Ghost Review: ಶಿವಣ್ಣ, ಜಯರಾಮ್ ನಡುವೆ ಮೈನವೇರಿಳಿಸುವ 'ಚಿನ್ನದ ಬೇಟೆ', ಡೋಂಟ್ ಮಿಸ್ ಇಟ್
ಪರಭಾಷೆಯ ಮೂರು ಸಿನಿಮಾಗಳ ಮಧ್ಯೆ ಕನ್ನಡದ ಈ ವರ್ಷದ ಬಹುನಿರೀಕ್ಷೆಯ ಘೋಸ್ಟ್ ಸಿನಿಮಾ ಬಿಡುಗಡೆ ಕಂಡಿದೆ. ಶಿವರಾಜ್ ಕುಮಾರ್ ಸಿನಿಮಾ ಇದಾದರೂ ಕೂಡಾ, ಬೆಂಗಳೂರಿನಲ್ಲಿ ಕನ್ನಡಕ್ಕಿಂತ ತಮಿಳಿನ ಲಿಯೋ ಸಿನಿಮಾಗೆ ಹೆಚ್ಚಿನ ಸ್ಕ್ರೀನ್ ಸಿಕ್ಕಿದೆ. ಇದಕ್ಕೆ ಯಾರನ್ನು ದೂಷಿಸಬೇಕೋ? ಆದರೆ ಲಿಯೋ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ ಘೋಸ್ಟ್ ಸಿನಿಮಾಗೆ ಮತ್ತೆ ಹೆಚ್ಚಿನ ಸ್ಕ್ರೀನ್ ಸಿಗಲಾರಂಭಿಸಿದೆ.
ಅಷ್ಟೇನೂ ಕಮರ್ಷಿಯಲ್ ಯಶಸ್ಸನ್ನು ಕಾಣದಿದ್ದರೂ ಬೀರಬಲ್ ಸಿನಿಮಾದ ಮೂಲಕ ತಾನೊಬ್ಬ ಕ್ರಿಯೇಟಿವ್ ನಿರ್ದೇಶಕ ಎಂದು ಹೆಸರು ಪಡೆದಿದ್ದ ಎಂ.ಜಿ.ಶ್ರೀನಿವಾಸ್ ಆಲಿಯಾಸ್ ಶ್ರೀನಿ ಮತ್ತೆ ತಮ್ಮ ಪ್ರತಿಭೆಯನ್ನು ಘೋಸ್ಟ್ ಚಿತ್ರದ ಮೂಲಕ ಹೊರಗೆಡವಿದ್ದಾರೆ. ಶರವೇಗದಲ್ಲಿ ಸಾಗುವ ಸ್ಕ್ರೀನ್ ಪ್ಲೇ ಮೂಲಕ ಹತ್ತರ ಜೊತೆ ಹನ್ನೊಂದು ಅನ್ನದ ರೀತಿಯಲ್ಲಿ ಡಿಫರೆಂಟ್ ಆಗಿ ಸಿನಿಮಾ ನೀಡಿ ಶಿವಣ್ಣ ವೃತ್ತಿ ಬದುಕಿಗೆ ವಿಶಿಷ್ಟವಾದ ಸಿನಿಮಾ ನೀಡುವುದರಲ್ಲಿ ಶ್ರೀನಿ ಯಶಸ್ವಿಯಾಗಿದ್ದಾರೆ.

ಲಾಜಿಕ್ ಮರೆತು ಮನೋರಂಜನೆಗೆಂದೇ ಇರುವ ಸಿನಿಮಾ ಇದಾಗಿದ್ದು, ಚಿತ್ರ ಪ್ರೇಕ್ಷಕರನ್ನು ಸೀಟಿನಂಚಿನಲ್ಲಿ ಕೂರಿಸಿ ಮುಂದೇನಾಗುತ್ತೆ ಎನ್ನುವ ಕುತೂಹಲದಿಂದ ನೋಡುವಂತೆ ಮಾಡಿದೆ. ಬರೀ 48ಗಂಟೆಯಲ್ಲಿ ನಡೆಯುವ ವಿದ್ಯಮಾನದ ಸುತ್ತ ತೆಗೆದಿರುವ ಚಿತ್ರ ಇದಾಗಿರುವುದರಿಂದ, ಎಲ್ಲೂ ಡ್ಯೂಯಟ್ ಸಾಂಗ್ ಗಳಿಲ್ಲ, ಅನಾವಶ್ಯಕ ದೃಶ್ಯಗಳು ಬಂದು ಹೋಗುವುದಿಲ್ಲ.
