ನಟಿ ಸಂಜನಾ ಗಲ್ರಾನಿಗೆ ವಂಚನೆ ಕೇಸ್: 6 ತಿಂಗಳು ಜೈಲು ಶಿಕ್ಷೆಗೆ ಕೋರ್ಟ್ ಆದೇಶ
ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಅವರಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಬೆಂಗಳೂರಿನ 33ನೇ ಎಸಿಜೆಎಂ ನ್ಯಾಯಾಲಯ ಆದೇಶಿಸಿದೆ. ವಂಚನೆ ಕೇಸ್ ಸಂಬಂಧ ರಾಹುಲ್ ತೋನ್ಸೆ ಎಂಬುವವರನ್ನು ಅಪರಾಧಿ ಎಂದು ಪರಿಗಣಿಸಿರುವ ಕೋರ್ಟ್, 61.50 ಲಕ್ಷ ರೂಪಾಯಿ ದಂಡದ ಜೊತೆಗೆ 6 ತಿಂಗಳ ಕಾಲ ಜೈಲು ಶಿಕ್ಷೆಯನ್ನೂ ವಿಧಿಸಿದೆ. ಬೆಂಗಳೂರಿನ ಬನಶಂಕರಿ 3ನೇ ಹಂತದ ನಿವಾಸಿಯಾದ ರಾಹುಲ್ ತೋನ್ಸೆ ವಿರುದ್ಧ ನಟಿ ಸಂಜನಾ ಅವರು ವಂಚನೆ ಆರೋಪ ಮಾಡಿದ್ದರು. ಈ ಸಂಬಂಧ ಪ್ರಕರಣದ ಆರೋಪಿ ವಿರುದ್ಧ ತೀರ್ಪು ಪ್ರಕಟವಾಗಿದೆ.
ರಾಹುಲ್ ತೋನ್ಸೆ 2018ರಲ್ಲಿ ನಟಿ ಸಂಜನಾ ಗಲ್ರಾನಿ ಅವರಿಂದ ಸುಮಾರು 45 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿರುವ ಆರೋಪ ಕೇಳಿಬಂದಿತ್ತು. ಸಂಜನಾಗೆ ಸ್ನೇಹಿತನೂ ಆಗಿದ್ದ ರಾಹುಲ್, ಗೋವಾ ಹಾಗೂ ಕೊಲಂಬೋದಲ್ಲಿ ಕ್ಯಾಸಿನೋಗಳ ಮ್ಯಾನೇಜರ್ ಆಗಿದ್ದೇನೆ. ಹಾಗಾಗಿ ನಾನು ಹೇಳಿದ ಕಡೆ ಹಣ ಇನ್ವೆಸ್ಟ್ ಮಾಡಿದರೆ ಅಧಿಕ ಲಾಭ ಸಿಗಲಿದೆ ಎಂದು ಸಂಜನಾಗೆ ತಿಳಿಸಿದ್ದರು. ಇದನ್ನು ನಂಬಿದ್ದ ಸಂಜನಾ ಅವರು 45 ಲಕ್ಷ ರೂಪಾಯಿಯನ್ನ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದ್ದರು.

ಆದರೆ ಹಲವು ದಿನಗಳಾದರೂ ಯಾವುದೇ ಆಸ್ತಿ ನೋಂದಣಿ ಮಾಡಿಸಿಕೊಡಲಿಲ್ಲ. ಬಳಿಕ ಹಣ ವಾಪಸ್ ಕೇಳಿದಾಗ ರಾಹುಲ್ ಕೊಡಲಿಲ್ಲ ಎಂದು ಸಂಜನಾ ಆರೋಪಿಸಿದ್ದರು. ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಆರೋಪಿ ರಾಹುಲ್ ಅವರನ್ನ ಬಂಧಿಸಿದ್ದರು.
ಇದೀಗ ದಂಡದ ಮೊತ್ತದಲ್ಲಿ ₹10 ಸಾವಿರ ರೂಪಾಯಿ ಕೋರ್ಟ್ ಶುಲ್ಕ ಕಡಿತಗೊಳಿಸಿ ಉಳಿದ 61.40 ಲಕ್ಷ ರೂಪಾಯಿಯನ್ನ ನಟಿ ಸಂಜನಾ ಅವರಿಗೆ ನೀಡಬೇಕು ಎಂದು ಕೋರ್ಟ್ ಹೇಳಿದೆ. ನಿಗದಿತ ಸಮಯದಲ್ಲಿ ದಂಡದ ಮೊತ್ತವನ್ನು ಪಾವತಿ ಮಾಡಿದರೆ, ಕೋರ್ಟ್ ನೀಡಿರುವ 6 ತಿಂಗಳ ಶಿಕ್ಷೆಯನ್ನು ಮಾಫಿ ಮಾಡಲಾಗುವುದು ಮಾಡಲಾಗುತ್ತದೆ. ಇಲ್ಲದಿದ್ರೆ 6 ತಿಂಗಳ ಕಾಲ ಶಿಕ್ಷೆ ಹಾಗೂ ದಂಡವನ್ನು ಪಾವತಿ ಮಾಡಬೇಕೆಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ನಟಿ ಸಂಜನಾ ಗಲ್ರಾನಿ ಅವರು ಬೆಂಗಳೂರಿನ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ರಾಹುಲ್ ಹಾಗೂ ಆತನ ಕುಟುಂಬದ ವಿರುದ್ಧ ಕೇಸ್ ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು. ಕೋರ್ಟ್ ವಿಚಾರಣೆಯಲ್ಲಿ ರಾಹುಲ್ ತೋನ್ಸೆ ಅಪರಾಧಿ ಎಂದು ಸಾಬೀತಾಗಿ ಶಿಕ್ಷೆ ಕೂಡ ವಿಧಿಸಲಾಗಿದೆ.
ಇನ್ನು ರಾಹುಲ್ ದೊಡ್ಡ ಉದ್ಯಮಿ ಎಂದು ತಿಳಿದುಬಂದಿದ್ದು, ಪಕ್ಕದ ಗೋವಾ ಹಾಗೂ ಕೊಲಂಬೋಗಳಲ್ಲಿ ಕ್ಯಾಸಿನೊಗಳನ್ನ ನಡೆಸುತ್ತಿದ್ದ. ಈ ಕೇಸ್‌ನಲ್ಲಿ ರಾಹುಲ್ ಅವರ ಪೋಷಕರು ಕೂಡ ಶಾಮೀಲಾಗಿದ್ದರು ಎಂದು ಆರೋಪಿಸಲಾಗಿದೆ. ಹಾಗಾಗಿ ಅವರ ವಿರುದ್ಧವೂ ಎಫ್ಐಆರ್ ದಾಖಲಾಗಿತ್ತು. ಮತ್ತೊಬ್ಬ ಉದ್ಯಮಿಗೆ ಬರೋಬ್ಬರಿ 25 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪವೂ ರಾಹುಲ್ ಮೇಲಿದೆ.












Click it and Unblock the Notifications