Ramayana: ಯಶ್ ನಟನೆಯ "ರಾಮಾಯಣ" ಅತ್ಯಂತ ದುಬಾರಿ ಸಿನಿಮಾ! ರಿವೀಲ್ ಆಯ್ತು ಬಿಗ್ ಬಜೆಟ್
ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ "ರಾಮಾಯಣ" (Ramayana) ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ. ಬಹುತಾರಾಗಣದ ಈ ಸಿನಿಮಾ ಭಾರತದ ಅತ್ಯಂತ ದುಬಾರಿ ಸಿನಿಮಾ ಎಂಬ ದಾಖಲೆ ಬರೆಯಲಿದೆ. ಇಲ್ಲಿವರೆಗೆ ರಾಮಾಯಣ ಸಿನಿಮಾದ ಬಜೆಟ್ ಬಗ್ಗೆ ಗಾಳಿಸುದ್ದಿಯಷ್ಟೇ ಹರಿದಾಡಿತ್ತು. ಈಗ ಈ ಸಿನಿಮಾದ ಅಸಲಿ ಬಜೆಟ್ ಎಷ್ಟು ಎಂಬುದನ್ನು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೇ ಬಹಿರಂಗಪಡಿಸಿದ್ದಾರೆ. ಇದನ್ನು ಕೇಳಿ ಇಡೀ ಭಾರತೀಯ ಚಿತ್ರರಂಗವೇ ದಿಗ್ಭ್ರಮೆಗೆ ಒಳಗಾಗಿದೆ.
ಹೌದು ಇಲ್ಲಿವರೆಗೆ ಈ ಸಿನಿಮಾದ ಬಜೆಟ್ ಕುರಿತಾಗಿ ನಿಖರ ಮಾಹಿತಿ ಹೊರಬಿದ್ದಿರಲಿಲ್ಲ. ಹಾಗಾಗಿ ಕೆಲವರು 500 ಕೋಟಿ ಬಜೆಟ್ ಅಂದರೆ, ಹಲವರು 1,000 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಿದ್ದಾರೆ. ಆದರೆ ಈ ಚಿತ್ರದ ಅಸಲಿ ಬಜೆಟ್ ಎಲ್ಲರನ್ನೂ ಹುಬ್ಬೇರಿಸುವಷ್ಟಿದೆ. ನಮಿತ್ ಮಲ್ಹೋತ್ರಾ ಅವರು ತಮ್ಮ ರಾಮಾಯಣ ಚಿತ್ರದ ಬಜೆಟ್ ಬಗ್ಗೆ ವಿವರ ಹಂಚಿಕೊಂಡಿದ್ದಾರೆ.

ಈ ಬಜೆಟ್ ಹಿಂದಿನ ಸಿನಿಮಾಗಳಿಗಿಂತ ಹಾಗೂ ಅಂದಾಜುಗಳಿಗಿಂತ ಎರಡು ಪಟ್ಟು ಹೆಚ್ಚು ಎಂದು ತಿಳಿದುಬಂದಿದ್ದು, ಭಾರತದ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಭಾರೀ ಬಜೆಟ್‌ನ ಸಿನಿಮಾ ಆಗಲಿದೆ ಎಂದಿದ್ದಾರೆ. ರಾಮಾಯಣ ಚಿತ್ರವನ್ನು ವಿಶ್ವದ ಅತಿದೊಡ್ಡ ಸಿನಿಮಾ, ಯಾವುದೇ ಹಾಲಿವುಡ್ ನಿರ್ಮಾಣಗಳಿಗಿಂತ ಕಡಿಮೆಯಿಲ್ಲ ಎಂದು ನಮಿತ್ ಮಲ್ಹೋತ್ರಾ ಹೇಳಿದ್ದಾರೆ.
ಪೌರಾಣಿಕ ಚಿತ್ರವಾದ ರಾಮಾಯಣ ಎರಡು ಭಾಗಗಳಾಗಿ ಹೊರಬರಲಿದ್ದು, ನಿಜವಾದ ಬಜೆಟ್ ಅನ್ನು ಬಹಿರಂಗಪಡಿಸಿದ್ದಾರೆ. ಈ ಪ್ರಾಜೆಕ್ಟ್‌ಗೆ ಸುಮಾರು 500 ಮಿಲಿಯನ್ ಡಾಲರ್ ಅಂದರೆ, ಸರಿಸುಮಾರು 4,000 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ತಿಳಿಸಿದ್ದಾರೆ. ಈ ಚಿತ್ರಕ್ಕೆ ನಿತೇಶ್ ತಿವಾರಿ ಆಕ್ಷನ್ ಕಟ್ ಹೇಳುತ್ತಿದ್ದು, ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ, ಯಶ್ ರಾವಣನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಭಾಗ 1 ಈಗಾಗಲೇ 2026ರ ದೀಪಾವಳಿಗೆ ರಿಲೀಸ್ ಆಗುತ್ತಿದ್ದು, ಭಾಗ 2 2027ರ ದೀಪಾವಳಿಗೆ ಬಿಡುಗಡೆ ಆಗಲಿದೆ.

