Rakshak Bullet: ಪ್ರಥಮ್‌ಗೆ ಜೀವ ಬೆದರಿಕೆ ಹಾಕಿದಾಗ ಸುಮ್ಮನಿದ್ದಿದ್ದೇಕೆ? ಅಸಲಿ ಕಾರಣ ಹೇಳಿದ ರಕ್ಷಕ್ ಬುಲೆಟ್
ಬಿಗ್‌ಬಾಸ್ ವಿನ್ನರ್ ಹಾಗೂ ನಟ ಪ್ರಥಮ್‌ಗೆ ರೌಡಿಗಳ ಗುಂಪೊಂದು ಡ್ರ್ಯಾಗರ್ ತೋರಿಸಿ ಜೀವ ಬೆದರಿಕೆ ಹಾಕಿದ್ದು, ಈ ಘಟನೆ ನಡೆದಾಗ ರಕ್ಷಕ್ ಬುಲೆಟ್ ಕೂಡ ಅದೇ ಜಾಗದಲ್ಲಿದ್ದರು ಎಂಬ ಆರೋಪ ಕೇಳಿಬಂದಿದೆ. ಸದ್ಯ ಈ ವಿಚಾರ ಸಂಚಲನ ಸೃಷ್ಟಿಸಿದ್ದು, ಪ್ರಥಮ್ ಅವರು ಘಟನೆ ವಿವರಿಸಿರುವ ಆಡಿಯೋ ಕೂಡ ವೈರಲ್ ಆಗಿದೆ. ಇನ್ನು ಪ್ರಥಮ್‌ಗೆ ಬೆದರಿಕೆ ಹಾಕುತ್ತಿದ್ದಾಗ ಪಕ್ಕದಲ್ಲೇ ಇದ್ದ ರಕ್ಷಕ್ ಸಹಾಯಕ್ಕೆ ಬರಲಿಲ್ಲ ಎಂಬ ಆರೋಪವೂ ಕೇಳಿಬಂದಿದ್ದು, ಅಸಲಿಗೆ ನಡೆದಿದ್ದೇನು ಎಂದು ರಕ್ಷಕ್ ಬುಲೆಟ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ದೊಡ್ಡಬಳ್ಳಾಪುರ ಸಮೀಪದ ದೇವಸ್ಥಾನವೊಂದರ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ. 'ನನಗೆ ಆಹ್ವಾನ ಕೊಟ್ಟಿದ್ದರಿಂದ ನಾನು ಅಲ್ಲಿಗೆ ಹೋಗಿದ್ದೆ ಕೆಲಸ ಮುಗಿಸಿ ಬಂದೆ. ಆದರೆ ನಾನೇ ಬೆದರಿಕೆ ಹಾಕಿಸಿ, ಸುಪಾರಿ ಕೊಟ್ಟಿದ್ದೀನಿ ಎಂದು ಹೇಳಿದ್ದಾರೆ. ಕರ್ಮ ಯಾರನ್ನೂ ಬಿಡೋದಿಲ್ಲ. ನನ್ನದು ಏನಾದ್ರೂ ತಪ್ಪಿದ್ರೆ ದೇವರು ನೋಡಿಕೊಳ್ಳಲಿ' ಎಂದು ರಕ್ಷಕ್ ಬುಲೆಟ್ ಪ್ರತಿಕ್ರಿಯಿಸಿದ್ದಾರೆ.

'ನಾನು ಇಲ್ಲಿ ಯಾವುದೇ ರೌಡಿಸಂ, ಬೇರೆ ವ್ಯವಹಾರ ಮಾಡೋಕೆ ಬಂದಿಲ್ಲ. ನಾನು ನಿಯತ್ತಾಗಿ ನನ್ನ ಕೆಲಸ ಎಂದುಕೊಂಡು ಇದ್ದೀನಿ. ಆ ಘಟನೆ ನಡೆದ ಜಾಗದಲ್ಲಿ ನಾನು ಇದ್ದೆ. ಆದರೆ ನನಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ. ನಾನು ಮಧ್ಯದಲ್ಲಿ ಹೋದರೆ ಅದು ನನ್ನ ಮೇಲೆ ಬರುತ್ತೆ ಎಂದು ಆ ವಿಚಾರದಲ್ಲಿ ತಲೆ ಹಾಕಲಿಲ್ಲ' ಎಂದು ರಕ್ಷಕ್ ಬುಲೆಟ್ ಸ್ಪಷ್ಟನೆ ನೀಡಿದ್ದಾರೆ.
