ನಟ ವಿಜಯ್ ಸೂರ್ಯ ಡಿವೋರ್ಸ್‌ಗೆ ಮುಂದಾಗಿದ್ದು ನಿಜಾನಾ? ಸಂದರ್ಶನದಲ್ಲಿ ಹೇಳಿದ್ದೇನು?
"ಅಗ್ನಿಸಾಕ್ಷಿ" ಸೀರಿಯಲ್ ಮೂಲಕ ಮನೆಮಾತಾದ ನಟ ವಿಜಯ್ ಸೂರ್ಯ ದೂರದ ಸಂಬಂಧಿ ಚೈತ್ರಾ ಅವರನ್ನು 2019ರಲ್ಲಿ ವಿವಾಹವಾಗಿದ್ದರು. ಇವರನ್ನು ಡಿಂಪಲ್ ಕಪಲ್ ಎಂದು ಕರ್ನಾಟಕ ಕರೆದಿತ್ತು. ಆದರೆ ಇತ್ತೀಚೆಗೆ ವಿಜಯ್ ಸೂರ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪತ್ನಿ ಹಾಗೂ ಮಗುವಿನ ಜೊತೆಗಿದ್ದ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿ ಶಾಕ್ ಕೊಟ್ಟಿದ್ದರು. ಇದರ ಬೆನ್ನಲ್ಲೇ ವಿಜಯ್-ಚೈತ್ರಾ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಡಿವೋರ್ಸ್‌ಗೆ ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ನಟ ಇತ್ತೀಚಿನ ಸಂದರ್ಶನದಲ್ಲಿ ಮೌನ ಮುರಿದಿದ್ದಾರೆ.
'ಇಲ್ಲಿ ಸಿನಿಮಾ ವಿಚಾರಗಳಿಗಿಂತ ಪರ್ಸನಲ್ ವಿಚಾರಗಳು ಹೆಚ್ಚು ಗಮನ ಸೆಳೆಯುತ್ತವೆ. ಕೆಲವೊಮ್ಮೆ ಕಡಿಮೆ ಫಾಲೋವರ್ಸ್ ಇರೋ ಅಕೌಂಟ್‌ನಿಂದಲೂ ವೈರಲ್ ವಿಚಾರಗಳು ಹೊರಬರುತ್ತವೆ. ಮಿಲಿಯನ್‌ಗಟ್ಟಲೆ ಫಾಲೋವರ್ಸ್ ಇದ್ದವರ ಅಕೌಂಟಿಂದ ಯಾವುದೇ ಅಟ್ರಾಕ್ಷನ್ ಸಿಗದೆಯೂ ಇರಬಹುದು' ಎಂದು ವಿಜಯ್ ಸೂರ್ಯ ಹೇಳಿದ್ದಾರೆ. ವಿಜಯ್ ಸೂರ್ಯ ಅವರು ಸೋಷಿಯಲ್ ಮೀಡಿಯಾದಿಂದ ದೂರ ಉಳಿಯಲು ಇತ್ತೀಚಿನ ಡಿವೋರ್ಸ್ ವದಂತಿ ಕಾರಣ ಎಂದು ಹೇಳಲಾಗುತ್ತಿತ್ತು.

'ಈ ಕಾರಣಕ್ಕೆ ಫೋಟೋ ಡಿಲೀಟ್ ಮಾಡಿದೆ'
ಈ ಬಗ್ಗೆಯೂ ಮೌನ ಮುರಿದಿರುವ ಅವರು, 'ಇತ್ತೀಚೆಗೆ ಎಐ ಟೆಕ್ನಾಲಜಿ ದುರ್ಬಳಕೆಯಾಗುತ್ತಿದೆ. ಇದೇ ಕಾರಣಕ್ಕೆ ಮಗು ಹಾಗೂ ಫ್ಯಾಮಿಲಿಯ ಎಲ್ಲ ಫೋಟೋಗಳನ್ನ ಡಿಲೀಟ್ ಮಾಡಿದೆ. ಫ್ಯಾಮಿಲಿ ವಿಚಾರಗಳು, ಫೋಟೋಸ್ ಬೇಡ ಎಂಬ ಕಾರಣಕ್ಕೆ ಡಿಲೀಟ್ ಮಾಡಿದೆ. ನಾನು ನನ್ನ ತಂದೆ, ತಾಯಿ, ಹೆಂಡತಿ ಫ್ಯಾಮಿಲಿ ಎಲ್ಲರ ಜೊತೆಗಿದ್ದ ಫೋಟೋಗಳನ್ನ ಡಿಲೀಟ್ ಮಾಡಿದೆ. ಆದರೆ ಜನರ ಕಣ್ಣಿಗೆ ಕೇವಲ ನನ್ನ ಹೆಂಡತಿ ಫೋಟೋ ಡಿಲೀಟ್ ಮಾಡಿದ್ದು ಮಾತ್ರ ಕಾಣಿಸಿತು' ಎಂದಿದ್ದಾರೆ.
'ಈಗೆಲ್ಲ ದೊಡ್ಡ ಸ್ಟಾರ್‌ಗಳ ಡಿವೋರ್ಸ್ ಆದ್ರೆ ತಮ್ಮ ಪತಿ, ಪತ್ನಿಯ ಫೋಟೋಗಳನ್ನ ಡಿಲೀಟ್ ಮಾಡ್ತಾರೆ. ನಾನು ಫೋಟೋ ಡಿಲೀಟ್ ಮಾಡಿದಾಗಲೂ ಜನ ಅದೇ ರೀತಿ ಕಲ್ಪಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ವಿಚಾರಗಳಿಗಿಂತ ನೆಗೆಟಿವ್ ವಿಚಾರಗಳೇ ಹೆಚ್ಚಾಗಿ ಬೇಗ ವೈರಲ್ ಆಗುತ್ತೆ. ಈಗ ನನ್ನ ಸಿನಿಮಾ ವಿಚಾರ ಏನಾದ್ರೂ ಹಾಕಿದ್ರೆ ವೈರಲ್ ಆಗಲ್ಲ, ಆದರೆ ಈ ರೀತಿ ಟ್ವಿಸ್ಟ್ ಏನಾದ್ರೂ ಇದ್ರೆ ವೈರಲ್ ಆಗುತ್ತೆ. ಫೋಟೋಸ್ ಡಿಲೀಟ್ ಮಾಡಿದ ಮೊದಲ ದಿನವೇ ಈ ರೀತಿಯ ಗಾಸಿಪ್ ವಿಡಿಯೋವೊಂದು ನನಗೆ ಬಂತು, ಅದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ನಾನು ಯಾವುದಕ್ಕೂ ಕ್ಲಾರಿಟಿ ಕೊಡೋದಕ್ಕೆ ಹೋಗಲ್ಲ' ಎಂದಿದ್ದಾರೆ.
'ಯೋಚನೆ ಮಾಡಿದ್ರೆ ಒಳ್ಳೇದು'
'ನನ್ನ ತಂದೆ ತಾಯಿಗೆ, ಅತ್ತೆ ಮಾವನಿಗೆ ವಿಷಯ ಗೊತ್ತಿರಬೇಕಷ್ಟೇ. ನನ್ನ ಸರ್ಕಲ್‌ನಲ್ಲಿರುವ ವ್ಯಕ್ತಿಗಳಿಗೆ ಮಾತ್ರ ಗೊತ್ತಿರಬೇಕು. ಅವರಿಗೆ ನಾನು ಕ್ಲಾರಿಟಿ ಕೊಡುವುದು ನನ್ನ ಜವಾಬ್ದಾರಿ. ಇನ್ನು ನನ್ನ ಫ್ಯಾನ್ಸ್‌ಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ. ಬೇರೆಯವರಿಗೆ ಇಂತಹ ಗಾಸಿಪ್ ವಿಡಿಯೋ ಮಾಡಬೇಕು, ಲೈಕ್ಸ್, ವೀವ್ಸ್ ಬರಬೇಕು. ಇದರಲ್ಲಿ ಯಾವುದು ಸರಿ ತಪ್ಪು ಅನ್ನೋದು ನನಗೆ ಗೊತ್ತಿಲ್ಲ. ಒಬ್ಬರ ಫ್ಯಾಮಿಲಿ ಬಗ್ಗೆ ಇಂತಹ ವಿಡಿಯೋ ಮಾಡಿದಾಗ, ನಿಮಗೂ ಒಂದು ಫ್ಯಾಮಿಲಿ, ಸಂಸಾರ ಇರುತ್ತೆ. ಈ ತರ ವಿಡಿಯೋ ಬಂದ್ರೆ ಯಾವ ರೀತಿ ಪರಿಣಾಮ ಬೀರುತ್ತೆ? ಎನ್ನುವುದರ ಬಗ್ಗೆ ಯೋಚನೆ ಮಾಡಿ ವಿಡಿಯೋ ಮಾಡಿ' ಎಂದು ಬುದ್ಧಿ ಹೇಳಿದ್ದಾರೆ.

'ಇದರಿಂದ ನನಗೂ, ನನ್ನ ಹೆಂಡತಿಗೆ ಯಾವುದೇ ಎಫೆಕ್ಟ್ ಆಗೋದಿಲ್ಲ, ಅದನ್ನ ನೋಡಿ ನಾವಿಬ್ಬರೂ ಸಿಕ್ಕಾಪಟ್ಟೆ ನಕ್ಕಿದ್ದೀವಿ. ನಂತರ ಸುಮಾರು ವಿಡಿಯೋಗಳು ಬಂದವು. ಅಂತದ್ದಕ್ಕೆ ನಾವು ಪ್ರಾಮುಖ್ಯತೆ ಕೊಟ್ಟರೆ ನಾವೇ ಅದನ್ನ ಬೆಳೆಸಿದಂತಾಗುತ್ತೆ. ನಂತರ ವೈಷ್ಣವಿ ಗೌಡ ಮದುವೆ ನಾವಿಬ್ಬರೂ ಒಟ್ಟಿಗೆ ಹೋಗಿದ್ವಿ. ಅದನ್ನ ನೋಡಿ ಎಲ್ಲರೂ ಸುಮ್ಮನಾದ್ರೂ ಅನಿಸುತ್ತೆ' ಎಂದು ನಗುತ್ತಾ ಹೇಳಿದ್ದಾರೆ ವಿಜಯ್ ಸೂರ್ಯ.












Click it and Unblock the Notifications