ಮಾಧ್ಯಮಗಳ ಮೇಲೆ ಹಲ್ಲೆ ಸಂಬಂಧ ನಟ ಮೋಹನ್ ಬಾಬು ಕ್ಷಮೆಯಾಚನೆ
ಟಾಲಿವುಡ್‌ನ ಹಿರಿಯ ನಟ ಮೋಹನ್ ಬಾಬು ಅವರು ಮಾಧ್ಯಮಗಳ ಕ್ಷಮೆಯಾಚಿಸಿದ್ದಾರೆ. ಮೋಹನ್ ಬಾಬು ಅವರು ಇತ್ತೀಚೆಗೆ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಮಾಧ್ಯಮದ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದನ್ನು ತೆಲುಗು ಮಾಧ್ಯಮ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದವು. ಹಲ್ಲೆ ಸಂಬಂಧ ಮೋಹನ್ ಬಾಬು ವಿರುದ್ಧ ಕೇಸ್ ಕೂಡ ದಾಖಲಾಗಿತ್ತು.
ಖ್ಯಾತ ನಟರಾದ ಮಂಚು ಮೋಹನ್ ಬಾಬು ಅವರ ಕುಟುಂಬದಲ್ಲಿ ಬಿರುಕು ಮೂಡಿದೆ. ತಂದೆ ಹಾಗೂ ಮಗನ ನಡುವೆ ನಡೆದಿರುವ ಕೌಟುಂಬಿಕ ಜಗಳ ಇದೀಗ ಬೀದಿಗೆ ಬಂದಿದೆ. ನಟ ಮೋಹನ್ ಬಾಬು ಹಾಗೂ ಅವರ ಪುತ್ರ ಮಂಚು ಮನೋಜ್ ಅವರ ನಡುವಿನ ಜಗಳ ತಾರಕಕ್ಕೇರಿದ್ದು, ಇದನ್ನು ವರದಿ ಮಾಡಲು ಹೋಗಿದ್ದ ಮಾಧ್ಯಮ ಸಿಬ್ಬಂದಿ ಮೇಲೆ ಮೋಹನ್ ಬಾಬು ಹಲ್ಲೆ ನಡೆಸಿದ್ದರು.

ಮೈಕ್ ಕಿತ್ತುಕೊಂಡು ಏಕಾಏಕಿ ಮಾಧ್ಯಮ ಸಿಬ್ಬಂದಿಯನ್ನು ಥಳಿಸಿರುವ ವಿಡಿಯೋ ವೈರಲ್ ಕೂಡ ಆಗಿತ್ತು. ಅಲ್ಲದೆ ತಮ್ಮ ಬೌನ್ಸರ್‌ಗಳನ್ನು ಬಿಟ್ಟು ಮೋಹನ್ ಬಾಬು ಅವರು ಮಾಧ್ಯಮದವರನ್ನು ಓಡಿಸಿದ್ದರು. ಇನ್ನು ಹಲ್ಲೆ ಸಂಬಂಧ ತೆಲುಗು ಖಾಸಗಿ ವಾಹಿನಿಯ ವರದಿಗಾರ ಬಲವಾಗಿ ಗಾಯಗೊಂಡಿದ್ದರು. ಅವರ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದರಿಂದ ಆಪರೇಷನ್ ಮಾಡುವ ಹಂತಕ್ಕೂ ತಲುಪಿತ್ತು.
ಮಾಧ್ಯಮಗಳ ಮೇಲಿನ ಹಲ್ಲೆ ಖಂಡಿಸಿ ತೆಲಂಗಾಣ ಮಾಧ್ಯಮ ಸಂಘಟನೆಗಳು ಮೋಹನ್ ಬಾಬು ವಿರುದ್ಧ ಪ್ರತಿಭಟನೆ ನಡೆಸಿದ್ದವು. ಅಲ್ಲದೆ ಹಲ್ಲೆ ಮಾಡಿರುವ ನಟ ಮೋಹನ್ ಬಾಬು ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದಿದ್ದರು. ಘಟನೆ ಸಂಬಂಧ ಪೊಲೀಸರಿಗೆ ದೂರು ಕೂಡ ನೀಡಿದ್ದರು. ತಂದೆ ಮಾಡಿದ ಹಲ್ಲೆಯನ್ನು ಮೋಹನ್ ಬಾಬು ಪುತ್ರ ಮಂಚು ಮನೋಜ್ ಕೂಡ ಖಂಡಿಸಿದ್ದರು.

ಈ ಹಿನ್ನೆಲೆ ಮೋಹನ್ ಬಾಬು ಅವರು ಮಾಧ್ಯಮಗಳ ಕ್ಷಮೆ ಕೇಳಿದ್ದಾರೆ. ನನ್ನ ಕುಟುಂಬಕ್ಕೆ ಸಂಬಂಧಿಸಿದ ವಿಚಾರ ಇಷ್ಟು ದೊಡ್ಡದಾಗಿದೆ. ಇದರಿಂದ ಮಾಧ್ಯಮದವರಿಗೆ ಸಂಕಷ್ಟ ಎದುರಾಗಿರುವ ಬಗ್ಗೆ ನನಗೆ ಬೇಸರವಿದೆ. ಈ ಘಟನೆ ಬಳಿಕ ಆಸ್ಪತ್ರೆಯಲ್ಲಿದ್ದ ಕಾರಣದಿಂದ ಈ ಸಂಬಂಧ ನಾನು ಪ್ರತಿಕ್ರಿಯೆ ನೀಡಲು ಸಾಧ್ಯವಾಗಲಿಲ್ಲ. ಆ ದಿನ ನಡೆದ ಘಟನೆಯಲ್ಲಿ ವರದಿಗಾರರೊಬ್ಬರು ಗಾಯಗೊಂಡಿರುವುದು ಬೇಸರದ ಸಂಗತಿ. ಈ ಸಂಬಂಧ ಅವರ ಕುಟುಂಬಕ್ಕೆ ಹಾಗೂ ಮಾಧ್ಯಮ ಸಂಸ್ಥೆಗೆ ನಾನು ಪ್ರಾಮಾಣಿಕವಾಗಿ ಕ್ಷಮೆ ಕೋರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಸುದ್ದಿವಾಹಿನಿಯ ವರದಿಗಾರ ರಂಜಿತ್ ಅವರು ವರದಿಗಾರಿಕೆಗೆ ತೆರಳಿದ್ದಾಗ ಹೈದರಾಬಾದ್‌ನ ಜಲಪಲ್ಲಿಯಲ್ಲಿರುವ ಮೋಹನ್ ಬಾಬು ಅವರ ನಿವಾಸದಲ್ಲಿ ಹಲ್ಲೆಗೊಳಗಾಗಿದ್ದರು. ಹಲ್ಲೆ ಸಂಬಂಧ ನಟ ಮೋಹನ್‌ಬಾಬು ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಅಲ್ಲದೆ ನಟ ತಮ್ಮ ಬೌನ್ಸರ್‌ಗಳನ್ನು ಬಿಟ್ಟು ಮಾಧ್ಯಮದವರ ಮೇಲೆ ದಾಳಿ ನಡೆಸಿದ್ದರು ಎಂದೂ ಆರೋಪಿಸಲಾಗಿತ್ತು. ಈ ಸಂಬಂಧ ಮೋಹನ್ ಬಾಬು ಪುತ್ರರಾದ ಮಂಚು ಮನೋಜ್ ಹಾಗೂ ಮಂಚು ವಿಷ್ಣು ಕೂಡ ಮಾಧ್ಯಮಗಳ ಕ್ಷಮೆಯಾಚಿಸಿದ್ದಾರೆ.












Click it and Unblock the Notifications