Rashmika Mandanna: ನನ್ನ ಮೊದಲ ಸಿನಿಮಾ "ಕಿರಿಕ್ ಪಾರ್ಟಿ" ಅಲ್ಲ: ರಶ್ಮಿಕಾ ಮಂದಣ್ಣ
ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ಕರ್ನಾಟಕದ ರಶ್ಮಿಕಾ ಮಂದಣ್ಣ ಅಚ್ಚರಿ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ. ಕನ್ನಡದ "ಕಿರಿಕ್ ಪಾರ್ಟಿ" ಸಿನಿಮಾದಲ್ಲಿ ನಟಿಸಿದ್ದ ರಶ್ಮಿಕಾ ಬಳಿಕ ಕಿರಿಕ್ ಬೆಡಗಿ ಹಾಗೂ ನ್ಯಾಷನಲ್ ಕ್ರಶ್ ಎಂದು ಮನೆಮಾತಾಗಿದ್ದರು. ಬಳಿಕ ಬೇರೆ ಭಾಷೆಗಳಲ್ಲಿ ರಶ್ಮಿಕಾ ಅವರಿಗೆ ಬೇಡಿಕೆ ಹೆಚ್ಚಾಗಿತ್ತು. ಆದರೆ ಹಲವು ವರ್ಷಗಳ ಬಳಿಕ ರಶ್ಮಿಕಾ ಶಾಕಿಂಗ್ ವಿಚಾರ ಹೇಳಿಕೊಂಡಿದ್ದಾರೆ. ಕಿರಿಕ್ ಪಾರ್ಟಿ ನನ್ನ ಮೊದಲ ಸಿನಿಮಾ ಅಲ್ಲ ಎನ್ನುವ ಮೂಲಕ ರಶ್ಮಿಕಾ ಅಚ್ಚರಿ ಮೂಡಿಸಿದ್ದಾರೆ.
ನಟ ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಿದ್ದರು. ಬಳಿಕ ಸ್ಯಾಂಡಲ್‌ವುಡ್‌ನ ಪ್ರಮುಖ ನಾಯಕರೊಂದಿಗೆ ತೆರೆ ಹಂಚಿಕೊಂಡಿದ್ದರು. ಇದಾದ ನಂತರ ರಶ್ಮಿಕಾ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಅಲ್ಲಿ ಕೂಡ ಸ್ಟಾರ್ ನಟರೊಂದಿಗೆ ನಟಿಸಿ ಟಾಪ್ ಹೀರೋಯಿನ್ ಆದರು. ತಮಿಳು, ಬಾಲಿವುಡ್‌ನಲ್ಲೂ ಮಿಂಚಿರುವ ಅವರು ಟಾಲಿವುಡ್‌ನ ಬೇಡಿಕೆಯ ನಟಿಯಾಗಿದ್ದಾರೆ. ಸದ್ಯ ಕನ್ನಡ ಹೊರತುಪಡಿಸಿ ಬೇರೆ ಭಾಷೆಗಳಲ್ಲೇ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ಕಿರಿಕ್ ಪಾರ್ಟಿ ನನ್ನ ಮೊದಲ ಸಿನಿಮಾ ಅಲ್ಲ ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ.

ʼನನ್ನ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಅಲ್ಲ, ಅದಕ್ಕೂ ಮೊದಲು ಇನ್ನೊಂದು ಸಿನಿಮಾ ಮಾಡಿದ್ದೆ. "ಗೆಳೆಯರೇ ಗೆಳತಿಯರೇ" ಎನ್ನುವ ಸಿನಿಮಾಗೆ ನಾನು ಆಡಿಷನ್ ಕೊಟ್ಟಿದ್ದೆ. ನಾಲ್ಕೈದು ತಿಂಗಳ ಕಾಲ ಸಿನಿಮಾ ಕೆಲಸಗಳು ಕೂಡ ನಡೆಯಿತು. ಆದರೆ ಆ ಸಿನಿಮಾ ಸೆಟ್ಟೇರಲೇ ಇಲ್ಲ. ಆರಂಭಿಕ ಹಂತದಲ್ಲೇ ಸಿನಿಮಾ ನಿಂತು ಹೋಯ್ತು. ಅದಾದ ನಂತರ ಮಾಡಿದ ಎರಡನೇ ಸಿನಿಮಾ ಕಿರಿಕ್ ಪಾರ್ಟಿʼ ಎಂದು ರಶ್ಮಿಕಾ ಹೇಳಿದ್ದಾರೆ.
ʼಸಾನ್ವಿ ಪಾತ್ರ ತಿರುವು ನೀಡಿತುʼ
ʼಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆಗುವಾಗ ನಾನು ನಿಜಕ್ಕೂ ಒಬ್ಬ ಕಲಾವಿದೆಯಾಗಿ ಚಿತ್ರರಂಗ ಪ್ರವೇಶಿಸಿದೆ. ಸಿನಿಮಾ ರಿಲೀಸ್ ಆಯ್ತು. ನಾವೆಲ್ಲ ಫ್ಯಾನ್ಸ್ ಜೊತೆ ಸಿನಿಮಾ ನೋಡಿದ್ವಿ. ಅಲ್ಲಿದ್ದ ಇಡೀ ಪ್ರೇಕ್ಷಕರೆಲ್ಲರೂ ನನ್ನ ಪಾತ್ರವಾದ ಸಾನ್ವಿ ಜೋಸೆಫ್ ಹೆಸರನ್ನು ಜೋರಾಗಿ ಕೂಗಿದ್ರು. ಆ ಒಂದು ಕ್ಷಣವೇ ನನಗೆ ನಿಜವಾದ ತಿರುವು ನೀಡಿತುʼ ಎಂದಿದ್ದಾರೆ.
ʼಆಗ ನನ್ನ ಸುತ್ತಲೂ ಏನು ನಡೆಯುತ್ತಿದೆ ಎಂಬುದು ತಿಳಿಯಲಿಲ್ಲ. ಆ ಕ್ಷಣವೇ ನಾನು ಮುಂದೆ ಏನಾದರೂ ಮಾಡಬೇಕು ಅಂದುಕೊಂಡೆ. ಪ್ರೇಕ್ಷಕರು ಆ ದಿನ ತೋರಿದ ಸ್ಪಂದನೆಯಿಂದಲೇ ನಾನು ಪ್ರತಿ ಬಾರಿಯೂ ಅಂತದ್ದೇ ಕ್ಷಣ ಬೇಕು, ಬೇಕು ಎನ್ನುತ್ತಾ ಹಂಬಲದಿಂದ ಕೆಲಸ ಮಾಡಿದೆ. ಅದೇ ಇಂದು ನನ್ನನ್ನು ಇಲ್ಲಿವರೆಗೆ ಕರೆದುಕೊಂಡು ಬಂದಿದೆʼ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.












Click it and Unblock the Notifications