• search
  • Live TV
keyboard_backspace

ಪೊಲೀಸ್ ಹುದ್ದೆಗಳು ಬಿಕರಿಯಾದ ನಂತರ 'ಊರಿಗೆ ಬಿದ್ದ ಬೆಂಕಿ'ಯ ಕುರಿತು...!

By ವಿ. ಮುರಳೀಧರ
Google Oneindia Kannada News

ಒಂದು ಅವಘಡ ಘಟಿಸದಂತೆ ತಡೆಯುವುದು ನಿಜವಾದ ಪೊಲೀಸಿಂಗ್. ಘಟನೆ ಜರುಗಿದ ಬಳಿಕ ಅದರ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸುವುದು ಇನ್ವೆಸ್ಟಿಗೇಷನ್. ಯಾವುದೇ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಟ್ಟಗೆ ಇರಬೇಕು ಅಂದರೆ, ತನಿಖೆಗಿಂತ ಮೊದಲು ಪೊಲೀಸಿಂಗ್ ವ್ಯವಸ್ಥೆ ಬಲವಾಗಿರಬೇಕು. ಇದು ಸಾಂಕ್ರಾಮಿಕ ರೋಗದ ಜತೆಗೆ ಬಡಿದಾಡುತ್ತಿರುವ ಹೊತ್ತಿನಲ್ಲಿ ರಾಜಧಾನಿಯ ಉತ್ತರ ಭಾಗದಲ್ಲಿ ಮೂವರ ಸಾವಿಗೆ ಹಾಗೂ ಸಾರ್ವಜನಿಕರ ನೆಮ್ಮದಿಯ ನಷ್ಟಕ್ಕೆ ಕಾರಣವಾದ ಹಿಂಸಾತ್ಮಕ ಘಟನೆಗೆ ಇವತ್ತು ನೀಡಬೇಕಿರುವ ವಿವರಣೆಗೆ ನೈತಿಕ ಪೀಠಿಕೆ.

ಇದೇ ಊರಿನಲ್ಲಿ ಕಳೆದ ಒಂದು ದಶಕಗಳಿಂದ ಅಪರಾಧ ವರದಿಗಾರನಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಬಾಂಬ್‌ ಬ್ಲಾಸ್ಟ್‌ ಪ್ರಕರಣಗಳಿಂದ ಹಿಡಿದು, ರಾಜಕಾರಣಿಗಳು ಜೈಲು ಪಾಲಾಗುವ ಘಟನೆಗಳನ್ನು ವರದಿ ಮಾಡಿದ್ದೇನೆ. ಧಾರ್ಮಿಕ ಸೂಕ್ಷ್ಮ ವಿಚಾರಗಳು ಹೇಗಿರುತ್ತವೆ ಎಂಬುದನ್ನು ಪ್ರತಿ ಸಾರಿ ಗಣೇಶನ ಹಬ್ಬ ಬಂದಾಗ ಸಾಕ್ಷಿಯಾಗಿಕೊಂಡು ಬಂದಿದ್ದೇನೆ. ಈ ಹಿನ್ನೆಲೆಯಲ್ಲಿ ಡಿಜಿ ಹಳ್ಳಿ, ಕೆಜಿ ಹಳ್ಳಿಗಳಲ್ಲಿ ನಡೆದ ಹಿಂಸಾತ್ಮಕ ಘಟನೆ ನನಗೆ ಎಲ್ಲವುಗಳ ಆಚೆಗೆ, ನಮ್ಮ ಕಾನೂನು ಸುವ್ಯವಸ್ಥೆಯ ದೊಡ್ಡ ಸೋಲು ಎನ್ನಿಸುತ್ತಿದೆ.

ಬೆಂಗಳೂರಿನಲ್ಲಿ ನಡೆದ ಗಲಭೆಗೆ ಫೇಸ್‌ಬುಕ್‌ ಪೋಸ್ಟ್ ಮಾತ್ರ ಕಾರಣವಾ?ಬೆಂಗಳೂರಿನಲ್ಲಿ ನಡೆದ ಗಲಭೆಗೆ ಫೇಸ್‌ಬುಕ್‌ ಪೋಸ್ಟ್ ಮಾತ್ರ ಕಾರಣವಾ?

