ಚಿತ್ರಾಪುರ ಮಠದಲ್ಲಿ ರಾಕಿಂಗ್ ದಂಪತಿ: ಕಿರಾಣಿ ಅಂಗಡಿಯಲ್ಲಿ ರಾಧಿಕಾಗೆ ಐಸ್‌ಕ್ರೀಮ್ ಕೊಡಿಸಿದ ಯಶ್
ಕನ್ನಡ ಚಿತ್ರರಂಗದ ಕ್ಯೂಟ್ ದಂಪತಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಸದ್ಯ ಉತ್ತರ ಕನ್ನಡ ಜಿಲ್ಲೆಯ ಪ್ರವಾಸದಲ್ಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿರುವ ಈ ಸ್ಟಾರ್ ದಂಪತಿ ನಿನ್ನೆ(ಫೆಬ್ರವರಿ 16) ಶಿರಾಲಿಯ ಚಿತ್ರಾಪುರ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಯಶ್ ಸ್ಥಳೀಯ ಕಿರಾಣಿ ಅಂಗಡಿಯೊಂದಕ್ಕೆ ತೆರಳಿ ರಾಧಿಕಾ ಪಂಡಿತ್ಗೆ ಐಸ್ ಕ್ರೀಮ್ ಕೊಡಿಸಿದ್ದಾರೆ.
ಶಿರಾಲಿಯ ಚಿತ್ರಾಪುರ ಮಠ ಬೀದಿಯಲ್ಲಿರುವ ಅಂಗಡಿಯಲ್ಲಿ ಯಶ್ ಐಸ್ ಕ್ರೀಮ್ ಖರೀದಿಸಿ ರಾಧಿಕಾ ಪಂಡಿತ್ ಅವರಿಗೆ ನೀಡಿರುವ ಹಾಗೂ ರಾಧಿಕಾ ಪಂಡಿತ್ ಕಿರಾಣಿ ಅಂಗಡಿ ಬೆಂಚ್ ಮೇಲೆ ಕುಳಿತು ಐಸ್ ಕ್ರೀಮ್ ತಿನ್ನುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಪ್ರೀತಿಯಿಂದ ಕಮೆಂಟ್ ಮಾಡುತ್ತಿದ್ದು, ಇದು ಬಾಸ್ ಹಾಗೂ ಅತ್ತಿಗೆ ಸರಳತೆ ಎಂದಿದ್ದಾರೆ.

ಇನ್ನು ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯ ಚಿತ್ರಾಪುರ ಮಠಕ್ಕೆ ನಟ ಯಶ್ ಹಾಗೂ ರಾಧಿಕಾ ಪಂಡಿತ ದಂಪತಿ ನಿನ್ನೆ ರಾತ್ರಿ ಭೇಟಿ ಮಾಡಿ ದೇವರ ದರ್ಶನ ಪಡೆದಿದ್ದಾರೆ. ಅಲ್ಲದೇ ನಿನ್ನೆ ರಾತ್ರಿ ಅಲ್ಲೇ ವಾಸ್ತವ್ಯ ಮಾಡಿದ್ದಾರೆ. ಚಿತ್ರಾಪುರ ಮಠದ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಯಶ್ ಹಾಗೂ ರಾಧಿಕಾ ಪಂಡಿತ ದಂಪತಿ ಸತತ 2 ವರೆಗೆ ಗಂಟೆಗೂ ಅಧಿಕ ಕಾಲ ಸ್ವಾಮೀಜಿಗಳ ಜೊತೆಗೆ ಮಾತು ಕತೆ ನಡೆಸಿದ್ದಾರೆ.
ಚಿತ್ರಾಪುರ ಮಠಕ್ಕೆ ಯಶ್ ಹಾಗೂ ರಾಧಿಕಾ ಪಂಡಿತ್ ಜೊತೆಗೆ ಮಕ್ಕಳು ಐರಾ ಮಗ ಯಥರ್ವ ಹಾಗೂ ರಾಧಿಕಾ ಪಂಡಿತ್ ತಂದೆ ತಾಯಿ ಕೂಡ ಆಗಮಿಸಿದ್ದರು. ಸ್ಯಾಂಡಲ್‌ವುಡ್‌ನ ಸ್ಟಾರ್ ದಂಪತಿ ಆಗಮಿಸುತ್ತಿರುವ ಸುದ್ದಿ ತಿಳಿದು ಅಭಿಮಾನಿಗಳು ಚಿತ್ರಾಪುರ ಮಠಕ್ಕೆ ದೌಡಾಯಿಸಿ ಕಾದಿದ್ದಾರೆ. ಚಿತ್ರಾಪುರ ಮಠದ ಸ್ವಾಮೀಜಿಗಳ ಭೇಟಿ ಬಳಿಕ ಮಠದಿಂದ ಹೊರಬಂದ ಯಶ್ ಹಾಗೂ ರಾಧಿಕಾ ಪಂಡಿತ ಅಭಿಮಾನಿಗಳ ಬಳಿ ಬಂದು ಸಮಯ ಕಳೆದು ಫೋಟೋ ಹಾಗೂ ಆಟೋಗ್ರಾಫ್ ನೀಡಿ ತೆರಳಿದ್ದಾರೆ.
ಯಶ್ ಹಾಗೂ ರಾಧಿಕಾ ಪಂಡಿತ್ ಆಗಮನದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚಿತ್ರಾಪುರ ಮಠದ ಸುತ್ತಲೂ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿತ್ತು.












Click it and Unblock the Notifications