3 ಭಾಗಗಳಲ್ಲಿ ಸಿನಿಮಾ ಆಗುತ್ತೆ 'ಪರ್ವ':'ದಿ ಕಾಶ್ಮೀರಿ ಫೈಲ್ಸ್' ನಿರ್ದೇಶಕನಿಗೆ ಎಸ್ ಎಲ್ ಭೈರಪ್ಪ ಗ್ರೀನ್ ಸಿಗ್ನಲ್!
ಚಿತ್ರದಲ್ಲಿ ಗಮನಿಸಬೇಕಾಗಿರುವುದು ಟೆಕ್ನಿಕಲ್ ವ್ಯಾಲ್ಯೂಗಳನ್ನು. ಮಹೇಂದ್ರ ಸಿಂಹ ಅವರ ಸಿನಿಮಾಟೋಗ್ರಾಫಿ, ಅರ್ಜುನ್ ಜನ್ಯ ಅವರ ಸಂಗೀತ, ದೀಪು ಕುಮಾರ್ ಅವರ ಸಂಕಲನ. ಮಾಸ್ತಿ ಅವರ ಸಂಭಾಷಣೆ ಚಿತ್ರಕ್ಕಿರುವ ಇನ್ನೊಂದು ಪ್ಲಸ್ ಪಾಯಿಂಟ್. ಕೆಲವೊಂದು ದೃಶ್ಯಗಳಲ್ಲಿ ಅರ್ಜುನ್ ಜನ್ಯ ಅವರ ಹಿನ್ನಲೆ ಸಂಗೀತ ಚಿತ್ರವು ಇನ್ನೊಂದು ಮಜಲಿಗೆ ಹೋಗುವಂತೆ ಮಾಡಿದೆ.
ಜೈಲನ್ನೇ ಹೈಜಾಕ್ ಮಾಡುವ ಸನ್ನಿವೇಶ
ಜೈಲನ್ನೇ ಹೈಜಾಕ್ ಮಾಡುವ ಸನ್ನಿವೇಶದೊಂದಿಗೆ ಆರಂಭವಾಗುವ ಚಿತ್ರದಲ್ಲಿ ಎಲ್ಲೂ ಕಾಲಹರಣಕ್ಕೆ ಆಸ್ಪದವನ್ನೇ ನೀಡದೇ ಚಿತ್ರವನ್ನು ಹಣೆಯಲಾಗಿದೆ. ಹಾಗಾಗಿ, ಕಣ್ಣನ್ನು ಸ್ಕ್ರೀನ್ ನಿಂದ ಸ್ವಲ್ಪ ಆಕಡೆ ಈಕಡೆ ಮಾಡಿದರೂ ಚಿತ್ರದ ಕಥೆಯನ್ನು ಏನೊ ಮಿಸ್ ಮಾಡಿಕೊಂಡಂತೆ ಅನಿಸುತ್ತದೆ. ದೊಡ್ಡ ಕಥೆಯ ಸಿನಿಮಾವನ್ನು ಕೇವಲ 134ನಿಮಿಷಕ್ಕೆ ಎಡಿಟ್ ಮಾಡಿರುವುದು ಚಿತ್ರಕ್ಕಿರುವ ಪ್ಲಸ್ ಪಾಯಿಂಟ್ ಜೊತೆಗೆ ಅಲ್ಲಲ್ಲಿ ಇದು ಮೈನಸ್ ಪಾಯಿಂಟ್ ಕೂಡಾ..
