ರಿಯಾಲಿಟಿ ಶೋನಲ್ಲಿ ಮಿತಿ ಮೀರಿದ ಅಶ್ಲೀಲತೆ: ‘ಹೌಸ್ ಅರೆಸ್ಟ್’ ಬ್ಯಾನ್?
ಇತ್ತೀಚಿಗೆ ರಿಯಾಲಿಟಿ ಶೋಗಳು ಹಳಿ ತಪ್ಪಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕನ್ನಡ, ಹಿಂದಿ ಮಾತ್ರವಲ್ಲದೇ ಎಲ್ಲಾ ಭಾಷೆಗಳಲ್ಲಿ ಪ್ರಸಾರವಾಗುವ ಬಹುತೇಕ ರಿಯಾಲಿಟಿ ಶೋಗಳು ಹಳಿ ತಪ್ಪುತ್ತಿದ್ದು, ಪ್ರೇಕ್ಷಕರು ತೀರಾ ಮುಜುಗರದಿಂದ ಚಾನೆಲ್ ಬದಲಿಸುವ ಪರಿಸ್ಥಿತಿ ಈಗ ಹೆಚ್ಚಿದೆ. ರಿಯಾಲಿಟಿ ಶೋ ಹೆಸರಿನಲ್ಲಿ ಡಬ್ಬಲ್ ಮೀನಿಂಗ್ ಕಾಮಿಡಿಗಳು, ಅಶ್ಲೀಲ ಪದಗಳ ಬಳಕೆ ಹೀಗೆ ನೋಡುಗರು ಅಸಮಾಧಾನ ಹೊರಹಾಕುವ ವಿಚಾರಗಳು ಒಂದೆರೆಡಲ್ಲಾ. ವೈಯಕ್ತಿಕ ವಿಚಾರಗಳನ್ನು ಕೆಣುಕಿ ಕಣ್ಣೀರು ಹಾಕುವಂತೆ ಮಾಡುವ ಶೋಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ಪ್ರೇಕ್ಷಕರು ನೆಮ್ಮದಿಯಿಂದ ಕುಳಿತು ನೋಡುವ ಕಾರ್ಯಕ್ರಮಗಳ ಸಂಖ್ಯೆ ತೀರಾ ಕಡಿಮೆಯಾಗಿದೆ.
ಅದರಲ್ಲೂ ಅಶ್ಲೀಲ ಕಂಟೆಂಟ್‌ಗಳ ಬಳಕೆ ಮಾಡುವ ಕಾರ್ಯಕ್ರಮಗಳಿಗೆ ಉಳಿಗಾಲವಿಲ್ಲ ಎಂದು ಗೊತ್ತಿದ್ದರೂ ಕೂಡ, ಕೆಲ ಕಾರ್ಯಕ್ರಮದ ನಿರ್ದೇಶಕರು ಹಾಗೂ ನಿರ್ಮಾಪಕರು ಉದ್ಧಟನ ಪ್ರದರ್ಶಿಸುತ್ತಾರೆ. ಇದೇ ರೀತಿ ಉದ್ಧಟನ ತೋರಿ ಕಾರ್ಯಕ್ರಮ ಮಾಡಿದ ನಿರ್ಮಾಪಕನೊಬ್ಬನಿಗೆ ಈಗ ಬಂಧನ ಭೀತಿ ಎದುರಾಗಿದೆ.

