ಮಡೆನೂರು ಮನುಗೆ ಬಿಗ್ ಶಾಕ್! ಬ್ಯಾನ್ ಮಾಡಲು ಮುಂದಾದ ಚಿತ್ರರಂಗ
ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಈಗಷ್ಟೇ ತಮ್ಮ ಚೊಚ್ಚಲ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಎಂಟ್ರಿ ನೀಡಿದ್ದಾರೆ. ಆದರೆ ಮೊದಲ ಸಿನಿಮಾ ರಿಲೀಸ್ ಹೊತ್ತಲ್ಲೇ ಅತ್ಯಾಚಾರ ಕೇಸ್‌ನಲ್ಲಿ ಮನು ಜೈಲುವಾಸದಲ್ಲಿದ್ದಾರೆ. ಸಹನಟಿಯೊಬ್ಬರು ನೀಡಿರುವ ದೂರಿನ ಮೇರೆಗೆ ಮನು ಅವರ ಬಂಧನವಾಗಿದೆ. ಮತ್ತೊಂದೆಡೆ ಕನ್ನಡ ಚಿತ್ರರಂಗದಿಂದ ಮನು ಅವರನ್ನ ಬ್ಯಾನ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಅತ್ಯಾಚಾರ ಕೇಸ್‌ನಿಂದಾಗಿ ಮಡೆನೂರು ಮನು ಮೇಲೆ ನಿಷೇಧ ಹೇರುತ್ತಿಲ್ಲ, ಬದಲಾಗಿ ಇದಕ್ಕೆ ಮತ್ತೊಂದು ಬಲವಾದ ಕಾರಣವೂ ಇದೆ.
ಹೌದು ಕಿರುತೆರೆ ನಟಿ ನೀಡಿರುವ ದೂರಿನ ಮೇರೆಗೆ ಮಡೆನೂರು ಮನು ಅವರನ್ನು ಪೊಲೀಸರು ಬಂಧಿಸಿದ್ದು, ಸದ್ಯ ಕಸ್ಟಡಿಯಲ್ಲಿದ್ದಾರೆ. ನಟನ ಮೇಲೆ ಸಂತ್ರಸ್ತ ನಟಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮನು ಬಗ್ಗೆ ದಿನಕ್ಕೊಂದು ಆರೋಪಗಳು ಕೇಳಿಬರುತ್ತಲೇ ಇವೆ. ಇದರ ನಡುವೆ ಅವರ ಮೊದಲ ಸಿನಿಮಾ ಕುಲದಲ್ಲಿ ಕೀಳ್ಯಾವುದೋ ಕೂಡ ರಿಲೀಸ್ ಆಗಿದೆ. ಈಗ ತಾನೇ ಚಿತ್ರರಂಗಕ್ಕೆ ಕಾಲಿಟ್ಟಿರುವ ಮನು ಮೇಲೆ ನಿಷೇಧ ಹೇರಲು ಸ್ಯಾಂಡಲ್‌ವುಡ್ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಿದೆ. ಇದಕ್ಕೆ ಕಾರಣ ಆ ಒಂದು ಆಡಿಯೋ..

ಮನು ಜೈಲು ಸೇರಿದ ಮೇಲೆ ಹಲವು ಆಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಪೈಕಿ ಸ್ಯಾಂಡಲ್‌ವುಡ್ ನಟರಾದ ಶಿವರಾಜ್‌ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಬಗ್ಗೆ ಮನು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕೂಡ ಸಂಚಲನ ಸೃಷ್ಟಿಸಿದೆ. ವೈರಲ್ ವಿಡಿಯೋದಲ್ಲಿ ʼದರ್ಶನ್ ಸತ್ತೇ ಹೋಗಿದ್ದಾರೆ, ಆದರೆ ಸಿನಿಮಾ ಮಾಡಲ್ಲ, ಶಿವರಾಜ್‌ಕುಮಾರ್ ಇನ್ನೊಂದು ಆರು ವರ್ಷ ಅಷ್ಟೇ, ಧ್ರುವ ಸರ್ಜಾ ಕ್ರೇಜ್ ಕೂಡ ಇನ್ನು ಕೆಲವೇ ವರ್ಷʼ ಎಂದೆಲ್ಲ ಹೇಳಲಾಗಿದೆ. ಇದು ಮನು ಅವರ ಬಾಯಲ್ಲಿ ಬಂದಿರುವ ಮಾತುಗಳು ಎಂದೇ ಹೇಳಲಾಗುತ್ತಿದೆ. ಆದರೆ, ಇದಿನ್ನೂ ಸ್ಪಷ್ಟವಾಗಿಲ್ಲ.
