Sonu Nigam: ಕನ್ನಡಿಗರ ಬಗ್ಗೆ ಅವಹೇಳನ ಕೇಸ್: ಹೈಕೋರ್ಟ್ ಮೆಟ್ಟಿಲೇರಿದ ಸೋನು ನಿಗಮ್
ಖ್ಯಾತ ಗಾಯಕ ಸೋನು ನಿಗಮ್ ಅವರು ಕನ್ನಡ ಹಾಡು ಕೇಳಿದ್ದಕ್ಕೆ ನೀಡಿದ ಒಂದು ಹೇಳಿಕೆಯಿಂದ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾರೆ ಎಂದು ಕನ್ನಡಪರ ಹೋರಾಟಗಾರರು ಕಿಡಿಕಾರಿದ್ದರು. ಸೋನು ನಿಗಮ್ ಕನ್ನಡಿಗರ ಕ್ಷಮೆ ಕೇಳುವುದು ಮಾತ್ರವಲ್ಲದೆ, ಕನ್ನಡದಲ್ಲಿ ಮುಂದೆ ಯಾವುದೇ ಹಾಡು ಹಾಡದಂತೆ ಬ್ಯಾನ್ ಮಾಡುವಂತೆ ಆಗ್ರಹಿಸಿದ್ದರು. ಅದರಂತೆ ಫಿಲ್ಮ್ ಚೇಂಬರ್ ಬ್ಯಾನ್ ಮಾಡಿದೆ. ಇದಲ್ಲದೆ ಸೋನು ನಿಗಮ್ ವಿರುದ್ಧ ಹಲವೆಡೆ ಎಫ್‌ಐಆರ್ ಕೂಡ ದಾಖಲಾಗಿದ್ದು, ಇದನ್ನು ರದ್ದು ಮಾಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕನ್ನಡಿಗರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಸೋನು ನಿಗಮ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಸೋನು ನಿಗಮ್ ವಿರುದ್ಧ ದೂರು ನೀಡಿದ್ದರು. ಈ ಕೇಸ್ ಹಾಗೂ ಅದಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಮಾಡುವಂತೆ ಕೋರಿ ಸೋನು ನಿಗಮ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿ ವಿಚಾರಣೆ ನಡೆದಿದೆ.

ಆವಲಹಳ್ಳಿ ಸಮೀಪದ ಪ್ರತಿಷ್ಠಿತ ಕಾಲೇಜಿನ ಕಾಲೇಜಿನಲ್ಲಿ ಸೋನು ನಿಗಮ್ ಸಂಗೀತ ಕಾರ್ಯಕ್ರಮ ನೀಡುವ ವೇಳೆ ಕನ್ನಡ ಹಾಡು ಕೇಳಿದ್ದಕ್ಕೆ ಕಿರಿಕ್ ಮಾಡಿಕೊಂಡಿದ್ದರು. ಹಾಡು ಕೇಳಿದ್ದಕ್ಕೆ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸುವ ಮೂಲಕ ಆಕ್ಷೇಪಾರ್ಹ, ಕನ್ನಡಿಗರ ಭಾವನೆ ಕೆರಳಿಸುವ ರೀತಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದೂರು ಬಂದ ಹಿನ್ನೆಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಸಿಂಗರ್ ವಿರುದ್ಧ ಕ್ರಿಮಿನಲ್ ಬೆದರಿಕೆ, ಸಾರ್ವಜನಿಕವಾಗಿ ಕಿರಿಕಿರಿ ಉಂಟು ಮಾಡುವ ಹೇಳಿಕೆ, ಉದ್ದೇಶಪೂರ್ವಕವಾಗಿ ಶಾಂತಿ ಭಂಗ ಸೇರಿದಂತೆ ಹಲವು ಸೆಕ್ಷನ್ ಅಡಿಯಲ್ಲಿ ದೂರು ದಾಖಲಾಗಿತ್ತು.
ಈ ಕೇಸ್ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಗಾಯಕ ಸೋನು ನಿಗಮ್ ಅವರಿಗೆ ಆವಲಹಳ್ಳಿ ಪೊಲೀಸರು ನೋಟಿಸ್ ಕೂಡ ಜಾರಿ ಮಾಡಿದ್ದರು. ಹೀಗಾಗಿ ಈ ಕೇಸ್‌ನಿಂದ ರಿಲೀಫ್ ಪಡೆಯಲು ಸೋನು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇಂದು ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸರಿಪಡಿಸಿ, ಮುಂದಿನ ವಿಚಾರಣೆಯನ್ನು ಮೇ 15ಕ್ಕೆ ಮುಂದೂಡಿದೆ.
ಏನಿದು ವಿವಾದ?
ಸೋನು ನಿಗಮ್ ಬೆಂಗಳೂರಿನ ಕಾಲೇಜಿನ ಕಾರ್ಯಕ್ರಮದಲ್ಲಿ ಸಂಗೀತದ ಮೂಲಕ ರಂಜಿಸುತ್ತಿದ್ದರು. ಈ ವೇಳೆ ಅಲ್ಲಿದ್ದ ಕೆಲ ಕನ್ನಡಿಗರು ಕನ್ನಡದ ಹಾಡು ಹಾಡಿ ಎಂದು ಕೇಳಿದ್ದರು. ಇದಕ್ಕೆ ವೇದಿಕೆಯಲ್ಲೇ ಕೋಪಗೊಂಡಿದ್ದ ಸೋನು ನಿಗಮ್, ಇದಕ್ಕೇನೆ ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ಆಗಿದ್ದು ಎಂದಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಹೇಳಿಕೆಗೆ ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾರೆ ಎಂದು ಪ್ರತಿಭಟನೆಗಳೂ ನಡೆದವು. ಬಳಿಕ ಸೋನು ನಿಗಮ್ ಕ್ಷಮೆಯಾಚಿಸಿದ್ದರು. ಆದರೂ ಅವರ ಮೇಲಿನ ಬ್ಯಾನ್ ತೆರವಾಗಿಲ್ಲ, ಮುಂದೆ ಅವರನ್ನು ಕನ್ನಡದ ಸಿನಿಮಾಗಳಲ್ಲಿ ಹಾಡಿಸುವುದಿಲ್ಲ ಎಂದು ಕೆಲವು ನಿರ್ದೇಶಕರು, ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications