ನಮ್ಮಿಂದ ಬೆಳೆದವರಿಗೆ ನಾವು ಬೇಕಾಗಿಲ್ಲ, ಗೇಟ್‌ನಿಂದ ಹೊರಗೆ ನಿಲ್ಲಿಸ್ತಾರೆ: ರಾಕ್‌ಲೈನ್ ವೆಂಕಟೇಶ್
ಕನ್ನಡ ಚಿತ್ರರಂಗದ ಬಗ್ಗೆ ಖ್ಯಾತ ನಿರ್ದೇಶಕ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಬೇಸರದ ಮಾತುಗಳನ್ನಾಡಿದ್ದಾರೆ. ಇತ್ತೀಚೆಗೆ ಕಿಚ್ಚ ಸುದೀಪ್ ಅವರ ಮಾರ್ಕ್ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಕ್‌ಲೈನ್ ವೆಂಕಟೇಶ್, ಕೆಲ ಬೇಸರದ ಸಂಗತಿಗಳನ್ನು ವೇದಿಕೆಯಲ್ಲೇ ಹೇಳಿಕೊಂಡಿದ್ದಾರೆ. ಅಂದು ನಮ್ಮಿಂದ ಬೆಳೆದವರೇ, ಇಂದು ನಮ್ಮನ್ನು ಗೇಟ್‌ನಿಂದ ಹೊರಗೆ ನಿಲ್ಲಿಸುತ್ತಾರೆ. ನಮ್ಮಿಂದ ಬೆಳೆದವರಿಗೆ ಈಗ ನಾವು ಬೇಕಾಗಿಲ್ಲ ಎಂದಿದ್ದಾರೆ.
'ನಮ್ಮ ಕನ್ನಡ ಚಿತ್ರರಂಗದ ಆದಾಯಕ್ಕೆ ಇರೋದು ಎರಡೇ ಮೂಲ. ಒಂದು ಬಾಕ್ಸಾಫೀಸ್, ಇನ್ನೊಂದು ಒಟಿಟಿ. ಇಂದಿನ ಚಿತ್ರರಂಗ ಕೂಡ ಒಟಿಟಿ ಮೇಲೆ ಅವಲಂಬಿಸಿದೆ. ಸದ್ಯ ಕನ್ನಡಕ್ಕೆ ಒಟಿಟಿ ಬಾಗಿಲು ಕ್ಲೋಸ್ ಆಗಿದೆ. ಕನ್ನಡ ಸಿನಿಮಾಗಳನ್ನು ತೆಗೆದುಕೊಳ್ಳಲ್ಲ ಎಂದು ಅವರು ಓಪನ್ ಆಗಿ ಹೇಳ್ತಾರೆ' ಎಂದು ರಾಕ್‌ಲೈನ್ ಅಸಮಾಧಾನ ಹೊರಹಾಕಿದ್ದಾರೆ.

'ಮೊದಲಿಗೆ ಒಟಿಟಿ ನಮ್ಮ ಕನ್ನಡ ಸಿನಿಮಾಗಳನ್ನು ಬಾಚಿ ತಬ್ಬಿಕೊಳ್ತು. ಆದರೆ ಈಗ ಗೇಟ್‌ನಿಂದ ಆಚೆ ನಮ್ಮನ್ನು ನಿಲ್ಲಿಸಿದ್ದಾರೆ. ಇದನ್ನ ನಾವೆಲ್ಲ ನೆನಪಿನಲ್ಲಿಡಬೇಕು. ಮೊದಲು ಒಟಿಟಿಯವರು ನಮ್ಮನ್ನು ಬಾಚಿ ತಬ್ಬಿಕೊಂಡಾಗ ಇಂತಹ ಶಕ್ತಿ ನಮಗೆ ಸಿಕ್ಕಿತಲ್ಲಾ ಅಂದುಕೊಂಡೆವು. ಆದರೆ ಈಗ ನಮ್ಮನ್ನ ಗೇಟ್‌ನಿಂದ ಆಚೆ ನಿಲ್ಲಿಸಿದ್ದಾರೆ. ಗೇಟ್‌ನಿಂದ ಒಳಗೆ ಬರಲು ನಾವು ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬೇಕಿದೆ. ಅಂದು ನಮ್ಮಿಂದ ಚೆನ್ನಾಗಿ ಬೆಳೆದರು, ಈಗ ನಾವು ಅವರಿಗೆ ಬೇಕಾಗಿಲ್ಲ' ಎಂದು ಬೇಸರ ತೋಡಿಕೊಂಡಿದ್ದಾರೆ.
