ಚಿಕ್ಕಪ್ಪ ಹೋದ ಮೇಲೆ ಗಣೇಶ ಕೂರಿಸುತ್ತಿಲ್ಲ: ಅಪ್ಪು ನೆನೆದು ವಿನಯ್ ರಾಜ್‌ಕುಮಾರ್ ಭಾವುಕ!
ಗಣೇಶ ಚತುರ್ಥಿ ಅಂದ್ರೆ ಮನೆಯಲ್ಲಿ ಹಬ್ಬದೂಟಕ್ಕಿಂತ ಏರಿಯಾಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆಯೇ ಸದ್ದು ಮಾಡುತ್ತೆ. ಎಲ್ರೂ ನಮ್ ಏರಿಯಾ ಗಣೇಶ ಅಂತ ಸಂಭ್ರಮದಿಂದ ಗುಂಪು ಕಟ್ಟಿಕೊಂಡು ಗಣೇಶನ ಮೂರ್ತಿ ಕೂರಿಸೋದು ವಾಡಿಕೆ. ಈಗೆಲ್ಲ ಗಲ್ಲಿ ಗಲ್ಲಿಯಲ್ಲೂ ಗಣೇಶ ಕೂತಿರುತ್ತಾನೆ. ನಟ ಪುನೀತ್ ರಾಜ್‌ಕುಮಾರ್ ಅವರು ಕೂಡ ಬಾಲ್ಯದಿಂದಲೂ ಪ್ರತಿ ವರ್ಷ ಅದ್ಧೂರಿಯಾಗಿ ಗಣೇಶ ಕೂರಿಸುತ್ತಿದ್ದರು. ವಿಸರ್ಜನೆ ವೇಳೆ ಸಖತ್ ಸ್ಟೆಪ್ ಕೂಡ ಹಾಕುತ್ತಿದ್ದರು. ಆದರೆ ಪುನೀತ್ ಅವರ ನಿಧನದ ಬಳಿಕ ಗಣೇಶ ಕೂರಿಸುತ್ತಿಲ್ಲ ಎಂಬ ಬೇಸರದ ವಿಚಾರವನ್ನು ನಟ ವಿನಯ್ ರಾಜ್‌ಕುಮಾರ್ ಹೇಳಿದ್ದಾರೆ.
'ಸಾಮಾನ್ಯವಾಗಿ ತಂದೆ ತಾಯಿ ಅವರ ಮಗನನ್ನೇ ಗಣೇಶ ಅಂತಾರೆ. ಬಾಲ್ಯದಿಂದಲೂ ನಮ್ಮ ಮನೆಯಲ್ಲಿ ಗಣೇಶ ಕೂರಿಸುತ್ತಿದ್ವಿ. ಇಡೀ ಕುಟುಂಬ ಸೇರಿ ಸಂಭ್ರಮದಿಂದ ಹಬ್ಬ ಆಚರಿಸುತ್ತಿದ್ವಿ. ಒಟ್ಟಿಗೆ ಕುಳಿತು ಊಟ ಮಾಡುವುದು, ಹಳೆಯ ನೆನಪುಗಳನ್ನ ಮಾತನಾಡುವುದೆಲ್ಲ ಖುಷಿಯಾದ ವಾತಾವರಣ ಎಂದಿದ್ದಾರೆ' ವಿನಯ್.
'ನಾವು ಗಣೇಶನನ್ನ ಕೂರಿಸಲು ಚಂದಾ ವಸೂಲಿ ಮಾಡುತ್ತಿರಲಿಲ್ಲ. ಮನೆಯಲ್ಲೇ ಕೂರಿಸುತ್ತಿದ್ದ ಕಾರಣ ಕಲೆಕ್ಷನ್ ಎಲ್ಲ ಇರಲಿಲ್ಲ. ಆದರೆ ತುಂಬಾ ಜನ ಬಂದು ಈಗಲೂ ಆ ರೀತಿ ಹಣ ಕೇಳ್ತಾರೆ. ಈಗಿನ ಮಕ್ಕಳೂ ಚಿಕ್ಕ ಟಿಕೆಟ್ ಹಿಡಿದು ಹಣ ಸಂಗ್ರಹಕ್ಕೆ ಬರ್ತಾರೆ. ಅದನ್ನ ನೋಡಿದ್ರೆ ಬಾಲ್ಯ ನೆನಪಿಗೆ ಬರುತ್ತೆ. ಅದು ಇಂದಿಗೂ ಚೇಂಜ್ ಆಗಿಲ್ಲ. ಪ್ರತಿ ವರ್ಷವೂ ಹುಡುಗರು ಬರ್ತಾರೆ, ಅದು ನನಗೆ ತುಂಬಾ ಖುಷಿ ಕೊಡುತ್ತೆ' ಎಂದಿದ್ದಾರೆ.

'ಮನೆ ಮುಂದೆ ಸ್ಪೆಷಲ್ ಗಣೇಶ'
'ನಮ್ಮ ಮನೆಯ ಮುಂದೆಯೇ ಒಂದು ಗಣೇಶನ ಪುಟ್ಟ ವಿಗ್ರಹ ಇದೆ. ಕುಟುಂಬದ ಪ್ರತಿಯೊಬ್ಬರೂ ಕೂಡ ಮನೆಯಿಂದ ಹೊರಡುವಾಗ, ಹೊರಗಿನಿಂದ ಬಂದಾಗ ನಮಸ್ಕಾರ ಹಾಕುತ್ತೇವೆ. ನಮ್ಮ ಮನೆಯವರು ಮಾತ್ರವಲ್ಲ, ಇಡೀ ನಮ್ ಏರಿಯಾದಲ್ಲಿ ವಾಕಿಂಗ್‌ಗೆ ಬರುವವರು ಕೂಡ ನಮಸ್ಕಾರ ಮಾಡಿ ಮುಂದೆ ಹೋಗ್ತಾರೆ. ಅದು ನಮ್ಮ ಇಡೀ ಏರಿಯಾಗೆ ಇಷ್ಟವಾದ ಗಣೇಶ ಎಂದೇ ಹೇಳಬಹುದು. ನಮ್ಮ ತಾತ ಹಾಗೂ ಚಿಕ್ಕಪ್ಪನಿಗೆ ಆ ಗಣೇಶ ಅಂದ್ರೆ ತುಂಬಾ ಇಷ್ಟ. ಆ ಜಾಗದಲ್ಲಿ ತುಂಬಾ ಹೆಚ್ಚು ಸಮಯ ಕಳೆದಿದ್ದಾರೆ. ಗಣೇಶ ಹಬ್ಬದಂದು ತುಂಬಾ ಚೆನ್ನಾಗಿ ಅಲಂಕಾರ ಮಾಡಿಸುತ್ತಿದ್ರು. ಅದನ್ನ ನಾನು ಚಿಕ್ಕವಯಸ್ಸಿನಿಂದಲೂ ನೋಡಿಕೊಂಡು ಬಂದಿದ್ದೀನಿ. ಅವರಿಗೆ ಆ ಗಣೇಶ ಅಂದ್ರೆ ತುಂಬಾ ಇಷ್ಟ' ಎಂದು ನೆನೆದಿದ್ದಾರೆ.
ಚಿಕ್ಕಪ್ಪ ಇದ್ದಾಗ..!
'ಚಿಕ್ಕವಯಸ್ಸಿನಲ್ಲಿ ಚಿಕ್ಕಪ್ಪ ಕೂಡ ಏರಿಯಾದಲ್ಲಿ ಗಣೇಶ ಕೂರಿಸುತ್ತಿದ್ದರು. ಅವರು ತನ್ನ ಸ್ನೇಹಿತರೆಲ್ಲ ಸೇರಿ ಗ್ರ್ಯಾಂಡ್ ಆಗಿ ಹಬ್ಬ ಆಚರಿಸುತ್ತಿದ್ದರು. ಬಳಿಕ ನಮ್ಮ ಏರಿಯಾದ ಹುಡುಗರು ಸೇರಿಕೊಂಡು ಗಣೇಶ ಕೂರಿಸುತ್ತಿದ್ರು, ವಿಸರ್ಜನೆ ವೇಳೆ ನಮ್ಮ ಮನೆ ಮುಂದೆ ಮೆರವಣಿಗೆ ಬರ್ತಿತ್ತು. ಚಿಕ್ಕಪ್ಪ, ಅಪ್ಪ, ಗುರು ನಾನು ಎಲ್ಲರೂ ಪೂಜೆ ಮಾಡಿಸುತ್ತಿದ್ವಿ. ಬಳಿಕ ಡ್ಯಾನ್ಸ್ ಮಾಡಿ ಗಣೇಶನ್ನ ಕಳಿಸುತ್ತಿದ್ವಿ, ಪ್ರತಿ ವರ್ಷವೂ ಇದೇ ನಡೀತಿತ್ತು. ಆದರೆ ಚಿಕ್ಕಪ್ಪ ಹೋದ ಮೇಲೆ ಆ ಹುಡುಗರು ಕೂಡ ಗಣೇಶ ಕೂರಿಸುವುದು ನಿಲ್ಲಿಸಿದ್ರು' ಎಂದು ವಿನಯ್ ಹೇಳಿದ್ದಾರೆ.












Click it and Unblock the Notifications