ದ್ರಾವಿಡ ಭದ್ರಕೋಟೆಯಲ್ಲಿ ದಳಪತಿ ವಿಜಯ್ 'ಸುನಾಮಿ' ಗೆಲುವಿನ ಭವಿಷ್ಯ ನುಡಿದ ಜ್ಯೋತಿಷಿ ರಾಧನ್ ಪಂಡಿತ್ ಯಾರು?
Thalapathy Vijay: ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶ ಸೋಮವಾರ (ಮೇ 4) ಪ್ರಕಟವಾಗಿದ್ದು, ಈ ಫಲಿತಾಂಶಗಳು ರಾಜ್ಯದ ರಾಜಕೀಯ ಚಿತ್ರಣವನ್ನೇ ಬದಲಿಸಿವೆ. ತಮಿಳುನಾಡನ್ನು ಆಳುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ಎರಡು ಪ್ರಬಲ ದ್ರಾವಿಡ ಪಕ್ಷಗಳನ್ನು ಹಿಂದಿಕ್ಕಿ ನಟ ದಳಪತಿ ವಿಜಯ್ ಅವರ ನೂತನ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಭರ್ಜರಿ ಜಯ ದಾಖಲಿಸಿದೆ. ಇದರ ಬೆನ್ನಲ್ಲೇ ವಿಜಯ್ ರಾಜಕೀಯ ಬಗ್ಗೆ ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿಯೊಬ್ಬರು ಸಖತ್ ಸುದ್ದಿಯಲ್ಲಿದ್ದಾರೆ.
ದಳಪತಿ ವಿಜಯ್ ಗೆಲುವಿನ ಬೆನ್ನಲ್ಲೇ ರಾಜಕೀಯೇತರ ವ್ಯಕ್ತಿಯೊಬ್ಬರು ಈಗ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಅವರೇ ಜ್ಯೋತಿಷಿ ರಾಧನ್ ಪಂಡಿತ್. ವಿಜಯ್ ಅವರ ಈ ಐತಿಹಾಸಿಕ ಗೆಲುವಿನ ಬಗ್ಗೆ ಅವರು ಮೊದಲೇ ಭವಿಷ್ಯ ನುಡಿದಿದ್ದರು. ಇವರು ಸುಮಾರು ನಾಲ್ಕು ದಶಕಗಳಿಂದ ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದಲ್ಲಿ ತೊಡಗಿಸಿಕೊಂಡಿರುವ ಪ್ರಸಿದ್ಧ ಜ್ಯೋತಿಷಿ. ಈ ಹಿಂದೆ ಜಯಲಲಿತಾ ಅವರಂತಹ ಪ್ರಭಾವಿ ನಾಯಕರಿಗೂ ಇವರು ಸಲಹೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ.

ನಿಜವಾಯ್ತು ರಾಧನ್ ಪಂಡಿತ್ ನುಡಿದ ಭವಿಷ್ಯ
ಹಾಗೆಯೇ ಇದೀಗ ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನವೇ ರಾಧನ್ ಪಂಡಿತ್ ಅವರು ವಿಜಯ್ ಅವರ ರಾಜಕೀಯವನ್ನು ಭವಿಷ್ಯ ನುಡಿದಿದ್ದರು. ತಮಿಳುನಾಡು ರಾಜಕಾರಣದಲ್ಲಿ ವಿಜಯ್ ದೊಡ್ಡ ಅಲೆಯನ್ನೇ ಸೃಷ್ಟಿಸಲಿದ್ದಾರೆ ಮತ್ತು ಭಾರೀ ಅಂತರದಿಂದ ಗೆದ್ದು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಇದು ಇದೀಗ ನಿಜವಾಗಿದ್ದು, ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ವಿಜಯ್ ರಾಜಕೀಯದ ಬಗ್ಗೆ ರಾಧನ್ ಪಂಡಿತ್ ಭವಿಷ್ಯ
ವಿಜಯ್ ಅವರ ಹುಟ್ಟಿದ ದಿನಾಂಕ ಮತ್ತು ನಕ್ಷತ್ರಕ್ಕೆ ಅನುಗುಣವಾಗಿ 'ತಮಿಳಗ ವೆಟ್ರಿ ಕಳಗಂ' ಎಂಬ ಪಕ್ಷದ ಹೆಸರು ಅತ್ಯಂತ ಶುಭಕರವಾಗಿದೆ ಎಂದು ಅವರು ಹೇಳಿದ್ದರು. ಇದೀಗ ಫಲಿತಾಂಶದ ನಂತರ ಟಿವಿಕೆ ಪಕ್ಷವು ನಿರೀಕ್ಷೆಗೂ ಮೀರಿ ಸಾಧನೆ ಮಾಡುತ್ತಿದ್ದಂತೆ ರಾಧನ್ ಪಂಡಿತ್ ಅವರು ಚೆನ್ನೈನಲ್ಲಿರುವ ವಿಜಯ್ ಅವರ ನಿವಾಸಕ್ಕೆ ಭೇಟಿ ನೀಡಿ ಶುಭ ಕೋರಿದ್ದಾರೆ. ಈ ಭೇಟಿಯ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ದ್ರಾವಿಡ ಭದ್ರಕೋಟೆಯಾದ ತಮಿಳುನಾಡಿನಲ್ಲಿ ಅನೇಕ ರಾಜಕೀಯ ವಿಶ್ಲೇಕರು ವಿಜಯ್ ಅವರ ರಾಜಕೀಯ ಬೆಳವಣಿಗೆಯು ಅನಿಶ್ಚಿತ ಎಂದು ಹೇಳಿದ್ದರು. ಆದರೆ ಆ ಸಮಯದಲ್ಲಿ ಖ್ಯಾತ ಜ್ಯೋತಿಷಿ ರಾಧನ್ ಪಂಡಿತ್ ಅವರು ಅತ್ಯಂತ ಆತ್ಮವಿಶ್ವಾಸದಿಂದ ವಿಜಯ್ ಅವರ ರಾಜಕೀಯದ ಬಗ್ಗೆ ಭವಿಷ್ಯ ನುಡಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅವರ ಈ ನಿಖರ ಭವಿಷ್ಯವು ಈಗ ಎಲ್ಲರ ಗಮನ ಸೆಳೆಯುತ್ತಿದೆ.
ದಿಗ್ಭ್ರಮೆಗೊಂಡ ಟೀಕಾಕಾರರು
ವಿಜಯ್ ಅವರ ಪಕ್ಷದ ಹೆಸರಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಬಗ್ಗೆ ಅವರು ವಿಶೇಷವಾಗಿ ಪ್ರಸ್ತಾಪಿಸಿದ್ದರು. ಈ ಹೆಸರು ವಿಜಯ್ ಅವರ ಜನ್ಮ ದಿನಾಂಕದ ವಿವರಗಳಿಗೆ ಸಂಬಂಧಿಸಿದ ಸಂಖ್ಯಾಶಾಸ್ತ್ರೀಯ ಮತ್ತು ಜ್ಯೋತಿಷ್ಯ ತತ್ವಗಳಿಗೆ ಪೂರಕವಾಗಿ ಹೊಂದಿಕೆ ಆಗುತ್ತದೆ. ಇದು ಅವರ ಯಶಸ್ಸಿಗೆ ಪ್ರಮುಖ ಕಾರಣವಾಗಲಿದೆ ಎಂದು ಭವಿಷ್ಯ ನುಡಿದಿದ್ದು, ಇದು ಇದೀಗ ನಿಜವಾಗಿ ಟೀಕಿಸುತ್ತಿದ್ದವರನ್ನು ದಿಗ್ಭ್ರಮೆಗೊಳಿಸಿದೆ.
ಒಂದು ಕಾಲದಲ್ಲಿ ಕೇವಲ ಪ್ರಚಾರಕ್ಕಾಗಿ ನುಡಿದ ಭವಿಷ್ಯ ಎಂದು ಪರಿಗಣಿಸಲಾಗಿದ್ದ ರಾಧನ್ ಪಂಡಿತ್ ಅವರ ಮಾತುಗಳು ಈಗ ರಾಜಕೀಯ ಜ್ಯೋತಿಷ್ಯ ಮತ್ತು ಚುನಾವಣಾ ಫಲಿತಾಂಶಗಳು ಅಚ್ಚರಿಯ ರೀತಿಯಲ್ಲಿ ಪರಸ್ಪರ ಹೊಂದಿಕೆಯಾದಂತಿವೆ. ವಿಜಯ್ ಮತ್ತು ಟಿವಿಕೆ ಪಕ್ಷದ ಬೆಂಬಲಿಗರಿಗೆ ರಾಧನ್ ಪಂಡಿತ್ ಅವರ ಈ ಮುನ್ಸೂಚನೆಗಳು ಪಕ್ಷದ ಬೆಳವಣಿಗೆ ಮತ್ತು ಯಶಸ್ಸಿನ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ.
ರಾಧನ್ ಪಂಡಿತ್ ಅವರು ಕೇವಲ ಭವಿಷ್ಯ ನುಡಿಯುವುದಕ್ಕೆ ಸೀಮಿತವಾಗದೆ ಟಿವಿಕೆ ಪಕ್ಷದ ಅಧಿಕೃತ ವಕ್ತಾರರಾಗಿ ಸಕ್ರಿಯ ರಾಜಕೀಯ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ. ಅವರು ಆಗಾಗ್ಗೆ ಎಂ.ಕೆ.ಸ್ಟಾಲಿನ್ ಮತ್ತು ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರಂತಹ ನಾಯಕರ ವಿರುದ್ಧ ವಿಜಯ್ ಅವರ ಸಾಮರ್ಥ್ಯವನ್ನು ಹೋಲಿಕೆ ಮಾಡುತ್ತಾ ಬಂದಿದ್ದಾರೆ. ಬಲವಾದ ಗ್ರಹಗತಿಗಳ ಬೆಂಬಲ ಹೊಂದಿರುವ ವಿಜಯ್ ಅವರು ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ ಎಂದು ಅವರು ಭವಿಷ್ಯ ನುಡಿದ್ದರು.
ಒಟ್ಟಿನಲ್ಲಿ ವಿಜಯ್ ಅವರೊಂದಿಗಿನ ಈ ಒಡನಾಟದಿಂದ ರಾಧನ್ ಪಂಡಿತ್ ಅವರು ಸಾರ್ವಜನಿಕವಾಗಿ ಮತ್ತಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಅವರು ಈ ಹಿಂದೆ ನುಡಿದಿದ್ದ ಭವಿಷ್ಯವಾಣಿಗಳು 2026ರ ಫಲಿತಾಂಶದ ಮೂಲಕ ನಿಜವಾಗಿರುವುದು ಅಭಿಮಾನಿಗಳು ಮತ್ತು ಮತದಾರರಲ್ಲಿ ದೊಡ್ಡ ಮಟ್ಟದ ವಿಶ್ವಾಸ ಮೂಡಿಸಿದೆ ಎನ್ನಬಹುದು.












Click it and Unblock the Notifications