Samantha: ಖ್ಯಾತ ನಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಸಮಂತಾ ಮಾಜಿ ಪತಿ ನಾಗಚೈತನ್ಯ
ಸಮಂತಾ ರುತ್‌ಪ್ರಭು ಮಾಜಿ ಪತಿ ನಾಗ ಚೈತನ್ಯ ಮತ್ತೊಂದು ಮದುವೆಗೆ ಸಜ್ಜಾಗಿದ್ದಾರೆ. ನಾಗ ಚೈತನ್ಯ ಮತ್ತು ನಟಿ ಸೋಭಿತಾ ಧೂಳಿಪಾಲ ಅವರು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ದಿ ಗ್ರೇಟ್ ಆಂಧ್ರ ವರದಿ ಮಾಡಿರುವ ಪ್ರಕಾರ ಆಗಸ್ಟ್ 8 (ಇಂದು) ಹೈದರಾಬಾದ್‌ನ ಖಾಸಗಿ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ. ಸಮಂತಾ ಜೊತೆ ವಿಚ್ಛೇದನ ಪಡೆದ ಬಳಿಕ ನಾಗ ಚೈತನ್ಯ ಸೋಭಿತಾ ಧೂಳಿಪಾಲ ಅವರ ಜೊತೆ ಪ್ರೇಮದಲ್ಲಿದ್ದರು ಎಂದು ವರದಿಗಳಾಗಿದ್ದವು.
ಟಾಲಿವುಡ್‌ನ ಹಿರಿಯ ನಟ ಹಾಗೂ ನಾಗ ಚೈತನ್ಯ ಅವರ ತಂದೆ ನಾಗಾರ್ಜುನ ಈ ನಿಶ್ಚಿತಾರ್ಥದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ. ನಿಶ್ಚಿತಾರ್ಥ ಮುಗಿದ ಬಳಿಕ ಮಾಧ್ಯಮಗಳ ಜೊತೆ ನಾಗಾರ್ಜುನ ಮಾತನಾಡಲಿದ್ದು, ನಿಶ್ಚಿತಾರ್ಥದ ಫೋಟೊಗಳನ್ನು ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. ನಾಗಚೈತನ್ಯ ಮತ್ತು ಸೋಭಿತಾ ಧೂಳಿಪಾಲ ಈ ಬಗ್ಗೆ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ಇದೇ ವರ್ಷ ಈ ಜೋಡಿ ಹಸೆಮಣೆ ಏರುವ ಸಾಧ್ಯತೆ ಇದೆ. ನಾಗ ಚೈತನ್ಯ ಮತ್ತು ಸೋಭಿತಾ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರೂ, ಇಬ್ಬರ ಸಂಬಂಧವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ. ಇಬ್ಬರೂ ಹಲವು ಬಾರಿ ವಿದೇಶಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಗುಟ್ಟಾಗೇನೂ ಉಳಿದಿರಲಿಲ್ಲ.
ಜೋಟಿಯಾಗಿ ಫೋಟೊಗಳನ್ನು ಇಬ್ಬರೂ ಹಂಚಿಕೊಳ್ಳದೇ ಇದ್ದರೂ ಒಂದೇ ಸ್ಥಳದಲ್ಲಿ ಒಂದೇ ಸಮಯದಲ್ಲಿ ಇದ್ದರು ಎನ್ನುವುದನ್ನು ಅಭಿಮಾನಿಗಳು ಕಂಡುಕೊಂಡಿದ್ದರು. ವರ್ಷದ ಆರಂಭದಲ್ಲಿ ಲಂಡನ್‌ನಲ್ಲಿ ವೈನ್ ಟೇಸ್ಟಿಂಗ್ ಸೆಷನ್‌ನಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದರು.
ಇದೇ ವರ್ಷದ ಏಪ್ರಿಲ್ ತಿಂಗಳಿನಲ್ಲಿ ನಾಗಚೈತನ್ಯ ಮತ್ತು ಸೋಭಿತಾ ಅವರು ತೆಗೆದುಕೊಂಡ ಸಫಾರಿ ಪ್ರವಾಸದ ಚಿತ್ರಗಳನ್ನು ತಮ್ಮ ಪುಟಗಳಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಅವರು ಪೋಸ್ಟ್ ಮಾಡಿದ ಫೋಟೋಗಳಲ್ಲಿ ಹೋಲಿಕೆ ಇರುವುದನ್ನು ಗಮನಿಸಿದ್ದರು, ಇಬ್ಬರೂ ಒಟ್ಟಿಗೆ ಇದ್ದಾರೆ ಎಂದು ಹೇಳಿದ್ದರು.
ನಾಗ ಚೈತನ್ಯ ಮತ್ತು ಸೋಭಿತಾ ಕಳೆದ ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿ ಇದೆ. ನಾಗ ಚೈತನ್ಯ ಸಮಂತಾ ಜೊತೆ ವಿಚ್ಛೇದನ ಘೋಷಣೆ ಮಾಡಿದ ಹಲವು ವರ್ಷಗಳ ಬಳಿಕ ಸೋಭಿತಾ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು ಎಂದು ಹೇಳಲಾಗಿದೆ.
ಐದು ವರ್ಷಗಳ ಕಾಲ ನಾಗ ಚೈತನ್ಯ ಮತ್ತು ಸಮಂತಾ ಅವರ ವೈವಾಹಿಕ ಜೀವನ 2021ರಲ್ಲಿ ಕೊನೆಯಾಗಿತ್ತು. ಸ್ಟಾರ್ ದಂಪತಿಗಳು ವಿಚ್ಛೇದನ ಘೋಷಣೆ ಮಾಡಿದ್ದರು. ಸಮಂತಾ ಆರೋಗ್ಯ ಸಮಸ್ಯೆಗಳ ಜೊತೆ ಹೋರಾಡಿದ ಬಳಿಕ ಸುಧಾರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಆಧ್ಯಾತ್ಮದ ಕಡೆಗೂ ಹೆಚ್ಚು ವಾಲುತ್ತಿದ್ದಾರೆ.
ನಾಗ ಚೈತನ್ಯ ಅವರ 'ತಾಂಡೇಲ್' ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಸಾಯಿ ಪಲ್ಲವಿ ಈ ಸಿನಿಮಾನದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸೋಭಿತಾ ಧೂಳಿಪಾಲ ದೇವ್ ಪಟೇಲ್ ಅವರ 'ಮಂಕಿ ಮ್ಯಾನ್' ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.












Click it and Unblock the Notifications