19 Crore Lottery: ಊಟಕ್ಕೆಂದು ಹೊರಹೋದವಳ ಬದುಕೇ ಬದಲಾಯ್ತು; ವಾಪಸ್ ಬರುವಷ್ಟರಲ್ಲಿ ₹16 ಕೋಟಿಯ ಒಡತಿ!
ಈ ಮಹಿಳೆ ಯಾವತ್ತಿನ ತರಾನೇ ತನ್ನ ದಿನವನ್ನು ಶುರು ಮಾಡಿದ್ದರು. ಕೆಲಸದ ಒತ್ತಡ ತುಸು ಹೆಚ್ಚೇ ಇತ್ತು. ಇದನ್ನು ಬಿಟ್ಟರೆ ದಿನ ಎಂದಿನಂತೆಯೇ ಸಾಗಿತ್ತು. ಆದರೆ, ಅವರ ಬಾಳ ಪಯಣ ದೊಡ್ಡ ತಿರುವು ಪಡೆದದ್ದು ಲಂಚ್ ಬ್ರೇಕ್‌ನಲ್ಲಿ. ಊಟ ಮಾಡುವುದಕ್ಕಾಗಿ ಅವರು ಆಫೀಸ್ ಬಿಟ್ಟು ಹೊರ ಬರುತ್ತಾರೆ. ಈ ಸಣ್ಣ ಬ್ರೇಕ್ ಅವರ ಜೀವನದ ಅತೀ ದೊಡ್ಡ ಸಂತೋಷಕ್ಕೆ ಕಾರಣವಾಗಬಹುದು ಎನ್ನುವುದನ್ನು ಅವರು ಕೂಡಾ ಕನಸಿನಲ್ಲಿಯೂ ಊಹಿಸಿರಲಿಕ್ಕಿಲ್ಲ.

ಜೀವನವನ್ನೇ ಬದಲಾಯಿಸಿದ ಸಣ್ಣ ನಿರ್ಧಾರ
ಹೌದು, ಊಟದ ವಿರಾಮದ ಸಮಯದಲ್ಲಿ ತೆಗೆದುಕೊಂಡ ನಿರ್ಧಾರವು ಅವರ ಜೀವನವನ್ನೇ ಬದಲಾಯಿಸಿದೆ. ಆ ಮಹಿಳೆ ಲಂಚ್ ಬ್ರೇಕ್‌ನಲ್ಲಿ 20 ಡಾಲರ್ ಅಂದರೆ ಸುಮಾರು 1,916 ರೂ. ಕೊಟ್ಟು ಲಾಟರಿ ಟಿಕೆಟ್ ಅನ್ನು ಖರೀದಿ ಮಾಡ್ತಾರೆ. ಹಾಗೆಯೇ ಸುಮ್ಮನೆ ತನ್ನ ಲಕ್ ಚೆಕ್ ಮಾಡೋಣ ಅಂತ ಈ ಟಿಕೆಟ್ ತಗೋತಾರೆ. ಆದರೆ ಆ ಟಿಕೆಟನ್ನು ಅವರು ಸ್ಕ್ರಾಚ್ ಮಾಡಿದಾಗ ನಿಜಕ್ಕೂ ಅವರ ಅದೃಷ್ಟ ಬದಲಾಗಿತ್ತು. ಆ ಮಹಿಳೆ ಖರೀದಿಸಿದ ಲಾಟರಿಯಲ್ಲಿ 2 ಮಿಲಿಯನ್ ಡಾಲರ್ ಅಂದರೆ ಸರಿ ಸುಮಾರು 19.17 ಕೋಟಿ ಬಹುಮಾನ ಗೆಲ್ಲುತ್ತಾರೆ.
