Chiranjeevi: ಬೆಂಗಳೂರಿನ ನೀರಿನ ಸಮಸ್ಯೆಗೆ ಕನ್ನಡದಲ್ಲೇ ಪರಿಹಾರ ಹೇಳಿದ ನಟ ಚಿರಂಜೀವಿ!
ಬೆಂಗಳೂರು, ಮಾರ್ಚ್ 27: ಸಿಲಿಕಾನ್ ಸಿಟಿಯ ನೀರಿನ ಸಮಸ್ಯೆ ಬರೀ ರಾಜಧಾನಿಯ ಸಮಸ್ಯೆಯಾಗಿ ಉಳಿದಿಲ್ಲ. ದೇಶ, ಹೊರ ದೇಶದ ಹಲವಾರು ಮಂದಿ ಉದ್ಯಾನನಗರಿಯಲ್ಲಿ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಇಲ್ಲಿ ನೀರಿನ ಬಿಕ್ಕಟ್ಟು ಉಂಟಾದರೆ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಲಿದೆ. ಹಲವು ಸೆಲಬ್ರಿಟಿಗಳು ಕೂಡ ಈ ಬಗ್ಗೆ ಮಾತನಾಡುತ್ತಾರೆ.
ಸ್ಯಾಂಡಲ್‌ವುಡ್ ನಟ, ನಟಿಯರು ನೀರಿನ ಸಮಸ್ಯೆ ಬಗ್ಗೆ ಮಾತನಾಡದೇ ಇದ್ದರೂ ಕೂಡ ಮೆಗಾಸ್ಟಾರ್ ಚಿರಂಜೀವಿ ಕನ್ನಡಿಗರ ಸಮಸ್ಯೆಗೆ ಕನ್ನಡದಲ್ಲಿಯೇ ಪರಿಹಾರ ಸೂಚಿಸಿದ್ದಾರೆ. ಸಿನಿಮಾಗಳು ಮತ್ತು ಸಾಮಾಜಿಕ ಕೆಲಸಗಳಿಂದ ಗುರುತಿಸಿಕೊಂಡಿರುವ ನಟ ಚಿರಂಜೀವಿ, ನೀರಿನ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ ತಮ್ಮ ಬೆಂಗಳೂರಿನ ಫಾರ್ಮ್ ಹೌಸ್‌ನಲ್ಲಿ ಮಾಡಿರುವ ಹಲವು ಕ್ರಮಗಳನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಸಮೇತ ಉತ್ತದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. "ಈ ಪೋಸ್ಟ್ ಸ್ವಲ್ಪ ಉದ್ದವಾಗಿದ್ದರೂ, ಪಾಯಿಂಟ್ ಚಿಕ್ಕದಾದರೂ... ಬಹಳ ಮುಖ್ಯ. ನಮಗೆಲ್ಲರಿಗೂ ತಿಳಿದಿರುವಂತೆ, ನೀರು ಅತ್ಯಂತ ಅಮೂಲ್ಯವಾದ ವಸ್ತು, ನೀರಿನ ಕೊರತೆಯು ದೈನಂದಿನ ಜೀವನವನ್ನು ಕಷ್ಟಕರವಾಗಿಸುತ್ತದೆ. ಇಂದು ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾಗಬಹುದು. ನಾಳೆ ಎಲ್ಲಿ ಬೇಕಾದರೂ ಸಂಭವಿಸಬಹುದು. ಆದ್ದರಿಂದ ನೀರನ್ನು ಸಂರಕ್ಷಿಸಲು ಸಹಾಯ ಮಾಡುವ ಮನೆಗಳನ್ನು ನಿರ್ಮಿಸುವ ಅಗತ್ಯವನ್ನು ಒತ್ತಿಹೇಳಲು ನಾನು ಈ ಅವಕಾಶವನ್ನು ಬಳಸಲು ಬಯಸುತ್ತೇನೆ. ಬೆಂಗಳೂರಿನ ನನ್ನ ಫಾರ್ಮ್ ಹೌಸ್‌ಗಾಗಿ ನಾನು ಮಾಡಿದ್ದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ" ಎಂದು ಹೇಳಿದ್ದಾರೆ.
ನಟ ಚಿರಂಜೀವಿ ಸೂಚಿಸಿದ ಪರಿಹಾರ ಕ್ರಮ
"20-36 ಅಡಿ ಆಳದ ರೀಚಾರ್ಜ್ ಬಾವಿಗಳನ್ನು ಸೈಟ್‌ನಾದ್ಯಂತ ಆಯಕಟ್ಟಿನ ಬಿಂದುಗಳಲ್ಲಿ ಸ್ಥಾಪಿಸಲಾಗಿದ್ದು, ರೀಚಾರ್ಜ್ ಬಾವಿಗಳಿಗೆ ಮೇಲ್ಮೈ ನೀರಿನ ಹರಿವನ್ನು ನಿರ್ದೇಶಿಸಲು ಸಾಕಷ್ಟು ಇಳಿಜಾರುಗಳಿವೆ. ಪ್ರತಿಯೊಂದು ಬಾವಿಯು ಫಿಲ್ಟರ್ ವ್ಯವಸ್ಥೆಯನ್ನು ಹೊಂದಿದೆ. ವಿವಿಧ ಸಮುಚ್ಚಯಗಳೊಂದಿಗೆ ಒಂದು ಹೂಳು ಬಲೆ, ಅಂದರೆ ಕಲ್ಲಿನ ಗಾತ್ರಗಳು ಮತ್ತು ಮರಳು, ಪದರಗಳ ಮೂಲಕ ನೀರಿನ ಅಂಗೀಕಾರವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. ರೀಚಾರ್ಜ್ ಬಾವಿ - ರೀಚಾರ್ಜ್ ಪಿಟ್‌ಗೆ ಹೋಲಿಸಿದರೆ ಇದರಲ್ಲಿ ಹೆಚ್ಚು ನೀರನ್ನು ಸಂಗ್ರಹಿಸಬಹುದು ಮತ್ತು ಹೆಚ್ಚು ಆಳವಾದ ಜಲಚರಗಳನ್ನು ತಲುಪಲು ತಲಾಧಾರದಲ್ಲಿನ ಸರಂಧ್ರ ಪದರಗಳ ಮೂಲಕ ನೀರನ್ನು ನಿಧಾನವಾಗಿ ಹರಿಯುವಂತೆ ಮಾಡುತ್ತದೆ" ಎಂದು ತಿಳಿಸಿದ್ದಾರೆ.

ಮುಂದುವರಿದು, "ನಾನು ಪರ್ಮಾಕಲ್ಚರ್ ತತ್ವಗಳನ್ನು ಸಹ ಜಾರಿಗೆ ತಂದಿದ್ದೇನೆ. ಪರ್ಮಾಕಲ್ಚರ್ ಪರಿಸರವನ್ನು ಪುನರುಜ್ಜೀವನಗೊಳಿಸುವ ವೃತ್ತಾಕಾರದ ತತ್ತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ಅದನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಪರ್ಮಾಕಲ್ಚರ್‌ನ ಪ್ರಮುಖ ಫಲಿತಾಂಶವೆಂದರೆ ನೀರಿನ ಬೇಡಿಕೆಯಲ್ಲಿನ ಕಡಿತ. ಮಣ್ಣಿನಿಂದ ಬಾಷ್ಪೀಕರಣದ ನಷ್ಟವನ್ನು ಕಡಿಮೆ ಮಾಡುವ ತೋಟವನ್ನು ಬಳಸಿಕೊಂಡು ಸೂಕ್ತವಾದ ನೆಲದ ಹೊದಿಕೆಯೊಂದಿಗೆ ಸತ್ತ ಎಲೆಗಳು ಮತ್ತು ಮರದ ಚೆಕ್ಕೆಗಳ್ನು ಬಳಸಿ ಮಲ್ಚಿಂಗ್ ಮಾಡುವ ಮೂಲಕ ಇದನ್ನು ಸಾಧಿಸಲಾಗುತ್ತದೆ. ಈ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಾವು ನೀರನ್ನು ಸಂರಕ್ಷಿಸಬಹುದು ಮತ್ತು ಮಳೆ ನೀರು ಕೊಯ್ಲು ಉತ್ತಮಗೊಳಿಸಬಹುದು. ಪರಿಸರ ಸ್ನೇಹಿ ಮನೆಗಳನ್ನು ನಿರ್ಮಿಸಬಹುದು" ಎಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಈ ಪೋಸ್ಟ್ ಸ್ವಲ್ಪ ಉದ್ದವಾಗಿದ್ದರೂ, ಪಾಯಿಂಟ್ ಚಿಕ್ಕದಾದರೂ... ಬಹಳ ಮುಖ್ಯ.
— Chiranjeevi Konidela (@KChiruTweets) March 26, 2024
ನಮಗೆಲ್ಲರಿಗೂ ತಿಳಿದಿರುವಂತೆ, ನೀರು ಅತ್ಯಂತ ಅಮೂಲ್ಯವಾದ ವಸ್ತು, ನೀರಿನ ಕೊರತೆಯು ದೈನಂದಿನ ಜೀವನವನ್ನು ಕಷ್ಟಕರವಾಗಿಸುತ್ತದೆ. ಇಂದು ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾಗಬಹುದು. ನಾಳೆ ಎಲ್ಲಿ ಬೇಕಾದರೂ ಸಂಭವಿಸಬಹುದು.ಆದ್ದರಿಂದ ನೀರನ್ನು ಸಂರಕ್ಷಿಸಲು ಸಹಾಯ… pic.twitter.com/HwoWhSiZW5
ಸದ್ಯ ರಾಜ್ಯದಲ್ಲಿ ಮಳೆ ಇಲ್ಲದೆ ನೀರಿನ ಹಾಹಾಕಾರ ಉಂಟಾಗಿದೆ. ನಗರದಲ್ಲಿ ನೀರು ಪೋಲು ಮಾಡುವವರಿಗೆ, ಕುಡಿಯುವ ನೀರನ್ನು ಅನವಶ್ಯಕ ವಿಷಯಗಳಿಗೆ ಬಳಸುವವರಿಗೆ ದಂಡ ಹಾಕಲಾಗುತ್ತಿದೆ. ಹಲವು ಕಂಪನಿಗಳು ವರ್ಕ್ ಫ್ರಂ ಹೋಮ್ ಆಪ್ಷನ್ ನೀಡಲು ಮುಂದಾಗಿವೆ.












Click it and Unblock the Notifications