ಒಂಟಿಯಾಗಿ ಬೆಂಗಳೂರಿಗೆ ಬರುವ ಮಹಿಳೆಯರಿಗೆ ಸುರಕ್ಷಿತ ವಾಸ್ತವ್ಯ ವ್ಯವಸ್ಥೆ- ಹೀಗೊಂದು ಮೆಸೇಜ್ ವೈರಲ್ - ನಂಬಬೇಕೋ? ಬೇಡ್ವೋ?
ಒಂಟಿಯಾಗಿ ಬೆಂಗಳೂರಿಗೆ ಬರುವ ಮಹಿಳೆಯರಿಗೆ ಸುರಕ್ಷಿತ ವಾಸ್ತವ್ಯಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯಿಂದ ಸುರಕ್ಷಿತ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನಂಬಿದ ಕೆಲವರು ಈ ಸಂದೇಶವನ್ನು ಮತ್ತೊಬ್ಬರಿಗೆ ಹಂಚಿಕೊಳ್ಳುತ್ತಿದ್ದಾರೆ.
ಈ ಸಂದೇಶ ಎಷ್ಟು ನಿಜ ಎಷ್ಟು ಸುಳ್ಳು ಎಂಬುದರ ಬಗ್ಗೆ ಒನ್‌ಇಂಡಿಯಾ ಕನ್ನಡ ವೆಬ್‌ಸೈಟ್ ಪ್ರತಿನಿಧಿ ಪರಿಶೀಲನೆ ಮಾಡಿದ್ದಾರೆ. ಹಾಗಾದರೆ ವೈರಲ್ ಆದ ಸಂದೇಶದಲ್ಲಿ ಏನಿದೆ ಎಂಬುದನ್ನು ಒಮ್ಮೆ ನೋಡೋಣ.

''ಬೆಂಗಳೂರಿಗೆ ಹಲವು ಕಾರಣಗಳಿಗೆ ಒಂಟಿಯಾಗಿ ಹೆಣ್ಣು ಮಕ್ಕಳು ಬರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಸಂಬಂಧಿಕರ ಮನೆಗಳಿಲ್ಲದೆ, ಯಾರ ಪರಿಚಯವೂ ಇಲ್ಲದೆ ಬೆಂಗಳೂರಿಗೆ ಬಂದು ಪರದಾಡುವ ಪರಿಸ್ಥಿತಿ ಎದುರಾಗುತ್ತದೆ.
ಕೆಲವು ಬಾರಿ ಸಂಬಂಧಿಕರ ಮನೆಗಳು ಅಷ್ಟು ಸುರಕ್ಷಿತವಲ್ಲ ಎನಿಸುವುದು ಉಂಟು. ಆದರೆ ಈಗ ಚಿಂತೆ ಬೇಡ, ಉದ್ಯೋಗ ಅರಸಿ ಬರುವ ಹಾಗೂ ಸಾಮಾನ್ಯ ಪರೀಕ್ಷೆ ಒಳಗೊಂಡಂತೆ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೆಂಗಳೂರಿಗೆ ಬರುವ ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳೆಯರಿಗೆ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸುರಕ್ಷಿತ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿ ಕೊಟ್ಟಿದೆ.

ಬೆಂಗಳೂರಿನಲ್ಲಿ ಗುರುತಿಸಲಾದ ಮತ್ತು 13 ವಸತಿ ಗೃಹಗಳ ಸಂಪೂರ್ಣ ಮಾಹಿತಿ ಇಲ್ಲಿದೆ-
*ಬೆಂಗಳೂರಿನಲ್ಲಿ ವಾಸ್ತವ್ಯಕ್ಕೆ ಕೆಎಸ್‍ಸಿಡಬ್ಲು ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಜಯಮಲ್ ದೂರವಾಣಿ: 080- 233304846,
*ಶಾರದ ಕುಟೀರ ಹಾಸ್ಟೆಲ್ ಶಂಕರಪುರ 080-26674697,
*ಯಂಗ್ ವುಮೆನ್ ಕ್ರಿಶ್ಚಿಯನ್ ಅಸೋಸಿಯೇಷನ್ ಹಾಸ್ಟೆಲ್ ಮಿಷನ್ ರಸ್ತೆ, 080-22238574,
*ಯುನಿವರ್ಸಿಟಿ ವುಮೆನ್ ಅಸೋಸಿಯೇಷನ್ ಹಾಸ್ಟೆಲ್ ಸಂಪಂಗಿರಾಮನಗರ 080- 22223314,
*ಮಹಾತ್ಮಾಗಾಂಧಿ ವಿದ್ಯಾಪೀಠ ಹಾಸ್ಟೆಲ್ ಶಾವಿಗೆ ಮಲ್ಲೇಶ್ವರ ಹಿಲ್ಸ್ 080- 26662226,
*ಜಯನಗರ ಸ್ತ್ರೀ ಸಮಾಜ ಹಾಸ್ಟೆಲ್ ಜಯನಗರ 080-26674697,
*ಆಲಸ್ ಇಂಡಿಯಾ ವುಮೆನ್ ಕಾನ್ಪರೆನ್ಸ್ ಹಾಸ್ಟೆಲ್ ಜಯನಗರ 080-26349676
*ಬಸವ ಸಮಿತಿ ಹಾಸ್ಟೆಲ್ ಮೈಸೂರು ರಸ್ತೆ 080-22723355,
*ವಿಶಾಲ್ ವಿದ್ಯಾಸಂಸ್ಥೆ ಹಾಸ್ಟೆಲ್ ಕನಕಪುರ ಮುಖ್ಯ ರಸ್ತೆ, 9341289653,
*ಹೆಚ್‍ಡಿಎಸ್ ಹಾಸ್ಟೆಲ್ ಕೆಜಿಐಡಿ ಕಾಲೋನಿ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಹಾಸ್ಟೆಲ್ ನಾಗರಭಾವಿ ಕ್ಯಾಂಪಸ್ 080-23160531,
*ಯಂಗ್ ವುಮೆನ್ ಕ್ರಿಶ್ಚಿಯನ್ ಅಸೋಸಿಯೇಷನ್ ಹಾಸ್ಟೆಲ್ ಕೋರಮಂಗಲ 080-25634813,
*ರೀಜಿನಲ್ ಇನ್‍ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಹಾಸ್ಟೆಲ್, ಜ್ಞಾನಭಾರತಿ ಕ್ಯಾಂಪಸ್ !080-23213243 ಇಲ್ಲಿ ಅವಕಾಶ ಕಲ್ಪಿಸಲಾಗಿದೆ.. ಇದನ್ನು ಎಲ್ಲಾ ಗ್ರೂಪ್‌ಗೂ ಕಳುಹಿಸಿ''
ಇದು ವೈರಲ್ ಆದ ಸಂದೇಶ. ಒನ್‌ಇಂದಿಯಾ ಕನ್ನಡ ವೆಬ್‌ಸೈಟ್ ತಂಡದಿಂದ ಈ ಸಂದೇಶದಲ್ಲಿರುವ ಪ್ರತಿಯೊಂದು ನಂಬರ್‌ಗೂ ಕರೆ ಮಾಡಲಾಯಿತು. ಈ ಸಂದೇಶದಲ್ಲಿ ವಿವಿಧ ಹಾಸ್ಟೆಲ್‌ಗಳ ಹೆಸರನ್ನು ನೊಂದಾಯಿಸಿ 12 ನಂಬರ್‌ಗಳನ್ನು ಶೇರ್ ಮಾಡಲಾಗಿದೆ. ಈ ಸಂದೇಶದಲ್ಲಿ ನಮೋದಿಸಲಾದ ಬರೋಬ್ಬರಿ 9 ನಂಬರ್‌ಗಳು ಅಸ್ತಿತ್ವದಲ್ಲೇ ಇಲ್ಲ.

