ಸರಿಗಮಪ ಜ್ಯೂರಿ 'ರಿದಂ ಬಾಲಿ' ನಿಧನಕ್ಕೆ ಕಂಬನಿ ಮಿಡಿದ ಸಾಧು ಕೋಕಿಲ ಹೇಳಿದ್ದೇನು?
ಜನಪ್ರಿಯ ಮೃದಂಗ ವಾದಕ, ಜೀ ಕನ್ನಡ ವಾಹಿನಿಯ ಜನಪ್ರಿಯ ಸರಿಗಮಪ ಕಾರ್ಯಕ್ರಮದ ಜ್ಯೂರಿಯಾಗಿದ್ದ ಎಸ್ ಬಾಲಸುಬ್ರಹ್ಮಣ್ಯಂ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಸಂಗೀತ ಕ್ಷೇತ್ರದಲ್ಲಿ ಮೃದಂಗ ವಾದನದಿಂದ ಸಾಕಷ್ಟು ಹೆಸರು ಮಾಡಿದ್ದರು. ಗುರುವಾರ ಬೆಂಗಳೂರಿನಲ್ಲಿ ಅವರು ನಿಧನರಾಗಿದ್ದು ಸಂಗೀತ ಲೋಕಕ್ಕೆ ಆಘಾತವಾಗಿದೆ. ರಿದಂ ಬಾಲಿ ನಿಧನಕ್ಕೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು, ಮುಖ್ಯವಾಗಿ ಸಂಗೀತ ಲೋಕದ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ರಿದಂ ಬಾಲಿ ಅವರ ನಿಧನಕ್ಕೆ ಕರ್ನಾಟಕ ಸಿನಿಮಾ ಮ್ಯುಸಿಷಿಯನ್ ಅಸೋಸಿಯೇಷನ್ (ಕೆಎಫ್‌ಎಂಎ) ಸಂತಾಪ ವ್ಯಕ್ತಪಡಿಸಿದೆ. ಡೋಲಕ್, ಮೃದಂಗ, ತಬಲಾ ವಾದನದಲ್ಲಿ ರಿದಂ ಬಾಲಿ ಪರಿಣಿತಿ ಹೊಂದಿದ್ದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದ ಹಲವು ಆವೃತ್ತಿಗಳಲ್ಲಿ ಅವರು ತೀರ್ಪುಗಾರರ ತಂಡದಲ್ಲಿ ಕೆಲಸ ಮಾಡಿದ್ದರು. ಅಲ್ಲದೆ ರಮ್ಯ ಕಲ್ಚರಲ್ ಅಕಾಡೆಮಿ ಸ್ಥಾಪಿಸುವ ಮೂಲಕ ನೂರಾರು ಹೊಸ ಕಲಾವಿದರನ್ನು ರೂಪಿಸಿದ್ದರು. ನಟ ಶಂಕರ್ ನಾಗ್ ಅವರ ಜೊತೆ ಕೂಡ ಬಾಲಿ ಉತ್ತಮ ಒಡನಾಟ ಹೊಂದಿದ್ದರು. ಶಂಕರ್ ನಾಗ್ ಅವರ ಸಂಕೇತ್ ಸ್ಟುಡಿಯೋ ನಿರ್ಮಾಣದಲ್ಲಿ ಬಾಲಿ ಅವರ ಪಾತ್ರ ಮುಖ್ಯವಾಗಿತ್ತು.

ಸಾಧುಕೋಕಿಲ ಸಂತಾಪ
ರಿದಂ ಬಾಲಿ ನಿಧನಕ್ಕೆ ಕರ್ನಾಟಕ ಸಿನಿಮಾ ಮ್ಯುಸಿಷಿಯನ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಸಂಗೀತ ನಿರ್ದೇಶಕ, ನಟ ಸಾಧು ಕೋಕಿಲ ಸಂತಾಪ ವ್ಯಕ್ತಪಡಿಸಿದ್ದಾರೆ. ಬಾಲಿ ಅವರ ನಿಧನ ಬಹಳಷ್ಟು ದುಃಖ ತಂದಿದೆ. ನನ್ನಂತಹ ನೂರಾರು ಕಲಾವಿದರನ್ನು ಅವರು ಬೆಳೆಸಿದ್ದಾರೆ. ಕಲೆಯನ್ನೇ ಜೀವನವನ್ನಾಗಿ ರೂಢಿಸಿಕೊಂಡಿದ್ದವರು. ಅವರ ಸಾವು ನನಗೆ ತುಂಬಾ ನೋವು ತಂದಿದೆ, ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಹೇಳಿದ್ದಾರೆ. ರಿದಂ ಬಾಲಿ ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್ ಆಗಿ ಪ್ರಸಿದ್ಧಿ ಪಡೆದಿದ್ದರು.
ನಮ್ಮಂತಹ ನೂರಾರು ಕಲಾವಿದರಿಗೆ ಮಾರ್ಗದರ್ಶನ ನೀಡಿದ್ದರು. ಯಾವುದೇ ಜಾತಿ ಬೇಧ ಮಾಡದೆ ಕಲೆಯನ್ನು ಮಾತ್ರ ಗುರುತಿಸಿ ಪ್ರೋತ್ಸಾಹ ನೀಡಿದವರು. ಚಿತ್ರರಂಗದಲ್ಲಿ ನಾವು ಇಂದು ಕೆಲಸ ಮಾಡುತ್ತಿದ್ದರೆ ಅದಕ್ಕೆ ಅವರ ಕೊಡುಗೆ ತುಂಬಾ ಇದೆ. ಕನ್ನಡ ಚಿತ್ರರಂಗ ಚೆನ್ನೈನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಾಗ ಎಲ್ಲಾ ಕಲಾವಿದರನ್ನು ಒಟ್ಟುಗೂಡಿಸಿ ಬೆಳೆಸಿದರು. ಅವರನ್ನು ಕಳೆದುಕೊಂಡಿದ್ದ ನಮಗೆ ದೊಡ್ಡ ನಷ್ಟ ಎಂದು ಸಾಧುಕೋಕಿಲ ಹೇಳಿದರು.
ಅಂತ್ಯಸಂಸ್ಕಾರ ಯಾವಾಗ?
ಎಸ್ ಬಾಲಸುಬ್ರಹ್ಮಣ್ಯಂ ಅವರ ಅಂತ್ಯಸಂಸ್ಕಾರವನ್ನು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಬನಶಂಕರಿಯಲ್ಲಿರುವ ಚಿತಾಗಾರದಲ್ಲಿ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.












Click it and Unblock the Notifications