Sai Pallavi: ಆ ಪಾತ್ರಕ್ಕೆ ನಾನು ಲಾಯಕ್ಕಿರಲಿಲ್ಲ: ಸಿನಿಮಾ ಸೋಲಿನ ಬೆನ್ನಲ್ಲೇ ನಟಿ ಸಾಯಿ ಪಲ್ಲವಿ ಹೇಳಿಕೆ ವೈರಲ್
ಬಾಲಿವುಡ್ನ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಅಭಿನಯದ ಹೊಸ ಸಿನಿಮಾ 'ಏಕ್ ದಿನ್' (Ek Din) ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಅನುಭವಿಸಿದೆ. 2016ರ ಥಾಯ್ ಸಿನಿಮಾ 'ಒನ್ ಡೇ' ಚಿತ್ರದ ರಿಮೇಕ್ ಆಗಿರುವ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇದರ ಬೆನ್ನಲ್ಲೇ ಸಾಯಿ ಪಲ್ಲವಿ ನೀಡಿರುವ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ.
25 ಕೋಟಿ ಬಜೆಟ್, ಗಳಿಕೆ ಕೇವಲ 4 ಕೋಟಿ
ಸುಮಾರು 25 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ 'ಏಕ್ ದಿನ್', ಬಿಡುಗಡೆಯಾದ ಮೊದಲ ವಾರದಲ್ಲಿ ಗಳಿಸಿದ್ದು ಕೇವಲ 4 ಕೋಟಿ ರೂಪಾಯಿ ಮಾತ್ರ. ಜುನೈದ್ ಖಾನ್ ಈ ಹಿಂದೆ ಖುಷಿ ಕಪೂರ್ ಜೊತೆ ನಟಿಸಿದ್ದ 'ಲವ್ಯಾಪ' ಸಿನಿಮಾ ಕೂಡ ಸೋತಿತ್ತು. ಇದೀಗ 'ಏಕ್ ದಿನ್' ಅದರ ಸಾಧನೆಯನ್ನೂ ಮೀರಿಸಲು ಸಾಧ್ಯವಾಗದೆ 'ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿದೆ.

ಸಾಯಿ ಪಲ್ಲವಿ ಹಳೆಯ ವಿಡಿಯೋ ವೈರಲ್
ಸಿನಿಮಾ ಸೋಲುತ್ತಿದ್ದಂತೆಯೇ ಚಿತ್ರದ ನಾಯಕಿ ಸಾಯಿ ಪಲ್ಲವಿ ಅವರ ಹಳೆಯ ಸಂದರ್ಶನವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದರಲ್ಲಿ ಅವರು ಚಿತ್ರದ ಪಾತ್ರದ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. "ಕೆಲವು ದೃಶ್ಯಗಳಲ್ಲಿ ನಾನು ಹೆಚ್ಚು ಗಂಭೀರವಾಗಿ ನಟಿಸಿದೆ ಅನಿಸುತ್ತದೆ. ಅವುಗಳನ್ನು ಇನ್ನೂ ಸರಳವಾಗಿ ಮಾಡಬಹುದಿತ್ತು. ನಿಜ ಹೇಳಬೇಕೆಂದರೆ, ಈ ಪಾತ್ರಕ್ಕೆ ನಾನು ಸರಿಯಾದ ನಟಿಯಾಗಿರಲಿಲ್ಲ" ಎಂದು ಸಾಯಿ ಪಲ್ಲವಿ ಹೇಳಿಕೊಂಡಿದ್ದಾರೆ.
ಅಮೀರ್ ಖಾನ್ಗೇ ನೇರವಾಗಿ ಹೇಳಿದ್ದ ನಟಿ
ಸಿನಿಮಾದ ಸ್ಕ್ರೀನಿಂಗ್ ಮುಗಿದ ನಂತರ ಅಮೀರ್ ಖಾನ್ ಅವರು ಸಾಯಿ ಪಲ್ಲವಿ ಬಳಿ ಸಿನಿಮಾ ಬಗ್ಗೆ ಅಭಿಪ್ರಾಯ ಕೇಳಿದಾಗ, ಅವರು ಅತ್ಯಂತ ನೇರವಾಗಿ ತಮ್ಮ ಅಸಮಾಧಾನ ಹಂಚಿಕೊಂಡಿದ್ದರು. "ನಾನು ಈ ಪಾತ್ರಕ್ಕೆ ಸರಿಯಾದ ಆಯ್ಕೆ ಎಂದು ನನಗೆ ಅನ್ನಿಸುತ್ತಿಲ್ಲ, ನಾನು ಇಲ್ಲಿ 'ಮಿಸ್ಕಾಸ್ಟ್' ಆಗಿದ್ದೇನೆ ಎಂದು ನನಗೆ ಅನಿಸುತ್ತದೆ" ಎಂದು ಸಾಯಿ ಪಲ್ಲವಿ ಉತ್ತರಿಸಿದ್ದರು.
