ಅಡುಗೆ ಬಲೇ ರುಚಿ ಎಂಬ ಅಗಾಧ ತಿಳಿವಳಿಕೆಯಲ್ಲಿ.

ಆದರೆ, ಈ ಫೇಸ್ ಬುಕ್ ನ ಸಹಚರ್ಯದಲ್ಲಿ ಒಂದಿಷ್ಟು ಬದಲಾವಣೆ ಕಾಣುತ್ತಿರುವಂತಿದೆ. ಫೇಸ್ ಬುಕ್ ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲಿ ಅಡುಗೆಗಳ ಹಾಗೂ ನಳಪಾಕ ಪ್ರವೀಣರ ಉದ್ದಪಟ್ಟಿಯೇ ಇದೆ. ತಾವು ಮಾಡಿದ ಅಡುಗೆಗಳನ್ನು ವಿವಿಧ ರೀತಿಯಲ್ಲಿ ಅಲಂಕರಿಸಿ, ತಮ್ಮ ಮನೆಯವರಿಗೆ ನೀಡುವುದಲ್ಲದೆ, ಚಿತ್ರ ತೆಗೆದು ಹಾಕುವುದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯ. ಇದನ್ನು ಅನೇಕರು ಅನುಕರಿಸುತ್ತಾರೆ.

ಇಡ್ಲಿ ಎಂಬ ಎರಡಕ್ಷರದಲ್ಲಿ ಎಷ್ಟೊಂದು ನೆನಪುಂಟು!ಇಡ್ಲಿ ಎಂಬ ಎರಡಕ್ಷರದಲ್ಲಿ ಎಷ್ಟೊಂದು ನೆನಪುಂಟು!

ಅಂದಹಾಗೆ ಫೇಸ್ ಬುಕ್ ನಲ್ಲಿ 'ಸಸ್ಯಾಹಾರಿ ಅಡುಗೆ ಅರಮನೆ' ಎಂಬ ಹೆಸರಿನಲ್ಲಿಯೇ ವಿಶೇಷ ಗ್ರೂಪ್ ಒಂದು ಇದೆ. ಈಗಾಗಲೇ ಅಡುಗೆ ಕುರಿತಾಗಿ ಲಕ್ಷ‌ ಲಕ್ಷ ಪೇಜ್ ಗಳು ಫೇಸ್ ಬುಕ್ ನಲ್ಲಿ ಇದ್ದರೂ ಇವರದೇನು ವಿಶೇಷ‌ ಎಂದು ನೀವು ಕೇಳಬಹುದು. ಖಂಡಿತಾ ಇವರು ವಿಶೇಷ. ಏಕಾಗಿ ಎಂಬುದನ್ನು ತಿಳಿಯಲು ಮುಂದೆ ಓದಿ.

