ದರ್ಶನ್ ವಿಚಾರದಲ್ಲಿ ತಲೆ ಹಾಕಬೇಡ: ನಟ ಧನ್ವೀರ್‌ಗೆ ವಾರ್ನಿಂಗ್ ಕೊಟ್ಟಿದ್ಯಾರು?
ನಟ ದರ್ಶನ್ ತೂಗುದೀಪ ಅವರಿಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ರದ್ದಾಗಿದೆ. ಹೀಗಾಗಿ ಮತ್ತೆ ಅವರು ಪರಪ್ಪನ ಅಗ್ರಹಾರ ಜೈಲಿಗೆ ಮರಳಿದ್ದಾರೆ. ಇನ್ನು ಇಂತಹ ಕಷ್ಟಕಾಲದಲ್ಲೂ ದರ್ಶನ್ ಅವರ ಜೊತೆ ನಿಂತಿದ್ದು ನಟ ಧನ್ವೀರ್ ಗೌಡ. ಕಳೆದ ವರ್ಷ ದರ್ಶನ್ ಈ ಕೇಸ್‌ನಲ್ಲಿ ಜೈಲು ಸೇರಿದ ಸಂದರ್ಭದಿಂದಲೂ ಹಿಡಿದು, ಜೈಲಿಗೆ ಹೋಗಿ ಭೇಟಿ ಮಾಡುವುದು, ಜೈಲಿನಿಂದ ರಿಲೀಸ್ ಆದಾಗ ದರ್ಶನ್ ಅವರನ್ನು ಧನ್ವೀರ್ ಅವರೇ ಬಳ್ಳಾರಿ ಜೈಲಿಂದ ಕರೆ ತಂದಿದ್ದರು. ನಂತರವೂ ದರ್ಶನ್ ಹೋದಲ್ಲಿ ಬಂದಲ್ಲಿ ಕೂಡ ಧನ್ವೀರ್ ಜೊತೆಯಲ್ಲೇ ಸಾಥ್ ನೀಡಿದ್ದರು. ದರ್ಶನ್ ವಿಚಾರಕ್ಕೆ ಬರಬೇಡ, ದರ್ಶನ್ ಕೇಸ್‌ನಲ್ಲಿ ತಲೆ ಹಾಕಬೇಡ ಎಂದು ಧನ್ವೀರ್‌ಗೆ ವಾರ್ನಿಂಗ್ ಕೊಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.
ದರ್ಶನ್ ಅವರು ಮೊದಲಿನಿಂದಲೂ ಒಂದು ಗ್ಯಾಂಗ್ ಹೊಂದಿದ್ದರು. ಇದರಲ್ಲಿ ಸಿನಿಮಾ ನಟರೂ ಇದ್ದರು. ಆದರೆ ಕಾರಣಾಂತರಗಳಿಂದ ಒಬ್ಬೊಬ್ಬರಾಗಿಯೇ ದೂರವಾಗಿದ್ದರು. ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರ ಗೊತ್ತಾದ ಮೇಲಂತೂ ಅವರ ಗ್ಯಾಂಗ್ ಸೈಲೆಂಟ್ ಆಗಿತ್ತು. ಆದರೆ ಧನ್ವೀರ್ ಅವರು ದರ್ಶನ್ ಅವರ ಪ್ರತಿ ಹೆಜ್ಜೆಯಲ್ಲೂ ಸಾಥ್ ನೀಡುತ್ತಾ ಅವರೊಂದಿಗೆ ನಿಂತರು. ದರ್ಶನ್ ಅರೆಸ್ಟ್ ಆದಾಗಲೂ ಅವರ ಪರವಾಗಿ ನಿಂತಿದ್ದರು. ಜೈಲಿಗೆ ಆಗಾಗ ತೆರಳಿ ಭೇಟಿ ಮಾಡಿಯೂ ಬಂದರು. ಜಾಮೀನು ಸಿಕ್ಕಿ ಹೊರಬಂದ ಮೇಲೂ ಸದಾ ದರ್ಶನ್ ಅವರೊಂದಿಗೆ ಇದ್ದರು. ಇತ್ತೀಚೆಗೆ ದರ್ಶನ್ ಅವರೊಂದಿಗೆ ವಿವಿಧ ದೇವಸ್ಥಾನಗಳಿಗೆ ಹಾಗೂ ಕೋರ್ಟ್ ವಿಚಾರಣೆ ವೇಳೆಯೂ ಜೊತೆಯಲ್ಲೇ ಇದ್ದರು. ಇದೀಗ ಧನ್ವೀರ್‌ಗೂ ಕಂಟಕ ಎದುರಾಗಿದೆ.