ಇನ್ನುಳಿದ 3 ನಂಬರ್‌ಗಳು ಅಂದರೆ-
*ಯಂಗ್ ವುಮೆನ್ ಕ್ರಿಶ್ಚಿಯನ್ ಅಸೋಸಿಯೇಷನ್ ಹಾಸ್ಟೆಲ್ ಮಿಷನ್ ರಸ್ತೆ, 080-22238574, (ಕಾಲ್ ರಿಸೀವ್ ಮಾಡಿದ್ದರು. ಆದರೆ ನೀವು ಕೇಳಿದ ವ್ಯವಸ್ಥೆ ನಮ್ಮಲ್ಲಿಲ್ಲ ಎಂದಿದ್ದಾರೆ),
*ಮಹಾತ್ಮಾಗಾಂಧಿ ವಿದ್ಯಾಪೀಠ ಹಾಸ್ಟೆಲ್ ಶಾವಿಗೆ ಮಲ್ಲೇಶ್ವರ ಹಿಲ್ಸ್ 080- 26662226, (ಕಾಲ್ ರೀಚ್ ಆಗಿದೆ. ಆದರೆ ರಿಸೀವ್ ಆಗಲಿಲ್ಲ),
*ಯಂಗ್ ವುಮೆನ್ ಕ್ರಿಶ್ಚಿಯನ್ ಅಸೋಸಿಯೇಷನ್ ಹಾಸ್ಟೆಲ್ ಕೋರಮಂಗಲ 080-25634813, (ರೂಂ ಖಾಲಿ ಇಲ್ಲ. ಆ ರೀತಿ ಸಂದೇಶ ನಮಗೆ ಗೊತ್ತೇ ಇಲ್ಲ ಎಂದಿದ್ದಾರೆ)
2019ರಲ್ಲಿ ಮೇ 4ರಂದು ಇಂತಹ ಒಂದು ಸುದ್ದಿ 'ವಾರ್ತಾ ಭಾರತ' ವೆಬ್‌ಸೈಟ್‌ನಲ್ಲಿ ಪ್ರಕಟವಾಗಿತ್ತು. (https://www.varthabharati.in/article/2019_05_04/189827). ಇದೇ ದಿನಾಂಕದಂದು ಕನ್ನಡಪ್ರಭ ವೆಬ್‌ಸೈಟ್‌ನಲ್ಲೂ ಈ ಸುದ್ದಿ ಪ್ರಕಟವಾಗಿತ್ತು. (https://www.kannadaprabha.com/karnataka/2019/May/04/karnataka-government-provides-transit-hostel-facility-for-women-who-come-to-bengaluru-looking-for-jobs-337564.html). ಆದರೆ ಇತ್ತೀಚೆಗೆ ಇಂತಹ ಯಾವುದೇ ಮಾಹಿತಿಯನ್ನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಹಂಚಿಕೊಂಡಿಲ್ಲ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯಿಂದಲೂ ಈ ಬಗ್ಗೆ ನಮಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಈ ಸುದ್ದಿ 2019ರಲ್ಲಿ ಪ್ರಕಟವಾಗಿದ್ದು ಇಂದಿಗೆ ಈ ಸಂದೇಶದಲ್ಲಿ ಇರುವ ಯಾವುದೇ ನಂಬರ್‌ಗಳು ಅಸ್ವಿತ್ವದಲ್ಲಿ ಇಲ್ಲ. ಹೀಗಾಗಿ ಇದೊಂದು ಹಳೆಯ ಸುದ್ದಿಯಾಗಿದ್ದು ಈಗ ಇದನ್ನು ಹಂಚಿಕೊಳ್ಳಲಾಗುತ್ತಿದೆ.

Fact Check
ಕ್ಲೇಮು
ಒಂಟಿಯಾಗಿ ಬೆಂಗಳೂರಿಗೆ ಬರುವ ಮಹಿಳೆಯರಿಗೆ ಸುರಕ್ಷಿತ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ ಎಂಬ ಸಂದೇಶ ಹರಿದಾಡುತ್ತಿದೆ.
ಪರಿಸಮಾಪ್ತಿ
ಒಂಟಿಯಾಗಿ ಬೆಂಗಳೂರಿಗೆ ಬರುವ ಮಹಿಳೆಯರಿಗೆ ಸುರಕ್ಷಿತ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ ಎಂಬ ಸಂದೇಶ 2019ರದ್ದು.












Click it and Unblock the Notifications