'ವರ್ಷಕ್ಕೆ ಎರಡು ಸಿನಿಮಾ ಮಾಡಿ'
'ಇದು ಕನ್ನಡದಲ್ಲಿ ಮಾತ್ರವಲ್ಲ, ಬೇರೆ ಭಾಷೆಗಳಲ್ಲೂ ನಡೀತಿದೆ. ಈಗ ಕನ್ನಡ ಚಿತ್ರರಂಗದಲ್ಲಿ ಒಂದು ಟ್ರೆಂಡ್ ಸೆಟ್ ಆಗಿದೆ. ಒಟಿಟಿಯವರಿಗೆ ಪಾಠ ಕಲಿಸಲು ಕನ್ನಡದ ನಿರ್ದೇಶಕರೆಲ್ಲ ವರ್ಷಕ್ಕೆ ಎರಡು ಸಿನಿಮಾಗಳನ್ನು ಮಾಡಿ. ಆಗ ಒಟಿಟಿಯವರೇ ಮತ್ತೆ ವಾಪಸ್ ನಮ್ಮನ್ನ ಹುಡುಕಿಕೊಂಡು ಬರ್ತಾರೆ' ಎಂದಿದ್ದಾರೆ ರಾಕ್‌ಲೈನ್.
'ನಾನು ಕರ್ನಾಟಕದ ಪ್ರೇಕ್ಷಕರಲ್ಲಿ ಕೇಳಿಕೊಳ್ಳೋದು ಇಷ್ಟೇ. ಯಾವ ನಟನ ಫ್ಯಾನ್ಸ್ ಆಗಿರಲಿ, ಇದು ಕನ್ನಡ ಅನ್ನೋದನ್ನು ಮರೆಯಬೇಡಿ. ಆ ಹೀರೋ, ಈ ಹೀರೋ ಅನ್ನೋದು ಮನಸ್ಸಿನಲ್ಲಿರಲಿ. ಇದು ಕನ್ನಡ ಸಿನಿಮಾ ಎನ್ನುವುದು ನೆನಪಿನಲ್ಲಿರಲಿ. ಎಲ್ಲ ಕನ್ನಡ ಸಿನಿಮಾಗಳನ್ನ ಬೆಳೆಸಿ. ಸಿನಿಮಾಗಳನ್ನು ಥಿಯೇಟರ್‌ಗಳಲ್ಲೇ ನೋಡಿ. ಇದರಿಂದ ಲಕ್ಷಾಂತರ ಜನರ ಹೊಟ್ಟೆತುಂಬುತ್ತೆ. ಸಿನಿಮಾಗಳನ್ನು ಪೈರಸಿಯಲ್ಲಿ ನೋಡಬೇಡಿ. ಹೀಗೆ ಮಾಡಿದ್ರೆ ಚಿತ್ರರಂಗ ಬೆಳೆಯಲ್ಲ. ಕನ್ನಡದ ಎಲ್ಲ ಸಿನಿಮಾಗಳನ್ನ ಹೆಚ್ಚಾಗಿ ನೋಡಿ ಪ್ರೋತ್ಸಾಹಿಸಿ. ಇದು ನನ್ನ ಮನವಿ' ಎಂದಿದ್ದಾರೆ.












Click it and Unblock the Notifications