ಯಾವ ಹೀರೋನೂ ಬಂದು ಕಾಪಾಡಲ್ಲ: ಫ್ಯಾನ್ಸ್‌ಗೆ ರಾಕ್‌ಲೈನ್ ವೆಂಕಟೇಶ್ ಹೇಳಿದ್ದೇನು?
ಸ್ಯಾಂಡಲ್‌ವುಡ್ ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಕಾಮೆಂಟ್ಸ್ ಹಾಕಿರುವ ವಿಚಾರವಾಗಿ ಚಿತ್ರರಂಗದ ಹಲವು ಖಂಡನೆ ವ್ಯಕ್ತಪಡಿಸಿದ್ದಾರೆ. ಬಹುತೇಕರು ರಮ್ಯಾ ಅವರು ಮಾಡಿದ್ದು ಸರಿ ಇದೆ. ಯಾವ ನಟನ ಅಭಿಮಾನಿಗಳಾದರೂ ಹೆಣ್ಣುಮಕ್ಕಳ ವಿಚಾರದಲ್ಲಿ ಈ ರೀತಿ ಕೆಟ್ಟದಾಗಿ ವರ್ತಿಸಬಾರದು ಎನ್ನುತ್ತಿದ್ದಾರೆ. ಇದೀಗ ಸ್ಯಾಂಡಲ್‌ವುಡ್ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕೂಡ ರಮ್ಯಾ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ. 'ನನಗೆ ಕೆಟ್ಟದಾಗಿ ಕಮೆಂಟ್ ಮಾಡಿದವರನ್ನ ಕೋರ್ಟ್ ಅಲೆದಾಡುವಂತೆ ಮಾಡಿದ್ದೇನೆ. ಈಗ ರಮ್ಯಾಗೆ ಕಾಮೆಂಟ್ ಮಾಡಿದವರಿಗೂ ಅದೇ ಗತಿ ಆಗಲಿದೆ' ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
'ಚಿತ್ರರಂಗದ ಇತ್ತೀಚಿನ ಬೆಳವಣಿಗೆಗಳು ನೋಡುತ್ತಿದ್ದರೆ ಸಿನಿಮಾ ಮಾಡಲು ಭಯ ಆಗ್ತಿದೆ. ನಟಿ ರಮ್ಯಾ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದವರಿಗೆ ಶಿಕ್ಷೆಯಾಗಬೇಕು ಎಂದೂ ರಾಕ್‌ಲೈನ್ ವೆಂಕಟೇಶ್ ಆಗ್ರಹಿಸಿದ್ದಾರೆ. ಈ ಹಿಂದೆ ನನಗೂ ಕೆಲವರು ಕೆಟ್ಟ ಕಾಮೆಂಟ್ಸ್ ಹಾಕಿದ್ದರು. ಅವರ ಮೇಲೆಲ್ಲ ಕೇಸ್ ಹಾಕಿ ಕೋರ್ಟ್‌ಗೆ ಅಲೆಯುವಂತೆ ಮಾಡಿದ್ದೇನೆ. ವರ್ಷಾನುಗಟ್ಟಲೆ ಅಲೆಯಬೇಕು. ಇದೇ ಅಂತವರಿಗೆ ಶಿಕ್ಷೆ. ದುಡಿದಿದ್ದೆಲ್ಲ ಕಳೆದುಕೊಂಡು ಒದ್ದಾಡುತ್ತಾರಲ್ಲ? ಆವಾಗ ಯಾವ ಸ್ಟಾರ್‌ಗಾಗಿ ನಾನು ಈ ಕೆಲಸ ಮಾಡಿದ್ದು? ಯಾವ ಸ್ಟಾರ್ ಸಹಾಯಕ್ಕೆ ಬರ್ತಾನೇ ಅನ್ನೋದು ಅವರಿಗೇ ಗೊತ್ತಾಗುತ್ತೆ' ಎಂದಿದ್ದಾರೆ.

