"ಯಶ್‌ನ ಟಾರ್ಗೆಟ್ ಮಾಡಿದ್ರು, ಸುದೀಪ್ ಸಿನಿಮಾ ಅದೇ ದಿನ ರಿಲೀಸ್ ಮಾಡಿಸಿದ್ರು"
ನಟ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಕೆ.ಮಂಜು ಅವರು ಈ ಹಿಂದೆ ಸಂತು ಸ್ಟ್ರೇಟ್ ಫಾರ್ವರ್ಡ್ (Santhu Straight Forward) ಸಿನಿಮಾ ಮಾಡಿದ್ದರು. ಯಶ್‌ಗೆ ಇದ್ದ ಕ್ರೇಜ್‌ಗೆ ಈ ಸಿನಿಮಾ ಹಿಟ್ ಆಗಬೇಕಿತ್ತು. ಆದರೆ ಹಲವು ಕಾರಣಗಳಿಂದಾಗಿ ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣಲಿಲ್ಲ. ಇದಕ್ಕೆ ಅಸಲಿ ಕಾರಣಗಳೇನು ಎಂದು ಕೆ.ಮಂಜು ಅವರು ಇತ್ತೀಚಿನ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಆ ಸಿನಿಮಾ ರಿಲೀಸ್ ಟೈಮಲ್ಲೇ ಯಶ್ ಅವರನ್ನ ಟಾರ್ಗೆಟ್ ಮಾಡಲಾಗಿತ್ತು, ಜೊತೆಗೆ ನಮ್ಮ ಸಿನಿಮಾ ರಿಲೀಸ್ ದಿನವೇ ಸುದೀಪ್ ಅವರ ಸಿನಿಮಾ ರಿಲೀಸ್ ಮಾಡಿಸಿದ್ರು ಎಂಬ ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
'ಯಶ್‌ಗೆ ಮಾಡಿದ ಆ ಸಿನಿಮಾ ಸೋಲಲಿಲ್ಲ, ನನಗೆ ಗೆಲುವು ಸಿಗಲಿಲ್ಲ ಅಷ್ಟೇ. ಆ ಸಿನಿಮಾ ಟೈಮಲ್ಲೇ ಯಶ್ ಹಾಗೂ ರಾಧಿಕಾ ಅವರು ಮದುವೆಯಾಗಲು ನಿರ್ಧರಿಸಿದ್ದರು. ಇಲ್ಲಿಂದ ಯೂರೋಪ್‌ಗೆಲ್ಲ ಹೋಗಿ ಶೂಟಿಂಗ್ ಮುಗಿಸಿಕೊಂಡೆವು. ಅದೇ ವೇಳೆ ಇಲ್ಲಿ ರೈತರ ಹೋರಾಟವೊಂದು ನಡೆಯುತ್ತಿತ್ತು. ಅಂಬರೀಷ್ ಅವರು ಅಮೇರಿಕಾದಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದರು. ಯಶ್ ಅವರನ್ನ ಅಲ್ಲಿಗೆ ಕರೆದುಬಿಟ್ಟರು. ಆಗ ಶೂಟಿಂಗ್ ಮುಗಿಸಿ ಹಾಗೆಯೇ ಹೋಗಿಬಿಟ್ರು' ಎಂದು ಮಂಜು ಅವರು ಪವರ್ ಟಿವಿ ಸಂದರ್ಶನದಲ್ಲಿ ವಿವರಿಸಿದ್ದಾರೆ.

'ಯಶ್ ವಿರುದ್ಧ ತಿರುಗಿ ಬಿದ್ರು'
'ಆಗ ಅವರು ಮಂಡ್ಯದಲ್ಲಿ ಯಾವುದೇ ಗಲಾಟೆಯಾದಾಗ ಯಶ್ ಬರಲು ಆಗಲಿಲ್ಲ. ಯಶ್ ರೈತರ ಪರ ಹಲವು ಬಾರಿ ನಿಂತಿದ್ದರು. ಈ ಕಾರ್ಯಕ್ರಮಕ್ಕೆ ಹೋಗಿದ್ದರಿಂದ ಆಗಿನ ಹೋರಾಟಕ್ಕೆ ಬರೋಕೆ ಆಗಲಿಲ್ಲ. ಹೀಗಾಗಿ ಅಲ್ಲಿಂದ ಬಂದ ನಂತರ ಮಾಧ್ಯಮದವರೂ ಯಶ್ ವಿರುದ್ಧ ತಿರುಗಿಬಿದ್ದರು. ಮತ್ತೊಂದೆಡೆ ಕಿಚ್ಚ ಸುದೀಪ್-ಉಪ್ಪಿ ಅವರ "ಮುಕುಂದ-ಮುರಾರಿ" ಸಿನಿಮಾ ಕೂಡ ರಿಲೀಸ್‌ಗೆ ರೆಡಿ ಇತ್ತು. ಇಬ್ಬರೂ ಮಾತನಾಡಿಕೊಂಡು ರಿಲೀಸ್ ಡೇಟ್ ಘೋಷಣೆ ಮಾಡಿದೆ' ಎಂದಿದ್ದಾರೆ.
'ನಮ್ಮ ಸಿನಿಮಾ ಜೊತೆ ಸುದೀಪ್ ಸಿನಿಮಾ ರಿಲೀಸ್ ಆಯ್ತು'
'ಅದೇ ಸಮಯಕ್ಕೆ ಯಶ್‌ಗೂ ಚಾನಲ್‌ಗೂ ಗಲಾಟೆಯಾಗಿತ್ತು. ಇದೇ ಕಾರಣಕ್ಕೆ ಯಶ್‌ನ ಟಾರ್ಗೆಟ್ ಮಾಡಿ, ನನ್ನ ಬಲಿ ಕೊಟ್ಟರು ಎಂದು ಕೆ.ಮಂಜು ಆಗ ನಡೆದ ಘಟನೆಯನ್ನು ವಿವರಿಸಿದ್ದಾರೆ. ಮತ್ತೊಂದೆಡೆ ಒಂದೇ ದಿನ ಯಶ್ ಹಾಗೂ ಸುದೀಪ್ ಸಿನಿಮಾ ರಿಲೀಸ್ ಬೇಡ ಅಂತಾ ಮೊದಲೇ ಮಾತನಾಡಿಕೊಂಡಿದ್ದೆವು. ಆದರೆ ಅಲ್ಲೂ ಉಲ್ಟಾ ಆಯ್ತು. ನಮ್ಮ ಸಿನಿಮಾ ದಿನವೇ ಆ ಸಿನಿಮಾ ರಿಲೀಸ್ ಮಾಡಿ ನನಗೆ ಅನ್ಯಾಯ ಮಾಡಿದ್ರು. ಆ ಚಿತ್ರತಂಡದ ಕುಮಾರ್ ಇಂದಿಗೂ ನನಗೆ ನಾಲ್ಕು ಕೋಟಿ ಹಣ ಕೊಡಬೇಕು. ಕುಮಾರ್ ಇನ್ನೂ ನನಗೆ ಸಾಲಗಾರ. ಆಗ ಮಾಧ್ಯಮದವರೂ ಕೂಡ ಆ ಸಿನಿಮಾಗೆ ಹೆಚ್ಚಿನ ಪ್ರಚಾರ ಕೊಟ್ರು' ಎಂದು ಮಂಜು ಬೇಸರ ಹಂಚಿಕೊಂಡಿದ್ದಾರೆ.

'ಇವತ್ತಿನ ಯಶ್‌ನ ಮಾಧ್ಯಮದವರು ಇಂದ್ರ-ಚಂದ್ರ ಅಂತೆಲ್ಲ ಹೇಳ್ತಾರೆ. ಯಶ್ ಕೂಡ ಇವತ್ತು ಯಾರಿಗೂ ಸಿಗಲ್ಲ, ಆ ಮಟ್ಟಕ್ಕೆ ಬೆಳೆದಿದ್ದಾರೆ. ಆವತ್ತು ನಾನು ಕೂಡ ಮಾಧ್ಯಮದವರಲ್ಲಿ ಅವರನ್ನ ಟಾರ್ಗೆಟ್ ಮಾಡಬೇಡಿ ಅಂತ ಕೇಳಿಕೊಂಡೆ. ಆದರೆ ಅವರ ಅನುಕೂಲದಂತೆ ಅವರು ನಡೆದುಕೊಂಡರು. ನಮ್ಮ ಸಿನಿಮಾ ರಿಲೀಸ್ ಆದ ಮೇಲೆ ನೋಟ್ ಬ್ಯಾನ್ ಕೂಡ ಆಗೋಯ್ತು. ಮನುಷ್ಯನ ಸಮಯ ಕೆಟ್ಟಾಗ ಏನೆಲ್ಲ ಆಗುತ್ತೆ ಅನ್ನೋದು ಇದನ್ನೇ, ಆ ಸಿನಿಮಾದಿಂದ ಶೇ 5ರಿಂದ ಶೇ10ರಷ್ಟು ಲಾಸ್ ಆಗಿರಬಹುದು. ನನಗೇನು ತೊಂದರೆ ಆಗಲಿಲ್ಲ. ಇವತ್ತಿಗೂ ಯಾರಾದ್ರೂ ಕೇಳಿದ್ರೆ ಲಾಭ ಅಂತಾನೇ ಹೇಳ್ತೀನಿ' ಎಂದಿದ್ದಾರೆ.
'ಯಶ್ ಇವತ್ತು ತುಂಬಾ ದೊಡ್ಡ ಲೆವೆಲ್‌ನಲ್ಲಿದ್ದಾರೆ. ಎಷ್ಟೋ ಜನ ನನ್ನ ಡೇಟ್ಸ್ ಕೇಳ್ತಾರೆ. ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ ಮಾಡ್ತಿದ್ದಾರೆ. ಇವತ್ತೂ ಫೋನ್ ಮಾಡಿದರೆ ಒಂದು ಅರ್ಧ ಗಂಟೆಯೊಳಗೆ ನನಗೆ ರಿಪ್ಲೈ ಬರುತ್ತೆ. ಇವತ್ತಿಗೂ ಅದೇ ಭಾವನೆಯಿಂದ ಏನ್ ಮಂಜಣ್ಣ, ಏನಾಗಬೇಕು ಅಂತ ನನಗೆ ಕೇಳ್ತಾನೆ. ಅಲ್ಲದೆ ಒಳ್ಳೊಳ್ಳೆ ಸಿನಿಮಾ ಮಾಡಿ ಅಂದ. ನಮ್ಮಿಬ್ಬರ ನಡುವೆ ಇಂದಿಗೂ ಅದೇ ಬಾಂಧವ್ಯ ಇದೆ' ಎಂದು ಮಂಜು ಹೇಳಿದ್ದಾರೆ.












Click it and Unblock the Notifications