Shankar Nag Birthday: ಎಲ್ಲಿದೆ ಶಂಕರ್ ನಾಗ್ ಸಮಾಧಿ? ಅಭಿಮಾನಿಗಳಿಗೆ ಈ ವಿಚಾರದಲ್ಲಿ ಬೇಸರ ಯಾಕೆ?
ನಾಗರ ಕಟ್ಟೆ ಶಂಕರ, ಅಭಿಮಾನಿಗಳ ಪಾಲಿನ ಶಂಕ್ರಣ್ಣ, ಆಟೋ ಚಾಲಕರ ಪಾಲಿನ ಸೂಪರ್ ಸ್ಟಾರ್, ಕನ್ನಡ ಚಿತ್ರರಂಗದ ನಿಜವಾದ ಕನಸುಗಾರ ಶಂಕರ್ ನಾಗ್ ಅವರ ಹುಟ್ಟುಹಬ್ಬ ಇಂದು (ನವೆಂಬರ್ 9). ಅವರು ಇದ್ದಿದ್ದರೆ ಅಭಿಮಾನಿಗಳ ಸಾಗರದ ನಡುವೆ 70ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. ಆದರೆ ಪ್ರತಿಭಾವಂತ ನಟ, ನಿರ್ದೇಶಕನೊಬ್ಬ ಚಿಕ್ಕ ವಯಸ್ಸಿನಲ್ಲೇ ಅಪಫಾತದಲ್ಲಿ ಮೃತಪಟ್ಟಿದ್ದು, ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗ, ನಾಟಕ ರಂಗಕ್ಕೆ ತುಂಬಲಾರದ ನಷ್ಟ.
ಶಂಕರ್ ನಾಗ್ ಕನ್ನಡಿಗರನ್ನು ಬಿಟ್ಟು ಹೋಗಿ 35 ವರ್ಷಗಳಾಗಿದೆ. ಸಿನಿಮಾ ನಟರು ಎಂದ ಮೇಲೆ ಅವರ ನಿಧನದ ಬಳಿಕ ಸಮಾಧಿಯನ್ನು ಸ್ಮಾರಕ ಮಾಡಲಾಗುತ್ತದೆ. ಅಲ್ಲಿಗೆ ಅಭಿಮಾನಿಗಳು ತೆರಳಿ ನೆಚ್ಚಿನ ನಟನನ್ನು ನೆನೆಯುವುದು ಸಾಮಾನ್ಯ, ಹಾಗಾದರೆ ಶಂಕರ್ ನಾಗ್‌ರ ಸಮಾಧಿ ಎಲ್ಲಿದೆ, ಅವರ ಅಂತ್ಯಕ್ರಿಯೆ ಆಗಿದ್ದು ಎಲ್ಲಿ ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಶಂಕರ್ ನಾಗ್ ಸಮಾಧಿ ಎಲ್ಲಿದೆ?
ಕೆಲವು ವರ್ಷಗಳ ಹಿಂದೆ ಶಂಕರ್ ನಾಗ್ ಸಮಾಧಿ ಎನ್ನಲಾದ ಫೋಟೊವೊಂದು ಭಾರಿ ವೈರಲ್ ಆಗಿತ್ತು. ಎರಡು ಕಲ್ಲುಗಳ ಮೇಲೆ ಶಂಕರ್ ನಾಗ್ ಬ್ಯಾನರ್, ಕನ್ನಡ ಬಾವುಟ ಇದ್ದ ಚಿತ್ರವೊಂದು ವೈರಲ್ ಆಗಿದ್ದು ಇದೇ ಶಂಕರ್ ನಾಗ್ ಸಮಾಧಿ, ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಹೇಳಲಾಗಿತ್ತು. ಆದರೆ ಶಂಕರ್ ನಾಗ್ ಆಪ್ತ ರಮೇಶ್ ಭಟ್ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದರು.