ಆದರೆ, ಸ್ಯಾಂಡಲ್‌ವುಡ್‌ನ ಪ್ರಮುಖ ಮೂವರು ನಟರ ಬಗ್ಗೆ ಅವಹೇಳನಕಾರಿಯಾಗಿ ಮನು ಮಾತನಾಡಿದ್ದಾರೆ ಎಂದು ಅವರ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ನಟರ ಸಾವಿನ ಬಗ್ಗೆಯೂ ಕೇವಲವಾಗಿ ಮಾತನಾಡಿದ್ದಾರೆ ಎಂದು ಮನುಗೆ ವಾರ್ನಿಂಗ್ ಕೂಡ ಕೊಡುತ್ತಿದ್ದಾರೆ. ಸದ್ಯ ಈ ವಿಚಾರ ಕರ್ನಾಟಕ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದು, ಮನು ಮೇಲೆ ನಿಷೇಧ ಹೇರಲು ಮುಂದಾಗಿದೆ.
ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಮಡೆನೂರು ಮನು ಆಡಿರುವ ಮಾತುಗಳನ್ನು ಚಿತ್ರರಂಗ ಬಲವಾಗಿ ಖಂಡಿಸುತ್ತದೆ. ಶಿವರಾಜ್ ಕುಮಾರ್, ದರ್ಶನ್ ಹಾಗೂ ಧ್ರುವಾ ಸರ್ಜಾ ಅವರ ಕುಟುಂಬವಾಗಲಿ, ಕನ್ನಡ ಚಿತ್ರರಂಗದ ಯಾರೊಬ್ಬರು ಕೂಡ ಮಡೆನೂರು ಮನುಗೆ ಕೇಡು ಬಯಸಲಿಲ್ಲ. ಅವರ ಸಿನಿಮಾಗೆ ಸಾಧ್ಯವಾದಷ್ಟು ಸಹಕಾರ ನೀಡುತ್ತಲೇ ಬಂದಿದ್ದೇವೆ. ಇಂದು ಕನ್ನಡ ಚಿತ್ರರಂಗ ಉಸಿರಾಡುತ್ತಿದ್ದರೆ ಅದಕ್ಕೆ ಶಿವಣ್ಣ ಅವರ ಕೊಡುಗೆ ಸಾಕಷ್ಟಿದೆ. ಅಂತಹ ವ್ಯಕ್ತಿಯ ವಿರುದ್ಧ ಮನು ಈ ರೀತಿ ಮಾತನಾಡಿರುವುದಕ್ಕೆ ಕ್ಷಮೆಯೇ ಇಲ್ಲ ಎಂದಿದ್ದಾರೆ.
ಮನು ಮದ್ಯದ ಅಮಲಿನಲ್ಲಿ ಈ ರೀತಿ ಮಾತನಾಡಿದ್ರಾ? ಗೊತ್ತಿದ್ದೂ ಮಾತನಾಡಿದ್ರಾ ಅನ್ನೋದು ನಮಗೆ ಗೊತ್ತಿಲ್ಲ. ಒಂದಂತೂ ನಿಜ, ಮಡೆನೂರು ಮನು ಮಾತನಾಡಿದ ಮಾತುಗಳು ಕ್ಷಮೆಗೆ ಅರ್ಹವೂ ಅಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸಭೆ ಸೇರಿ ಚಿತ್ರರಂಗ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಒಟ್ಟಾರೆ ಕನ್ನಡ ಚಿತ್ರರಂಗವು ಮಡೆನೂರು ಮನು ಹೇಳಿಕೆಯನ್ನು ಖಂಡಿಸುತ್ತದೆ. ಹಾಗಾಗಿ ಮನು ವಿರುದ್ಧ ಕ್ರಮ ತೆಗೆದಕೊಳ್ಳುವ ನಿರ್ಧಾರ ಮಾಡಿದೆ. ಅವರನ್ನು ಬ್ಯಾನ್ ಮಾಡುವ ಹಕ್ಕು ನಮಗೆ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಮಡೆನೂರು ಮನು ಅವರನ್ನು ಚಿತ್ರರಂಗದಿಂದ ದೂರ ಇಡಲಿದೆ ಎಂದು ಹೇಳಿದ್ದಾರೆ.












Click it and Unblock the Notifications