ಖ್ಯಾತ ಹಾರರ್ ಸರಣಿಯಲ್ಲಿ ದೆವ್ವವಾಗಿ ಕಾಡಲಿದ್ದಾರೆ ರಶ್ಮಿಕಾ ಮಂದಣ್ಣ, ಯಾವ ಸಿನಿಮಾ?
ನಟಿ ರಶ್ಮಿಕಾ ಮಂದಣ್ಣ ಸದ್ಯ ಬಹುಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ತೆಲುಗು, ತಮಿಳು, ಹಿಂದಿ ಚಿತ್ರರಂಗಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಬಹುತೇಕ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಮೂಲಕ ಡಿಮ್ಯಾಂಡ್‌ನಲ್ಲಿರುವ ನಟಿಯಾಗಿದ್ದಾರೆ. ಇನ್ನು ತಮ್ಮ ಮುಂದಿನ ಸಿನಿಮಾಗಳಲ್ಲಿ ರಶ್ಮಿಕಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ತಮಿಳಿನ ಖ್ಯಾತ ನಟ ರಾಘವ ಲಾರೆನ್ಸ್ ಅವರ ಮುಂದಿನ ಹಾರರ್ ಸಿನಿಮಾದಲ್ಲಿ ರಶ್ಮಿಕಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ರಾಘವ ಲಾರೆನ್ಸ್ ಅವರು "ಕಾಂಚನಾ" ಸರಣಿ ಹಾರರ್ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ. ಇದರ ಪ್ರತಿ ಸೀಕ್ವೆಲ್‌ನಲ್ಲೂ ಭಯ ಹುಟ್ಟಿಸುವ ಕಥೆಯನ್ನು ತರುತ್ತಿದ್ದಾರೆ. ಶೀಘ್ರದಲ್ಲೇ ರಾಘವ ಅವರ ʼಕಾಂಚನಾ-4ʼ ಸಿನಿಮಾ ಸೆಟ್ಟೇರಲಿದ್ದು, ರಶ್ಮಿಕಾ ಮಂದಣ್ಣ ಕೂಡ ಈ ಚಿತ್ರತಂಡ ಸೇರಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಲಿದ್ದು, ಬಾಲಿವುಡ್ ಬ್ಯೂಟಿ ನೋರಾ ಫತೇಹಿ ಹಾಗೂ ಪ್ರಮುಖರು ನಟಿಸಲಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ದೆವ್ವದ ಪಾತ್ರದಲ್ಲಿ ನಟಿಸಲಿದ್ದಾರೆ. ಇದೇ ಮೊದಲ ಬಾರಿಗೆ ರಶ್ಮಿಕಾ ಹಾರರ್ ಸಿನಿಮಾದಲ್ಲಿ ದೆವ್ವದ ಪಾತ್ರದ ಮೂಲಕ ಪ್ರೇಕ್ಷಕರಲ್ಲಿ ನಡುಕ ಹುಟ್ಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಘವ ಲಾರೆನ್ಸ್ ಅವರ ಕಾಂಚನಾ ಸರಣಿ ಸಿನಿಮಾಗಳು ಹಾರರ್ ವಿಚಾರದಲ್ಲಿ ಮೊದಲಿನಿಂದಲೂ ಹಿಟ್ ಕಾಣುತ್ತಿವೆ. ಬಹುತೇಕ ಸಿನಿಮಾಗಳಲ್ಲಿ ರಾಘವ ಅವರೇ ದೆವ್ವವಾಗಿ ಕಾಣಿಸಿಕೊಂಡಿದ್ದರು. ಈಗ ಮುಂದಿನ ಸೀಕ್ವೆಲ್‌ನಲ್ಲಿ ರಶ್ಮಿಕಾ ಅವರಿಗೆ ದೆವ್ವದ ಪಾತ್ರ ನೀಡಲಾಗುತ್ತಿದ್ದು, ಈ ಮೊದಲಿಗಿಂತಲೂ ಭಯಾನಕ ದೃಶ್ಯಗಳು ಈ ಸಿನಿಮಾದಲ್ಲಿ ಇರಲಿದೆ.
ಕಾಂಚನಾ 4 ದೊಡ್ಡ ಬಜೆಟ್ ಚಿತ್ರವಾಗಿದ್ದು, ಪೂಜಾ ಹೆಗ್ಡೆ ನಾಯಕಿಯಾಗಿ ಮಿಂಚಲಿದ್ದಾರೆ. ನೋರಾ ಫತೇಹಿ, ಆನಂದರಾಜ್ ಸೇರಿದಂತೆ ಇನ್ನೂ ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹಾರರ್ ಕಾಮಿಡಿ ಪ್ರಕಾರದ ಚಿತ್ರಗಳು ಭಾರತದಲ್ಲಿ ಭಾರಿ ಪ್ರತಿಕ್ರಿಯೆ ಪಡೆಯುತ್ತಿರುವುದರಿಂದ "ಕಾಂಚನಾ 4" ಪ್ಯಾನ್-ಇಂಡಿಯಾ ಸಿನಿಮಾವಾಗಿ ತೆರೆ ಕಾಣಲಿದೆ. ರಶ್ಮಿಕಾ ಮಂದಣ್ಣ ಈಗಾಗಲೇ ಈ ಚಿತ್ರತಂಡ ಸೇರಿಕೊಂಡಿದ್ದಾರೆ ಎನ್ನಲಾಗಿದೆ.
ರಶ್ಮಿಕಾ ಅವರು ಇಲ್ಲಿವರೆಗೆ ಮುದ್ದಿನ ಹುಡುಗಿಯಾಗಿ, ಶ್ರೀವಲ್ಲಿಯಾಗಿ ಸ್ಟಾರ್ ನಟರ ನೆಚ್ಚಿನ ನಟಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಇನ್ನು ಮುಂದೆ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಖಳನಾಯಕಿ ಪಾತ್ರ, ಹಾರರ್ ಸೇರಿದಂತೆ ನೆಗೆಟಿವ್ ಪಾತ್ರಗಳ ಕಡೆಗೂ ರಶ್ಮಿಕಾ ಆಸಕ್ತಿ ತೋರಿದ್ದಾರೆ. ಸದ್ಯ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ಕಾಂಚನಾ ಸರಣಿಯಲ್ಲಿ ರಶ್ಮಿಕಾ ಅವರ ಭೂತದ ಅವತಾರ ನೋಡಲು ಅವರ ಅಭಿಮಾನಿಗಳು ಕುತೂಹಲದಿಂದ ಕಾದಿದ್ದಾರೆ.
ರಶ್ಮಿಕಾ ಮಂದಣ್ಣ ಹಾರರ್ ಸಿನಿಮಾ ಸೇರ್ಪಡೆಯಿಂದ ಕಾಂಚನಾ 4 ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಅಭಿಮಾನಿಗಳು ಈ ಬಗ್ಗೆ ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದಾರೆ. ರಾಘವ ಲಾರೆನ್ಸ್ ಜೊತೆ ರಶ್ಮಿಕಾ ಅವರ ಪಾತ್ರವು ಚಿತ್ರದ ಪ್ರಮುಖ ಹೈಲೈಟ್ ಆಗುವುದರಲ್ಲಿ ಯಅವುದೇ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ.












Click it and Unblock the Notifications