'ಈ ಘಟನೆ ನಡೆದಾಗ ನಾನು ಅಲ್ಲೇ ಇದ್ದೇ ಎನ್ನುವ ಕಾರಣಕ್ಕೆ ಇಷ್ಟೆಲ್ಲ ಆಗುತ್ತಿದೆ. ಪ್ರಥಮ್ ನನಗೆ ಅಣ್ಣ ಇದ್ದಂಗೆ, ಇಲ್ಲಿ ನಾನು ಬೇರೆಯವರಿಗೆ ತೊಂದರೆ ಕೊಡಲು ಬಂದಿಲ್ಲ. ಕಲಾವಿದರಂತೆ ಕೆಲಸ ಮಾಡೋಕೆ ಬಂದಿರುವೆ. ನಾನು ಅದನ್ನಷ್ಟೇ ಮಾಡ್ತೀನಿ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ. ಯಾರು ಏನೇ ಕೇಳಿದ್ರೂ ನಾನು ಅಲ್ಲಿ ನಡೆದಿದ್ದನ್ನ ಹೇಳ್ತೀನಿ. ಏನೇ ಆದರೂ ಫೇಸ್ ಮಾಡ್ತೀನಿ' ಎಂದು ರಕ್ಷಕ್ ಹೇಳಿದ್ದಾರೆ.
ತಪ್ಪು ಮಾಡಿದ್ರೆ ದೇವರು ಶಿಕ್ಷೆ ಕೊಡಲಿ
'ಈ ಘಟನೆ ದೇವಸ್ಥಾನದ ಮುಂದೆ ನಡೆದಿದೆ. ಅಲ್ಲಿದ್ದವರೆಲ್ಲ ದೇವಸ್ಥಾನಕ್ಕೆ ಬರಲಿ, ಎಲ್ಲರೂ ಕರ್ಪೂರ ಹಚ್ಚೋಣ. ಒಂದು ವೇಳೆ ನಂದೇನಾದ್ರೂ ತಪ್ಪಿದ್ರೆ ಆ ದೇವರು ಶಿಕ್ಷೆ ಕೊಡಲಿ. ಆ ತಾಯಿ ನನ್ನ ನೋಡಿಕೊಳ್ಳಲಿ. ಕರ್ಮ ಯಾರ ಮನೆ ಬಾಗಿಲನ್ನೂ ಬಿಡೋದಿಲ್ಲ. ಪ್ರಥಮ್ ಅಣ್ಣನಿಗೆ ನಾನು ಏನಾದ್ರೂ ತೊಂದರೆ ನೀಡಿದ್ದರೆ, ಆ ದೇವರು ಶಿಕ್ಷೆ ಕೊಡಲಿ. ಅದನ್ನು ನಾನು ಸ್ವೀಕರಿಸುತ್ತೇನೆ' ಎಂದಿದ್ದಾರೆ.
'ನಾನು ಏನು ಮಾಡಿದ್ರೂ ಕೆಲವರಿಗೆ ಸಮಸ್ಯೆ ಆಗಿದೆ. ಈ ವಿಚಾರದಲ್ಲಿ ನನ್ನ ಪಾತ್ರವೇ ಇಲ್ಲ, ಆದರೂ ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ. ರಕ್ಷಕ್ ಜೊತೆ ಹುಡುಗರು ಇದ್ದರು ಎಂದು ಹೇಳುತ್ತಿದ್ದಾರೆ. ಇದರಿಂದ ನನಗೆ ಹಾಗೂ ಮನೆಯವರಿಗೆ ತುಂಬಾ ನೋವಾಗಿದೆ. ಈ ಘಟನೆಯ ಬಳಿಕ ನಾನು ಹಾಗೂ ಪ್ರಥಮ್ ಅಣ್ಣ ಚೆನ್ನಾಗಿಯೇ ಮಾತನಾಡಿದ್ದೇವೆ' ಎಂದೂ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications