ಮಗ ಮಾಡಿದ ತಪ್ಪಿಗೆ ಕ್ಷಮೆ ಕೇಳಿದ ಸ್ಟಾರ್ ನಟ ವಿಜಯ್ ಸೇತುಪತಿ !
ತಮ್ಮ ಅಭಿನಯ ಹಾಗೂ ವಿನಯತೆಯಿಂದಲೇ ಜನರ ಮನಸ್ಸು ಗೆದ್ದಿರುವ ಬಹುಭಾಷಾ ನಟ ವಿಜಯ್ ಸೇತುಪತಿ ಅವರು ಇದೀಗ ತಮ್ಮ ಮಗನ ಕಾರಣಕ್ಕೆ ಮುಜುಗರ ಎದುರಿಸುವಂತೆ ಆಗಿದೆ. ವಿಜಯ್ ಸೇತುಪತಿ ಅವರು ತಮಿಳಿನಿಂದ ಬಾಲಿವುಡ್ ವರೆಗೂ ತಮ್ಮ ಸಿನಿಮಾ ಪಯಣವನ್ನು ಮುಂದುವರಿಸಿದ್ದಾರೆ. ಕಳೆದ ಬಾರಿ ತಮಿಳಿನಲ್ಲಿ ಬಿಗ್‌ಬಾಸ್ ಶೋ ಸಹ ನಡೆಸಿಕೊಟ್ಟಿದ್ದು. ಬಿಗ್‌ಬಾಸ್ ಶೋ ಹಿಟ್ ಆಗಿತ್ತು. ಕಮಲ್ ಹಾಸನ್ ಅವರಿಗೆ ವಿಜಯ್ ಪೈಪೋಟಿ ಕೊಡುವಷ್ಟು ಉತ್ತಮವಾಗಿ ಶೋ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದೀಗ ಅವರ ಮಗ ಸಹ ಸಿನಿಮಾ ರಂಗಕ್ಕೆ ಬಂದಿದ್ದಾರೆ. ಆದರೆ ಅವರ ಮಗನ ವರ್ತನೆಯಿಂದ ವಿಜಯ್ ಬಗ್ಗೆ ಚರ್ಚೆ ನಡೆದಿದೆ.
ವಿಜಯ್ ಸೇತುಪತಿ ಅವರು ಬ್ಯಾಕ್ ಟು ಬ್ಯಾಕ್ ಹಿಟ್ ಮೂವಿಗಳನ್ನು ಕೊಡುತ್ತಿದ್ದಾರೆ. ಅಲ್ಲದೇ ಅವರು ಬಹುಬೇಡಿಕೆಯ ನಟ ಸಹ ಹೌದು. ಇವರ ಪುತ್ರ ಸಹ ಇದೀಗ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದು. ಸಿನಿಮಾ ಬಿಡುಗಡೆ ಸಹ ಆಗಿದೆ. ಆದರೆ ಸಿನಿಮಾ ಬಿಡುಗಡೆಯ ಬೆನ್ನಲ್ಲೇ ದೊಡ್ಡದೊಂದು ವಿವಾದ ಸೃಷ್ಟಿಯಾಗಿದೆ. ವಿಜಯ್ ಸೇತುಪತಿ ಅವರ ಮಗ ಸೂರ್ಯ ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ಮೊದಲ ಸಿನಿಮಾ ಫೀನಿಕ್ಸ್ ಈಚೆಗೆ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ವಿವಾದವೊಂದು ಸೃಷ್ಟಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಸೂರ್ಯ ಸೇತುಪತಿ ಅವರ ವಿಡಿಯೋವೊಂದು ವೈರಲ್ ಆಗಿದ್ದು ಅದು ಟ್ರೋಲ್‌ಗೆ ಕಾರಣವಾಗಿದೆ. ಮಾತ್ರವಲ್ಲ ಟೀಕೆಯೂ ವ್ಯಕ್ತವಾಗಿದೆ. ಇದಕ್ಕಾಗಿ ವಿಜಯ್ ಅವರು ಕ್ಷಮೆ ಕೇಳಿದ್ದಾರೆ.

ಸೂರ್ಯ ಸೇತುಪತಿ ಅವರ ಮೊದಲ ಸಿನಿಮಾ ಸೂಕ್ಷ್ಮ ಕತೆಯನ್ನು ಒಳಗೊಂಡಿದೆ. ಫೀನಿಕ್ಸ್ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಈ ಚಿತ್ರದ ನಿರ್ದೇಶಕ ಆನಂದ ಕೃಷ್ಣನ್ ಅವರು ಮಾಧ್ಯಮದೊಂದಿಗೆ ಮಾತನಾಡಿದ್ದರು. ಆಗ ಸೂರ್ಯ ಸೇತುಪತಿ ಅವರ ಪಾತ್ರ ವಿವರಿಸುವಾಗ ಈ ಸಿನಿಮಾದಲ್ಲಿ ನಾಯಕ ಒಬ್ಬ ಅತ್ಯಾಚಾರಿಯಾಗಿರುತ್ತಾನೆ. ಆ ಮೇಲೆ ಅವನು ಒಳ್ಳೆಯವನಾಗಿ ಬದಲಾಗುತ್ತಾನೆ ಎಂದಿದ್ದರು.
ಈ ಹೇಳಿಕೆ ಹಾಗೂ ಸೂರ್ಯ ಆ ಸಂದರ್ಭದಲ್ಲಿ ಚ್ಯೂಯಿಂಗ್ ಗಮ್ ಜಗಿಯುತ್ತಿದ್ದು ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಟ್ರೋಲ್ ಶುರುವಾಗಿದ್ದು. ವಿಜಯ್ ಸೇತುಪತಿ ಅವರು ಕ್ಷಮೆ ಕೋರಿದ್ದಾರೆ.
ಸೂರ್ಯ ವಿಜಯ್ ಸೇತುಪತಿ ಅವರದ್ದು ದುರಹಂಕಾರದ ವರ್ತನೆ ಎಂದು ಜನರು ಟ್ರೋಲ್ ಮಾಡಿದ್ದಾರೆ. ಹಿಂದಿಯಲ್ಲಿದ್ದ ನೆಪೋಟಿಸಂ ಇದೀಗ ದಕ್ಷಿಣಕ್ಕೂ ಬಂದಿದೆ ಎಂದು ಕೆಲವು ನೆಟ್ಟಿಗರು ಹೇಳಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಗನ ಪರವಾಗಿ ವಿಜಯ್ ಸೇತುಪತಿ ಅವರು ಕ್ಷಮೆ ಕೇಳಿದ್ದಾರೆ. ನನ್ನ ಮಗ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲ. ಒಂದೊಮ್ಮೆ ಏನಾದರೂ ತಿಳಿಯದೆ ಆಗಿದ್ದರೆ, ಇದರಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಅಂತ ವಿಜಯ್ ಸೇತುಪತಿ ಹೇಳಿದ್ದಾರೆ.












Click it and Unblock the Notifications