ವಿಷ್ಣು ಅಪ್ಪಾವ್ರ ವಿರೋಧಿಗಳು ಯಾರಂತ ಗೊತ್ತು: ಅಳಿಯ ಅನಿರುದ್ಧ ಸ್ಫೋಟಕ ಹೇಳಿಕೆ
ಕನ್ನಡ ಚಿತ್ರರಂಗದ ಹಿರಿಯನ ನಟ, ಸಾಹಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ತೆರವು ಮಾಡಿರುವ ವಿಚಾರ ಸಂಚಲನ ಸೃಷ್ಟಿಸಿದೆ. ವಿಷ್ಣು ಅವರ ಅಭಿಮಾನಿಗಳನ್ನು ಇದರ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಸ್ಮಾರಕವನ್ನು ನೆಲಸಮ ಮಾಡಿರುವುದನ್ನು ಖಂಡಿಸಿದ್ದಾರೆ. ಮುಂದೆ ಏನು ಮಾಡಬೇಕು ಎಂದು ಚರ್ಚೆ ಮಾಡಲು ನಟ ವಿಷ್ಣು ಅವರ ಅಳಿಯ, ನಟ ಅನಿರುದ್ಧ ಅವರು ವಿಡಿಯೋ ಮಾಡಿ ಸಭೆಗೆ ಆಹ್ವಾನಿಸಿದ್ದಾರೆ. ಇದೇ ವೇಳೆ 'ವಿಷ್ಣುವರ್ಧನ್ ಅವರ ವಿರೋಧಿಗಳು ಯಾರು ಎಂದು ಗೊತ್ತಿದೆ' ಎಂದೂ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸುದೀರ್ಘ ವಿಡಿಯೋ ಹಂಚಿಕೊಂಡಿರುವ ಅನಿರುದ್ಧ, 'ಇತ್ತೀಚೆಗೆ ಅಭಿಮಾನ್ ಸ್ಟುಡಿಯೋದಲ್ಲಿ ನಡೆದ ಘಟನೆ ಅತ್ಯಂತ ಖಂಡನೀಯ. ಅದರ ಬಗ್ಗೆ ಚರ್ಚೆ ಮಾಡಬೇಕು, ಇದಕ್ಕಾಗಿ ನಾವೆಲ್ಲರೂ ಸೇರೋಣ. ಇದೇ ಭಾನುವಾರ ಬೆಳಿಗ್ಗೆ 11 ಗಂಟೆಗೆ ಸಾಹಸಸಿಂಹ ವಿಷ್ಣುವರ್ಧನ್ ಅವರ ಜಯನಗರದ ನಿವಾಸಕ್ಕೆ ನಾವೆಲ್ಲರೂ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಬನ್ನಿ' ಎಂದು ಆಹ್ವಾನಿಸಿದ್ದಾರೆ.

'ಗಲಾಟೆ ಮಾಡುವವರು ಬರಬೇಡಿ'
'ಹಾಗೆಯೇ ಈ ಒಂದು ಚರ್ಚೆಗೆ ಬಂದು ಗಲಾಟೆ ಮಾಡಬೇಕು ಅಂತ ಉದ್ದೇಶದಿಂದ ಯಾರಾದರೂ ಬರೋ ತರ ಇದ್ರೆ ಅಂತವರು ದಯವಿಟ್ಟು ಬರಬೇಡಿ. ಈ ಹಿಂದೆಯೂ ನಾನು ಹಲವು ಬಾರಿ ಅಭಿಮಾನಿಗಳ ಜೊತೆ ಬೇರೆ ಬೇರೆ ಸಂದರ್ಭಗಳಲ್ಲಿ ಚರ್ಚೆ ಮಾಡಿದ್ದೇನೆ. ಇದು ಕೆಲವರಿಗೆ ಗೊತ್ತಿದೆ, ಕೆಲವರಿಗೆ ಗೊತ್ತಿಲ್ಲ. ಇದೇನು ಹೊಸದಾಗಿ ಕರೆಯುತ್ತಿದ್ದೀರಿ ಅಂತ ಭಾವಿಸಬೇಡಿ' ಎಂದಿದ್ದಾರೆ.
'ಅಭಿಮಾನಿಯ ಮುಖವಾಡ ಹಾಕಿದ್ದಾರೆ'
'ಈ ಹಿಂದೆ ವಿಷ್ಣುವರ್ಧನ್ ಅಪ್ಪಾವ್ರ ವಿರೋಧಿಗಳು ಯಾರು ಅಂತ ಬಹಳ ಸ್ಪಷ್ಟವಾಗಿ ಗೊತ್ತಾಗುತಿತ್ತು. ಆದರೆ ಇಂದಿನ ಪರಿಸ್ಥಿತಿ ಬದಲಾಗಿದೆ. ಕೆಲವರು ವಿಷ್ಣುವರ್ಧನ್ ಅವರ ಅಭಿಮಾನಿಗಳು ಎಂಬ ವೇಷ ಧರಿಸಿಕೊಂಡು, ಮುಖವಾಡ ಹಾಕಿಕೊಂಡು ನಮ್ಮ ಜೊತೆಯಲ್ಲೇ ಇದ್ದು, ನಮ್ಮ ನಿಮ್ಮ ನಡುವೆ ಬಿರುಕುಗಳನ್ನ ಮೂಡಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಅವರು ಅಪ್ಪಾವ್ರ ನಿಜವಾದ ಅಭಿಮಾನಿಗಳಲ್ಲ. ಅವರಿಂದ ದಯವಿಟ್ಟು ದೂರ ಇರಿ' ಎಂದು ಮನವಿ ಮಾಡಿದ್ದಾರೆ.
'ಅಪ್ಪಾವ್ರ ಕುಟುಂಬದವರ ಮೇಲೆ ಇಲ್ಲಸಲ್ಲದ ಆರೋಪಗಳನ್ನ ಹೊರಿಸಿದರೆ, ಏನೂ ವಿಷಯ ತಿಳಿಸದೆ ಆ ಕೆಲಸ ಮಾಡಿದರೆ ಅಪ್ಪಾವ್ರ ಆತ್ಮಕ್ಕೆ ಶಾಂತಿ ಸಿಗುತ್ತಾ? ಎಂದು ಕೇಳಿದ್ದಾರೆ. ಇದು ಗೊತ್ತಿದ್ರೂ ಆ ಕೆಲಸ ಮಾಡುತ್ತಿದ್ರೆ ಅವರು ನಿಜವಾದ ಅಭಿಮಾನಿಗಳಲ್ಲ. ದಯವಿಟ್ಟು ಇದನ್ನ ಅರ್ಥ ಮಾಡಿಕೊಳ್ಳಿ. ಅಪ್ಪಾವ್ರ ಮನೆಗೆ ದಯವಿಟ್ಟು ಬನ್ನಿ ಚರ್ಚೆ ಮಾಡೋಣ. ಇದು ಮಾಧ್ಯಮದವರಿಗೂ ನನ್ನ ಆಹ್ವಾನ' ಎಂದು ಅನಿರುದ್ಧ ಹೇಳಿದ್ದಾರೆ.












Click it and Unblock the Notifications