ಹಳೆಯ ಪಾಕ ವೈವಿಧ್ಯವೇ ವಿಭಿನ್ನ ಪರಿಚಯ

ಹಳೆಯ ಪಾಕ ವೈವಿಧ್ಯವೇ ವಿಭಿನ್ನ ಪರಿಚಯ

ಈ ಪುಟದಲ್ಲಿ ಹೆಚ್ಚು ‌ಪ್ರಾಶಸ್ತ್ಯ ನೀಡುವ ಅಡುಗೆಗಳೆಂದರೆ ಪೂರ್ವಜರು ನಮಗಾಗಿ ಬಿಟ್ಟು ಹೋದ ಹಳೆಯ ಪಾಕ ವೈವಿಧ್ಯವನ್ನು. ಅವುಗಳನ್ನೇ ಇಲ್ಲಿ ವಿಭಿನ್ನವಾಗಿ ಪರಿಚಯಿಸಲಾಗುತ್ತದೆ. ವಾರಕ್ಕೊಂದು ಥೀಮ್ ಎಂದು ನೀಡುವ ಈ ಗ್ರೂಪ್‌ನ ಮುಖ್ಯಸ್ಥರು, ಅಡುಗೆ ಮಾಡುವವರನ್ನು ಪ್ರೋತ್ಸಾಹಿಸುತ್ತಾರೆ. ಉದಾಹರಣೆಗೆ ಕಳೆದ ವಾರ ಮೆಂತ್ಯೆ ಸೊಪ್ಪಿನ ಅಡುಗೆಗಳನ್ನು ಮಾಡುವಂತೆ ತಿಳಿಸಿದ್ದು, ಇದರಲ್ಲಿ ಭಾಗವಹಿಸಿದವರು ಸಾಕಷ್ಟು ಮಂದಿ. ತಮ್ಮ ಮನೆಯಲ್ಲಿ ಮೆಂತ್ಯೆ ಸೊಪ್ಪಿನಲ್ಲಿ ಮಾಡಿದ ತರಹೇವಾರಿ ಅಡುಗೆಗಳ ಚಿತ್ರ ಹಾಗೂ ಕೆಲವರು ವಿಡಿಯೋ ಸಮೇತ ಹಾಕುವಂತೆಯೂ ಪ್ರೇರೇಪಿಸುತ್ತಾರೆ. ಈ ಗುಂಪಿನಲ್ಲಿ ಮೊದಲ ಬಾರಿಗೆ ಬಿಸಿಬೇಳೆಬಾತ್ ಥೀಮ್ ಇದ್ದಾಗ ಐನೂರಕ್ಕೂ ಹೆಚ್ಚು ಜನ ಅದನ್ನು ಮಾಡಿ ಕೇವಲ, ಎರಡು ದಿ‌ನದ ಅಂತರದಲ್ಲಿಯೇ ಹಾಕಿದ್ದನ್ನು ಗುಂಪಿನ ಮುಖ್ಯಸ್ಥರು ಮರೆಯುವುದಿಲ್ಲ.

ನಳಪಾಕ ಮತ್ತು ಭೀಮಪಾಕ ಚರಿತ್ರಾರ್ಹ

ನಳಪಾಕ ಮತ್ತು ಭೀಮಪಾಕ ಚರಿತ್ರಾರ್ಹ

ಸಾಹಿತ್ಯ ಎಂದರೆ ನಮಗೆ ಥಟ್ ಅಂತ ಹೊಳೆಯುವುದು ಕಾವ್ಯ, ಕಥೆ, ನಾಟಕ, ಕಾದಂಬರಿ ಮತ್ತು ಅದರಾಚೆ ಬಿಡಿ ಬರಹಗಳು. ಈಗೀಗ ವಿಜ್ಞಾನ, ಪರಿಸರ ಕುರಿತ ಸಾಹಿತ್ಯ ರಚನೆಯಾಗುತ್ತಿದೆ. ಆದರೆ ಪುರಾತನ ಕಾಲದಿಂದಲೂ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪಾಕಶಾಸ್ತ್ರಕ್ಕೆ ತನ್ನದೇ ಆದ ಮಹತ್ವವಿದೆ. ಭಾರತೀಯ ಪರಂಪರೆಯಲ್ಲಿ ನಳಪಾಕ ಮತ್ತು ಭೀಮ ಪಾಕ ಚರಿತ್ರಾರ್ಹವಾಗಿದೆ. ಗತಕಾಲದ ಇತಿಹಾಸ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಅರಿಯಲು ಶಾಸನ, ಐತಿಹ್ಯ ಆಧಾರಗಳಂತೆಯೇ ಅಡುಗೆ ವೈವಿಧ್ಯತೆಗಳೂ ಸಹ ಬೆಳಕು ಬೀರುತ್ತವೆ. ಯಾವ ವಯಸ್ಸಿಗೆ ಎಂತಹ ಆಹಾರ ಸೇವಿಸಬೇಕು? ಹೇಗೆ ಸೇವಿಸಬೇಕು ? ಯಾವಾಗ ಸೇವಿಸಬೇಕು ? ಎಂಬುದನ್ನು ಅರಿಯಬೇಕಾದ ಅನಿವಾರ್ಯ ಖಂಡಿತ ಎದುರಾಗಿದೆ. ಏಕೆಂದರೆ ಆಹಾರ ಬಳಕೆಯ ಹಾಗೂ ತಯಾರಿಕೆಯ ಸರಿಯಾದ ವಿಧಾನವನ್ನು ಅರಿಯದೇ ಮನಬಂದಂತೆ ತಿಂದು ಪೋಷಕಾಂಶ ಕೊರತೆ ಅಥವಾ ಸ್ಥೂಲಕಾಯದಿಂದ ಬಳಲುತ್ತಿರುವವರನ್ನು ನೋಡುತ್ತಿದ್ದೇವೆ.

ಸಾಮಾಜಿಕ ಆರೋಗ್ಯ ಕ್ಷೇತ್ರದಲ್ಲಿ ಸಾಧನೆ

ಸಾಮಾಜಿಕ ಆರೋಗ್ಯ ಕ್ಷೇತ್ರದಲ್ಲಿ ಸಾಧನೆ

ನಾವು ತಿನ್ನುವ ಆಹಾರದಲ್ಲಿ ಶರ್ಕರ ಪಿಷ್ಟಗಳು, ಪ್ರೋಟೀನ್, ಮೇದಸ್ಸು, ನೀರು, ಖನಿಜಗಳು, ಜೀವಸತ್ವಗಳು ಹಾಗೂ ನಾರಿನ ಅಂಶಗಳು ಸಮತೋಲಿತವಾಗಿದ್ದರೆ ಅದು ಸಮತೋಲನ ಆಹಾರವೆನಿಸಿಕೊಳ್ಳುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಡುಗೆ ತಯಾರಿಸಬೇಕಾಗುತ್ತದೆ. ಆದರೆ ಇಲ್ಲಿಯೂ ಚಿಕ್ಕವರಿಗೆ, ಮಕ್ಕಳಿಗೆ, ದೊಡ್ಡವರಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ, ವೃದ್ಧರಿಗೆ ಇಂತಿಂತಹ ಅಡುಗೆಗಳು ಎಂದು ಇಲ್ಲಿ ವಿಭಾಗಿಸಬಹುದು. ಪೇಯ, ಜ್ಯೂಸ್, ಸೂಪ್, ತಂಬುಳಿ, ಪಲ್ಯ, ಬರ್ಫಿ, ಗೊಜ್ಜು, ಚಟ್ನಿ, ಸಿಹಿ ಹಾಗೂ ಖಾರಕ್ಕೆ ಸಂಬಂಧಿಸಿದ ಅತ್ಯವಶ್ಯಕವಾದ ಪಾಕ ರುಚಿಗಳಿದ್ದರೆ, ಇನ್ನು ವಿವಿಧ ಸದಭಿರುಚಿಯ ಲೇಹ್ಯ, ಕಷಾಯ, ಉಂಡೆ, ಪುಡಿಗಳು, ಹುಳಿ, ಸಜ್ಜಿಗೆ, ಪಾನಕ, ಪಾಯಸ, ಬಾತ್, ದೋಸೆ, ಸಾರು, ಜಾಮ್ ಹೀಗೆ ಪಾಕ ಸಾಹಿತ್ಯದ ಮೂಲಕ ಸಾಮಾಜಿಕ ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದೆ ಈ ತಂಡ.

ನಳಮಹಾರಾಜ ಬಿರುದು ಪ್ರದಾನ

ನಳಮಹಾರಾಜ ಬಿರುದು ಪ್ರದಾನ

ಕೇರಳ ರೀತಿಯ ಪಾಕ ವೈವಿಧ್ಯ, ಮಲೆನಾಡು ಶೈಲಿಯ ತರಹೇವಾರಿ ಖಾದ್ಯಗಳು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ನಳ ಪಾಕ, ತಮಿಳುನಾಡು, ಆಂಧ್ರ ಶೈಲಿಯ ಪ್ರಾಚೀನ ಅಡುಗೆಗಳು ಇಲ್ಲಿ ಹೆಚ್ಚು ಕಾಣ ಸಿಗುತ್ತವೆ. ಪುಂಖಾನುಪುಂಖವಾಗಿ ಅಡುಗೆ ರೆಸಿಪಿ ಹಾಕುವುದೊಂದೇ ಕಾಯಕವಾದರೆ ಅದು ಎಲ್ಲರೂ ಮಾಡುತ್ತಾರೆ ಎನ್ನಬಹುದು. ಆದರೆ ಇಲ್ಲಿ ಹಾಕಿದ ಪ್ರತಿಯೊಂದು ಅಡುಗೆಯನ್ನು ಪರಿಶೀಲಿಸಿ, ತಾವು ಮನೆಯಲ್ಲಿ ಮಾಡಿ‌ ಅತ್ಯುತ್ತಮ ಅಡುಗೆ ಹಂಚಿಕೊಂಡವರಿಗೆ ವಾರ - ವಾರವೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸುತ್ತಾ ಬಂದಿದೆ ಅಡ್ಮಿನ್ ತಂಡ. ಪುರಾತನ ಅಡುಗೆ ಪದ್ಧತಿ ನಶಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಅದಕ್ಕೆ ಹೆಚ್ಚು ಒತ್ತು ನೀಡುವ ಗ್ರೂಪ್ ನ 15 ಜನರ ಅಡ್ಮಿನ್ ತಂಡ, ತರಹೇವಾರಿ ಅಡುಗೆಯನ್ನು ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತಗೊಳಿಸದೆ ತಿಂಗಳಿಗೊಮ್ಮೆ ಗಂಡು ಮಕ್ಕಳನ್ನು ಪ್ರೋತ್ಸಾಹಿಸಿ, ಒಂದು ಥೀಮ್ ಮೀಸಲಿಟ್ಟು ಅವರಿಗೆ ನಳಮಹಾರಾಜ ಎಂಬ ಬಿರುದನ್ನು ನೀಡುತ್ತದೆ.

ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜನೆ

ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜನೆ

ಹಬ್ಬ- ಹರಿ ದಿನಗಳಂದು ಮಾಡುವ ಅಡುಗೆಯ ಮಹತ್ವ ಯಾರಿಗೂ ತಿಳಿಯುವುದಿಲ್ಲ. ಇದನ್ನು ಪ್ರತಿ ಹಬ್ಬದಲ್ಲಿಯೂ ಆಯಾ ಅಡುಗೆಗಳ ಕುರಿತಾಗಿ ಹಿನ್ನೆಲೆ, ಮಾಡುವ ವಿಧಾನ, ಹಬ್ಬದ ವೈಭವವನ್ನು ಸಮಗ್ರವಾಗಿ ತಿಳಿಸುತ್ತದೆ. ಈ ತಂಡದ ಮತ್ತೊಂದು ಆದರಣೀಯ ವಿಚಾರವೆಂದರೆ ಇಲ್ಲಿ ಮಾಡುವ ಪ್ರತಿ ಪೋಸ್ಟ್ ಕನ್ನಡದಲ್ಲಿಯೇ ಇರಬೇಕೆಂದು ನಿಯಮವಿದೆ. ಈಗಾಗಲೇ ಅನೇಕ ಗ್ರೂಪ್ ಗಳು ಫೇಸ್ ಬುಕ್ ನಲ್ಲಿದ್ದರೂ ಈ ತೆರನಾದ ಕನ್ನಡಕ್ಕೆ ಹೆಚ್ಚು ಒತ್ತು ಕೊಡುವ ತಂಡ ಅತೀ ವಿರಳ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಅನೇಕ ಜನರು ಒಟ್ಟಾಗಿ ಸೇರಿ ಸ್ನೇಹ ಸಮ್ಮಿಲನ ಎಂಬ ಕಾರ್ಯಕ್ರಮವನ್ನು ಏರ್ಪಡಿಸಿ, ಅಲ್ಲಿಯೂ ಅಡುಗೆ ಸ್ಪರ್ಧೆಗಳನ್ನು ಮಾಡುವಂತಹ ವಿನೂತನ ಕಾರ್ಯಕ್ರಮ ಮಾಡಿ ಎಲ್ಲರನ್ನೂ ಪ್ರೋತ್ಸಾಹಿಸುತ್ತಾರೆ. ಒಟ್ಟಾರೆ ಮಾಡರ್ನ್ ಟ್ರೆಂಡ್ ಎಂಬ ಈಗಿನ ಕಾಲಘಟ್ಟದಲ್ಲಿ ವಿಭಿನ್ನ, ವಿಶೇಷ ಶೈಲಿಯ ಈ ಗ್ರೂಪ್ ವಿಶೇಷವೇ ಸರಿ. ನಮ್ಮ ಕಡೆಯಿಂದ ಈ ತಂಡದ ಮುಖ್ಯಸ್ಥರಿಗೆ ಧನ್ಯವಾದಗಳು.

English summary
Facebook page which is dedicated for cookery called 'Adugue Aramane' in Kannada has more than 2.50 lakh members. It is dedicated to vegetarians. Post strictly in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X