Kantara Chapter 1: ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾಗೆ ಬಿಗ್ ಶಾಕ್, ಬ್ಯಾನ್ ಸಾಧ್ಯತೆ
Kantara Chapter 1: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಾಪ್ಟರ್-1 ಸಿನಿಮಾಗೆ ಬಿಗ್ ಶಾಕ್ ಎದುರಾಗಿದೆ. ಈ ಪ್ಯಾನ್ ಇಂಡಿಯಾ ಸಿನಿಮಾ ಅಕ್ಟೋಬರ್ 2ರಂದು ವಿವಿಧ ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಈ ಹೊತ್ತಲ್ಲೇ ಬ್ಯಾನ್ ಬಿಸಿ ತಟ್ಟುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಕಾಂತಾರ ಪ್ರೀಕ್ವೆಲ್ ಆಗಿರುವ ಈ ಸಿನಿಮಾಗಾಗಿ ಜನ ಕಾದು ಕುಳಿತಿದ್ದಾರೆ. ಬಿಗ್ ಬಜೆಟ್‌ನಲ್ಲಿ ಈ ಸಿನಿಮಾ ರೆಡಿಯಾಗಿದ್ದು, ರಿಲೀಸ್ ಹೊತ್ತಲ್ಲೇ ಅಡ್ಡಿ ಆತಂಕ ಎದುರಾಗಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಈ ಸಿನಿಮಾ ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ವಿವಿಧ ಭಾಷೆಗಳಲ್ಲಿ ಈ ಸಿನಿಮಾದ ವಿತರಣೆ ಹಕ್ಕು ಭಾರೀ ಮೊತ್ತಕ್ಕೆ ಈಗಾಗಲೇ ಮಾರಾಟವೂ ಆಗಿದೆ. ಇನ್ನು ಮಲಯಾಳಂ ಭಾಷೆಯಲ್ಲಿ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಅವರು ಈ ಸಿನಿಮಾ ವಿತರಣೆಯ ಜವಾಬ್ದಾರಿ ಹೊತ್ತಿದ್ದಾರೆ. ಆದರೆ ಕೇರಳದಲ್ಲಿ ಕಾಂತಾರ ಚಾಪ್ಟರ್-1 ನಿಷೇಧ ಎದುರಿಸುವ ಸಾಧ್ಯತೆ ಇದೆ.

ಶೇ 55ರಷ್ಟು ಲಾಭಕ್ಕೆ ಬೇಡಿಕೆ
ಪೃಥ್ವಿರಾಜ್ ಪ್ರೊಡಕ್ಷನ್ಸ್ ಈ ಚಿತ್ರದ ಮೊದಲ ಎರಡು ವಾರಗಳ ಅವಧಿಯಲ್ಲಿ ಚಿತ್ರಮಂದಿರಗಳಿಂದ ಶೇ 55ರಷ್ಟು ಲಾಭದ ಪಾಲನ್ನು ಕೇಳಿದೆ ಎಂದು ಕೇರಳ ಚಲನಚಿತ್ರ ಪ್ರದರ್ಶಕರ ಒಕ್ಕೂಟ ಅಧ್ಯಕ್ಷ ಕೆ.ವಿಜಯಕುಮಾರ್ ಹೇಳಿದ್ದಾರೆ. ಆದರೆ ಒಕ್ಕೂಟವು ಈ ನಿಯಮಗಳನ್ನು ವಿರೋಧಿಸಿದ್ದು, ಇದೇ ಕಾರಣಕ್ಕೆ ಈ ಸಿನಿಮಾ ಮೇಲೆ ಕೇರಳದಲ್ಲಿ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ನಮ್ಮ ನಿಯಮಗಳ ಪ್ರಕಾರ ಕೇರಳದಲ್ಲಿ ವಿತರಿಸಲಾಗುವ ಇತರ ಭಾಷೆಯ ಚಲನಚಿತ್ರಗಳು ಮೊದಲ ಕೆಲವು ದಿನಗಳಲ್ಲಿ ಚಲನಚಿತ್ರ ಕಲೆಕ್ಷನ್‌ನಿಂದ ಶೇ 50ರಷ್ಟು ಲಾಭವನ್ನು ಮಾತ್ರ ಪಡೆಯಬಹುದು. ಆದರೆ ಪೃಥ್ವಿರಾಜ್ ಪ್ರೊಡಕ್ಷನ್ಸ್ ಎರಡು ವಾರಗಳ ಅವಧಿಗೆ ಶೇ 55ರಷ್ಟು ಲಾಭಕ್ಕಾಗಿ ಬೇಡಿಕೆ ಇಟ್ಟಿದೆ. ಅದು ಕೂಡ. ಈ ಹಿಂದೆ ಕೋವಿಡ್ ಸಮಯದಲ್ಲಿ ಮಾತ್ರವೇ ವಿತರಕರಿಗೆ ಹೆಚ್ಚು ಲಾಭ ಪಡೆಯಲು ಅನುಮತಿ ನೀಡಿದ್ದೆವು. ಆದರೆ ಈಗ ನಾವು ಅಂತಹ ಬೇಡಿಕೆಗಳನ್ನು ಒಪ್ಪುವುದಿಲ್ಲ ಎಂದು ಒಕ್ಕೂಟ ಹೇಳಿದೆ.
ಮಲಯಾಳಂ ಭಾಷೆಯ ಸಿನಿಮಾಗಳನ್ನು ಕೇರಳದ ಹೊರಗೆ ವಿತರಿಸಿದಾಗ ಮಲಯಾಳಂ ನಿರ್ಮಾಪಕರು ಸಾಮಾನ್ಯವಾಗಿ ಶೇ 30ರಿಂದ ಶೇ 40ರಷ್ಟು ಲಾಭ ಪಾಲನ್ನು ಮಾತ್ರ ಪಡೆಯುತ್ತಾರೆ ಎಂದು ಕೇರಳ ಚಲನಚಿತ್ರ ಪ್ರದರ್ಶಕರ ಒಕ್ಕೂಟ ಸ್ಪಷ್ಟಪಡಿಸಿದೆ. ಹೀಗಾಗಿ ಪೃಥ್ವಿರಾಜ್ ಅವರ ಬೇಡಿಕೆಯನ್ನು ಒಕ್ಕೂಟ ನೇರವಾಗಿ ತಿರಸ್ಕರಿಸಿರುವ ಕಾರಣ ಕಾಂತಾರ ಸಿನಿಮಾಗೆ ಕೇರಳದಲ್ಲಿ ಬ್ಯಾನ್ ಬಿಸಿ ತಟ್ಟುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಲಾಭ ಹಂಚಿಕೆ ವಿವಾದ ಅಂತ್ಯ
ಚಿತ್ರ ಬಿಡುಗಡೆಯಾದ ಮೊದಲ ಎರಡು ವಾರಗಳವರೆಗೆ ಥಿಯೇಟರ್ ಕಲೆಕ್ಷನ್‌ನಿಂದ ಹೆಚ್ಚು ಲಾಭದ ಪಾಲನ್ನು ಕೇಳಿದೆ. ಇದರಿಂದ ಕೇರಳದಲ್ಲಿ ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದ್ದು, ಕೇರಳ ಫಿಲ್ಮ್ ಚೇಂಬರ್, ನಿರ್ಮಾಪಕರ ಸಂಘ, ವಿತರಕರ ಸಂಘಗಳ ನಡುವಿನ ಚರ್ಚೆಗಳ ನಂತರ ಕೇರಳದಲ್ಲಿ ಕಾಂತಾರ: ಅಧ್ಯಾಯ 1ರ ಬಿಡುಗಡೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಚಿತ್ರದ ವಿತರಕರು ಮತ್ತು ಪ್ರದರ್ಶಕರ ನಡುವಿನ ಲಾಭ ಹಂಚಿಕೆ ಒಪ್ಪಂದದ ವಿವಾದದ ಸದ್ಯ ಬಗೆಹರಿದಿದ್ದು, ಪೃಥ್ವಿರಾಜ್ ಅವರು ಕೂಡ ಒಪ್ಪಿದ್ದಾರೆ. ಹಾಗಾಗಿ ಸಿನಿಮಾ ರಿಲೀಸ್‌ಗೆ ಇದ್ದ ಅಡ್ಡಿ ಆತಂಕಗಳು ದೂರಾಗಿವೆ.












Click it and Unblock the Notifications