Kiccha Sudeep: ಬೀದಿನಾಯಿಗಳನ್ನ ದತ್ತು ಪಡೆಯಿರಿ: ನಟ ಸುದೀಪ್ ಮನವಿ ಮಾಡಿಕೊಂಡಿದ್ದೇಕೆ?
ನಾಯಿ ಕಡಿತ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ದೆಹಲಿಯ ಎನ್‌ಸಿಆರ್ ಭಾಗದಲ್ಲಿರುವ ಸಾವಿರಾರು ಬೀದಿನಾಯಿಗಳನ್ನು ತೆರವು ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಆರರಿಂದ ಎಂಟು ವಾರಗಳಲ್ಲಿ ಹೆಚ್ಚಿನ ಅಪಾಯದ ಪ್ರದೇಶಗಳಿಂದ 5,000 ನಾಯಿಗಳನ್ನು ಸೆರೆ ಹಿಡಿದು, ಅವುಗಳನ್ನು ಸಂತಾನಹರಣ ಚಿಕಿತ್ಸೆಗೆ ಒಳಪಡಿಸಿ, ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸೂಚಿಸಿದೆ. ಈ ವಿಚಾರವಾಗಿ ನಟ ಕಿಚ್ಚ ಸುದೀಪ್ ವಿಶೇಷ ಮನವಿ ಮಾಡಿದ್ದಾರೆ. ದಯವಿಟ್ಟು ಬೀದಿನಾಯಿಗಳನ್ನು ದತ್ತು ಪಡೆಯಿರಿ ಎಂದು ಕೇಳಿಕೊಂಡಿದ್ದಾರೆ.
'ದೆಹಲಿಯ ಎನ್‌ಸಿಆರ್ ಭಾಗದಲ್ಲಿರುವ ಬೀದಿ ನಾಯಿಗಳನ್ನು ಒಟ್ಟುಗೂಡಿಸಿ ಶಾಶ್ವತವಾಗಿ ಆಶ್ರಯದಲ್ಲಿ ಇರಿಸುವ ಸುಪ್ರೀಂಕೋರ್ಟ್ ನಿರ್ಧಾರವನ್ನು ನಾನು ಪ್ರಶ್ನಿಸಲು ಬಯಸುವುದಿಲ್ಲ. ಏಕೆಂದರೆ ಈ ನಿರ್ಧಾರಕ್ಕೆ ತನ್ನದೇ ಆದ ಕಾರಣಗಳಿರಬಹುದು. ಆದರೆ ಇದು ಅವುಗಳ ಯೋಗಕ್ಷೇಮ ಮತ್ತು ಅವುಗಳ ಜೀವನದ ಮೇಲಿನ ಪರಿಣಾಮದ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕುತ್ತದೆ' ಎಂದಿದ್ದಾರೆ ಕಿಚ್ಚ.

'ನಾಯಿಗಳ ನಿಷ್ಠೆ ಗೊತ್ತಿದೆ'
'ನಾನು ಚಿಕ್ಕಂದಿನಿಂದಲೂ ನಾಯಿಗಳನ್ನು ಸಾಕುತ್ತಾ ಬೆಳೆದವನು. ನನ್ನ ಕುಟುಂಬವು ಇಂಡೀಸ್ ನಾಯಿಗಳನ್ನು ದತ್ತು ಪಡೆದಿರುವುದರಿಂದ, ಅವುಗಳ ಪ್ರೀತಿ ಮತ್ತು ನಿಷ್ಠೆ ಎಂಥದ್ದು ಎಂದು ನನಗೆ ಗೊತ್ತಿದೆ. ಆ ನಾಯಿಗಳು ಬದುಕಲು ಬೀದಿಗಳನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಆದರೆ ನಾವು ಅವುಗಳಿಗೆ ಆಶ್ರಯ ಕೊಡಬಹುದು. ನಾವು ಖಂಡಿತವಾಗಿಯೂ ಧ್ವನಿಯಿಲ್ಲದವರಿಗೆ ಧ್ವನಿಯಾಗಬಹುದು. ದಯವಿಟ್ಟು ದತ್ತು ಪಡೆಯಿರಿ' ಎಂದು ಕರೆ ನೀಡಿದ್ದಾರೆ. ಸುದೀಪ್ ಅವರು ಶ್ವಾನಪ್ರಿಯರಾಗಿರುವುದರಿಂದ ಅವರ ಹೇಳಿಕೆ ಸರಿಯೇ ಇರಬಹುದು. ಆದರೆ ಬೀದಿನಾಯಿಗಳಿಂದ ಆಗಿರುವ ಅನಾಹುತಗಳ ಬಗ್ಗೆಯೂ ಯೋಚಿಸಬೇಕು ಎಂದು ಹಲವರು ಕಿಚ್ಚನ ಮಾತಿಗೆ ಪರ-ವಿರೋಧದ ಮಾತುಗಳನ್ನಾಡುತ್ತಿದ್ದಾರೆ.
ನವದೆಹಲಿಯಲ್ಲಿ ಪ್ರತಿದಿನ ಸುಮಾರು 2,000 ನಾಯಿ ಕಡಿತದ ಘಟನೆಗಳು ಸಂಭವಿಸುತ್ತಿವೆ ಎಂದು ವರದಿಯಾಗಿದೆ. ಆದರೆ ರಾಜಧಾನಿಯ ಬೀದಿಗಳಲ್ಲಿ ಎಷ್ಟು ನಾಯಿಗಳು ಓಡಾಡುತ್ತವೆ ಎಂಬುದು ಯಾರಿಗೂ ನಿಖರವಾಗಿ ತಿಳಿದಿಲ್ಲ. 2013ರಲ್ಲೇ ಕನಿಷ್ಠ 60,000 ಬೀದಿನಾಯಿಗಳಿವೆ ಎಂದು ಅಂದಾಜಿಸಲಾಗಿತ್ತು. ಆದರೆ ಇತ್ತೀಚಿನ ಅಂಕಿಅಂಶಗಳು ಈ ಸಂಖ್ಯೆ ಒಂದು ಮಿಲಿಯನ್‌ಗಿಂತಲೂ ಹೆಚ್ಚಿರಬಹುದು ಎಂದು ಸೂಚಿಸುತ್ತವೆ. ಹೀಗಾಗಿ ಸುಪ್ರೀಂಕೋರ್ಟ್ ಸೋಮವಾರವಷ್ಟೇ ನವದೆಹಲಿಯ ಬೀದಿಗಳಿಂದ ಬೀದಿ ನಾಯಿಗಳನ್ನು ತೆರವು ಮಾಡುವಂತೆ ಆದೇಶಿಸಿದೆ.
ನವದೆಹಲಿಯ ಬೀದಿಗಳಲ್ಲಿ ಓಡಾಡುವ ಹಲವು ನಾಯಿಗಳು ಅಮಾಯಕವೇ ಆಗಿದ್ದರೂ ನಾಯಿ ಕಡಿತದ ಘಟನೆಗಳ ಸಂಖ್ಯೆಯನ್ನು ನ್ಯಾಯಾಲಯವು ಅತ್ಯಂತ ಭೀಕರ ಎಂದು ಅಭಿಪ್ರಾಯಪಟ್ಟಿದೆ. ಶಿಶುಗಳು, ಚಿಕ್ಕ ಮಕ್ಕಳು ಯಾವುದೇ ಕಾರಣಕ್ಕೂ ಬೀದಿ ನಾಯಿಗಳಿಗೆ ಬಲಿಯಾಗಬಾರದು ಎಂದೂ ಒತ್ತಿ ಹೇಳಿದೆ. ನಾಯಿ ಕಡಿತದ ಬಗ್ಗೆ ವರದಿ ಮಾಡಲು 24 ಗಂಟೆಗಳ ಸಹಾಯವಾಣಿಯನ್ನು ಸ್ಥಾಪಿಸಬೇಕು ಹಾಗೂ ರೇಬೀಸ್ ವಿರೋಧಿ ಲಸಿಕೆಗಳು ಲಭ್ಯವಿರುವ ಸ್ಥಳಗಳ ಮಾಹಿತಿ ಕೊಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಆದರೆ ಮತ್ತೊಂದೆಡೆ ಬೀದಿನಾಯಿಗಳ ಮೇಲಿನ ಈ ಕ್ರಮಕ್ಕೆ ವಿರೋಧವೂ ವ್ಯಕ್ತವಾಗುತ್ತಿದೆ. ಹಲವು ಸೆಲೆಬ್ರಿಟಿಗಳು ಕೂಡ ಇದನ್ನು ಖಂಡಿಸುತ್ತಿದ್ದಾರೆ. ಇದೀಗ ಸುದೀಪ್ ಕೂಡ ಬೀದಿನಾಯಿಗಳ ದತ್ತು ಪಡೆಯುವಂತೆ ಕರೆ ನೀಡಿದ್ದಾರೆ.












Click it and Unblock the Notifications