Sridevi Byrappa Post: ನಾನು ಅಮೆರಿಕಾಗೆ ಹಿಂತಿರುಗುತ್ತಿದ್ದೇನೆ - ಶ್ರೀದೇವಿ ಭೈರಪ್ಪ ಹೊಸ ಪೋಸ್ಟ್ ವೈರಲ್
ಬೆಂಗಳೂರು ಜುಲೈ 4: ರಾಜ್‌ಕುಮಾರ್ ಮೊಮ್ಮಗ ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಭೈರಪ್ಪರವರ ವಿಚ್ಚೇದನ ಅರ್ಜಿಯನ್ನು ಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಇದಕ್ಕೂ ಮುನ್ನ ಶ್ರೀದೇವಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಇಂದು ದರ್ಶನ್ ಹಾಗೂ ಅವರ ಗ್ಯಾಂಗ್ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಂಡಿದ್ದು ದರ್ಶನ್ ವಿಚಾರಣೆ ನಡೆಯಲಿದೆ. ಮತ್ತೊಂದೆಡೆ ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ವಿಚ್ಚೇದನ ಅರ್ಜಿ ವಿಚಾರಣೆ ಕೂಡ ಇಂದು ನಡೆಯಲಿದೆ. ಈ ನಡುವೆ ಶ್ರೀದೇವಿಯವರು 'ನಾನು ಅಮೆರಿಕಾಗೆ ಹಿಂತಿರುಗುತ್ತಿದ್ದೇನೆ' ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಸದ್ಯ ಅವರು ಈ ಪೋಸ್ಟ್ ವೈರಲ್ ಆಗುತ್ತಿದೆ.

ಸ್ಯಾಂಡಲ್‌ವುಡ್ ನಟ ಯುವ ರಾಜಕುಮಾರ್ ವಿಚ್ಚೇದನ ಪ್ರಕರಣ ವಿವಿಧ ಆಯಾಮಗಳನ್ನು ಪಡೆಯುತ್ತಿದೆ. ಇದೊಂದು ವಿಚ್ಚೇದನ ಪ್ರಕರಣವಾಗದೆ ಯುವ ರಾಜ್‌ಕುಮಾರ್ ಹಾಗೂ ಅವರ ಪತ್ನಿ ಶ್ರೀದೇವಿ ಭೈರಪ್ಪ ಅವರ ನಡುವಿನ ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯಾಗುತ್ತಿದೆ.
''ಶ್ರೀದೇವಿ ಭೈರಪ್ಪ ಅವರು ಅಮೆರಿಕಾದಲ್ಲಿ ಅನೈತಿಕ ಸಂಬಂಧ ಹೊಂದಿದ್ದಾರೆ'' ಎಂಬುದಾಗಿ ಯುವ ರಾಜ್‌ಕುಮಾರ್ ಅವರ ಪರ ವಕೀಲ ಸಿರಿಲ್ ಪ್ರಸಾದ್ ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು. ಇದಕ್ಕೆ ಶ್ರೀದೇವಿ ಭೈರಪ್ಪ ''ಸತ್ಯ ಹಾಗೂ ನ್ಯಾಯಕ್ಕೆ ಗೆಲುವಿದೆ ಎಂಬುದಾಗಿ ನಾನು ನಂಬಿದ್ದೇನೆ'' ಎಂಬುದಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಹಾಗೇ ಇಂದು ಕೂಡ ಶ್ರೀದೇವಿ ಮತ್ತೊಂದು ಪೋಸ್ಟ್ ಹಾಕಿದ್ದಾರೆ.
ಶ್ರೀದೇವಿ ಭೈರಪ್ಪ ಇಂದು ಮಾಡಿದ ಪೋಸ್ಟ್:-
''ಕಳೆದ 15 ದಿನದಿಂದ ನಾನು ಕರ್ನಾಟಕದಲ್ಲಿ ನನ್ನ ಕುಟುಂಬದ ಜೊತೆ ಇದ್ದಾಗ, ನನ್ನ ಖಾಸಗಿ ಬದುಕನ್ನು ಗೌರವಿಸಿ, ನನ್ನ ಘಟನೆಯನ್ನು ಕಾಪಾಡುವಲ್ಲಿ, ಅತ್ಯಂತ ಸೂಕ್ಷ್ಮ ಮತ್ತು ಜವಬ್ದಾರಿಯುತ ನಡೆ ತೋರಿದ ಮಾಧ್ಯಮದ ಪ್ರತಿಯೊಬ್ಬರಿಗೂ ನಾನು ಪ್ರಮಾಣಿಕವಾಗಿ ನನ್ನ ಹೃದಾಯಾಂತರಾಳದಿಂದ ಧನ್ಯವಾದ ಹೇಳಲು ಬಯಸುತ್ತೇನೆ.

ಕಳೆದ ದಶಕಗಳಿಂದ ನನ್ನ ಜೊತೆಯಾಗಿದ್ದ ನನ್ನ ಸ್ನೇಹಿತರ ಬಳಗ, ಕೆಲವು ದಿನಗಳ ಹಿಂದಿನ ಸುಳ್ಳಿನ ಸರಮಾಲೆಗೆ ಬಲಿಯಾಗಿದ್ದು ತೀರ ದುರದೃಷ್ಟಕರ. ಆದರೂ ಸಹ ನಿಮ್ಮ ತಾಳ್ಮೆಗೆ, ಸತ್ಯದ ಪರ ಧೃತಿಗೆಡದೆ ನಿಲ್ಲುವ ನಿಮ್ಮ ಹಾಗೂ ನಿಮ್ಮ ಕುಟುಂಬದ ಈ ವಿಚಾರದಲ್ಲಿ ನಿಮಗಾದ ನೋವಿಗೆ ನಾನು ವಿನಮ್ರತೆಯಿಂದ ಕ್ಷಮೆಯಾಚಿಸುತ್ತೇನೆ. ಎಲ್ಲರಿಗೂ ನಿಮ್ಮಂಥ ಸಹೃದಯಿ ಸ್ನೇಹ ಬಳಗ ಸಿಗುವ ಅದೃಷ್ಟ ಸಿಗಲಿ ಎಂದು ಹಾರೈಸುತ್ತೇನೆ.
ಕಳೆದ ಏಳು ತಿಂಗಳುಗಳು ತೀವ್ರ ಒತ್ತಡ ಮತ್ತು ಅಘಾತದಿಂದ ಕೂಡಿದ್ದವು. ನನ್ನೊಂದಿಗೆ ಶಕ್ತಿಯಾಗಿ ನಿಂತ ನನ್ನ ಕುಟುಂಬ, ಸ್ನೇಹಿತರು, ಚಲನಚಿತ್ರರಂಗದ ಬಂಧುಗಳು, ಅನ್ಯಾಯದ ವಿರುದ್ಧ ದನಿಯೆತ್ತಿ ನನ್ನ ಪರ ನಿಂತ ಪ್ರತಿಯೊಬ್ಬರಿಗೂ, ವಿಶೇಷವಾಗಿ ನನ್ನೊಂದಿಗೆ ದು:ಖಿಸಿ ಸಾಂತ್ವಾನ ಹೇಳಿದ ನನ್ನ ವಿದ್ಯಾರ್ಥಿಗಳಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನ ಶಕ್ತಿಯನ್ನು ಮರಳಿ ಪಡೆಯಲು ಮತ್ತು ನ್ಯಾಯದ ಪರ ಹೋರಾಡಲು ನೀವೆಲ್ಲರೂ ನನಗೆ ಸಹಾಯ ಮಾಡಿದ್ದೀರಿ. ನಿಮ್ಮ ಪ್ರೀತಿ, ದಯೆಯ ಋಣ ತೀರಿಸುವ ಅವಕಾಶ ನನಗೆ ಸಿಗಲಿ ಎಂದು ನಾನು ಆ ದೇವರಲ್ಲಿ ಪ್ರಾರ್ಥಸುತ್ತೇನೆ.
ಸತ್ಯ ಮತ್ತು ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬಿದ್ದೇನೆ ಹಾಗೂ ಅದಕ್ಕಾಗಿ ಹೋರಾಡುತ್ತೇನೆ ಎಂದು ನಾನು ಪುನರುಚ್ಚರಿಸುತ್ತೇನೆ. ನನ್ನ ಮೇಲೆ ಮಾಡಿರುವ ಪ್ರತಿಯೊಂದು ಸುಳ್ಳು ಆರೋಪದಿಂದ ಮುಕ್ತಳಾಗುವವರೆಗೂ ನನ್ನ ದಾರಿಗೆ ಏನೇ ಎದುರಾದರೂ ಹೆದರುವುದಿಲ್ಲ.
ಹಾರ್ವರ್ಡ್‌ನಲ್ಲಿ ನಾನೊಂದು ಶೈಕ್ಷಣಿಕ ಯೋಜನೆಯನ್ನು ಶುರುಮಾಡಿದ್ದು, ಆ ಕಾಯಕವನ್ನು ಮುಂದುವರಿಸಲು ನಾನು ಅಮೆರಿಕಾಗೆ ಹಿಂತಿರುಗುತ್ತಿದ್ದೇನೆ. ಈ ಸಮಯವು ನನಗೆ ಇನ್ನಷ್ಟು ಕಲಿಯಲು, ಬೆಳೆಯಲು ಮತ್ತು ಎಲ್ಲಾ ಅಘಾತಗಳಿಂದ ಗುಣಮುಖಳಾಗಲು ಸಹಾಯ ಮಾಡುತ್ತದೆ ಎಂದು ನಾನು ನಂಬಿದ್ದೇನೆ. ಸರಿಯಾದ ಸಮಯ ಬಂದಾಗ ನಾನು ಹಿಂದಿರುಗುತ್ತೇನೆ ಮತ್ತು ಇಲ್ಲಿನ ಕೆಲಸಗಳನ್ನು ಮುಂದುವರಿಸುತ್ತೇನೆ.
ದೇವರ ಆಶೀರ್ವಾದ ಸದಾ ಎಲ್ಲರ ಮೇಲೆ ಇರಲಿ'' ಎಂದು ಶ್ರೀದೇವೆ ಪೋಸ್ಟ್ ಮಾಡಿದ್ದಾರೆ.












Click it and Unblock the Notifications