ಜಾಮೀನು ರದ್ದಾದ ಹಿನ್ನೆಲೆ ಪೊಲೀಸರು ದರ್ಶನ್ ಅವರನ್ನು ಅರೆಸ್ಟ್ ಮಾಡಲು ಮನೆಯ ಬಳಿ ಹೋಗಿದ್ದರು. ಆಗ ದರ್ಶನ್ ಅವರು ಮೊದಲಿಗೆ ಧನ್ವೀರ್ ಅವರನ್ನ ಮಾತನಾಡಲು ಕಳಿಸಿದ್ದರು. ಆಗ ಧನ್ವೀರ್ ಮಧ್ಯಪ್ರವೇಶಿಸಿ ಪೊಲೀಸರ ಜೊತೆ ಮಾತನಾಡಲು ಬಂದಿದ್ದಕ್ಕೆ ಪೊಲೀಸರು ಧನ್ವೀರ್‌ಗೆ ನೇರವಾಗಿ ವಾರ್ನಿಂಗ್ ಕೊಟ್ಟಿದ್ದಾರೆ. "ನೀನು ಈ ವಿಚಾರಕ್ಕೆ ತಲೆ ಹಾಕಬೇಡ. ಇಲ್ಲದಿದ್ದರೆ ನಿನ್ನ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತೆ" ಎಂದು ಪೊಲೀಸರು ಖಡರ್ ಆಗಿ ಎಚ್ಚರಿಕೆ ಕೊಟ್ಟಿದ್ದಾರೆ. ನಂತರ ಧನ್ವೀರ್ ಸುಮ್ಮನಾಗಿ ಒಳಗೆ ಹೋಗಿ ಆ ವಿಷಯ ಮುಟ್ಟಿಸಿದ್ದರು ಎನ್ನಲಾಗಿದೆ.
ಬಂದು ಜೀಪ್ ಹತ್ತಬೇಕು ಅಷ್ಟೇ..!
ನಂತರ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಕೂಡ ಇಲ್ಲ ನಾವು ನಮ್ಮ ವಕೀಲರ ಜೊತೆ ಬರ್ತೀವಿ ಎಂದು ಪೊಲೀಸರಿಗೆ ಹೇಳಲು ಮುಂದಾದಾಗಲೂ ಅದಕ್ಕೂ ಪೊಲೀಸರು ಬಗ್ಗಲಿಲ್ಲ. ಅದೆಲ್ಲ ಆಗಲ್ಲ, 15 ನಿಮಿಷ ಟೈಮ್ ಅಷ್ಟೇ, ಬಂದು ಜೀಪ್ ಹತ್ತಬೇಕು, ಇಲ್ಲದಿದ್ದರೆ ನಾವೇ ನಮ್ಮ ರೀತಿಯಲ್ಲಿ ಕರೆದುಕೊಂಡು ಹೋಗ್ತೀವಿ ಎಂದು ಖಾಕಿ ಸ್ಟೈಲಲ್ಲಿ ಹೇಳಿದ್ದರು. ಇದಾದ ನಂತರ ದರ್ಶನ್ ಸುಮ್ಮನೆ ಬಂದು ಪೊಲೀಸರ ಗಾಡಿ ಹತ್ತಿದ್ದರು ಎಂದು ತಿಳಿದುಬಂದಿದೆ.

ಧನ್ವೀರ್ ಕೂಡ ದರ್ಶನ್ ಅವರ ಗರಡಿಯಲ್ಲೇ ಬೆಳೆದ ಹುಡುಗ. ಚಿತ್ರರಂಗಕ್ಕೆ ಕಾಲಿಟ್ಟಾಗ ಅವರ ಸಿನಿಮಾಗಳಿಗೆ ದರ್ಶನ್ ಸಾಥ್ ನೀಡಿದ್ದರು. ಈ ಕೇಸ್‌ನಲ್ಲಿ ಜೈಲು ಸೇರಿದ ಕಷ್ಟದ ಸಂದರ್ಭದಲ್ಲೂ ದರ್ಶನ್ ಹಾಗೂ ಅವರ ಕುಟುಂಬದೊಂದಿಗೆ ಧನ್ವೀರ್ ನಿಂತಿದ್ದರು. ಇದನ್ನು ನೋಡಿ ಡಿಬಾಸ್ ಫ್ಯಾನ್ಸ್ ಕೂಡ ಧನ್ವೀರ್ ಅವರನ್ನ ಎರಡನೇ ಡಿಬಾಸ್ ಎಂದು ಕರೆದಿದ್ದರು. ಜಾಮೀನು ರದ್ದಾಗಿರುವ ಕಾರಣ ಸುಪ್ರೀಂಕೋರ್ಟ್ ಖಡಕ್ ಆಗಿ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇನ್ನು ಏನೇ ಎಡವಟ್ಟಾದರೂ ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆಯೂ ನೀಡಿದೆ. ಹಾಗಾಗಿ ಪೊಲೀಸರು ಕೂಡ ಯಾರ ಒತ್ತಡಕ್ಕೂ ಮಣಿಯದೆ ಆದೇಶ ಪಾಲಿಸುತ್ತಿದ್ದಾರೆ.












Click it and Unblock the Notifications