Ramachari: ಮಾವನ ಮನೆಯಲ್ಲಿ ಡುಪ್ಲಿಕೇಟ್ ಅಳಿಯನಿಂದ ಸತ್ಯನಾರಾಯಣ ಪೂಜೆ! ಇವನವನಲ್ಲ... ಇವನವನಲ್ಲ... ಎಂದ ಚಾರು!
ರಾಮಾಚಾರಿ ಧಾರವಾಹಿ ದಿನದಿಂದ ದಿನಕ್ಕೆ ಬಿಗ್ ಟ್ವಿಸ್ಟ್ ಮೂಲಕ ನೋಡುಗರಿಗೆ ಕುತೂಹಲ ಮೂಡಿಸಿದೆ. ನಿತ್ಯ ಅರ್ಧ ಗಂಟೆ ಮಾತ್ರ ಪ್ರಸಾರವಾಗುತ್ತಿದ್ದ ಧಾರಾವಾಹಿ ಸದ್ಯ ಮಹಾಸಂಚಿಕೆ ಮೂಲಕ ಒಂದು ಗಂಟೆ ಪ್ರಸಾರವಾಗುತ್ತಿದೆ. ಇದರೊಂದಿಗೆ ನೋಡುಗರ ಗಮನವನ್ನು ಸೆಳೆಯುತ್ತಿದೆ.
ಜೈಲಿನಲ್ಲಿ ತಪ್ಪೇ ಮಾಡದ ರಾಮಾಚಾರಿ, ಮನೆಯಲ್ಲಿ ಕೃಷ್ಣ, ಮಾವನ ಮನೆಯಲ್ಲಿ ಸತ್ಯನಾರಾಯಣ ಪೂಜೆ, ಮಾನ್ಯತಾಗೆ ಟೆನ್ಷನ್ ಇವೆಲ್ಲವೂ ರಾಮಾಚಾರಿ ಧಾರಾವಾಹಿಯ ಸದ್ಯದ ಹೈಲೆಟ್ಸ್. ಈ ಎಲ್ಲಾ ಕುತೂಹಲಕಾರಿ ವಿಷಯಗಳಿಂದ ರಾಮಾಚಾರಿ ಧಾರಾವಾಹಿ ನೋಡುಗರ ಆಸಕ್ತಿ ಹೆಚ್ಚಿಸಿದೆ.

ರಾಮಾಚಾರಿ ಮನೆಯಲ್ಲಿ ಕೃಷ್ಣ
ಚಿಕ್ಕವನಿರುವಾಗ ಕಳೆದು ಹೋಗಿದ್ದ ನೋಡಲು ರಾಮಾಚಾರಿಯಂತೆಯೇ ಕಾಣುವ ನಾರಾಯಣಾಚಾರ್ಯ ಹಾಗೂ ಜಾನಕಿಯ ಮತ್ತೊಬ್ಬ ಮಗ ಕೃಷ್ಣ ಈಗ ಡುಪ್ಲಿಕೇಟ್ ರಾಮಾಚಾರಿಯಾಗಿ ತಮ್ಮ ಮನೆ ಸೇರಿದ್ದಾನೆ. ಚಾರುಲತಾ ತಾಯಿ ಮಾನ್ಯತಾ ಕೊಟ್ಟ ಡೀಲ್ ಮುಗಿಸಲು ಬಂದ ಕೃಷ್ಣನಿಗೆ ತನ್ನ ತಂದೆ ಮತ್ತು ತಾಯಿ ನಾರಾಯಣಾಚಾರ್ಯ ಹಾಗೂ ಜಾನಕಿನೇ ಎನ್ನುವುದು ಗೊತ್ತಾಗಿದೆ.
ಚಾರಿಯನ್ನು ಪತ್ತೆ ಮಾಡಿದ ಚಾರು
ನಾರಾಯಣಾಚಾರ್ಯರ ಮನೆಗೆ ಡುಪ್ಲಿಕೇಟ್ ರಾಮಾಚಾರಿಯಾಗಿ ಎಂಟ್ರಿ ಕೊಟ್ಟ ಕೃಷ್ಣ ಚಾರುಲತಾಗೆ ಬೇಸರವಾಗುವಂತೆ ನಡೆದುಕೊಳ್ಳುತ್ತಲೇ ತಾನು ರಾಮಚಾರಿ ಅಲ್ಲ ಅನ್ನೋದನ್ನು ಸಾಬೀತು ಮಾಡಿದ್ದಾನೆ. ಅನುಮಾನ ಬಂದ ಚಾರು ಜೈಲಿಗೆ ಹೋಗಿ ತನ್ನ ಗಂಡ ರಾಮಚಾರಿಯನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ. ಮನೆಯಲ್ಲಿರುವುದು ಗಂಡ ರಾಮಾಚಾರಿ ಅಲ್ಲ ಬದಲಿಗೆ ರಾಮಾಚಾರಿಯಂತೆ ಇರುವ ಆತನ ಸಹೋದರ ಕೃಷ್ಣ ಅನ್ನೋದು ಚಾರುಲತಾಗೆ ತಿಳಿದಿದೆ.
ಗೊಂದಲ ಸೃಷ್ಟಿ
ಆದರೀಗ 30ಕ್ಕೂ ಹೆಚ್ಚು ಕೇಸ್‌ಗಳಿರುವ ಕೃಷ್ಣನನ್ನ ಜೈಲಿಗೆ ಕಳುಹಿಸಿ ರಾಮಾಚಾರಿಯನ್ನು ಬಿಡಿಸುವುದೋ ಅಥವಾ ವರ್ಷಗಳಿಂದ ಮಗನಿಗಾಗಿ ಕಾಯುತ್ತಿದ್ದ ತಂದೆ-ತಾಯಿಯಿಂದ ಮಗ ಕೃಷ್ಣನನ್ನು ದೂರ ಮಾಡದಂತೆ ಕಾಪಾಡುವುದೋ ಎನ್ನುವ ಗೊಂದಲ ಚಾರುಲತಾಗೆ ಸೃಷ್ಟಿಯಾಗಿದೆ. ಇದರ ನಡುವೆ ಕೃಷ್ಣನನ್ನು ಮುಂದಿಟ್ಟುಕೊಂಡು ಈ ಎಲ್ಲಾ ಕೆಲಸಗಳನ್ನು ಮಾಡಿಸುತ್ತಿರುವವರು ಯಾರು ಎನ್ನುವ ಅನುಮಾನವೂ ಚಾರುಲತಾಗೆ ಕಾಡತೊಡಗಿದೆ.

ಜೈಲಿನಲ್ಲಿ ತಪ್ಪೇ ಮಾಡದ ರಾಮಾಚಾರಿ
ಮಾನ್ಯಾತ ಮಾಡಿದ ಪ್ಲ್ಯಾನ್‌ನಿಂದಾಗಿ ಕೆಕೆ ಅನುಭವಿಸಬೇಕಾಗಿದ್ದ ಜೈಲು ಶಿಕ್ಷೆ ರಾಮಾಚಾರಿ ಅನುಭವಿಸುವಂತಾಗಿದೆ. ಕೆಕೆಯನ್ನು ಬಳಸಿಕೊಂಡು ಮಾನ್ಯತಾ ಚಾರುಲತಾಳನ್ನ ಮನೆಗೆ ಕರೆಸಿಕೊಳ್ಳುವ ಹೊಂಚು ಹಾಕಿದ್ದು ಯಾರಿಗೂ ಗೊತ್ತಿಲ್ಲ. ಆದರೆ ಕೆಕೆಗೆ ಮಾತ್ರ ತಾನು ಕೊಲ್ಲಲು ಬಂದ ನಾರಾಯಣಾಚಾರ್ಯರೇ ತನ್ನ ತಂದೆ, ಅದೇ ತನ್ನ ಕುಟುಂಬ ಅನ್ನೋದು ತಿಳಿದಿದೆ. ಆದರೆ ಇದು ಚಾರುಲತಾ ತಂದೆಗೆ ತಿಳಿದಿಲ್ಲ.
ಮಾವನ ಮನೆಯಲ್ಲಿ ಸತ್ಯನಾರಾಯಣ ಪೂಜೆ
ವಿದೇಶದಿಂದ ಬಂದ ಮೇಲೆ ಮನಸ್ಸಿಗೆ ಯಾಕೋ ಸಮಾಧಾನವೇ ಇಲ್ಲ ಎಂದು ಚಾರುಲತಾ ತಂದೆ ತಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಲು ಮುಂದಾಗಿದ್ದಾರೆ. ಆ ಪೂಜೆಯನ್ನು ನೆರವೇರಿಸಲು ತನ್ನ ಅಳಿಯನೇ ಸೂಕ್ತ ಎಂದು ನಿರ್ಧರಿಸಿ ಅವರನ್ನು ಬರ ಹೇಳಲು ಮಗಳ ಮನೆಗೆ ಹೋಗುತ್ತಾರೆ. ಆದರೆ ರಾಮಾಚಾರಿಯಂತೆ ನಟಿಸುತ್ತಿರುವ ಕೆಕೆಗೆ ಈ ಪೂಜೆ ಮಾಡುವುದು ಸುಲಭವಲ್ಲ.
ಮಾನ್ಯತಾಗೆ ಟೆನ್ಷನ್
ಇದನ್ನು ಅರಿತ ಮಾನ್ಯತಾ ಕೂಡ ಇದರಿಂದ ಕೆಕೆ ಅನ್ನ ಹೇಗೆ ಬಿಡಿಸುವುದು ಎಂದು ಯೋಚನೆ ಮಾಡಲು ಶುರು ಮಾಡಿದ್ದಾಳೆ. ಸದಾ ಲಾಂಗು-ಮಚ್ಚು, ಕೊಲೆ-ದರೋಡೆ ಮಾಡಿಕೊಂಡು ಬಂದ ಕೃಷ್ಣಾಗೆ ಪೂಜೆ ಪುನಸ್ಕಾರ ಮಾಡುವುದು ಕಷ್ಟಸಾಧ್ಯ. ಹರಳು ಸಿಡಿದಂತೆ ಮಂತ್ರ ಹೇಳುವ ರಾಮಾಚಾರಿ ಹಾಗೂ ಕೃಷ್ಣ ನೋಡಲು ಒಂದೇ ರೀತಿ ಇದ್ದರು ಅವರಿಬ್ಬರು ಬೆಳೆದ ವಾತಾವರಣ ಮಾತ್ರ ಬೇರೆ ಬೇರೆ. ಹೀಗಾಗಿ ಕೃಷ್ಣ ಮಂತ್ರ ಹಾಗೂ ಪೂಜೆ ಹೇಳಲು ವಿಫಲನಾದರೆ ಮಾನ್ಯತಾ ಮಾಡಿದ ಪ್ಲ್ಯಾನ್ ಬಯಲಾಗುತ್ತದೆ.

ಮಾನ್ಯತಾಗೆ ಈಗ ಟೆನ್ಷನ್ ಶುರುವಾಗಿದೆ. ಈ ಗಂಡಾಂತರದಿಂದ ಕೆಕೆಯನ್ನ ಪಾರು ಮಾಡದೇ ಹೋದಲ್ಲಿ ವೈಶಾಕಾ, ಮಾನ್ಯತಾ ಹಾಗೂ ಕೃಷ್ಣ ಜೊತೆ ಪೊಲೀಸ್ ಆಫೀಸರ್ ಕೂಡ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಮಾವನ ಮನೆಯಲ್ಲಿ ಡುಪ್ಲಿಕೇಟ್ ಅಳಿಯನಿಂದ ಸತ್ಯನಾರಾಯಣ ಪೂಜೆ ನಡೆಯುತ್ತಾ ಅಥವಾ ರಾಮಾಚಾರಿಯನ್ನೇ ಜೈಲಿನಿಂದ ಕರೆಸಿಕೊಳ್ಳಲಾಗುತ್ತಾ? ಇವನವನಲ್ಲ... ಇವನವನಲ್ಲ... ಎನ್ನುವ ಚಾರುಲತಾ ಜೈಲಿನಿಂದ ಗಂಡನನ್ನು ಬಿಡಿಸಿಕೊಂಡು ಬರ್ತಾಳಾ ಅನ್ನೋದನ್ನು ಕಾದು ನೋಡಬೇಕಿದೆ.












Click it and Unblock the Notifications