Mahesh Babu: ಖ್ಯಾತ ನಟ ಮಹೇಶ್ ಬಾಬುಗೆ ED ನೋಟಿಸ್
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ರಿಯಲ್ ಎಸ್ಟೇಟ್ ಸಂಸ್ಥೆಗಳನ್ನು ಒಳಗೊಂಡಂತೆ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ED) ಖ್ಯಾತ ನಟ ಮಹೇಶ್ ಬಾಬು ಅವರಿಗೆ ನೋಟಿಸ್ ಜಾರಿ ಮಾಡಿದೆ. ರಿಯಲ್ ಎಸ್ಟೇಟ್ ಕಂಪನಿಗಳಾದ ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನಾ ಗ್ರೂಪ್‌ನಿಂದ ನಡೆದಿರುವ ವಂಚನೆ ಮತ್ತು ದೊಡ್ಡ ಪ್ರಮಾಣದ ಆರ್ಥಿಕ ಅಕ್ರಮಗಳ ಕುರಿತು ತನಿಖೆಯಲ್ಲಿ ಮಹೇಶ್ ಬಾಬು ಅವರಿಗೂ ಸಂಕಷ್ಟ ಎದುರಾಗಿದೆ. ಈ ತನಿಖೆ ಸಂಬಂಧ ಏಪ್ರಿಲ್ 27ರಂದು ವಿಚಾರಣೆಗೆ ಹಾಜರಾಗುವಂತೆ ನಟ ಮಹೇಶ್ ಬಾಬು ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
ಡೆವಲಪರ್‌ಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಅನುಮೋದನೆ ನೀಡಿದ ಆರೋಪದ ಮೇಲೆ ಮಹೇಶ್ ಬಾಬು ಅವರಿಗೆ ನೋಟಿಸ್ ನೀಡಲಾಗಿದೆ. ಅಲ್ಲದೆ ಮಹೇಶ್ ಬಾಬು ಅವರು 5.9 ಕೋಟಿ ರೂಪಾಯಿ ಶುಲ್ಕ ಪಡೆದಿದ್ದಾರೆ ಎಂದು ವರದಿಯಾಗಿದೆ. ಈ ಮೊತ್ತದಲ್ಲಿ 3.4 ಕೋಟಿ ರೂಪಾಯಿಗಳನ್ನು ಚೆಕ್ ಮೂಲಕ ಪಾವತಿಸಲಾಗಿದೆ, ಉಳಿದ 2.5 ಕೋಟಿ ರೂಪಾಯಿಗಳನ್ನು ನಗದು ರೂಪದಲ್ಲಿ ಸ್ವೀಕರಿಸಲಾಗಿದೆ ಎಂದು ಆರೋಪಿಸಲಾಗಿದೆ. ನಗದು ಪಾವತಿಗಳು ಈ ಗುಂಪಿನ ಅಕ್ರಮ ಹಣದ ಭಾಗವಾಗಿರಬಹುದು ಎಂದು ಇಡಿ ಶಂಕಿಸಿದೆ. ಹೈದರಾಬಾದ್ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಗಳು ಲೆಕ್ಕವಿಲ್ಲದ ನಗದು ವಹಿವಾಟುಗಳು ಹಾಗೂ ವಂಚನೆಯ ಭೂ ವ್ಯವಹಾರಗಳ ಆರೋಪ ಹೊತ್ತಿವೆ.