ಆರಂಭದಿಂದ ಕೊನೆಯವರೆಗೂ ಕಥಾನಾಯಕ ಶಿವಣ್ಣ ಆಲಿಯಾಸ್ ದಳವಾಯಿ, ಮಲಯಾಳಂ ನಟ ಜಯರಾಂ ಆಲಿಯಾಸ್ ಎಸಿಪಿ ಚೆಂಗಪ್ಪ ನಡುವೆ ಸಾಗುವ ಹಾವು ಏಣಿಯಾಟದಲ್ಲಿ ಶಿವಣ್ಣ ಮತ್ತು ಜಯರಾಂ ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ. ಇನ್ನು, ಮಾಜಿ ಸಿಬಿಐ ಅಧಿಕಾರಿಯಾಗಿ ತಮಿಳು ನಟ ಪ್ರಶಾಂತ್ ನಾರಾಯಣ್ ಸಿಕ್ಕ ಅವಕಾಶವನ್ನು ಎರಡೂ ಕೈಯಿಂದ ಬಾಚಿಕೊಂಡಿದ್ದಾರೆ.
ಉಪೇಂದ್ರ ಅವರ ಶಿಷ್ಯ ಎಂದು ನಿರ್ದೇಶಕ ಶ್ರೀನಿ ಹೇಳಿರುವುದು
ನಾನು ಉಪೇಂದ್ರ ಅವರ ಶಿಷ್ಯ ಎಂದು ನಿರ್ದೇಶಕ ಶ್ರೀನಿ ಹೇಳಿರುವುದರಿಂದ ಚಿತ್ರಮಂದಿರದಿಂದ ಹೊರಬಂದ ಮೇಲೂ ಕೆಲವೊಂದಕ್ಕೆ ಉತ್ತರ ಸಿಗುವುದಿಲ್ಲ. ಅನುಪಮ್ ಖೇರ್ ಅವರು ಕೆಲವೊಂದು ದೃಶ್ಯಕ್ಕೆ ಮಾತ್ರ ಸೀಮಿತವಾಗಿರುವುದರಿಂದ ಅವರ ಪಾತ್ರ ಪ್ರೇಕ್ಷಕರನ್ನು ವಿಶೇಷವಾಗಿ ಕಾಡುವುದಿಲ್ಲ. 62ರ ಹರೆಯದಲ್ಲೂ ಶಿವಣ್ಣ ಅವರದ್ದು ಎನರ್ಜಟಿಕ್ ಫರ್ಫಾರ್ಮೆನ್ಸ್, ಆದರೆ ಲಾಂಗ್ ಶಾಟ್ ನಲ್ಲಿ ಅವರನ್ನು ಇನ್ನಷ್ಟು ಖದರ್ ಆಗಿ ತೋರಿಸಬಹುದಿತ್ತು.
ಭೂಗತಲೋಕದ ಕಥಾ ಹಂದರ
ಭೂಗತಲೋಕದ ಕಥಾ ಹಂದರವಾಗಿದ್ದರೂ ರಕ್ತಗಳು ಅಷ್ಟಾಗಿ ಹರಿದಿಲ್ಲ, ಫೈಟ್ ಗಳಲ್ಲಿ ವಿಭಿನ್ನತೆಯಿದೆ. ಚಿತ್ರದಲ್ಲಿ ಹಾಡಿಲ್ಲದಿದ್ದರೂ ಸಾಹಸ ದೃಶ್ಯದಲ್ಲಿ ಹಾಡಿನ ರೀತಿಯಲ್ಲಿ ಲೇಪನ ಕೊಟ್ಟಿರುವುದಕ್ಕೆ ಅರ್ಜುನ್ ಜನ್ಯ ಅವರಿಗೆ ಶಹಬ್ಬಾಸ್ ಹೇಳಬೇಕು. ಸ್ವರ್ಣ ಬೇಟೆಯ ಸುತ್ತಮುತ್ತ ಸಾಗುವ ಸಿನಿಮಾದಲ್ಲಿ ಅನುಪಮ್ ಖೇರ್ 'ಘೋಸ್ಟ್ - 2' ಲೀಡ್ ಕೊಡುವ ಮೂಲಕ ಕುತೂಹಲವನ್ನು ಕಾಯ್ದಿರಿಸುವಂತೆ ಮಾಡಿದ್ದಾರೆ. ಅಲ್ಲಲ್ಲಿ ಲಾಜಿಕ್ ಇಲ್ಲದೇ ಸಾಗುವ ಸಿನಿಮಾ ಆದರೂ, ಪಕ್ಕಾ ಮನೋರಂಜೆನೆಯಂತೂ ಗ್ಯಾರಂಟಿ. ಡೋಂಟ್ ಮಿಸ್ ಇಟ್












Click it and Unblock the Notifications