ನಟ ಶಾರುಖ್ ಖಾನ್ ನಾಲಿಗೆ ಕತ್ತರಿಸಿದವರಿಗೆ ನಗದು ಬಹುಮಾನ: ಹಿಂದೂ ನಾಯಕಿ ಘೋಷಣೆ
ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡಕ್ಕಾಗಿ ಬಾಂಗ್ಲಾದೇಶದ ಕ್ರಿಕೆಟಿಗನನ್ನು ಖರೀದಿಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಬಿಜೆಪಿಯ ಹಿರಿಯ ನಾಯಕ ಸಂಗೀತ್ ಸೋಮ್ ಶಾರುಖ್ ಅವರನ್ನು ದೇಶದ್ರೋಹಿ ಎಂದು ಕರೆದಿದ್ದರು. ಇದರ ಬೆನ್ನಲ್ಲೇ ಅಖಿಲ ಭಾರತ ಹಿಂದೂ ಮಹಾಸಭಾದ ಆಗ್ರಾ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷೆ ಮೀರಾ ಠಾಕೂರ್, ಶಾರುಖ್ ನಾಲಿಗೆ ಕತ್ತರಿಸಿದವರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದಾರೆ.
ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡ ಖರೀದಿಸಿರುವುದು ವಿವಾದಕ್ಕೆ ತಿರುಗಿದ್ದು, ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ನಾಲಿಗೆ ಕತ್ತರಿಸಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಹಿಂದೂ ಮಹಾಸಭಾ ಮುಖಂಡೆ ಘೋಷಿಸಿದ್ದಾರೆ. ಮಥುರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಬಾಂಗ್ಲಾದೇಶ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ ಫ್ರಾಂಚೈಸಿಗೆ ಸೇರಿಸಿಕೊಂಡಿರುವುದನ್ನು ವಿರೋಧಿಸಿ ಶಾರುಖ್ ಖಾನ್ ಅವರ ಪೋಸ್ಟರ್‌ಗಳಿಗೆ ಕಪ್ಪು ಬಣ್ಣ ಬಳಿದಿದ್ದು ಮಾತ್ರವಲ್ಲದೆ ಚಪ್ಪಲಿಯಿಂದ ಹೊಡೆದಿದ್ದಾರೆ.

ನಮ್ಮ ಹಿಂದೂ ಸಹೋದರರನ್ನು ಬಾಂಗ್ಲಾದೇಶದಲ್ಲಿ ಜೀವಂತವಾಗಿ ಸುಡಲಾಗುತ್ತಿದೆ. ಆದರೆ ಶಾರುಖ್ ಖಾನ್ ಅದೇ ಬಾಂಗ್ಲಾದೇಶದ ಆಟಗಾರರನ್ನು ಖರೀದಿಸುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ, ಕೆಕೆಆರ್ ಮಾಲೀಕರು ಬಾಂಗ್ಲಾದೇಶದ ಆಟಗಾರರನ್ನು ಖರೀದಿಸುವುದು ಅವರಿಗೆ ಯಾವುದೇ ನಾಚಿಕೆ ಆಗಲ್ಲವೇ? ಎಂದಿದ್ದಾರೆ.
ಅಯೋಧ್ಯೆ ಮತ್ತು ಇತರ ಸ್ಥಳಗಳ ಸಂತರು ಕೂಡ ಐಪಿಎಲ್ ತಂಡದಲ್ಲಿ ಬಾಂಗ್ಲಾದೇಶಿ ಆಟಗಾರನ ಸೇರ್ಪಡೆಯನ್ನು ಟೀಕಿಸಿದ್ದಾರೆ. ಸ್ವಾಮಿ ರಾಮಭದ್ರಾಚಾರ್ಯರು ಶಾರುಖ್ ಅವರನ್ನು ನಾಯಕನಲ್ಲ, ಆದರೆ ವ್ಯಕ್ತಿತ್ವದ ಕೊರತೆಯಿರುವ ನಟ ಎಂದು ಕರೆದಿದ್ದಾರೆ.
ಬಾಂಗ್ಲಾ ಆಟಗಾರನ ಆಯ್ಕೆಗೆ ವಿರೋಧ
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಮ್ಮ ತಂಡಕ್ಕೆ ಆಯ್ಕೆ ಮಾಡಿಕೊಂಡ ನಂತರ ತಂಡದ ಮಾಲೀಕರಾದ ನಟ ಶಾರುಖ್ ಖಾನ್ ವಿರುದ್ಧ ಹಿಂದೂ ಆಧ್ಯಾತ್ಮಿಕ ನಾಯಕರು ಖಂಡಿಸಿದ್ದರು. ಇವರನ್ನು ಬೆಂಬಲಿಸಿದ್ದಕ್ಕಾಗಿ ಬಿಜೆಪಿ ನಾಯಕ ಸಂಗೀತ್ ಸೋಮ್ ಅವರನ್ನು ಕಾಂಗ್ರೆಸ್ ಪಕ್ಷ ಖಂಡಿಸಿತ್ತು. ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯ ನಂತರ ಭಾರತ ಹಾಗೂ ಬಾಂಗ್ಲಾ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಇದರ ನಡುವೆ ಭಾರತದಲ್ಲಿ ನಡೆಯುವ ಐಪಿಎಲ್‌ಗೆ ಬಾಂಗ್ಲಾ ಆಟಗಾರನ ಆಯ್ಕೆಯು ವಿರೋಧಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶದ ಮಾಜಿ ಶಾಸಕ ಸಂಗೀತ್ ಸೋಮ್ ಅವರು ಶಾರುಖ್ ಖಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಭಾರತದ ವಿರುದ್ಧ ಕೆಲಸ ಮಾಡುವ ಬಾಂಗ್ಲಾ ದೇಶದ ಆಟಗಾರರನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಶಾರುಖ್ ಖಾನ್ ಹೊಂದಿರುವ ಎಲ್ಲವೂ ಭಾರತ ಮತ್ತು ಇಲ್ಲಿನ ಜನರಿಂದ ಬಂದಿದೆ. ಆದರೂ ಅವರು ನಮಗೆ ವಿರೋಧಿಯಾಗಿರುವ ರಾಷ್ಟ್ರದ ಆಟಗಾರನ ಮೇಲೆ ಹೂಡಿಕೆ ಮಾಡಿದ್ದಾರೆ, ಅಂತಹ ದೇಶದ್ರೋಹಿಗಳು ಯಶಸ್ವಿಯಾಗುವುದಿಲ್ಲ ಎಂದಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದರೂ, ಶಾರುಖ್ ಖಾನ್‌ರಂತಹ ದೇಶದ್ರೋಹಿಗಳು ಅಲ್ಲಿನ ಆಟಗಾರರಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಿದ್ದಾರೆ. ಯಾವುದೇ ಬೆಲೆ ತೆತ್ತಾದರೂ, ಮುಸ್ತಾಫಿಜುರ್ ರೆಹಮಾನ್ ಅವರನ್ನು ಇಲ್ಲಿ ಆಡಲು ಬಿಡುವುದಿಲ್ಲ. ಅವರು ವಿಮಾನ ನಿಲ್ದಾಣದಿಂದ ಹೊರಗೆ ಕಾಲಿಡುವುದಿಲ್ಲ. ಖಾನ್‌ರಂತಹ ಜನರು ಭಾರತದಲ್ಲಿ ತಿನ್ನುತ್ತಾರೆ, ಆದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಹೊಗಳುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications