Archana Udupa: ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರಾ ಗಾಯಕಿ ಅರ್ಚನಾ ಉಡುಪ?
ಕನ್ನಡದ ಖ್ಯಾತ ಗಾಯಕಿ ಅರ್ಚನಾ ಉಡುಪ ಕ್ಯಾನ್ಸರ್ ಬಳಲುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಇದೇ ಕಾರಣಕ್ಕೆ ಅರ್ಚನಾ ಅವರ ಹೇರ್‌ಕಟ್ ಕೂಡ ಬದಲಿಸಿಕೊಂಡಿದ್ದಾರೆ ಎಂದು ಭಾರಿ ಚರ್ಚೆಯಾಗಿತ್ತು. ಈ ಬಗ್ಗೆ ಅರ್ಚನಾ ಅವರೇ ಖುದ್ದಾಗಿ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿರುವ ಎಲ್ಲ ವಿಚಾರಗಳಿಗೂ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ಅರ್ಚನಾ ಉಡುಪ ಅವರ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಗಾಯಕಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕೆ ಅವರ ಹೇರ್‌ಸ್ಟೈಲ್ ಕೂಡ ಬದಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಅರ್ಚನಾ ಅವರು ಎಲ್ಲಿಯೂ ಮಾತನಾಡಿರಲಿಲ್ಲ. ಇದೀಗ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

ಎಲ್ಲರಿಗೂ ನಮಸ್ಕಾರ, ತುಂಬಾ ದಿನಗಳಿಂದ ಕಾಡುತ್ತಿರುವ ಎರಡು ವಿಚಾರಗಳ ಬಗ್ಗೆ ಸ್ಪಷ್ಟಪಡಿಸಲು ಈ ವಿಡಿಯೋ ಹಂಚಿಕೊಳ್ಳುತ್ತಿದ್ದೇನೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ಇದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು. ಕೆಲ ವರ್ಷಗಳ ಹಿಂದೆ ನಾನು ಇಂಟರ್ವ್ಯೂ ಕೊಟ್ಟಿದ್ದೆ. ಅದರ ನನಗೆ 20 ವರ್ಷಗಳ ಹಿಂದೆ ಗಂಟಲಿನಲ್ಲಿ ಸಣ್ಣ ಸಮಸ್ಯೆ ಎದುರಾಗಿ ಹಾಡಲು ಸಮಸ್ಯೆಯಾಗಿತ್ತು, ಇದರಿಂದ ನಾನು ಸ್ವಲ್ಪ ಸಮಯದವರೆಗೆ ಹಾಡಲು ಸಾಧ್ಯವಾಗಿರಲಿಲ್ಲ. ನಂತರ ಅದರಿಂದ ಹೇಗೆ ಹೊರಬಂದೆ ಎಂದೂ ಹೇಳಿದ್ದೆ ಎಂದಿದ್ದಾರೆ.
ಆದರೆ ಕೆಲವರು ಆ ಸಂದರ್ಶನದ ಪೂರ್ತಿ ವಿಡಿಯೋ ನೋಡದೆ, ಆ ಒಂದು ಸಣ್ಣ ವಿಡಿಯೋ ಕಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವದಂತಿ ಹಬ್ಬಿಸಿದ್ದಾರೆ. ಮುಖ್ಯವಾಗಿ ನಾನು ಈಗ ಹಾಡುವುದನ್ನು ನಿಲ್ಲಿಸಿದ್ದೇನೆ, ಅರ್ಚನಾ ಅವರಿಗೆ ಗಂಟಲು ಹೋಗಿದೆ ಎಂದೆಲ್ಲ ಸುದ್ದಿ ಹಬ್ಬಿಸಿದ್ದಾರೆ. ಇದು ಎಲ್ಲಿವರೆಗೆ ಅಂದ್ರೆ ನನಗೆ ಕ್ಯಾನ್ಸರ್ ಬಂದಿದೆ ಎನ್ನುವ ಮಟ್ಟಕ್ಕೆ ಸುಳ್ಳುಸುದ್ದಿ ಹರಡಿದ್ದಾರೆ. ಇದರಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಅರ್ಚನಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಈ ವದಂತಿಗಳಿಂದ ತುಂಬಾ ನೊಂದಿದ್ದೇನೆ. ಈಗ ಎಲ್ಲಿಗೆ ಹೋದರೂ ನೀವು ಆರೋಗ್ಯವಾಗಿದ್ದೀರ? ಚೆನ್ನಾಗಿದ್ದೀರಾ? ಹಾಡು ಹಾಡ್ತಿದ್ದೀರಾ? ನಿಲ್ಸಿದ್ದೀರಾ? ಎಂದು ಕೇಳುತ್ತಿದ್ದು ಇದರಿಂದ ಕಿರಿಕಿರಿಯೂ ಹೆಚ್ಚಾಗುತ್ತಿದೆ. ಅಸಲಿಗೆ ನಾನು ಮೊದಲಿಗಿಂತಲೂ ಹೆಚ್ಚು ಬ್ಯುಸಿಯಾಗಿದ್ದು, ಹಾಡುಗಳನ್ನು ಹೆಚ್ಚಾಗಿ ಹಾಡುತ್ತಿದ್ದೇನೆ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಹೇರ್‌ಕಟ್ ಬದಲಾಗಿದ್ದೇಕೆ?
ಮತ್ತೊಂದು ವಿಷಯವೆಂದರೆ ನನ್ನ ಶಾರ್ಟ್ ಹೇರ್‌ಕಟ್. ನಾನು ಸೀರಿಯಲ್‌ವೊಂದರಲ್ಲಿ ನಟಿಸುತ್ತಿದ್ದು, ಆ ಪಾತ್ರಕ್ಕಾಗಿ ಈ ಹೊಸ ಶೈಲಿಯ ಹೇರ್‌ಕಟ್ ಮಾಡಿಸಿಕೊಂಡಿದ್ದೇನೆ. ಆ ಪಾತ್ರಕ್ಕೆ ಹೀಗೆಯೇ ಹೇರ್‌ಕಟ್ ಬೇಕು ಎಂದು ಕೇಳಿದ್ದರು. ಹಾಗಾಗಿ ನನ್ನ ಕೂದಲ ಶೈಲಿ ಬದಲಿಸಿಕೊಂಡಿದ್ದೇನೆ. ನನಗೆ ಯಾವ ಆರೋಗ್ಯ ಸಮಸ್ಯೆಯೂ ಇಲ್ಲ, ಅವರವರೇ ಏನೇನೋ ಊಹಾಪೋಹದ ಸುದ್ದಿಗಳನ್ನು ಹಬ್ಬಿಸಿದ್ದಾರೆ. ನನಗೆ ಕ್ಯಾನ್ಸರ್ ಬಂದಿದೆ ಎಂಬ ಹಂತಕ್ಕೂ ಮಾತನಾಡಿದ್ದಾರೆ. ಈ ವಿಚಾರಗಳಿಂದ ನನ್ನ ತಂದೆ ತಾಯಿ, ಕುಟುಂಬಸ್ಥರಿಗೂ ತುಂಬಾ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಇಂತಹ ಸಣ್ಣ ಸಣ್ಣ ವಿಡಿಯೋ ಕ್ಲಿಪ್ ನೋಡಿ ದಯವಿಟ್ಟು ಏನೇನೋ ಊಹೆ ಮಾಡಿಕೊಳ್ಳಬೇಡಿ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರಲಿ, ದೇವರ ದಯದಿಂದ ನಾನು ಗಟ್ಟಿಮುಟ್ಟಾಗಿ, ಆರೋಗ್ಯವಾಗಿಯೇ ಇದ್ದೇನೆ. ವದಂತಿಗಳನ್ನು ನಂಬಬೇಡಿ ಎನ್ನುವುದೇ ನನ್ನ ಕೋರಿಕೆ ಎಂದು ಅರ್ಚನಾ ಉಡುಪ ಮನವಿ ಮಾಡಿದ್ದಾರೆ.












Click it and Unblock the Notifications