ಹೌದು ಇತ್ತೀಚಿಗೆ ಭಾರೀ ಟೀಕೆಗೊಳಗಾಗಿದ್ದ ಹೌಸ್ ಅರೆಸ್ಟ್ ಎನ್ನುವ ರಿಯಾಲಿಟಿ ಶೋ ಕಾರ್ಯಕ್ರಮದ ನಿರ್ಮಾಪಕ ಈಗ ಬಂಧನ ಸಂಕಷ್ಟ ಎದುರಿಸುವಂತಾಗಿದೆ. ಅಜಾಜ್ ಖಾನ್ ಎನ್ನುವ ಸ್ವಯಂಘೋಷಿತ ಹೀರೋ ಹೌಸ್ ಅರೆಸ್ಟ್ ಎನ್ನುವ ಕಾರ್ಯಕ್ರಮವನ್ನು ಆರಂಭಿಸಿದ್ದು, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಾಡುವ ಈ ಶೋನಲ್ಲಿ ಬರೀ ಅಶ್ಲೀಲ ವಿಚಾರಗಳಿಂದಲೇ ತುಂಬಿ ತುಳುಕಿದೆ. ಈ ಕಾರ್ಯಕ್ರಮ ಉಲ್ಲು ಎನ್ನುವ ಆ್ಯಪ್‌ನಲ್ಲಿ ಪ್ರಸಾರ ಕಾಣುತ್ತಿದ್ದು, ಒಂದಿಷ್ಟು ಪ್ರೇಕ್ಷಕರು ಈ ರಿಯಾಟಿಲಿ ಶೋವನ್ನು ವೀಕ್ಷಿಸುತ್ತಿದ್ದರು.
ಆದರೆ ಇತ್ತೀಚಿಗೆ ಈ ರಿಯಾಲಿಟಿ ಶೋನಲ್ಲಿ ನೀಡಿದ ಟಾಸ್ಕ್‌ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಕೂಡಲೇ ಈ ಕಾರ್ಯಕ್ರಮವನ್ನು ನಿಲ್ಲಿಸಬೇಕು ಎನ್ನುವ ಆಗ್ರಹ ಜೋರಾಗಿತ್ತು. ಈ ಹೌಸ್ ಅರೆಸ್ಟ್ ರಿಯಾಲಿಟಿ ಶೋನ ನಿರ್ಮಾಪಕ ಅಜಾಜ್ ಖಾನ್ ಕಾರ್ಯಕ್ರಮದಲ್ಲಿರುವ ಸ್ಪರ್ಧಿಗಳಿಗೆ ಒಳ ಉಡುಪುಗಳನ್ನು ಬಿಚ್ಚುವಂತೆ ಹೇಳುವುದು, ಹಾಗೂ ಯುವಕ-ಯುವತಿಯರು ಒಟ್ಟಾಗಿ ಅಶ್ಲೀಲ ಭಂಗಿಯಲ್ಲಿ ನಿಲ್ಲುವಂತೆ ನೀಡಿರುವ ಟಾಸ್ಕ್ ವಿಡಿಯೋ ವೈರಲ್ ಆಗಿತ್ತು.

ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಬ್ಯಾನ್ ಮಾಡುವಂತೆ ಆಗ್ರಹ ಜೋರಾಗಿದ್ದು, ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವಾಲಯ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ. ಸದ್ಯ ರಿಯಾಲಿಟಿ ಶೋ ಹೆಸರಿನಲ್ಲಿ ಅಶ್ಲೀಲತೆಯನ್ನು ಪ್ರಸಾರ ಮಾಡಿದ ಆರೋಪದಲ್ಲಿ ಹೌಸ್ ಆರೆಸ್ಟ್ ರಿಯಾಲಿಟಿ ಶೋ ನಿರ್ಮಾಪಕ ಅಜಾಜ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೇ ಕಾರ್ಯಕ್ರಮ ಪ್ರಸಾರ ಮಾಡಲು ತಮ್ಮ ಆ್ಯಪ್‌ನಲ್ಲಿ ಅವಕಾಶ ಕೊಟ್ಟ ಉಲ್ಲು ಆ್ಯಪ್ ಸಿಇಒಗೂ ಸಮನ್ಸ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹೌಸ್ ಅರೆಸ್ಟ್ ರಿಯಾಲಿಟಿ ಶೋ ಶೀಘ್ರವೇ ಬ್ಯಾನ್ ಆಗುವ ಸಾಧ್ಯತೆ ಕೂಡ ಹೆಚ್ಚಾಗಿದೆ.












Click it and Unblock the Notifications