ಕನ್ನಡದ ಖ್ಯಾತ ನಟಿ ಲೀಲಾವತಿಗಾಗಿ ಸ್ವಂತ ಖರ್ಚಿನಲ್ಲಿ ಭ್ಯವ್ಯ ಸ್ಮಾರಕ ಕಟ್ಟಿಸಿದ ಪುತ್ರ ವಿನೋದ್ ರಾಜ್; ವೆಚ್ಚ, ವಿಶೇಷತೆ ಏನು?
Actress Leelavathi Memorial: ವಿನೋದ್ ರಾಜ್ ಅವರು ತಾಯಿ, ಕನ್ನಡದ ಖ್ಯಾತ ನಟಿ ಲೀಲಾವತಿಗಾಗಿ ಭವ್ಯವಾದ ಸ್ಮಾರಕವೊಂದನ್ನು ನಿರ್ಮಾಣ ಮಾಡಿದ್ದಾರೆ. ಇದರ ಉದ್ಘಾಟನೆ ಇಂದು (ಡಿಸೆಂಬರ್ 5) ನಡೆದಿದೆ. ಇದಕ್ಕೆ ವರನಟಿ ಡಾ.ಎಂ.ಲೀಲಾವತಿ ದೇಗುಲ ಎಂದು ಹೆಸರಿಟ್ಟಿದ್ದಾರೆ. ಹಾಗಾದರೆ ಇದನ್ನು ನಿರ್ಮಾಣ ಮಾಡಲಾಗಿದ ಹಾಗೂ ವಿಶೇಷತೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕನ್ನಡದ ಖ್ಯಾತ ನಟಿ ಲೀಲಾವತಿ ಇಹಲೋಕ ತ್ಯಜಿಸಿ ಡಿಸೆಂಬರ್ 8ಕ್ಕೆ ಒಂದು ವರ್ಷ ಆಗುತ್ತಿತ್ತು. ಈ ಹಿನ್ನೆಲೆ ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಅವರ ಭವ್ಯವಾದ ಸ್ಮಾರಕದ ನಿರ್ಮಾಣ ಕಾರ್ಯವು ಪೂರ್ಣಗೊಂಡಿದ್ದು, ಇಂದು (ಡಿಸೆಂಬರ್ 5) ಲೋಕಾರ್ಪಣೆ ಮಾಡಲಾಗಿದೆ.

ಕನ್ನಡದ ಖ್ಯಾತ ನಟಿ ಲೀಲಾವತಿ ಇಹಲೋಕ ತ್ಯಜಿಸಿ ಒಂದು ವರ್ಷ ಆಗುತ್ತಿದ್ದು. ಇದರ ಬೆನ್ನಲ್ಲೇ ಅವರ ಅಂತ್ಯಕ್ರಿಯೆಯಾದ ಸ್ಥಳದಲ್ಲಿ ಭವ್ಯ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ವಿನೋದ್ ರಾಜ್ ಅವರು ಸುಮಾರು 1 ಕೋಟಿ ರೂಪಾಯಿ ಸ್ವಂತ ಖರ್ಚಿನಲ್ಲಿ ಈ ಭವ್ಯವಾದ ಸ್ಮಾರಕವನ್ನು ನಿರ್ಮಾಣ ಮಾಡಿಸಿದ್ದಾರೆ. ಈ ಸ್ಮಾರಕಕ್ಕೆ ಲೀಲಾವತಿ ಅವರ ಮಗ ವಿನೋದ್ ರಾಜ್ ತಾಯಿಯೇ ದೇವರು ವರನಟಿ ಡಾ.ಎಂ.ಲೀಲಾವತಿ ದೇಗುಲ ಎಂದು ಹೆಸರಿಟ್ಟಿದ್ದಾರೆ.
ಈ ಸ್ಮಾರಕವನ್ನು ಸಂಪೂರ್ಣವಾಗಿ ಅಮೃತ ಶಿಲೆ ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ. ಸುತ್ತಲೂ ಬೃಹತ್ ಕಲ್ಲಿನ ಕಂಬಗಳಿಂದ ಮಂಟಪ ನಿರ್ಮಾಣ ಮಾಡಲಾಗಿದೆ. ಇಂದು ಸಚಿವ ಕೆ.ಎಚ್.ಮುನಿಯಪ್ಪ ಅವರು ಸ್ಮಾರಕವನ್ನು ಉದ್ಘಾಟನೆ ಮಾಡಿದ್ದಾರೆ.
ತಾಯಿ ಆಸೆಯಂತೆಯೇ ಸೋಲದೇವನಹಳ್ಳಿ ಭಾಗದ ಜನರಿಗೆ ಡಾ.ಲೀಲಾವತಿ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಜೊತೆಗೆ ಜಾನುವಾರುಗಳಿಗೆ ಪಶು ಆಸ್ಪತ್ರೆಯನ್ನು ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿದ್ದರು. ಸೋಲದೇವನಹಳ್ಳಿ ಭಾಗದ ರೈತರು, ಕಲಾವಿದರ ಅನೇಕ ಸಂಕಷ್ಟಗಳಿಗೆ ಧ್ವನಿಯಾಗಿ ಕೆಲಸ ಮಾಡುವ ಜೊತೆಗೆ ಸೋಲದೇವನಹಳ್ಳಿಯಲ್ಲಿ ತಾಯಿ ಲೀಲಾವತಿ ದೇಗುಲ ನಿರ್ಮಿಸಿ ಗಮನ ಸೆಳೆದಿದ್ದಾರೆ.
ಲೀಲಾವತಿ ಅವರು ವಯೋಸಹಜ ಅನಾರೋಗ್ಯ ಹಿನ್ನೆಲೆ ನಿಧನರಾಗಿದ್ದರು.
85 ವರ್ಷದ ನಟಿ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಪುತ್ರ ವಿನೋದ್ ರಾಜ್ ಅವರನ್ನು ಲೀಲಾವತಿ ಅಗಲಿದ್ದರು. ಈ ವೇಳೆ ಇಡೀ ಚಿತ್ರರಂರ ಅವರಿಗೆ ಸಂತಾಪ ಸೂಚಿಸಿತ್ತು.
ಚಿತ್ರರಂಗಕ್ಕೆ ಲೀಲಾವತಿ ಸೇವೆ ಏನು?: 1938ರಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಜನಿಸಿದ್ದ ಲೀಲಾವತಿ ಅವರು 50 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು. ಕನ್ನಡ ದಿಗ್ಗಜ ನಟರಾಟ ರಾಜ್ಕುಮಾರ್, ವಿಷ್ಣುವರ್ಧನ್ ಮುಂತಾದವರ ಜೊತೆ ಅಭಿನಯಿಸಿ ಅವರು ಸೈ ಎನಿಸಿಕೊಂಡಿದ್ದರು. ಕನ್ನಡ, ತಮಿಳು, ತೆಲುಗು ಸೇರಿದಂತೆ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.
ಲೀಲಾವತಿ ಅವರು ತುಂಬಿದ ಕೊಡ, ಮಹಾತ್ಯಾಗ, ಭಕ್ತ ಕುಂಬಾರ, ಸಿಪಾಯಿ ರಾಮು, ಗೆಜ್ಜೆ ಪೂಜೆ ಚಿತ್ರಗಳಲ್ಲಿನ ಮನೋಜ್ಞ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದು ಕನ್ನಡದ ಕಂದ ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ದೊರೆತಿತ್ತು. ಜೀವಮಾನ ಸಾಧನೆಗಾಗಿ 1999ರಲ್ಲಿ ಲೀಲಾವತಿ ಅವರು ಡಾ.ರಾಜ್ಕುಮಾರ್ ಪ್ರಶಸ್ತಿ ಪಡೆದರು. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿತ್ತು.
1953ರಲ್ಲಿ ಬಿಡುಗಡೆಯಾಗಿದ್ದ ಚಂಚಲ ಕುಮಾರಿ ಸಿನಿಮಾನದ ಮೂಲಕ ಲೀಲಾವತಿ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಕನ್ನಡ, ತೆಲುಗು, ಮಲಯಾಳಂ, ತುಳು ಮುಂತಾದ ಭಾಷೆಗಳಲ್ಲಿ ನಟಿಸಿ ಲೀಲಾವತಿ ಮಿಂಚಿದ್ದರು. 'ಮದುವೆ ಮಾಡಿನೋಡು' ಮತ್ತು 'ಸಂತ ತುಕಾರಾಮ್' ಸಿನಿಮಾಗಳಿಗೆ ಲೀಲಾವತಿ ಅವರು 2 ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.












Click it and Unblock the Notifications