ರಿಯಲ್ ಎಸ್ಟೇಟ್ ಸಂಸ್ಥೆಗಳು ಅನಧಿಕೃತ ವಿನ್ಯಾಸಗಳಲ್ಲಿ ಪ್ಲಾಟ್‌ಗಳನ್ನು ಮಾರಾಟ ಮಾಡುವ ಮೂಲಕ ಹೂಡಿಕೆದಾರರನ್ನು ವಂಚಿಸಿದ್ದಾರೆ. ಒಂದೇ ಪ್ಲಾಟ್‌ಗಳನ್ನು ಹಲವರಿಗೆ ಮಾರಾಟ ಮಾಡಿದ್ದಾರೆ. ನಕಲಿ ನೋಂದಣಿ ಖಾತರಿಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ತೆಲಂಗಾಣ ಪೊಲೀಸರು ದಾಖಲಿಸಿದ ಎಫ್‌ಐಆರ್‌ಗಳಲ್ಲಿ ಉಲ್ಲೇಖಿಸಲಾಗಿದೆ. ಈ ಯೋಜನೆಗಳಿಗೆ ನಟನ ಅನುಮೋದನೆಯು ಸಾರ್ವಜನಿಕರ ನಂಬಿಕೆಯನ್ನು ಬೆಳೆಸುವಲ್ಲಿ ಮತ್ತು ವಂಚನೆಯ ಬಗ್ಗೆ ತಿಳಿದಿಲ್ಲದ ಖರೀದಿದಾರರನ್ನು ಸೆಳೆಯುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ದೂರಲಾಗಿದೆ.
ಮಹೇಶ್ ಬಾಬು ಮೇಲಿನ ಆರೋಪವೇನು?
ಬಿಲ್ಡರ್‌ಗಳು ವಂಚನೆಯ ಮೂಲಕ ಸಂಗ್ರಹಿಸಿದ ಅಕ್ರಮ ಹಣದಲ್ಲಿ ಈ ನಗದು ಸೇರಿದೆಯೇ ಎಂದು ಅಧಿಕಾರಿಗಳು ಶಂಕಿಸುತ್ತಿರುವುದರಿಂದ, ಈ ನಗದು ವಹಿವಾಟು ಸಂಬಂಧ ಜಾರಿ ನಿರ್ದೇಶನಾಲಯ ಪರಿಶೀಲಿಸುತ್ತಿದೆ. ಈ ಹಗರಣದಲ್ಲಿ ಮಹೇಶ್ ನೇರವಾಗಿ ಭಾಗಿಯಾಗಿಲ್ಲದಿರಬಹುದು. ಆದರೆ ಅವರು ಈ ಯೋಜನೆಗಳನ್ನು ಅನುಮೋದಿಸುವುದರಿಂದ ಹಲವಾರು ಖರೀದಿದಾರರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಅದರಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸಿದ್ದಾರೆ ಎಂದು ಇಡಿ ಹೇಳಿದೆ. ಆದರೆ, ಸಮನ್ಸ್ ಬಗ್ಗೆ ಮಹೇಶ್ ಬಾಬು ಅವರ ತಂಡ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಏಪ್ರಿಲ್ 16ರಂದು ಜಾರಿ ನಿರ್ದೇಶನಾಲಯದ ಹೈದರಾಬಾದ್ ವಲಯ ಕಚೇರಿಯು ಹೈದರಾಬಾದ್ ಮತ್ತು ಸಿಕಂದರಾಬಾದ್‌ನ ನಾಲ್ಕು ಸ್ಥಳಗಳಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ದಾಳಿ ನಡೆಸಿತ್ತು. ಸುರಾನಾ ಗ್ರೂಪ್‌ಗೆ ಸಂಬಂಧಿಸಿದ ಸುಮಾರು 100 ಕೋಟಿ ರೂ ಮೌಲ್ಯದ ಅಕ್ರಮ, ಮತ್ತು ಲೆಕ್ಕವಿಲ್ಲದ ನಗದು ವಹಿವಾಟುಗಳ ದಾಖಲೆ ವಶಪಡಿಸಿಕೊಂಡಿದ್ದವು. ಭಾಗ್ಯನಗರ ಪ್ರಾಪರ್ಟೀಸ್ ಲಿಮಿಟೆಡ್ ನಿರ್ದೇಶಕ ನರೇಂದ್ರ ಸುರಾನಾ, ಸಾಯಿ ಸೂರ್ಯ ಡೆವಲಪರ್ಸ್ ಮಾಲೀಕ ಕೆ.ಸತೀಶ್ ಚಂದ್ರ ಮತ್ತು ಇತರರ ವಿರುದ್ಧ ತೆಲಂಗಾಣ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿದ್ದರು.












Click it and Unblock the Notifications