Puneeth Rajkumar: ಮತ್ತೊಮ್ಮೆ ಡಾ. ರಾಜ್‌ಕುಮಾರ್- ಪುನೀತ್ ಒಂದೇ ಸಿನಿಮಾದಲ್ಲಿ ನಟನೆ!
ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ 4 ವರ್ಷಗಳಾಗಿದೆ. ಮಾರ್ಚ್ 17 (ಸೋಮವಾರ) ಅವರ 50ನೇ ಹುಟ್ಟುಹಬ್ಬ, ಪುನೀತ್ ದೈಹಿಕವಾಗಿ ಕನ್ನಡಿಗರನ್ನು ಅಗಲಿದ್ದರೂ ಅವರಿನ್ನೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಮಾರ್ಚ್ 17ರಂದು ಪುನೀತ್ ರಾಜ್‌ಕುಮಾರ್ ಹುಟ್ಟು ಹಬ್ಬ ಆಚರಿಸಲು ರಾಜ್ಯಾದ್ಯಂತ ಅಭಿಮಾನಿಗಳು ಸಜ್ಜಾಗಿದ್ದಾರೆ. ನಾಯಕನಾಗಿ ಮೊದಲ ಸಿನಿಮಾ ಅಪ್ಪು ಮರುಬಿಡುಗಡೆಯಾಗಿದ್ದು ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಪ್ಪು ಹುಟ್ಟಿದ ಹಬ್ಬದ ಸಿನಿಮಾ ತಂಡವೊಂದು ಅಭಿಮಾನಿಗಳಿಗೆ ಡಬಲ್ ಖುಷಿ ಕೊಟ್ಟಿದೆ.
ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರನ್ನು ಮತ್ತೊಮ್ಮೆ ದೊಡ್ಡ ಪರದೆ ನೋಡಲು ಸಾಧ್ಯವಾಗಲಿದೆ. ಇಂತಹ ಸಾಹಸಕ್ಕೆ ಸಿನಿಮಾ ತಂಡವೊಂದು ಕೈ ಹಾಕಿದ್ದು 'ಧ್ರುವ 369' ಸಿನಿಮಾದಲ್ಲಿ ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರನ್ನು ಒಟ್ಟಿಗೆ ತೋರಿಸಲು ಸಜ್ಜಾಗಿದೆ.

ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಎಐ ತಂತ್ರಜ್ಞಾನ ಬಳಸಿಕೊಂಡು ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇದೊಂದು ಪೌರಾಣಿಕ ಸಿನಿಮಾ ಎನ್ನುವ ಸೂಚನೆಯನ್ನು ಟೀಸರ್ ನಲ್ಲಿ ನೀಡಲಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಧ್ರುವ 369 ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದಾರೆ. ನಿರ್ದೇಶಕರು ಇಬ್ಬರು ದಿಗ್ಗಜರನ್ನು ತೆರೆ ಮೇಲೆ ತರಲು ಶ್ರಮ ಪಟ್ಟಿದ್ದಾರೆ. ಇಂತಹ ನಿರ್ದೇಶಕರು ಕನ್ನಡ ಚಿತ್ರರಂಗಕ್ಕೆ ಬೇಕಾಗಿದೆ ಎಂದು ಹೊಗಳಿದ್ದಾರೆ.
1.40 ನಿಮಿಷದ ಟೀಸರ್ ಬಿಡುಗಡೆ ಮಾಡಿದ್ದು ಶೀಘ್ರದಲ್ಲೇ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. ಮಂಗಳೂರಿನ ಉದ್ಯಮಿ ಶ್ರೀಕೃಷ್ಣ ಕಾಂತಿಲ 'ಅಚಿಂತ್ಯ ಸ್ಟುಡಿಯೋಸ್' ಮೂಲಕ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಜೆ.ಕೆ. ಶಂಕರ್‌ನಾಗ್ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ರಾಘವೇಂದ್ರ ರಾಜ್‌ಕುಮಾರ್, ರಮೇಶ್ ಭಟ್, ಸಂದೀಪ್ ಮಲಾನಿ, ಅತೀಶ್ ಶೆಟ್ಟಿ, ಚಂದನಾ, ನಮಿತಾ ಮುಂತಾದವರು ಇದ್ದಾರೆ. ಸತೀಶ್ ಬಾಬು ಸಿನಿಮಾಗೆ ಸಂಗೀತ ನೀಡಿದ್ದಾರೆ.
ಸಿನಿಮಾ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಜೆ.ಕೆ. ಶಂಕರ್‌ನಾಗ್, ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರನ್ನು ಸ್ಪೂರ್ತಿಯಾಗಿಸಿಕೊಂಡು ಇಂದಿನ ಯುವಕರು ಏನು ಮಾಡುತ್ತಾರೆ ಎನ್ನುವುದನ್ನು ಸಿನಿಮಾದಲ್ಲಿ ಹೇಳಲಾಗಿದೆ. ಸಿನಿಮಾದ 45% ಗ್ರಾಫಿಕ್ಸ್ ಇರುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications