ಕನ್ನಡದವ್ರು ತೆಲುಗು ಹೀರೋ ಸಂಭಾವನೆ ಬಜೆಟ್‌ನಲ್ಲೇ ಸಿನಿಮಾ ಮಾಡ್ತಾರೆ: ಉಪ್ಪಿ ರಿಪ್ಲೈ ಏನು?
ಕನ್ನಡ ಚಿತ್ರರಂಗವು ಅಗ್ರಗಣ್ಯ ಸಿನಿಮಾಗಳಿಗೆ ಸಾಕ್ಷಿಯಾಗಿವೆ. ಮೊದಲಿನಿಂದಲೂ ಕನ್ನಡ ಸಿನಿಮಾಗಳು ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುವಂತೆ ಮಾಡುತ್ತಲೇ ಇವೆ. ಇತ್ತೀಚೆಗೆ "ಕೆಜಿಎಫ್", "ಕಾಂತಾರ" ಸಿನಿಮಾಗಳು ಕೂಡ ಆ ಮಾತನ್ನು ಮತ್ತೆ ಸಾಬೀತುಪಡಿಸಿವೆ. ಆದರೂ ಬೇರೆ ಚಿತ್ರರಂಗದ ಕೆಲವರು ನಮ್ಮ ಸ್ಯಾಂಡಲ್‌ವುಡ್‌ನ ಬಗ್ಗೆ ಕೀಳಾಗಿ ಮಾತನಾಡುವುದು ಹೊಸದೇನಲ್ಲ. ಈಗಲೂ ಕೂಡ "ತೆಲುಗು ನಟ ಪಡೆಯುವ ಸಂಭಾವನೆ ಹಣದಲ್ಲಿ ಕನ್ನಡದವರು ಒಂದು ಸಿನಿಮಾ ಮಾಡ್ತಾರೆ" ಎನ್ನುವ ಮಾತುಗಳು ನಟ ಉಪೇಂದ್ರ ಅವರ ಎದುರಲ್ಲೇ ಕೇಳಿಬಂದಿದೆ.
ಹೌದು ತೆಲುಗು ಸಂದರ್ಶನದಲ್ಲಿ ನಟ ಉಪೇಂದ್ರ ಅವರಿಗೆ ಈ ಪ್ರಶ್ನೆ ಕೇಳಲಾಗಿದೆ. ತೆಲುಗು ಹೀರೋ ಪೇಮೆಂಟ್ ತಗೊಳ್ಳೋ ದುಡ್ಡಲ್ಲಿ ಒಂದು ಕನ್ನಡ ಸಿನಿಮಾ ಮಾಡಬಹುದಿತ್ತು ಎಂಬ ಅಣಕಿಸುತ್ತಿದ್ದರು. ಆದರೆ ಕೆಜಿಎಫ್, ಕಾಂತಾರ ಆ ಮಾತನ್ನು ಬದಲಾಯಿಸಿದೆ ಎಂದು ಸಂದರ್ಶಕರು ಉಪ್ಪಿ ಎದುರು ಹೇಳಿದ್ದಾರೆ. ಕೂಡಲೇ ಮಧ್ಯಪ್ರವೇಶಿಸಿದ ಉಪೇಂದ್ರ, 'ಇಲ್ಲ ಇಲ್ಲ ಈ ಜನರೇಷನ್‌ನವರು ಆ ರೀತಿ ಹೇಳ್ತಾರೆ ಅಷ್ಟೇ. ಆದರೆ ಆ ಟೈಮಲ್ಲೇ ಇಡೀ ಭಾರತದಲ್ಲೇ ಸೆನ್ಸೇಷನ್ ಸಿನಿಮಾಗಳನ್ನು ಕನ್ನಡದವರು ಮಾಡಿದ್ದರು' ಎಂದು ಕೌಂಟರ್ ಕೊಟ್ಟಿದ್ದಾರೆ.

'ಸನಾದಿ ಅಪ್ಪಣ್ಣ, ಪುಟ್ಟಣ್ಣ ಕಣಗಾಲ್, ರಾಜ್‌ಕುಮಾರ್, ವಿಷ್ಣುವರ್ಧನ್ ಅವರ ಸಿನಿಮಾಗಳು ಅದೆಷ್ಟೋ ಬ್ಲಾಕ್‌ಬಸ್ಟರ್ ಆಗಿದ್ದಿದೆ. ನಾನು ಹೇಳುತ್ತಿರುವುದೂ ಬಜೆಟ್ ವಿಚಾರವೇ. ನಮ್ಮಲ್ಲಿ ಆಗಲೇ ಸಿಂಗಾಪುರದಲ್ಲಿ ರಾಜಾ ಕುಳ್ಳ ಅಂತ ಮೊದಲ ಬಾರಿಗೆ ಸಿಂಗಾಪೂರ್‌ನಲ್ಲಿ ಸಿನಿಮಾ ಮಾಡಿದ್ರು. ಅದರಲ್ಲಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅವರು ನಟಿಸಿದ್ದರು' ಎಂದು ನೆನೆದಿದ್ದಾರೆ.
'ಕನ್ನಡ ಸಿನಿಮಾ ಬಜೆಟ್ ಭಾರತ ನೋಡಿರಲಿಲ್ಲ'
'ಆ ವಿಚಾರಗಳು ಈಗಿನವರಿಗೆ ಗೊತ್ತಿಲ್ಲ. ಈಗಿನ ಪೀಳಿಗೆಯವರು ಇದೇ ದೊಡ್ಡದು ಅಂತ ಅಂದುಕೊಳ್ತಾರೆ. ಆದರೆ ಅದೆಲ್ಲ ಸುಳ್ಳು. ಬಜೆಟ್ ವಿಚಾರದಲ್ಲಿ ಕನ್ನಡ ಸಿನಿಮಾಗಳು ಮೊದಲಿನಿಂದಲೂ ಸದ್ದು ಮಾಡಿದೆ. ಇನ್ನು ರವಿಚಂದ್ರನ್ ಅವರು ಬಂದಾಗ ಇಡೀ ಭಾರತವೇ ನೋಡಿರದ ಬಜೆಟ್‌ನಲ್ಲಿ ಸಿನಿಮಾ ಮಾಡಿದ್ರು. ಅದು ಕನ್ನಡ ಮಾತ್ರವಲ್ಲ, ಇಡೀ ದೇಶದಲ್ಲೇ ಹೈಬಜೆಟ್ ಸಿನಿಮಾ ಆಗಿತ್ತು' ಎಂದಿದ್ದಾರೆ.
'ಈಗಿನವರು ಬಜೆಟ್ ಅಂತ ಬಂದಾಗ ಕೆಜಿಎಫ್, ಕಾಂತಾರ ಅಂತಾರೆ. ಅದರಲ್ಲಿ ತಪ್ಪಿಲ್ಲ, ಇದಕ್ಕೂ ಮುನ್ನವೂ ಲೋ ಬಜೆಟ್ ಸಿನಿಮಾಗಳನ್ನು ತೆಗೆಯುತ್ತಿದ್ದರು ಅನ್ನೋದು ಕೂಡ ತಪ್ಪು. ಅವೆಲ್ಲವೂ ಆಗ ಪ್ಯಾನ್ ಇಂಡಿಯಾ ಆಗಲಿಲ್ಲ. ಹಾಗಾಗಿ ಬೇರೆ ಭಾಷೆಯವರಿಗೆ ಅದರ ಮಾಹಿತಿ ಸಿಕ್ಕಿಲ್ಲ ಅಷ್ಟೇ' ಎಂದು ಉಪೇಂದ್ರ ತಮ್ಮದೇ ಸ್ಟೈಲಲ್ಲಿ ಉತ್ತರ ಕೊಟ್ಟಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಹಿಂದೆ ಸ್ಯಾಂಡಲ್‌ವುಡ್ ಸಿನಿಮಾಗಳ ಬಜೆಟ್ ವಿಚಾರವಾಗಿ ತೆಲುಗು ಚಿತ್ರರಂಗದವರು ವೇದಿಕೆಗಳಲ್ಲೇ ಅಣಕಿಸಿ ಮಾತನಾಡಿದ್ದರು. ಕೆಜಿಎಫ್ ಸಿನಿಮಾ ರಿಲೀಸ್ ಆದಾಗಲೂ ತೆಲುಗಿನ ಖ್ಯಾತ ನಿರ್ಮಾಪಕರೊಬ್ಬರು ಇದೇ ಮಾತನ್ನು ಆಡಿದ್ದರು. ಇದಕ್ಕೆ ವೇದಿಕೆಯಲ್ಲೇ ನಟ ಯಶ್ ಸರಿಯಾದ ಕೌಂಟರ್ ಕೊಟ್ಟಿದ್ದರು. ಬಳಿಕ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವವರಿಗೆ ಕೆಜಿಎಫ್, ಕಾಂತಾರ ಸಿನಿಮಾಗಳು ತಕ್ಕ ಉತ್ತರ ನೀಡಿದ್ದು ಗೊತ್ತೇ ಇದೆ.











Click it and Unblock the Notifications