ಬೇಸರದ ಸಂಗತಿ ಎಂದರೆ ಶಂಕರ್ ನಾಗ್ ಅವರ ಸಮಾಧಿಯಾಗಲಿ, ಸ್ಮಾರಕವಾಗಲಿ ಎಲ್ಲಿಯೂ ಇಲ್ಲ. ಶಂಕರ್ ನಾಗ್ ಅವರ ಸಮಾಧಿ ಎನ್ನುತ್ತಿರುವ ಫೋಟೊ ನಿಜವಲ್ಲ, ಶಂಕರ್ ನಾಗ್‌ರನ್ನು ಮಣ್ಣು ಮಾಡಲಿಲ್ಲ, ಅವರನ್ನು ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಿದ್ದರಿಂದ ಅವರಿಗೆ ಸಮಾಧಿ ಕಟ್ಟಲಾಗಿಲ್ಲ ಎಂದು ಹೇಳಿದ್ದರು.
1990 ರ ಸೆಪ್ಟಂಬರ್ 30ರಂದು ದಾವಣೆಗರೆ ಜಿಲ್ಲಯ ಆನಗೋಡು ಬಳಿ ಸಂಭವಿಸಿದ ಅಪಘಾತದಲ್ಲಿ ಶಂಕರ್ ನಾಗ್ ಹಾಗೂ ಕಾರು ಚಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಅಲ್ಲಿಂದ ಶಂಕರ್ ನಾಗ್‌ರ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತರಲಾಗಿತ್ತು, ವಿಲ್ಸನ್ ಗಾರ್ಡನ್‌ನಲ್ಲಿರುವ ಚಿತಾಗಾರದಲ್ಲಿ ಅಗ್ನಿಸ್ಪರ್ಷ ಮಾಡಲಾಗಿತ್ತು. ಇದೇ ಕಾರಣಕ್ಕೆ ಅವರಿಗೆ ಸಮಾಧಿ ಕೂಡ ಇಲ್ಲ ಎಂದು ರಮೇಶ್ ಭಟ್ ಹೇಳಿದ್ದರು.
ಅಭಿಮಾನಿಗಳಿಗೆ ಬೇಸರ
ಶಂಕರ್ ನಾಗ್, ಇಡೀ ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟ, ನಿರ್ದೇಶಕ. ಆ ಕಾಲದಲ್ಲೇ ಹೊಸ ಹೊಸ ತಂತ್ರಜ್ಞಾನಗಳನ್ನು ಕನ್ನಡಕ್ಕೆ ಮಾತ್ರವಲ್ಲದೆ ಭಾರತೀಯ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಒಂದು ಮುತ್ತಿನ ಕಥೆ ಸಿನಿಮಾದಲ್ಲಿ ಮೊದಲ ಬಾರಿಗೆ ನೀರಿನ ಅಡಿ ಚಿತ್ರೀಕರಣ ಮಾಡಿ ಭಾರತೀಯ ಚಿತ್ರರಂಗವೇ ತಿರುಗಿನೋಡುವಂತೆ ಮಾಡಿದ್ದರು. ಮಾಲ್ಗುಡಿ ಡೇಸ್ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದ ಧಾರವಾಹಿ. ಬೆಂಗಳೂರಿಗೆ ಮೆಟ್ರೋ ಬೇಕು ಎಂದು 80ರ ದಶಕದಲ್ಲೇ ಕನಸು ಕಂಡಿದ್ದರು, ನಂದಿ ಬೆಟ್ಟಕ್ಕೆ ರೋಪ್‌ವೇ ಅವರ ಮತ್ತೊಂದು ಕನಸಾಗಿತ್ತು. ಅಂತಹ ಕನಸುಗಾರ, ಕಲಾವಿದನಿಗೆ ಒಂದು ಸ್ಮಾರಕ ಕೂಡ ಇಲ್ಲದೇ ಇರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.












Click it and Unblock the Notifications