'ಟಾಕ್ಸಿಕ್' ಬೆನ್ನಲ್ಲೇ ತೆಲುಗಿಗೆ ಎಂಟ್ರಿ ಕೊಡ್ತಾರಾ ರಾಕಿಭಾಯ್? ಯಶ್ ಜೊತೆ ಸಿನಿಮಾ ಬಗ್ಗೆ ದಿಲ್ ರಾಜು ಹೇಳಿದ್ದೇನು?
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್- ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಕೆಜಿಎಫ್ ಚಾಪ್ಟರ್ 2 ಬ್ಲಾಕ್‌ಬಸ್ಟರ್ ಯಶಸ್ಸಿನ ಬಳಿಕ ಯಶ್ ಬೆಳ್ಳಿತೆರೆಗೆ ಮರಳುತ್ತಿರುವುದರಿಂದ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಗಳಿವೆ. ಇದರ ಬೆನ್ನಲ್ಲೇ, ಯಶ್ ಅವರು ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ದಿಲ್ ರಾಜು ಅವರ ಜೊತೆ ಹೊಸ ಪ್ರಾಜೆಕ್ಟ್‌ಗಾಗಿ ಕೈಜೋಡಿಸಲಿದ್ದಾರೆ ಎಂಬ ಸುದ್ದಿ ಭಾರಿ ಸಂಚಲನ ಸೃಷ್ಟಿಸಿದೆ.
ಹೌದು, ಹೈದರಾಬಾದ್‌ನಲ್ಲಿ ನಡೆದ ಟಾಕ್ಸಿಕ್ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಈ ಬಗ್ಗೆ ಮಹತ್ವದ ಸುಳಿವು ಸಿಕ್ಕಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರವನ್ನ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ದಿಲ್ ರಾಜು ಅವರ ಒಡೆತನದ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಸಂಸ್ಥೆಯು ವಿತರಣೆ ಮಾಡುತ್ತಿದೆ. ನಿನ್ನೆ ಹೈದರಾಬಾದ್‌ನಲ್ಲಿ ಚಿತ್ರದ ಪ್ರಮುಖ ತಂಡ ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಿರ್ಮಾಪಕ ದಿಲ್ ರಾಜು ಅವರಿಗೆ, ಭವಿಷ್ಯದಲ್ಲಿ ಯಶ್ ಜೊತೆ ತೆಲುಗು ಸಿನಿಮಾ ನಿರ್ಮಿಸುವ ಸಾಧ್ಯತೆಗಳ ಬಗ್ಗೆ ನೇರ ಪ್ರಶ್ನೆ ಎದುರಾಯಿತು.
ಇದಕ್ಕೆ ಅತ್ಯಂತ ಉತ್ಸಾಹದಿಂದಲೇ ಉತ್ತರಿಸಿದ ಅವರು, ಯಶ್ ಅವರೊಂದಿಗೆ ಸಿನಿಮಾ ಮಾಡುವ ಬಗ್ಗೆ ಒಲವು ತೋರಿದ್ದು, ಭವಿಷ್ಯದಲ್ಲಿ ಈ ಕಾಂಬಿನೇಷನ್ ಒಂದಾಗುವ ಸಾಧ್ಯತೆಗಳಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ದಿಲ್ ರಾಜು ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಆದರೆ, ಯಶ್ ಸದ್ಯ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವುದರಿಂದ ಮತ್ತು ಅವರ ಕಾಲ್‌ಶೀಟ್ ಬಿಡುವಿಲ್ಲದೆ ಇರುವುದರಿಂದ, ಅವರ ಡೇಟ್ಸ್ ನೋಡಿಕೊಂಡು ಮುಂದಿನ ದಿನಗಳಲ್ಲಿ ಈ ಯೋಜನೆ ಅಧಿಕೃತವಾಗಿ ಕಾರ್ಯಗತವಾಗಬಹುದು.
ಟಾಕ್ಸಿಕ್ ಸಿನಿಮಾ ಪ್ಯಾನ್ ಇಂಡಿಯಾ ಪ್ರಾಜೆಕ್ಟ್: ಯಶ್
ಇದೇ ಹೈದರಾಬಾದ್ ಕಾರ್ಯಕ್ರಮದಲ್ಲಿ 'ಟಾಕ್ಸಿಕ್' ಚಿತ್ರದ ಮೇಕಿಂಗ್ ಬಗ್ಗೆ ಮಾತನಾಡಿದ ನಟ ಯಶ್, ಇದೊಂದು ಅದ್ಭುತ ಸಿನಿಮಾಟಿಕ್ ಅನುಭವ ನೀಡುವ ಚಿತ್ರ ಎಂದಿದ್ದಾರೆ. "ಟಾಕ್ಸಿಕ್ ಚಿತ್ರಕ್ಕಾಗಿ ದೇಶಾದ್ಯಂತ ಇರುವ ಅತ್ಯುತ್ತಮ ಪ್ರತಿಭಾವಂತ ತಂತ್ರಜ್ಞರು ಮತ್ತು ಕಲಾವಿದರು ಒಟ್ಟಾಗಿ ಕೆಲಸ ಮಾಡಿದ್ದಾರೆ. ಪ್ರೇಕ್ಷಕರಿಗೆ ಅತ್ಯುತ್ತಮ ಅನುಭವ ನೀಡಲು ನಾವೆಲ್ಲರೂ ಶ್ರಮಿಸಿದ್ದೇವೆ.
ಇದೊಂದು ಬೋಲ್ಡ್, ಒರಿಜಿನಲ್ ಮತ್ತು ಬಹಳ ಮಹತ್ವಾಕಾಂಕ್ಷೆಯ ಚಿತ್ರವಾಗಿದ್ದು, ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ" ಎಂದು ಯಶ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದ್ದು, ಆಗಸ್ಟ್ 26ರಂದು ವಿಶ್ವದಾದ್ಯಂತ ಹಲವು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
#YASH x #DILRAJU'S CONFIRMED. #ToxicTheMovie pic.twitter.com/BjVQjzMazx
— Balaji (@RDBalaji) August 22, 2026
ಟಾಕ್ಸಿಕ್ ಅಡ್ವಾನ್ಸ್ ಬುಕ್ಕಿಂಗ್ ಕಲೆಕ್ಷನ್ ಕಮಾಲ್
ಇನ್ನು, ಬಿಡುಗಡೆಗೂ ಮುನ್ನವೇ ಟಾಕ್ಸಿಕ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಭಾರತದಲ್ಲಿ ಚಿತ್ರದ ಮೊದಲ ದಿನದ ಅಡ್ವಾನ್ಸ್ ಬುಕ್ಕಿಂಗ್ ಕಲೆಕ್ಷನ್ ಈಗಾಗಲೇ 10 ಕೋಟಿ ರೂಪಾಯಿಗಳ ಗಡಿ ದಾಟಿ ಮುನ್ನುಗ್ಗುತ್ತಿದೆ. ಬಾಕ್ಸ್ ಆಫೀಸ್ ಟ್ರ್ಯಾಕರ್ ನೀಡಿದ ವರದಿಯ ಪ್ರಕಾರ, ಮೊದಲ ದಿನದ ಟಿಕೆಟ್ ಮಾರಾಟದಿಂದಲೇ ಚಿತ್ರವು ಅಂದಾಜು 10.94 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಇನ್ನೂ ಭಾಷಾವಾರು ಲೆಕ್ಕಾಚಾರವನ್ನು ಗಮನಿಸಿದರೆ, ಕರುನಾಡಿನಲ್ಲಿ ಭಾರಿ ಕ್ರೇಜ್ ಇದ್ದು, ಕನ್ನಡ ಆವೃತ್ತಿಯು ಮುಂಚೂಣಿಯಲ್ಲಿದೆ. ಕನ್ನಡದಿಂದಲೇ ಬರೋಬ್ಬರಿ 7.20 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದರೆ, ಹಿಂದಿ ಆವೃತ್ತಿಯಿಂದ 3.70 ಕೋಟಿ ರೂಪಾಯಿ ಹರಿದುಬಂದಿದೆ ಎಂದು ಖಚಿತಪಡಿಸಿದೆ.
ಒಟ್ಟಾರೆಯಾಗಿ, ಕೆಜಿಎಫ್ ನಂತರ ಯಶ್ ಬೆಳ್ಳಿತೆರೆಗೆ ಮರಳುತ್ತಿರುವುದರಿಂದ ನಿರೀಕ್ಷೆಗಳು ಹೆಚ್ಚಾಗಿವೆ. ಇದರ ಜೊತೆಗೆ ದಿಲ್ ರಾಜು ಅವರಂತಹ ನಿರ್ಮಾಪಕರ ಜೊತೆಗಿನ ಹೊಸ ಪ್ರಾಜೆಕ್ಟ್ ಭವಿಷ್ಯದಲ್ಲಿ ಖಚಿತವಾದರೆ, ಯಶ್ ಅವರ ಪ್ಯಾನ್-ಇಂಡಿಯಾ ಮತ್ತು ಗ್ಲೋಬಲ್ ಸ್ಟಾರ್‌ಡಮ್ ಮತ್ತಷ್ಟು ವಿಸ್ತಾರವಾಗುವುದು ಖಂಡಿತ. ಸದ್ಯಕ್ಕಂತೂ ಸಿನಿಪ್ರೇಮಿಗಳ ಕಣ್ಣೆಲ್ಲ ಆಗಸ್ಟ್ 26ರಂದು ತೆರೆಕಾಣಲಿರುವ 'ಟಾಕ್ಸಿಕ್' ಮೇಲಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ಮುನ್ಸೂಚನೆ ಸಿಕ್ಕಿದೆ.


Click it and Unblock the Notifications
