ವಿಷ್ಣು ಸರ್ ಇಂಡಸ್ಟ್ರಿ ಬೆಳೆಸಿದವರು, ಹಿರಿಯರು ಸ್ಮಾರಕದ ಸಮಸ್ಯೆ ಬಗೆಹರಿಸಿ: ವಿಜಯ್ ರಾಘವೇಂದ್ರ
ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ವಿಷ್ಣುವರ್ಧನ್ ಸ್ಮಾರಕ ನೆಲಸಮ ಮಾಡಿದ ವಿಚಾರವಾಗಿ ಹಲವು ನಟರು ಖಂಡನೆ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್, ಧ್ರುವ ಸರ್ಜಾ, ರಿಷಬ್ ಶೆಟ್ಟಿ ಅವರು ಅಭಿಮಾನಿಗಳ ಪರ ನಿಲ್ಲುವುದಾಗಿ ಹೇಳಿದ್ದಾರೆ. ಸುದೀಪ್ ಅವರು ಸ್ಮಾರಕ ನಿರ್ಮಾಣಕ್ಕೆ ಜಾಗ ಕೂಡ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ನಟ ವಿಜಯ ರಾಘವೇಂದ್ರ ಕೂಡ ಸ್ಮಾರಕ ತೆರವು ಮಾಡಿದ ವಿಚಾರವಾಗಿ ಬೇಸರ ಹಂಚಿಕೊಂಡಿದ್ದಾರೆ. ಈ ವಿಚಾರವಾಗಿ ಚಿತ್ರರಂಗದ ಹಿರಿಯರೆಲ್ಲರೂ ಮುಂದೆ ಬರಬೇಕು ಎಂದು ಕರೆ ನೀಡಿದ್ದಾರೆ.
ರಿಪ್ಪನ್ ಸ್ವಾಮಿ ಸಿನಿಮಾದ ಕಾರ್ಯಕ್ರಮದಲ್ಲಿ ನಟ ವಿಜಯ ರಾಘವೇಂದ್ರ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. 'ವಿಷ್ಣುವರ್ಧನ್ ಅವರಂತಹ ಮೇರುನಟನ ಸಮಾಧಿಯನ್ನ ರಾತ್ರೋರಾತ್ರಿ ನೆಲಸಮ ಮಾಡಿರುವುದು ಎಲ್ಲರಿಗೂ ಬೇಸರ ತರಿಸಿದೆ. ಈ ಘಟನೆಯಂತೂ ಆಗೋಗಿದೆ. ನಾವೆಲ್ಲ ಮುಂದೆ ಏನು ಮಾಡಬೇಕು? ಈ ವಿಚಾರವಾಗಿ ಕಾನೂನಾತ್ಮಕವಾಗಿ ಬಹಳ ಜವಾಬ್ದಾರಿಯನ್ನ ಹೊತ್ತಿರುವವರು ಹಾಗೂ ಒಳ್ಳೆಯ ಮನಸ್ಸುಳ್ಳವರು ತಮ್ಮ ಪ್ರಯತ್ನ ಮಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.

'ವಿಷ್ಣು ಸರ್ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನ ಬೆಳಸಿದವರು. ಅಂತಹ ಚಿತ್ರರಂಗಕ್ಕೆ ಅಪಾರ ಕೊಡುಗೆ ಕೊಟ್ಟಿರುವ ಹಿರಿಯ ಕಲಾವಿದರಿಗೇ ಈ ರೀತಿಯಾದಾಗ ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ. ಅಪಾರ ಅಭಿಮಾನಿಗಳನ್ನ ಹೊಂದಿರುವ ವಿಷ್ಣುವರ್ಧನ್ ಅವರು ಜನರ ಆರಾಧ್ಯದೈವ ಕೂಡ. ಈ ಘಟನೆ ನಿರೀಕ್ಷಿಸಿರಲಿಲ್ಲ, ಆಗೋಗಿದೆ. ಈಗ ನಮ್ಮ ಹಿರಿಯರೆಲ್ಲರೂ ಸೇರಿ ವಿಚಾರವಾಗಿ ಮುಂದೆ ಬರಬೇಕು, ಈ ಸಮಸ್ಯೆಯನ್ನ ಬಗೆಹರಿಸುವ ಕೆಲಸ ಮಾಡಬೇಕು' ಎಂದು ಕೇಳಿಕೊಂಡಿದ್ದಾರೆ.
ಏನಿದು ವಿವಾದ?
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನೆರವೇರಿತ್ತು. ಆದರೆ ಆ ಜಾಗವು ವಿವಾದದಲ್ಲಿ ಇದ್ದಿದ್ದರಿಂದ ಅಲ್ಲಿ ಸ್ಮಾರಕ ಮಾಡಲು ಒಪ್ಪಿರಲಿಲ್ಲ. ಇದಕ್ಕಾಗಿ ವಿಷ್ಣು ಕುಟುಂಬ ಕೂಡ ಅದೇ ಜಾಗದಲ್ಲಿ ಸ್ಮಾರಕ ನಿರ್ಮಿಸಲು ವರ್ಷಗಳ ಕಾಲ ಪ್ರಯತ್ನಪಟ್ಟರೂ ಅದು ಈಡೇರಲಿಲ್ಲ. ಕೊನೆಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಾಯಿತು. ಆದರೆ ಅಂತ್ಯಕ್ರಿಯೆ ನೆರವೇರಿದ ಜಾಗವೇ ನಿಜವಾದ ಸಮಾಧಿ ಜಾಗ ಎಂದು ಅವರು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.

ಇತ್ತೀಚೆಗೆ ಅಲ್ಲಿದ್ದ ಚಿಕ್ಕ ಸ್ಮಾರಕವನ್ನು ಕೋರ್ಟ್ ಸೂಚನೆ ಮೇರೆಗೆ ಅದರ ಮಾಲೀಕರು ತೆರವು ಮಾಡಿದ್ದರು. ಇದಕ್ಕೆ ವಿಷ್ಣು ಅಭಿಮಾನಿಗಳು ಗರಂ ಆಗಿದ್ದು, ಅದೇ ಜಾಗದಲ್ಲಿ ವಿಷ್ಣುದಾದಾ ಸಮಾಧಿ ಮತ್ತೆ ಕಟ್ಟಬೇಕು ಎಂದು ಪಟ್ಟುಹಿಡಿದಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಕೂಡ ಧ್ವನಿ ಎತ್ತಿದ್ದಾರೆ. ನಾನೇ ಮುಂದೆ ನಿಂತು ಮತ್ತೆ ಸ್ಮಾರಕ ನಿರ್ಮಿಸುತ್ತೇನೆ ಎಂದು ಭರವಸೆಯೂ ನೀಡಿದ್ದಾರೆ.












Click it and Unblock the Notifications