'ಕೆಟ್ಟ ಕಾಮೆಂಟ್ ಮಾಡಿದವರಿಗೆ ಸುಮ್ಮನೆ ಒಡೆಯುವುದು ಸರಿ ಅಲ್ಲ. ಅದಕ್ಕೆ ಅವರನ್ನು ಕಾನೂನಿನ ಮೂಲಕ ಎದುರಿಸುತ್ತಿದ್ದೇನೆ. ಆಗ ಮಾಡಿದ ತಪ್ಪಿಗೆ ಕೇಸ್ ವಾಪಸ್ ತಗೊಳ್ಳಿ ಅಂತ ಈಗ ಬೇಡಿಕೊಳ್ತಾರೆ. ಆದರೆ ಕೋರ್ಟ್‌ನಲ್ಲಿರುವುದರಿಂದ ಅಲ್ಲೇ ಇತ್ಯರ್ಥ ಮಾಡಿಕೊಳ್ಳಿ ಎನ್ನುತ್ತೇನೆ. ಅವರಗೆ ತಾವು ಮಾಡಿದ ತಪ್ಪೇನು ಅನ್ನೋದು ಗೊತ್ತಾಗಬೇಕು' ಎಂದು ರಾಕ್‌ಲೈನ್ ಹೇಳಿದ್ದಾರೆ.
'ರಮ್ಯಾಗೆ ಕೆಟ್ಟ ಕಾಮೆಂಟ್ ಮಾಡಿದ್ದಾರೆ. ಇಂತಹ ಕೆಲಸ ಮುಂದುವರಿಸಿಕೊಂಡು ಹೋಗುವವರಿಗೆ ಶಿಕ್ಷೆ ಆಗಬೇಕು. ಎದುರಲ್ಲಿ ನಿಂತು ಮಾತನಾಡುವವರನ್ನ ಎದುರಿಸಬಹುದು. ಆದರೆ ಎಲ್ಲೋ ನಿಂತು ಮಾತಾಡೋರನ್ನ ಹೇಗೆ ಸಹಿಸಿಕೊಳ್ಳೋದು? ಯಾವ ಹೀರೋ ಆಗಿದ್ರೂ ತನ್ನ ಫ್ಯಾನ್ಸ್ ಇಂತಹ ಕೆಲಸ ಮಾಡಿದ್ರೆ ತಪ್ಪು. ಮೊದಲು ನಿಮ್ಮ ಮನೆ ಹೆಣ್ಣುಮಕ್ಕಳನ್ನ ಸಂತೋಷವಾಗಿ ಇಟ್ಟುಕೊಳ್ಳಿ. ಯಾವ ಹೀರೋನೂ ಬಂದು ಕಾಪಾಡಲ್ಲ' ಎಂದು ಅಭಿಮಾನಿಗಳಿಗೆ ಬುದ್ಧಿ ಹೇಳಿದ್ದಾರೆ.

'ಸ್ವಾರ್ಥಕ್ಕೆ ಚಿತ್ರರಂಗವನ್ನ ಕೊಲ್ಲಬೇಡಿ'
'ಇಂತಹ ವಿಚಾರಗಳಿಂದ ಈಗ ಸಿನಿಮಾ ಮಾಡೋಕೆ ಭಯ ಆಗುತ್ತಿದೆ. ಡಾ.ರಾಜ್‌ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಅವರು ಚಿತ್ರರಂಗವನ್ನ ಕಟ್ಟಿದ್ರು. ಆದರೆ ಅದನ್ನ ನಾವು ಹೇಗೆ ಬಳಸುತ್ತಿದ್ದೇವೆ? ಆಗಿರುವ ತಪ್ಪನ್ನು ಸರಿ ಮಾಡಿಕೊಂಡು ನೀವೇ ಬನ್ನಿ, ನಿಮ್ಮ ಸ್ವಾರ್ಥಕ್ಕೆ ಚಿತ್ರರಂಗವನ್ನು ಕೊಲ್ಲಬೇಡಿ. ಇದನ್ನ ಇಲ್ಲಿಗೇ ನಿಲ್ಲಿಸಿ' ಎಂದು ರಾಕ್‌ಲೈನ್ ಮನವಿ ಮಾಡಿಕೊಂಡಿದ್ದಾರೆ.
'ನಾವು ಕ್ಯಾಮೆರಾ ಮುಂದೆ ಜನಗಳಿಗೆ ಬುದ್ಧಿ ಹೇಳೋದನ್ನ ನಿಜ ಜೀವನದಲ್ಲಿ ಫಾಲೋ ಮಾಡಿದ್ರೆ ಚೆನ್ನಾಗಿರುತ್ತೆ. ನಟರು ಅಭಿಮಾನಿಗಳಿಗೆ ಬುದ್ಧಿ ಹೇಳಬೇಕು. ದರ್ಶನ್ ಆಗಲಿ, ಸುದೀಪ್ ಆಗಲಿ, ಯಾವುದೇ ಆದರೂ ಮುಂದೆ ಬರಬೇಕು. ಶೀಘ್ರದಲ್ಲೇ ನಾನು ಸಭೆ ಕರೆಯುತ್ತೇನೆ. ನಮ್ಮ ಮನೆಗೆ ಹೊತ್ತಿರುವ ಬೆಂಕಿಯನ್ನ ನಾವೇ ಆರಿಸಲು ಪ್ರಯತ್ನ ಮಾಡ್ತೀವಿ' ಎಂದೂ ಹೇಳಿದ್ದಾರೆ.












Click it and Unblock the Notifications