ಗಮನಿಸಿ ನೋಡಿ, ಒಂದು ಫೇಸ್‌ಬುಕ್ ಪೋಸ್ಟ್ ಬೆಂಗಳೂರಿನ ಮೂರು ಪ್ರದೇಶಗಳಿಗೆ ಬೆಂಕಿ ಹಚ್ಚಿ ಪುಂಡಾಟಿಕೆ ಮೆರೆಯಲು ಬಿಡುವಂತಹ ಪ್ರಕರಣವೇ? ಸಾಮಾಜಿಕ ಜಾಲ ತಾಣಗಳಲ್ಲಿ ಇವತ್ತು ನಡೆಯುತ್ತಿರುವ ಹೀನ ಚರ್ಚೆಗಳನ್ನು ಇದೇ ಮಾನದಂಡ ಇಟ್ಟುಕೊಂಡು ನೋಡಿದರೆ, 24 ಗಂಟೆಯಲ್ಲಿ ಇಡೀ ಬೆಂಗಳೂರು ಇಷ್ಟೊತ್ತಿಗೆ ಸುಟ್ಟು ಕರಕಲಾಗಿರಬೇಕಿತ್ತು. ಯಾಕೆ ಎಲ್ಲಿಯೂ ನಡೆಯದ ಘಟನಾವಳಿಗಳು ಇಂತಹ ಪ್ರದೇಶಗಳಲ್ಲಿ ಮಾತ್ರವೇ ಯಾಕೆ ನಡೆಯುತ್ತಿವೆ? ಯಾಕೆ ಚಿಕ್ಕ ಪುಟ್ಟ ಅನ್ನಿಸುವ ವಿಚಾರಗಳು ಇಂತಹ ಪ್ರದೇಶಗಳಲ್ಲಿ ಇಷ್ಟೊಂದು ಘಾತವನ್ನು ಸೃಷ್ಟಿಸುತ್ತವೆ?

ಬೆಂಗಳೂರಿನ ಪೊಲೀಸಿಂಗ್‌ ಬಗ್ಗೆ ಸೂಕ್ಷ್ಮ ವಿಚಾರಗಳು

ಬೆಂಗಳೂರಿನ ಪೊಲೀಸಿಂಗ್‌ ಬಗ್ಗೆ ಸೂಕ್ಷ್ಮ ವಿಚಾರಗಳು

ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಎಂದರೆ ಬೆಂಗಳೂರಿನ ಪೊಲೀಸಿಂಗ್‌ ವಿಚಾರಕ್ಕೆ ಸಂಬಂಧಿಸಿದಂತೆ ಇರುವ ಕೆಲವು ಸೂಕ್ಷ್ಮತೆಗಳನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ 'ಬೆಂಕಿಯಲ್ಲಿ ಬೆಂದ ಪ್ರದೇಶಗಳು' ಎಂದು ಕೆಲವು ಪ್ರದೇಶಗಳಿವೆ. ಇವುಗಳ ಅಂತರಂಗದ ಕುರಿತು ಸೂಕ್ಷ್ಮತೆ ಬಗ್ಗೆ ಗೃಹ ಇಲಾಖೆಗೆ ಅರಿವಿದ್ದು, ಅದಕ್ಕಾಗಿ ದಕ್ಷ ಪೊಲೀಸ್ ಅಧಿಕಾರಿಗಳನ್ನು ಇಂತಹ ಸ್ಥಳಗಳಿಗೆ ನಿಯೋಜಿಸಿದ್ದರೆ, ಇವತ್ತು ಠಾಣೆ ಮೆಟ್ಟಿಲಲ್ಲೇ ಇತ್ಯರ್ಥವಾಗುವಂತಹ ಸಂಗತಿ, ಇಡೀ ರಾಷ್ಟ್ರದ ಗಮನ ಸೆಳೆಯುವುದಕ್ಕೆ ಅವಕಾಶವೇ ಸಿಗುತ್ತಿರಲಿಲ್ಲ. ಅದರಲ್ಲೂ ರಾಜಧಾನಿಯಲ್ಲೇ ಠಾಣೆಗಳಿಗೆ ಬೆಂಕಿ ಹಚ್ಚುವಂತಹ ಅತಿರೇಕಕ್ಕೆ ಇಲಾಖೆ ಅವಕಾಶ ಮಾಡಿಕೊಟ್ಟಿದ್ದು ಯಡವಟ್ಟಲ್ಲದೆ ಮತ್ತೇನೂ ಅಲ್ಲ.

ಹಾಗಂತ ಇದಕ್ಕೆ ಸದರಿ ಠಾಣೆಗಳ ಪೊಲೀಸ್ ಸಿಬ್ಬಂದಿಯಾಗಲೀ, ಅಧಿಕಾರಿಗಳಾಗಲೀ ಕಾರಣವಲ್ಲ. ಬದಲಿಗೆ ರಾಜ್ಯ ಗೃಹ ಇಲಾಖೆಯ ಅದಕ್ಷ ಆಡಳಿತ ನೀತಿ. ವಿಫಲರಾಗಿರುವುದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ.

ಪೊಲೀಸ್‌ ಅಧಿಕಾರಿಗಳ ವರ್ಗಾವಣೆ

ಪೊಲೀಸ್‌ ಅಧಿಕಾರಿಗಳ ವರ್ಗಾವಣೆ

ಕೆ. ಜಿ. ಹಳ್ಳಿ, ಡಿ. ಜೆ. ಹಳ್ಳಿ, ಕಾವಲ್ ಭೈರಸಂದ್ರ, ಗೋರಿಪಾಳ್ಯದಂತಹ ಬೆಂಗಳೂರಿನ ನಗರದ ಒಳಗಡೆಯೇ ಇರುವ ಠಾಣಾಗಳ ವ್ಯಾಪ್ತಿಯಲ್ಲಿ ಹಿಂದಿನ ಅನೇಕ ಘಟನೆಗಳು ಪಾಠಗಳ ರೂಪದಲ್ಲಿ ಇವತ್ತಿಗೆ ಲಭ್ಯ ಇವೆ. ಇದಕ್ಕಾಗಿಯೇ ಒಂದು ಹಂತದ ನಂತರ ವರ್ಗಾವಣೆಯಂತಹ ವಿಚಾರಗಳು ಬಂದಾಗ ಈ ಠಾಣೆಗಳಿಗೆ 'ಟೇಬಲ್‌ ಮೇಲೆಯೇ' ಪ್ರಕ್ರಿಯೆಗಳು ನಡೆದುಕೊಂಡು ಬರುತ್ತಿತ್ತು. ಆದರೆ ಹಾಲಿ ಸರಕಾರ, ಗೃಹ ಇಲಾಖೆ ಈ ವಿಚಾರದಲ್ಲಿ ಎಲ್ಲಾ ಸೂಕ್ಷ್ಮತೆಗಳನ್ನು ಮರೆತಿದೆ. ಮತ್ತು, ಸರಣಿ ರೂಪದಲ್ಲಿ ಹೊರಬೀಳುತ್ತಿರುವ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ನೋಡುತ್ತಿದ್ದರೆ, ಇಡೀ ಪೊಲೀಸಿಂಗ್ ವ್ಯವಸ್ಥೆಯನ್ನೇ ನಗೆಪಾಟಲಿಗೆ ಈಡು ಮಾಡುವಂತೆ ಕಾಣಿಸುತ್ತಿದೆ.

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ, ಗೃಹಸಚಿವರಿಂದ ಮಹತ್ವದ ಆದೇಶಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ, ಗೃಹಸಚಿವರಿಂದ ಮಹತ್ವದ ಆದೇಶ

ಒಬ್ಬ ಅಪರಾಧ ವರದಿಗಾರನಾಗಿ ನಾನು ನೋಡಿದಂತೆ ಪ್ರತಿ ಬಾರಿ ಗೃಹ ಸಚಿವರು ಬದಲಾದಾಗಲೂ ಕೆಲವು ಸೂಕ್ಷ್ಮ ವಿಚಾರಗಳನ್ನು ಅವರೊಂದಿಗೆ ಹಂಚಿಕೊಳ್ಳಲಾಗುತ್ತದೆ. ಅದರಲ್ಲಿ ಮಹಾನಗರದ ಕೋಮು ಸೂಕ್ಷ್ಮ ಪ್ರದೇಶಗಳು, ಅಪರಾಧ ಪ್ರಕರಣಗಳು ಹೆಚ್ಚು ನಡೆಯುವ ಠಾಣೆಗಳು ಒಂದು ವೇಳೆ ಕೋಮು ಗಲಭೆಗಳು ನಡೆದರೆ, ಅವುಗಳನ್ನು ನಿರ್ವಹಿಸಲು ಕಾರ್ಯಕ್ಷಮತೆ ಇರುವ ಅಧಿಕಾರಿಗಳು, ಹೀಗೆ ಆಡಳಿತಕ್ಕೆ ಸಂಬಂಧಿಸಿದಂತೆ ವಿಚಾರಗಳನ್ನು ಗಮನಕ್ಕೆ ತರಲಾಗುತ್ತದೆ. ಇಷ್ಟೆಲ್ಲಾ ಇರುವಾಗ ಪೊಲೀಸಿಂಗ್‌ನಲ್ಲಿ ಯಾಕೆ ಪೊಲೀಸರು ವಿಫಲರಾದರು? ಇಲಾಖೆಯ ಒಳಹೊರಗೆ ಇರುವವರು ಹೇಳುತ್ತಿರುವುದು ವರ್ಗಾವಣೆ ದಂಧೆ ಪರಿಣಾಮ ಇದು ಎಂದು.

ವರ್ಗಾವಣೆ ದಂಧೆ ಪರಿಣಾಮ

ವರ್ಗಾವಣೆ ದಂಧೆ ಪರಿಣಾಮ

ಬೆಂಬಲಿಗರಿಗೆ ಒಂದು ಕಡೆ ಪೋಸ್ಟಿಂಗ್, ಪಕ್ಷದ ವರಿಷ್ಠರು ಹೇಳಿದವರಿಗೆ ಒಂದು ಪೋಸ್ಟಿಂಗ್, ಸ್ವಜಾತಿಗೊಂದು ಪೋಸ್ಟಿಂಗ್ ಜತೆಗೆ ಎಲ್ಲವೂ ಹಣ ಕೊಟ್ಟರೆ ಮಾತ್ರ! ಕಾಂಚಾಣ, ಜಾತಿ, ಪಾರ್ಟಿ ಹೀಗೆ ಪೊಲೀಸ್ ಹುದ್ದೆಗಳು ಬಿಕರಿಯಾದ ನಂತರ ಊರು ಶಾಂತವಾಗಿರಬೇಕು ಎಂದರೆ ಹೇಗೆ ಸಾಧ್ಯ? ವ್ಯವಸ್ಥೆ ಅಂದ ಮೇಲೆ ಲೋಪದೋಷಗಳು ಇರುತ್ತವೆ, ನಿಜ. ಹಾಗಂತ ವರ್ಷ ಕಳೆಯುವ ಹೊತ್ತಿಗೆ ಕಡ್ಡಾಯ ವರ್ಗಾವಣೆ ಎಂದರೆ ಮೊದಲೇ ಕೊಳೆಯುತ್ತಿರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮೂಲ ಉದ್ದೇಶದಿಂದ ವಿಮುಖಗೊಳಿದಂತಾಗುತ್ತದೆ. ಪರಿಣಾಮ ಡಿ. ಜೆ ಹಳ್ಳಿ, ಕೆ. ಜಿ ಹಳ್ಳಿಗಳು. ಹೀಗೆ ಮುಂದುವರಿದರೆ ಮುಂದೊಂದು ದಿನ ಉಳಿಯುವುದು ಪೊಲೀಸಿಂಗ್ ಇಲ್ಲದ ಊರು ಮತ್ತು ಶಕ್ತವಲ್ಲದ ಖಾಕಿ ಪಡೆ, ಅಷ್ಟೆ.

ಡಿ. ಜಿ. ಹಳ್ಳಿ, ಕೆ. ಜಿ ಹಳ್ಳಿಗಳ ಪ್ರಕರಣ ಸ್ಥಳೀಯ ಪೊಲೀಸರ ಅಸಮರ್ಥತೆಯನ್ನು ಎತ್ತಿ ತೋರಿಸಿದೆ. ಒಂದು ವೇಳೆ ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಸ್ಥಳೀಯರ ವಿಶ್ವಾಸ ಗಳಿಸಿರುವಂತಹ ಒಬ್ಬ ದಕ್ಷ ಅಧಿಕಾರಿ ಇದ್ದಿದ್ದರೆ, ಠಾಣೆ ಹಂತದಲ್ಲಿಯೇ ಈ ಘಟನೆ ಇತ್ಯರ್ಥವಾಗುತ್ತಿತ್ತು. 'ಕಮ್ಯುನಿಟಿ ಪೊಲೀಸಿಂಗ್' ಎಂಬ ಪದದ ಅರಿವು ಇರುವ ಇಲಾಖೆಗೆ ತಾನೆಲ್ಲಿ ಎಡವಿದ್ದೇನೆ ಎಂಬುದು ಇಷ್ಟೊತ್ತಿಗೆ ಅರ್ಥವೂ ಆಗಿರುತ್ತದೆ. ಅದಕ್ಕಾಗಿಯೇ ದೂರು ನೀಡಲು ಬಂದವರು ಠಾಣೆಗೇ ಬೆಂಕಿ ಹಚ್ಚಿ ದಾಂಧಲೆ ನಡೆಸಿದ ಘಟನೆ ವಿಕೋಪಕ್ಕೆ ಹೋದ ನಂತರ ಸರಕಾರ ಗಲಭೆ ತಡೆಯುವ ಕಸರತ್ತು ಆರಂಭಿಸಿದೆ.

ಪೊಲೀಸಿಂಗ್ ವ್ಯವಸ್ಥೆಯನ್ನು ಸರಿಪಡಿಸಿ

ಪೊಲೀಸಿಂಗ್ ವ್ಯವಸ್ಥೆಯನ್ನು ಸರಿಪಡಿಸಿ

ಬೆಂಗಳೂರಿನಿಂದ ಹೊರಗಿರುವ ಅಧಿಕಾರಿಗಳಿಗೂ ಘಟನಾಸ್ಥಳಕ್ಕೆ ಬರುವಂತೆ ಬುಲಾವ್ ಹೋಗಿದೆ. ಸ್ಥಳೀಯವಾಗಿ ನಿಯೋಜಿತರಾಗಿದ್ದ ಅಧಿಕಾರಿಗಳನ್ನು ನಂಬಿ ಕೂರುವ ಸ್ಥಿತಿ ಇಲ್ಲ ಎಂಬುದು ಎಲ್ಲಾ ಮುಗಿದ ಮೇಲೆ ಅರಿವಿಗೆ ಬಂದಿದೆ. ಕಾಲ ಮಿಂಚಿ ಹೋಗಿದೆ. ಈಗ ಬೆಂಕಿ ಹಚ್ಚಿದವರಿಂದಲೇ ವಸೂಲಿ ಮಾಡುವ ಬಡಾಯಿ ಕೇಳಿ ಬರುತ್ತಿದೆ.

ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರ ಮಿಡ್ ನೈಟ್ ಕಾರ್ಯಾಚರಣೆ ರಹಸ್ಯ!ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರ ಮಿಡ್ ನೈಟ್ ಕಾರ್ಯಾಚರಣೆ ರಹಸ್ಯ!

ಈ ಧಾರ್ಮಿಕ ಚರ್ಚೆಗಳನ್ನು, ಪೂರ್ವ ನಿಯೋಜಿತ ಎನ್ನಿಸುವ ಷಡ್ಯಂತ್ರಗಳನ್ನು, ಗಂಟೆಗೊಮ್ಮೆ ತಯಾರಾಗುತ್ತಿರುವ ಥಿಯರಿಗಳನ್ನು ಒಂದು ಕ್ಷಣ ಪಕ್ಕಕ್ಕಿಡಿ. ಘಟನೆಯ ಹೊಣೆಯನ್ನು ಅವರಿವರ ಹೆಗಲಿಗೆ ಹೊರಿಸುವುದನ್ನು ಮೊದಲು ನಿಲ್ಲಿಸಿ. ಗೃಹ ಸಚಿವರು ಹಾಗೂ ಇಲಾಖೆ ನೈತಿಕವಾಗಿ ಹೊಣೆ ಹೊತ್ತು ಪೊಲೀಸಿಂಗ್ ವ್ಯವಸ್ಥೆಯನ್ನು ಸರಿಪಡಿಸುವ ಕಡೆಗೆ ಒತ್ತಾಯಗಳು ಶುರುವಾಗಲಿ. ಆಗಷ್ಟೆ, ಬೆಂಕಿ ಬಿದ್ದ ಊರಿನಲ್ಲಿ ಮತ್ತೆಂದೂ ಅವಘಡ ತಡೆಯಲು ಸಾಧ್ಯವಾಗುತ್ತದೆ.

ವಿ. ಮುರಳೀಧರ
(ಲೇಖಕರು ಬೆಂಗಳೂರಿನಲ್ಲಿ ಹಿರಿಯ ಅಪರಾಧ ವರದಿಗಾರರು)

English summary
DG Halli, KG Halli, Kaval Bairasandra riots witnessed just after the major change, transfer of IPS in Bengaluru. Total failure of Policing system has to be questioned writes Senior Crime reporter V Muralidhara.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X