ಕಡಿಮೆ ಬಜೆಟ್‌ನಲ್ಲಿ ದೊಡ್ಡ ಸಿನಿಮಾ!
ಇತ್ತೀಚೆಗೆ ಯೂಟ್ಯೂಬರ್ ಪ್ರಖರ್ ಗುಪ್ತಾ ಅವರ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡ ನಮಿತ್ ಮಲ್ಹೋತ್ರಾ ತಮ್ಮ ಅತ್ಯಂತ ಮಹತ್ವಾಕಾಂಕ್ಷೆಯ ರಾಮಾಯಣದ ಬಗ್ಗೆ ಮಾತನಾಡಿದರು. ಈ ಯೋಜನೆಯ ಬಜೆಟ್ ಇಲ್ಲಿಯವರೆಗೆ ನಿರ್ಮಿಸಲಾದ ಅತಿದೊಡ್ಡ ಭಾರತೀಯ ಚಲನಚಿತ್ರಗಳನ್ನು ಮೀರಿಸುತ್ತದೆ ಎಂದು ಹೇಳಿದ್ದಾರೆ. ಅದರ ಎರಡು ಭಾಗಗಳ ಒಟ್ಟು ಮೊತ್ತವು ಸುಮಾರು 500 ಮಿಲಿಯನ್ ಯುಎಸ್ ಡಾಲರ್‌ಗಳಷ್ಟಿರುತ್ತದೆ. ಅಂದರೆ ಸರಿಸುಮಾರು 4,000 ಕೋಟಿ ರೂಪಾಯಿ ಎಂದು ಅವರು ಬಹಿರಂಗಪಡಿಸಿದ್ದಾರೆ.
ನಾವು ಜಗತ್ತಿನಲ್ಲೇ ಅತಿ ದೊಡ್ಡ ಚಿತ್ರವನ್ನು, ಶ್ರೇಷ್ಠ ಕಥೆಗಾಗಿ, ಜಗತ್ತು ನೋಡಲೇಬೇಕಾದ ಶ್ರೇಷ್ಠ ಮಹಾಕಾವ್ಯವನ್ನು ನಿರ್ಮಿಸುತ್ತಿದ್ದೇವೆ. ಇದು ಇನ್ನೂ ಕೆಲವು ದೊಡ್ಡ ಹಾಲಿವುಡ್ ಚಿತ್ರಗಳಿಗಿಂತ ಅಗ್ಗವಾಗಿದೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಾವು ಕಡಿಮೆ ವೆಚ್ಚದಲ್ಲಿ ದೊಡ್ಡ ಚಿತ್ರವನ್ನು ನಿರ್ಮಿಸುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ಇದು ಹಣದ ಮೇಲೆ ಆಧಾರಿತವಾದ ವಿಷಯವಲ್ಲ ಎಂದೂ ನಮಿತ್ ಹೇಳಿದ್ದಾರೆ.












Click it and Unblock the Notifications