"ನಿಮ್ಮನೆ ಹೆಣ್ಣಿಗೆ ಅನ್ಯಾಯ ಆದಾಗ.." ಯುವ ಪತ್ನಿ ಪೋಸ್ಟ್ ಬಗ್ಗೆ ವಿನಯ್ ರಾಜ್‌ಕುಮಾರ್ ಹೇಳಿದ್ದೇನು?
ಸೋಷಿಯಲ್ ಮೀಡಿಯಾದಲ್ಲಿ ತಮಗೆ ಅಶ್ಲೀಲ ಕಾಮೆಂಟ್ ಮಾಡಿದ್ದಕ್ಕೆ ನಟಿ ರಮ್ಯಾ ಸಿಡಿದಿದ್ದರು. ಪೊಲೀಸರಿಗೆ ದೂರು ನೀಡುವ ಮೂಲಕ ಕಾಮೆಂಟ್ ಮಾಡುವವರಿಗೆ ಬಿಸಿ ಮುಟ್ಟಿಸಿದ್ದರು. ಆಗ ರಮ್ಯಾ ಅವರನ್ನ ಬೆಂಬಲಿಸಿ, ನಟ ಶಿವರಾಜ್‌ಕುಮಾರ್ ಹಾಗೂ ವಿನಯ್ ರಾಜ್‌ಕುಮಾರ್ ಪೋಸ್ಟ್ ಹಂಚಿಕೊಂಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಯುವರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ, 'ತಮ್ಮ ಕುಟುಂಬದಲ್ಲೇ ಇದೆಲ್ಲ ನಡೆಯುವಾಗ ಮಾತನಾಡದೆ ಸುಮ್ಮನೇ ಇದ್ರಲ್ಲ, ಆವಾಗ ಎಲ್ಲ ನಿದ್ರೆ ಮಾಡ್ತಾ ಇದ್ರಾ?' ಎಂದು ನೇರವಾಗಿ ಕೇಳಿದ್ದರು. ಈ ಇನ್‌ಸ್ಟಾಗ್ರಾಂ ಪೋಸ್ಟ್ ವೈರಲ್ ಕೂಡ ಆಗಿತ್ತು. ಈ ಬಗ್ಗೆ ವಿನಯ್ ರಾಜ್‌ಕುಮಾರ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ಕೆಲ ದರ್ಶನ್ ಫ್ಯಾನ್ಸ್ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕೆ ನಟಿ ರಮ್ಯಾ ಅವರನ್ನು ಬೆಂಬಲಿಸಿ ವಿನಯ್ ರಾಜ್‌ಕುಮಾರ್ ಪೋಸ್ಟ್ ಮಾಡಿದ್ದರು. ಯಾವುದೇ ರೀತಿಯ ಕಿರುಕುಳದ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯ, ಹೆಣ್ಣುಮಕ್ಕಳನ್ನ ಕೀಳಾಗಿ ಕಾಣುವ ಪ್ರಪಂಚ, ಬೆಳವಣಿಗೆಗೂ ಮುನ್ನವೇ ನಾಶ ಆಗಬೇಕುʼ ಎಂದು ಬರೆದುಕೊಂಡಿದ್ದರು. ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ಕೂಡ ರಮ್ಯಾ ಪರ ಪೋಸ್ಟ್ ಮಾಡಿ ಬೆಂಬಲ ಸೂಚಿಸಿದ್ದರು.

ವಿನಯ್ ಹಾಗೂ ಶಿವಣ್ಣನ ಪೋಸ್ಟ್‌ಗೆ ಟ್ಯಾಗ್ ಮಾಡಿದ್ದ ಯುವ ಪತ್ನಿ ಶ್ರೀದೇವಿ, 'ಮಾಧ್ಯಮಗಳಲ್ಲಿ ಮಹಿಳೆಯರನ್ನ ಅವಮಾನಿಸುವುದರ ವಿರುದ್ಧ ಮಾತನಾಡುವುದು ನೋಡುವಾಗ ತಮ್ಮ ಕುಟುಂಬದಲ್ಲೇ ಇದೆಲ್ಲ ನಡೆಯುವಾಗ ಮಾತಾಡದೇ ಸುಮ್ಮನೇ ಇದ್ರಲ್ಲ? ಆವಾಗ ನಿದ್ರೆ ಮಾಡ್ತಾ ಇದ್ರಾ ಎಲ್ಲ' ಎಂದು ಖಾರವಾಗಿ ಬರೆದುಕೊಂಡಿದ್ದರು. ಇವರೆಲ್ಲ "ಬೂಟಾಟಿಕೆ ವ್ಯಕ್ತಿಗಳು" ಮತ್ತು "ಡ್ರಾಮಾ" ಎಂಬ ಹ್ಯಾಶ್‌ಟ್ಯಾಗ್ ಕೂಡ ಶ್ರೀದೇವಿ ಹಾಕಿದ್ದರು.
'ಸನ್ನಿವೇಷ ಹಾಗಿತ್ತು'
ಆಗ ರಮ್ಯಾ ಪರ ನಿಂತಿದ್ದ ವಿನಯ್ ಹಾಗೂ ಶಿವರಾಜ್‌ಕುಮಾರ್ ಅವರಿಗೆ ದರ್ಶನ್ ಅಭಿಮಾನಿಗಳು ಶ್ರೀದೇವಿ ಪೋಸ್ಟ್ ಉಲ್ಲೇಖಿಸಿ ಗೇಲಿ ಮಾಡಿದ್ದರು. ಮೊದಲು ನಿಮ್ಮ ಮನೆಯ ಹೆಣ್ಣುಮಗಳಿಗೆ ನ್ಯಾಯ ಕೊಡಿಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ತಿರುಗೇಟು ನೀಡಿದ್ದರು. ಈ ಬಗ್ಗೆ ವಿನಯ್ ರಾಜ್‌ಕುಮಾರ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. 'ನಾನು ಆ ಸಂದರ್ಭಕ್ಕೆ ತಕ್ಕಂತೆ ಪೋಸ್ಟ್ ಮಾಡಿದ್ದೆ. ಅದೇ ನನ್ನ ಉತ್ತರ, ಅದರ ಮೇಲೆ ಬೇರೆ ಏನೂ ಇಲ್ಲ' ಎಂದು ವಿನಯ್ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ.
ಮೈಸೂರು ಮೂಲದ ಶ್ರೀದೇವಿ ಅವರನ್ನ ಯುವ ರಾಜ್‌ಕುಮಾರ್ 2019ರಲ್ಲಿ ಪ್ರೀತಿಸಿ ಮದುವೆ ಆಗಿದ್ದರು. ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಅವರಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಇಬ್ಬರೂ ತಮ್ಮ ಮೇಲೆ ಆರೋಪಗಳನ್ನ ಮಾಡಿದ್ದರು. ನನ್ನ ಪತಿಗೆ ನಟಿಯೊಂದಿಗೆ ಸಂಬಂಧ ಇದೆ ಎಂದು ಶ್ರೀದೇವಿ ಅವರು ಗಂಭೀರ ಆರೋಪ ಮಾಡಿದ್ದರು. ಸದ್ಯ ಅವರು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಹಲವು ಕಾರಣಗಳಿಂದಾಗಿ ರಾಜ್‌ಕುಟುಂಬದಿಂದ ದೂರ ಉಳಿದಿದ್ದಾರೆ. ಈ ಜೋಡಿಯ ವಿಚ್ಛೇದನ ವಿಚಾರವು ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತು.












Click it and Unblock the Notifications