ಇದನ್ನು ಕೇಳಿ ಆಶ್ಚರ್ಯಚಕಿತರಾದ ಅಮೀರ್ ಖಾನ್, "ಏನು ಹೀಗೆ ಹೇಳುತ್ತಿದ್ದೀಯಾ?" ಎಂದು ಪ್ರಶ್ನಿಸಿದಾಗ, ಸಾಯಿ ಪಲ್ಲವಿ "ಈ ಪಾತ್ರವು ಒಬ್ಬ ಹೊಸಬರಿಗೆ ಸಿಗಬೇಕಿತ್ತು. ಈ ಪಾತ್ರಕ್ಕೆ ಬೇಕಾದ ತುಂಟಾಟ ಮತ್ತು ಚಿನಕುರುಳಿ ಗುಣ ನನ್ನಲ್ಲಿಲ್ಲ. ಈ ಚಿತ್ರಕ್ಕೆ ಸಂಪೂರ್ಣವಾಗಿ ಬೇರೆಯೇ ಆದ ನಟಿಯ ಅಗತ್ಯವಿತ್ತು" ಎಂದಿದ್ದರು.
ಏನಿದು ಸಿನಿಮಾದ ಕಥೆ?
'ಏಕ್ ದಿನ್' ಸಿನಿಮಾವು ಫ್ಯಾಂಟಸಿ ಮತ್ತು ರೊಮ್ಯಾಂಟಿಕ್ ಕಥಾಹಂದರವನ್ನು ಹೊಂದಿದೆ. ಮೌನವಾಗಿ ಪ್ರೀತಿಸುವ 'ರೋಹನ್' (ಜುನೈದ್ ಖಾನ್), ತನ್ನ ಕನಸಿನ ಹುಡುಗಿ 'ಮೀರಾ' (ಸಾಯಿ ಪಲ್ಲವಿ) ಜೊತೆ ಕೇವಲ ಒಂದು ದಿನ ಕಳೆಯಲು ಬಯಸುತ್ತಾನೆ. ಅವನ ಈ ಆಸೆಯನ್ನು ಈಡೇರಿಸಲು ಒಂದು ಮಾಂತ್ರಿಕ ಗಂಟೆ ಸಹಾಯ ಮಾಡುತ್ತದೆ. ಆ ಒಂದು ವಿಶೇಷ ದಿನದ ಸುತ್ತ ಇಡೀ ಸಿನಿಮಾ ಸಾಗುತ್ತದೆ.
25 ಕೋಟಿ ಬಜೆಟ್ನ ಈ ಸಿನಿಮಾ ಕೇವಲ 4 ಕೋಟಿ ಗಳಿಸಿರುವುದು ಬಾಲಿವುಡ್ನಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಸಾಯಿ ಪಲ್ಲವಿ ಅಂತಹ ಗಂಭೀರ ನಟನೆಯ ನಟಿ ಈ ತುಂಟಾಟದ ಪಾತ್ರಕ್ಕೆ ಒಗ್ಗಲಿಲ್ಲ ಎಂಬ ಅವರದ್ದೇ ಸ್ವಯಂ ವಿಮರ್ಶೆ ಈಗ ನಿಜವಾದಂತಿದೆ. ಅಮೀರ್ ಖಾನ್ ಅವರ ಪ್ರಯತ್ನದ ಹೊರತಾಗಿಯೂ ಜುನೈದ್ ಖಾನ್ಗೆ ಈ ಚಿತ್ರವು ಯಾವುದೇ ಬ್ರೇಕ್ ನೀಡುವಲ್ಲಿ ವಿಫಲವಾಗಿದೆ.
ಗುಣಮಟ್ಟದ ಸಿನಿಮಾಗಳಿಗೆ ಹೆಸರಾಗಿದ್ದ 'ಅಮೀರ್ ಖಾನ್ ಪ್ರೊಡಕ್ಷನ್ಸ್' ಬ್ಯಾನರ್ ಇತ್ತೀಚಿನ ದಿನಗಳಲ್ಲಿ ಸತತ ಸೋಲುಗಳನ್ನು ಕಾಣುತ್ತಿದೆ. 'ಸಿತಾರೆ ಜಮೀನ್ ಪರ್' ಯಶಸ್ಸು ಕಂಡಿದ್ದರೂ, ಈಗ 'ಏಕ್ ದಿನ್' ವೈಫಲ್ಯವು ನಿರ್ಮಾಣ ಸಂಸ್ಥೆಗೆ ದೊಡ್ಡ ಹೊಡೆತ ನೀಡಿದೆ. ಜುನೈದ್ ಖಾನ್ ಅವರ ಸಿನಿ ಕೆರಿಯರ್ಗೆ ಗಟ್ಟಿ ಅಡಿಪಾಯ ಹಾಕಿಕೊಡಲು ಅಮೀರ್ ಖಾನ್ ಮಾಡಿದ ಪ್ರಯತ್ನ ಸದ್ಯಕ್ಕೆ ಕೈಗೂಡಿಲ್ಲ.













Click it and Unblock the Notifications