ಇಷ್ಟು ದೊಡ್ಡ ಮೊತ್ತವನ್ನು ಗೆಲ್ಲುವುದು ಸಂತೋಷದ ವಿಷಯವೇ. ಬೇರೆ ಯಾರಾದರೂ ಆಗಿದ್ದರೆ ಈ ವಿಷಯವನ್ನು ಫೋನ್ ಮಾಡಿ ತಮ್ಮ ಕುಟುಂಬಕ್ಕೆ ತಿಳಿಸ್ತಾ ಇರ್ತಿದ್ರು. ಇನ್ನು ಕೆಲವರು ಫ್ರೆಂಡ್ಸ್‌ಗೆ ಹೇಳ್ತಾ ಇದ್ರು. ಅಥವಾ ದಿನಾ ಟೆನ್ಶನ್ ಕೊಡೋ ಕೆಲಸಾನೇ ಬೇಡ ಅಂತ ರಾಜೀನಾಮೆ ಕೊಡೋದಕ್ಕೆ ಮುಂದಾಗ್ತಾ ಇದ್ರು. ಆದ್ರೆ ಈ ಮಹಿಳೆ ಇದ್ಯಾವುದನ್ನೂ ಮಾಡಲಿಲ್ಲ.
ಲಾಟರಿ ಗೆದ್ದ ಬಗ್ಗೆ ಯಾರಿಗೂ ತಿಳಿಸುವುದಿಲ್ಲ
ಈ ಲಾಟರಿ ತನ್ನ ಆರ್ಥಿಕ ಪರಿಸ್ಥಿತಿಯನ್ನು ಬದಲಾಯಿಸುತ್ತದೆ ಎನ್ನುವುದು ಆ ಮಹಿಳೆಗೆ ಚೆನ್ನಾಗಿಯೇ ಗೊತ್ತಿತ್ತು. ಆದರೆ ಸದ್ಯಕ್ಕೆ ಅವರಿಗೆ ಆ ದಿನದ ಶಿಫ್ಟ್ ಮುಗಿಸುವುದು ಮುಖ್ಯವಾಗಿತ್ತು. ಹಾಗಾಗಿ ಏನೂ ಆಗೇ ಇಲ್ಲ ಎನ್ನುವ ಹಾಗೆ ತನ್ನ ಟಿಕೆಟ್ ಜೊತೆಗೆ ಆಫೀಸಿಗೆ ಬಂದ ಅವರು ತನ್ನ ಶಿಫ್ಟ್ ಮುಂದುವರಿಸ್ತಾರೆ. ಆ ದಿನದ ಪೂರ್ತಿ ಕೆಲಸ ಮುಗಿಸ್ತಾರೆ. ಟಿಕೆಟ್ ಗೆದ್ದ ನಂತರವೂ, ತಾನು ತಕ್ಷಣ ಆಫೀಸಿಗೆ ಹೋಗಬೇಕು, ಇನ್ನೇನು ತನ್ನ ಲಂಚ್ ಅವರ್ ಮುಗಿಯುತ್ತದೆ. ಹಾಗಾಗಿ ಏನೂ ಆಗಿಲ್ಲ ಎನ್ನುವಂತೆ ತಾನಿರಬೇಕು ಎನ್ನುವುದನ್ನು ಮಹಿಳೆ ಮೊದಲೇ ವರ್ಜೀನಿಯಾ ಲಾಟರಿ ಅಧಿಕಾರಿಗಳಿಗೆ ತಿಳಿಸಿದ್ದರು.
ತನ್ನ ಗುರುತು ಬಿಟ್ಟು ಕೊಡಲಿಲ್ಲ
ಆ ಮಹಿಳೆಗೆ 2 ಮಿಲಿಯನ್ ಡಾಲರ್ ಬಹುಮಾನ ಒಂದೇ ಬಾರಿಗೆ ಸಿಗುತ್ತಿರಲಿಲ್ಲ. ಬಹುಮಾನವನ್ನು ಸ್ವೀಕರಿಸುವಾಗ ಆಕೆಯ ಬಳಿ ಎರಡು ಆಯ್ಕೆಗಳಿದ್ದವು. ಮೊದಲನೆಯದ್ದು 30 ವರ್ಷಗಳವರೆಗೆ ವಾರ್ಷಿಕವಾಗಿ ನಿಗದಿತ ಮೊತ್ತ ಪಡೆಯುವುದು ಅಥವಾ ಒಟ್ಟು ಮೊತ್ತದ ನಗದು ಪಾವತಿ ಪಡೆಯುವುದು. ಅವರು ಎರಡನೇ ಆಯ್ಕೆಯನ್ನು ಆರಿಸಿಕೊಂಡರು. ಇಷ್ಟಾದರೂ ಮಹಿಳೆ ತನ್ನ ಗುರುತನ್ನು ಬಹಿರಂಗಪಡಿಸಲು ಒಪ್ಪಲಿಲ್ಲ.
ಟಿಕೆಟ್ ಮಾರುವ ಅಂಗಡಿಗೂ ಸಿಕ್ಕಿತು ಬೋನಸ್
ಈ ಗೆಲುವು ಲಾಟರಿ ಗೆದ್ದ ಮಹಿಳೆಗೆ ಮಾತ್ರವಲ್ಲ. ಅವಳು ಅದೃಷ್ಟಶಾಲಿ ಟಿಕೆಟ್ ಖರೀದಿಸಿದ ಅಂಗಡಿಗೂ ಬೋನಸ್ ಸಿಕ್ಕಿತು. ಲಾಟರಿಗಳ ಜಗತ್ತಿನಲ್ಲಿ, ಹೆಚ್ಚಿನ ಬಹುಮಾನಗಳೊಂದಿಗೆ ಟಿಕೆಟ್‌ಗಳನ್ನು ಮಾರಾಟ ಮಾಡುವ ಚಿಲ್ಲರೆ ವ್ಯಾಪಾರಿಗಳು ಹೆಚ್ಚಾಗಿ ಬಹುಮಾನಗಳು ಅಥವಾ ಬೋನಸ್‌ಗಳನ್ನು ಪಡೆಯುತ್ತಾರೆ. ಆದ್ದರಿಂದ, ಮಹಿಳೆಯ ಅದೃಷ್ಟದ ಜೊತೆಗೆ ಅಂಗಡಿಯವರ ಅದೃಷ್ಟವೂ ಬೆಳಗಿತ್ತು ಎಂದರೆ ತಪ್ಪಲ್ಲ. ಲವ್ ಫುಡ್ ಮಾರ್ಟ್‌ನಲ್ಲಿ ಸರಳ ಸ್ಕ್ರ್ಯಾಚ್ ಕಾರ್ಡ್ ಆಗಿ ಮಾರಾಟವಾದ ಟಿಕೆಟ್ ಶೀಘ್ರದಲ್ಲೇ 2 ಮಿಲಿಯನ್ ಜಾಕ್‌ಪಾಟ್ ಹೊಂದಿರುವ ಟಿಕೆಟ್ ಆಗಿ ಬದಲಾಯಿತು.
ಈ ಕಥೆಯಲ್ಲಿ ಮತ್ತೊಂದು ಕುತೂಹಲಕಾರಿ ತಿರುವು ಇದೆ. ಆ ಮಹಿಳೆ ತನ್ನ ಗುರುತನ್ನು ಬಹಿರಂಗಪಡಿಸದಿರಲು ನಿರ್ಧರಿಸಿದಳು. ವರ್ಜೀನಿಯಾ ಕಾನೂನಿನ ಪ್ರಕಾರ ಲಾಟರಿ ವಿಜೇತರು ಕೆಲವು ಸಂದರ್ಭಗಳಲ್ಲಿ ತಮ್ಮ ಹೆಸರುಗಳನ್ನು ಬಹಿರಂಗಪಡಿಸದೆ ತಮ್ಮ ಬಹುಮಾನಗಳನ್ನು ಪಡೆಯಬಹುದು. ವಿಜೇತರು ಲಿಖಿತ ಅನುಮತಿಯನ್ನು ನೀಡದ ಹೊರತು ಅಂತಹ ವಿಜೇತರ ಹೆಸರು, ನಗರ ಮತ್ತು ಗೆಲುವಿನ ಮೊತ್ತವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದಿಲ್ಲ. ಈ ಸಂದರ್ಭದಲ್ಲಿ, ಮಹಿಳೆಯ ಗುರುತನ್ನು ಸಹ ಬಹಿರಂಗಪಡಿಸಲಾಗಿಲ್ಲ. ಪರಿಣಾಮವಾಗಿ, ಅವರು ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ, ಜಾಕ್‌ಪಾಟ್ ಗೆದ್ದ ನಂತರ ಅವರು ತಮ್ಮ ಕೆಲಸವನ್ನು ಬಿಟ್ಟಿದ್ದಾರೆಯೇ? ಅಥವಾ ಇನ್ನೂ ಕೆಲಸ ಮಾಡುತ್ತಿದ್ದಾರೋ ಎನ್ನುವುದು ತಿಳಿದಿಲ್ಲ.


Click it and Unblock the Notifications
