ಸಾಹಸ ಸಿಂಹ ನಮ್ಮನ್ನು ಅಗಲಿ 14 ವರ್ಷ: ಡಾ. ವಿಷ್ಣುವರ್ಧನ್ ಅಭಿಮಾನಿಗಳ ಕನಸು ಈ ವರ್ಷವಾದರೂ ನನಸಾಗುತ್ತಾ?
ಅದು ಡಿಸೆಂಬರ್ 30, 2009. ಅಂದು ಬೆಳ್ಳಂಬೆಳಗ್ಗೆ ಬಂದ ಸುದ್ದಿ ಇಡೀ ಕನ್ನಡ ಚಿತ್ರರಂಗ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿತ್ತು. ಕೋಟ್ಯಂತರ ಅಭಿಮಾನಿಗಳ ಪಾಲಿನ ಪ್ರೀತಿಯ ನಟ & ಸಾಹಸ ಸಿಂಹ ಎಂಬ ಬಿರುದು ಪಡೆದಿದ್ದ ನಟ ಡಾ. ವಿಷ್ಣುವರ್ಧನ್ ಅವರು ಕನ್ನಡ ಕಲಾಭಿಮಾನಿಗಳನ್ನ ಬಿಟ್ಟು ಹೋಗಿದ್ದರು. ಹೀಗೆ ಡಾ. ವಿಷ್ಣುವರ್ಧನ್ ಅವರು ಅಭಿಮಾನಿ ದೇವರುಗಳನ್ನ ಅಗಲಿ ಇಂದಿಗೆ 14 ವರ್ಷ ಕಳೆದಿದ್ದು, ಸಾಹಸಿಂಹ ಸಮಾಧಿ ಎದುರು ಇದೀಗ ಅಭಿಮಾನಿಗಳು ನಮಿಸಿದ್ದಾರೆ.
'ನಾಗರಹಾವು' ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದ ಸಾಹಸ ಸಿಂಹ ವಿಷ್ಣುವರ್ಧನ್ ಅವರು, ಹಿಂತಿರುಗಿ ನೋಡಲೇ ಇಲ್ಲ. ಸಾಲು ಸಾಲು ಹಿಟ್ ಸಿನಿಮಾ ನೀಡಿ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದರು. ಅದ್ರಲ್ಲೂ ಒಂದು ಕಾಲದಲ್ಲಿ ಒಂದೆ ವರ್ಷಕ್ಕೆ ಹಲವು ಸಿನಿಮಾಗಳನ್ನ ರಿಲೀಸ್ ಮಾಡಿ, ತುಂಬಾ ಬ್ಯುಸಿಯಾದ ನಟ ಎನಿಸಿಕೊಂಡಿದ್ದರು. ಹೀಗಿದ್ದಾಗಲೇ 14 ವರ್ಷಗಳ ಹಿಂದೆ ಭೀಕರ ಸುದ್ದಿಯೊಂದು ವಿಷ್ಣುದಾದ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಹೀಗೆ ವಿಷ್ಣುವರ್ಧನ್ ಅವರು ನಮ್ಮನ್ನೆಲ್ಲಾ ಅಗಲಿ ಈಗ 14 ವರ್ಷಗಳೇ ಕಳೆದರೂ, ಅವರ ಸಮಾಧಿ ಸ್ಥಳದ ಅಭಿವೃದ್ಧಿಗೆ ಅಭಿಮಾನಿಗಳು ಮನವಿ ಮಾಡ್ತಿದ್ದಾರೆ.

ವಿಷ್ಣುದಾದ ಅಭಿಮಾನಿಗಳ ಆಸೆ ಏನು?
ಅಂದಹಾಗೆ ನಟ ಡಾ. ವಿಷ್ಣುವರ್ಧನ್ ಅವರು ಅಭಿಮಾನಿಗಳನ್ನ ಅಗಲಿ 14 ವರ್ಷಗಳಾದವು. ಆದ್ರೆ ಇಂದಿಗೂ ಅವರ ಅಂತ್ಯ ಸಂಸ್ಕಾರವಾದ ಜಾಗವನ್ನು, ಅಭಿವೃದ್ಧಿ ಮಾಡುವ ಕೆಲಸವನ್ನ ಯಾವುದೇ ಸರ್ಕಾರ ಮಾಡಿಲ್ಲ ಎಂದು ವಿಷ್ಣುದಾದ ಫ್ಯಾನ್ಸ್ ಕೋಪಗೊಂಡಿದ್ದು. ಕೆಲ ದಿನಗಳ ಹಿಂದೆ ಬೃಹತ್ ಪ್ರತಿಭಟನೆ ಕೂಡ ನಡೆಸಿದ್ದರು. ಹಲವು ಗೊಂದಲದ ಮಧ್ಯೆ ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿಗೆ ಸ್ಥಳಾಂತರ ಆಗಿತ್ತು. ಆದರೆ ಅಭಿಮಾನಿಗಳು ಸ್ಮಾರಕ ಬೆಂಗಳೂರಿನ ಜಾಗದಲ್ಲೇ ಆಗಬೇಕು ಎಂದು ಹಠ ಹಿಡಿದಿದ್ದಾರೆ. ಆದರೆ ಅವರ ಆಸೆ ಮಾತ್ರ ಈಡೇರುತ್ತಿಲ್ಲ.
ನೋವಿನ ನಡುವೆ ಪೂಜೆ ಸಲ್ಲಿಕೆ
ಪ್ರತಿವರ್ಷ ಸೆಪ್ಟೆಂಬರ್ 18 ಮತ್ತು ಡಿಸೆಂಬರ್ 30 ಡಾ. ವಿಷ್ಣುವರ್ಧನ್ ಅವರ ಅಭಿಮಾನಿ ಬಳಗಕ್ಕೆ ಮರೆಯಲಾಗದ ದಿನ. ಸೆಪ್ಟೆಂಬರ್ 18 ವಿಷ್ಣುದಾದ ಅವರ ಹುಟ್ಟುಹಬ್ಬ, ಹಾಗೇ ಡಿಸೆಂಬರ್ 30 ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆ. ಹೀಗೆ ಅಭಿಮಾನಿಗಳು ಇಂದು ಸಾಲು ಸಾಲಾಗಿ ಬಂದು ಡಾ. ವಿಷ್ಣುವರ್ಧನ್ ಅವರ ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ನೆಚ್ಚಿನ ನಟನಿಗೆ ನಮಿಸಿ ಈ ವರ್ಷವಾದ್ರೂ ಇಲ್ಲೇ ಸ್ಮಾರಕ ನಿರ್ಮಾಣವಾಗಲಿ ಎಂದು ವಿಷ್ಣುದಾದ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಒಟ್ನಲ್ಲಿ ವಿಷ್ಣುವರ್ಧನ್ ಅವರ ಅಭಿಮಾನಿಗಳು ಇಂದು ದುಖಃದ ನಡುವೆಯೇ ಸರ್ಕಾರಕ್ಕೆ ಬಹುಮುಖ್ಯ ಬೇಡಿಕೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಸ್ಯಾಂಡಲ್‌ವುಡ್ ಸ್ಟಾರ್ ವಿಷ್ಣುವರ್ಧನ್‌ರ ಸ್ಮಾರಕ ಬೆಂಗಳೂರಲ್ಲೇ ನಿರ್ಮಾಣ ಆಗುತ್ತಾ? ಅಥವಾ ಈ ಬೇಡಿಕೆ ಈ ವರ್ಷವು ಈಡೇರದೆ ಹಾಗೇ ಉಳಿಯುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications