Fact Check: ಕೋವಿಡ್ ಲಸಿಕೆ ಪಡೆಯದಂತೆ ಆಫ್ರಿಕನ್ನರಿಗೆ ಒಬಾಮ ಮನವಿ
ನವದೆಹಲಿ, ಜನವರಿ 11: ಅಮೆರಿಕ ಮತ್ತು ಯುರೋಪ್‌ಗಳಿಂದ ಬರುವ ಕೋವಿಡ್ ಲಸಿಕೆಗಳನ್ನು ಪಡೆದುಕೊಳ್ಳದಂತೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಆಫ್ರಿಕನ್ನರಿಗೆ ಮನವಿ ಮಾಡಿದ್ದಾರೆ ಎನ್ನಲಾದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
'ಅಮೆರಿಕ ಮತ್ತು ಯುರೋಪ್‌ಗಳಿಂದ ಬರುವ ಲಸಿಕೆಗಳನ್ನು ಸ್ವೀಕರಿಸದಂತೆ ಆಫ್ರಿಕನ್ನರಿಗೆ ಬರಾಕ್ ಒಬಾಮ ಹೇಳುತ್ತಿದ್ದಾರೆ.
ಬರಾಕ್ ಒಬಾಮ: ಆಫ್ರಿಕನ್ನರ ಮೇಲೆ ಈ ಬಿಳಿಯ ಜನರು ಮಾಡಲು ಹೊರಟಿರುವ ಈ ಕೆಟ್ಟ ಕ್ರಮದ ಕುರಿತು ನಾನು ಬಹಿರಂಗಪಡಿಸದೆ ಹೋದರೆ ನಾನೂ ಅದರಲ್ಲಿ ಶಾಮೀಲಾದಂತೆ ಆಗುತ್ತದೆ. ಎಷ್ಟಾದರೂ ನಾನು ಅಮೆರಿಕದಲ್ಲಿ ಹುಟ್ಟಿದ್ದರೂ, ನನ್ನದು ಆಫ್ರಿಕನ್ ರಕ್ತ' ಎಂದು ಒಬಾಮ ಹೇಳಿದ್ದಾರೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

ಆಫ್ರಿಕನ್ನರು ಲಸಿಕೆ ಪಡೆದುಕೊಳ್ಳದಂತೆ ಒಬಾಮ ಅವರು ಮನವಿ ಮಾಡಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇದೇ ರೀತಿಯ ಹೇಳಿಕೆಯನ್ನು ಕಳೆದ ವರ್ಷ ಕೂಡ ಹರಿಬಿಡಲಾಗಿತ್ತು. ಒಬಾಮ ಅವರು ಈ ರೀತಿ ಹೇಳಿಕೆ ನೀಡಿಲ್ಲ. ಅವರು ಲಸಿಕೆಯ ಪರವಾಗಿ ಇದ್ದಾರೆ ಎಂದು ಒಬಾಮ ಅವರ ವಕ್ತಾರೆ ಕೇಟಿ ಹಿಲ್ ತಿಳಿಸಿದ್ದರು.
ಮಿಗಿಲಾಗಿ ಕಳೆದ ಡಿಸೆಂಬರ್‌ನಲ್ಲಿ ಟ್ವೀಟ್ ಮಾಡಿದ್ದ ಬರಾಕ್ ಒಬಾಮ, 'ಹಿಂದಿಗಿಂತಲೂ ಅಪಾಯಕಾರಿಯಾಗಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಲಸಿಕೆ ಪಡೆದುಕೊಳ್ಳುವುದು ನಾವು ಮಾಡಬಹುದಾದ ಅತಿ ಮಹತ್ವದ ಸಂಗತಿಯಾಗಿದೆ. ಆದರೆ ವ್ಯಾಪಕವಾಗಿ ಲಸಿಕೆ ಲಭ್ಯವಾಗುವವರೆಗೂ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವಿಕೆ ವಾಸ್ತವವಾಗಿ ಹೆಚ್ಚು ಜೀವಗಳನ್ನು ಬದುಕಿಸಬಲ್ಲವು. ಜತೆಗೆ ಆರೋಗ್ಯ ಕಾಳಜಿ ಕಾರ್ಯಕರ್ತರ ಮೇಲಿನ ಒತ್ತಡವನ್ನು ತಗ್ಗಿಸಬಲ್ಲದು' ಎಂದು ಹೇಳಿದ್ದರು.

ಲಸಿಕೆಯು ಅಪಾಯಕಾರಿಯಾಗಿದ್ದು, ಆಫ್ರಿಕನ್ನರ ವಿರುದ್ಧ ಪ್ರಯೋಗಿಸಲು ಬಿಳಿಯ ಜನರು ನಡೆಸಿರುವ ಹುನ್ನಾರ ಎಂದು ಎಲ್ಲಿಯೂ ಒಬಾಮ ಹೇಳಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿನ ಈ ಸುದ್ದಿ ಸುಳ್ಳು.

Fact Check
ಕ್ಲೇಮು
ಕೋವಿಡ್ 19 ಲಸಿಕೆ ಪಡೆದುಕೊಳ್ಳದಂತೆ ಆಫ್ರಿಕನ್ನರಿಗೆ ಒಬಾಮ ಮನವಿ ಮಾಡಿದ್ದಾರೆ.
ಪರಿಸಮಾಪ್ತಿ
ಒಬಾಮ ಅಂತಹ ಹೇಳಿಕೆ ನೀಡಿಲ್ಲ. ಇದನ್ನು ಅವರ ವಕ್ತಾರೆ ಖಚಿತಪಡಿಸಿದ್ದಾರೆ.












Click it and Unblock the Notifications